ಉತ್ತರಪ್ರದೇಶ ಎಸ್‌ಐಆರ್‌: ಎಸ್‌ಪಿ ಗೆದ್ದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಮತ ಅಳಿಸಲು ಬಿಜೆ‍ಪಿ ಸಂಚು: ಅಖಿಲೇಶ್ ಯಾದವ್‌ ಆರೋಪ

Most read

ಲಖನೌ: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ನಂತರ ಇದೀಗ ಉತ್ತರ ಪ್ರದೇಶದಲ್ಲೂ ಮತ ಕಳ್ಳತನಕ್ಕೆ ಸಂಚು ನಡೆದಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಮತಗಳನ್ನು ಮತಪಟ್ಟಿಯಿಂದ ತೆಗೆದು ಹಾಕಲು ಬಿಜೆಪಿ ಮತ್ತು ಚುನಾವಣಾ ಆಯೋಗ ಹುನ್ನಾರ ನಡೆಸಿವೆ  ಎಸ್‌ ಪಿ ವರಿಷ್ಠ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ.

ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನವಾದ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರಪ್ರದೇಶ ಸೇರಿದಂತೆ 11 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಆರಂಭವಾಗಿದೆ. ಎಸ್‌ಐಆರ್‌ ಹೆಸರಿನಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಯೇತರ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಸಂಚು ನಡೆದಿದೆ. ಪಶ್ಚಿಮ ಬಂಗಾಳದಲ್ಲೂ ಇದೇ ಹುನ್ನಾರ ನಡೆಸಿರುವ ಮಾಹಿತಿ ಇದೆ ಎಂದರು.

 2022ಲ್ಲಿ ನಡೆದ  ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದಿತ್ತು.  2024ರ ಲೋಕಸಭೆ ಚುನಾವಣೆಯಲ್ಲಿ ಕೇವಲ 162 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿತ್ತು. 111 ಸ್ಥಾನಗಳನ್ನು ಗೆದ್ದ ಎಸ್‌ಪಿ 183 ಕಡೆ ಮುನ್ನಡೆ ಕಾಯ್ದುಕೊಂಡಿದ್ದರೆ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ 40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇದನ್ನು ಅರಿತಿರುವ ಬಿಜೆಪಿ ಎಸ್‌ಐಆರ್ ಮೂಲಕ ಎಸ್‌ ಪಿ ಗೆದ್ದಿರುವ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಮತಗಳನ್ನು ತೆಗೆದು ಹಾಕಲು ಯೋಜನೆ ರೂಪಿಸಿದೆ ಎಂದು ಆರೋಪಿಸಿದರು.

More articles

Latest article