ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದ ಕೇಂದ್ರ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು:ಪುರುಷೋತ್ತಮ ಬಿಳಿಮಲೆ

Most read

ಬೆಂಗಳೂರು: ಬಿ.ಎಚ್.ಇ.ಎಲ್. ಸಂಸ್ಥೆಯ ವತಿಯಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿಯನ್ನು ನಿರಾಕರಿಸಿರುವುದು ಖಂಡನಾರ್ಹವಾಗಿದ್ದು, ಸಂಸ್ಥೆಯ ಆಡಳಿತ ವರ್ಗದ ಧೋರಣೆಯನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ  ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಿಳಿಮಲೆ, ನೌಕರರ ಸಂಘಟನೆಗಳಿಗೆ ಯಾವುದೇ ಷರತ್ತು ವಿಧಿಸದೆ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವುದು ನೆಲದ ಭಾಷೆಗೆ ಗೌರವ ಕೊಡುವ ವಿಷಯವಾಗಿದ್ದು, ಕೂಡಲೇ  ಸಂಸ್ಥೆ ಅನುಮತಿ ನೀಡಲು ನಿರಾಕರಿಸಿದಲ್ಲಿ  ರಾಜ್ಯ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿಯನ್ನು ಸಂಸ್ಥೆಗೆ ಮನನ ಮಾಡಿಕೊಡಬೇಕಾಗುತ್ತದೆ ಎಂದಿದ್ದಾರೆ.

ಯಾವುದೇ ಸಂಸ್ಥೆ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅನುಮತಿಯನ್ನು ನಿರಾಕರಿಸಿದಲ್ಲಿ ತಾನೇ ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಿ ಕ್ರಮಕ್ಕೆ ಆಗ್ರಹಿಸುತ್ತೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಇಷ್ಟರಲ್ಲಿಯೇ ಬಿ.ಎಚ್.ಇ.ಎಲ್. ಸಂಸ್ಥೆಗೆ ಭೇಟಿ ನೀಡಲಿದೆ ಎಂದಿರುವ ಬಿಳಿಮಲೆ, ಈ ನಿಯೋಗವು ಸಂಸ್ಥೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯನ್ನು ನಡೆಸಿ ನ್ಯೂನತೆಗಳು ಕಂಡಲ್ಲಿ ಸೂಕ್ತಕ್ರಮಕ್ಕೆ ಮುಂದಾಗಲಿದೆ ಎಂದಿದ್ದಾರೆ.

ಕರ್ನಾಟಕದ ನೆಲ-ಜಲ, ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯವಹಾರ ನಡೆಸುವ ಕೇಂದ್ರೋದ್ಯಮಗಳು ಮೊದಲು ಇಲ್ಲಿನ ಭಾಷೆಗೆ ಗೌರವ ಕೊಡಬೇಕಾಗುತ್ತದೆ ಎಂದಿರುವ ಬಿಳಿಮಲೆ, ಈ ಸಂಸ್ಥೆಗಳು ಒಕ್ಕೂಟ ತತ್ತ್ವವನ್ನು ಗೌರವಿಸುವುದು ವಿಫಲವಾದಲ್ಲಿ ರಾಜ್ಯ ಸರ್ಕಾರವು ಅಂತಹ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತ್ರಿಭಾಷಾ ಸೂತ್ರ ಪಾಲಿಸಲು ಮನವಿ:

ಅನ್ಯ ಭಾಷಿಕ ಸಿಬ್ಬಂದಿಗಳಿಂದ ತುಂಬಿ ಹೋಗಿರುವ ಬೆಂಗಳೂರಿನ ಮಹಾಲೇಖಪಾಲರ ಕಚೇರಿ ಕನ್ನಡಕ್ಕೆ ಮೊದಲ ಆದ್ಯತೆಯನ್ನು ನೀಡುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಬಿಳಿಮಲೆ ಹೇಳಿದ್ದಾರೆ.

 ಈ ಕುರಿತಂತೆ ಪ್ರಧಾನ ಮಹಾಲೇಖಪಾಲರಾದ ರಾಜೀವ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಅನ್ಯ ಭಾಷಿಕ ಸಿಬ್ಬಂದಿ ಸ್ಥಳೀಯ ಸರ್ಕಾರಿ ನೌಕರರೊಂದಿಗೆ ವ್ಯವಹರಿಸುವಾಗ ಕನ್ನಡವನ್ನು ಬಳಸಬೇಕಾದ್ದು ಅನಿವಾರ್ಯವಾಗಿರುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ವತಿಯಿಂದ ಕಳೆದ ಭೇಟಿಯ ಸಂದರ್ಭದಲ್ಲಿ ಸ್ಪಷ್ಟ ಸೂಚನೆಗಳನ್ನು ನೀಡಿದರೂ ಇಲ್ಲಿಯವರೆಗೆ ರಚನಾತ್ಮಕ ಬದಲಾವಣೆ ಕಾಣದಿರುವುದು ವಿಷಾದನೀಯ ಎಂದಿದ್ದಾರೆ.

ಮಹಾಲೇಖಪಾಲರ ಕಚೇರಿಯಲ್ಲಿ ಕೂಡಲೇ ಕನ್ನಡ ಕಲಿಕಾ ಘಟಕಗಳನ್ನು ತೆರೆಯಬೇಕು, ಜಾಲತಾಣಗಳಲ್ಲಿ ಕನ್ನಡಕ್ಕೆ ಆದ್ಯತೆಯನ್ನು ನೀಡಬೇಕು, ರಾಜ್ಯದೊಳಗೆ ವ್ಯವಹರಿಸುವ ದೈನಂದಿನ ಪತ್ರಗಳಲ್ಲಿ ಕನ್ನಡವನ್ನು ಬಳಸಬೇಕೆಂದು ಆಗ್ರಹಿಸಿರುವ ಬಿಳಿಮಲೆ, ತ್ರಿಭಾಷಾ ಸೂತ್ರವನ್ನು ಮಹಾಲೇಖಪಾಲರ ಕಚೇರಿಯು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಇದನ್ನು ಪರಿಶೀಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಶೀಘ್ರದಲ್ಲಿ ಮಹಾಲೇಖಪಾಲರ ಕಚೇರಿಗೆ ಭೇಟಿ ನೀಡಿದೆ ಎಂದು ತಿಳಿಸಿದ್ದಾರೆ.

More articles

Latest article