ಬೆಂಗಳೂರು: ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಭೀಭತ್ಸ ಕ್ರೌರ್ಯದ ಕಥೆಗಳು ಈಗ ಒಂದೊಂದಾಗಿ ಹೊರಬರುತ್ತಿದ್ದು, ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ದಾರುಣವಾಗಿ ಹಿಂಸಿಸಿ ಕೊಂದುಹಾಕಲಾಗಿದೆ.
ಚಿತ್ರ ನಟ ದರ್ಶನ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಆರೋಪಿಗಳು ಸಾಮಾನ್ಯ ವ್ಯಕ್ತಿಗಳೇನೂ ಅಲ್ಲ, ಎಲ್ಲರೂ ಬಲಾಢ್ಯರು ಮತ್ತು ಹಣವಂತರು. ಆರೋಪಿಗಳ ಹೆಸರು ಮತ್ತು ಹಿನ್ನೆಲೆ ಹೀಗಿದೆ ನೋಡಿ.
- ವಿನಯ್, ಹೋಟೆಲ್ ಉದ್ಯಮಿ.
- ಕಾರ್ತಿಕ್, ದರ್ಶನ್ ಆಪ್ತ
- ದೀಪಕ್, ದರ್ಶನ್ ಆಪ್ತ
- ಲಕ್ಷ್ಮಣ್, ಕಾರು ಚಾಲಕ
- ಪವಿತ್ರಾ ಗೌಡ, ದರ್ಶನ್ ಗೆಳತಿ
- ಪವನ್, ದರ್ಶನ್ ಆಪ್ತ
- ಪ್ರದೋಶ್, ಹೋಟೆಲ್ ಉದ್ಯಮಿ
- ನಂದೀಶ್
- ಕೇಶವಮೂರ್ತಿ, ಉದ್ಯಮಿ
- ರಾಘವೇಂದ್ರ, ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವಿನಯ್ ಹೋಟೆಲ್ ಉದ್ಯಮಿ. ರಾಜರಾಜೇಶ್ವರಿ ನಗರ ಭಾಗದ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ತಂಗಿಯ ಮಗ. ಜಯಣ್ಣ ಅವರ ಶೆಡ್ ನಲ್ಲೇ ರೇಣುಕಾ ಸ್ವಾಮಿಯನ್ನು ಹಿಂಸಿಸಿ ಕೊಲ್ಲಲಾಗಿದೆ.
ರಾಘವೇಂದ್ರ ಎಂಬಾತ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದವನು. ಈತನಿಗೆ ಸಹಕರಿಸಿದವನು ನಂದೀಶ್. ಕೊಲೆ ಆರೋಪಿಗಳಲ್ಲಿ ಬಹುತೇಕರು ಉದ್ಯಮಿಗಳು, ದರ್ಶನ್ ಅವರ ಆಪ್ತರು.
ಕೊಲೆ ಪ್ರಕರಣವಲ್ಲದೆ ಕಿಡ್ನಾಪ್, ಸಾಕ್ಷ್ಯನಾಶ, ಕ್ರಿಮಿನಲ್ ಪಿತೂರಿ (ಐಪಿಸಿ ಸೆಕ್ಷನ್ 120 B) ಪ್ರಕರಣಗಳನ್ನೂ ಆರೋಪಿಗಳು ಎದುರಿಸಬೇಕಿದೆ.