ಬೆಂಗಳೂರು: ಬೆಳ್ಳಿ ಅಂಗಡಿಗೆ ವಹಿವಾಟು ನಡೆಸಲು ಆಗಮಿಸುತ್ತಿದ್ದ ವ್ಯಾಪಾರಿಗಳೇ ಬರೋಬ್ಬರಿ 19 ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನ ಕಬ್ಬನ್ ಪೇಟೆಯ ವರ್ಧರಾಜ್ ಪೆರುಮಾಳ್ ಎಂಬುವವರಿಗೆ ಸೇರಿದ ಬೆಳ್ಳಿ ವಸ್ತುಗಳನ್ನು ತಯಾರಿಸುವ ಅಂಗಡಿಯಲ್ಲಿ ನಡೆದಿದೆ. ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇವರಿಂದ 12 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಮಿಳುನಾಡು ಮೂಲದ ದರ್ಶನ್ ಮತ್ತು ಆತನ ಸಹಚರ ಬಂಧಿತ ಆರೋಪಿಗಳು.
ಒಬ್ಬ ಕಳ್ಳತನ ಮಾಡಿದರೆ ಮತ್ತೊಬ್ಬನಿಂದ ಕಾವಲು ಕಾಯುತ್ತಿದ್ದರು. ದರ್ಶನ್ ಆಗಾಗ್ಗೆ ಪೆರುಮಾಳ್ ಅವರ ಅಂಗಡಿಗೆ ಬೆಳ್ಳಿ ವಸ್ತುಗಳನ್ನು ಮಾಡಿಸಿಕೊಳ್ಳಲು ಬರುತ್ತಿದ್ದ. ಆದರೆ ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಕಳೆದ ಡಿ.23ರಂದು ದರ್ಶನ್ ಮತ್ತು ಆತನ ಸಹಚರ ಅಂಗಡಿಗೆ ಬಂದಿದ್ದರು. ಈ ವೇಳೆ ಮಾಲೀಕ ಪೆರುಮಾಳ್ ಅಂಗಡಿಯಲ್ಲಿ ಇರಲಿಲ್ಲ. ಈ ಅವಕಾಶವನ್ನು ಬಳಸಿಕೊಂಡ ಇವರು ಕೆಲಸದವನ ಗಮನವನ್ನು ಬೇರೆಡೆಗೆ ಸೆಳೆದು 20 ಲಕ್ಷ ರೂ. ಮೌಲ್ಯದ 19 ಕೆಜಿ ಬೆಳ್ಳಿ ವಸ್ತುವನ್ನು ತನ್ನ ಬ್ಯಾಗ್ನಲ್ಲಿ ತುರುಕಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಹಲಸೂರು ಗೇಟ್ ಠಾಣೆಗೆ ಅಂಗಡಿ ಮಾಲೀಕರು ದೂರು ನೀಡಿದ್ದರು.