ಬೆಂಗಳೂರು: ದುಬಾರಿ ಬೆಲೆಯ ಬೈಕ್ ಗಳನ್ನೇ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೆ ಆರ್ ಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈತ ಕದ್ದದ್ದು ಒಂದಲ್ಲ, ಎರಡಲ್ಲ, ಮೂರು ವರ್ಷಗಳಲ್ಲಿ ನೂರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಅಸಮಾನ್ಯ ಕಳ್ಳ ಬೇರಾರೂ ಅಲ್ಲ, ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾದ ಪ್ರಸಾದಬಾಬು.
ಬೆಂಗಳೂರಿಗೆ ಬರುತ್ತಿದ್ದ ಈತ ದುಬಾರಿ ಬೆಲೆಯ ಬೈಕ್ಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ. ಒಂದೊಂದು ಬೈಕ್ ಬೆಲೆ ಎರಡು ಲಕ್ಷ ರೂ. ದಾಟುತ್ತಿತ್ತು. ಆದರೆ ಈತ ಕದ್ದ ಬೈಕ್ ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗೆ ಮಾರಿಕೊಂಡು ಹಣ ಸಂಪಾದನೆ ಮಾಡುತ್ತಿದ್ದ. ಹಗಲು ರಾತ್ರಿ ಎನ್ನದೆ ಮನೆ ಮುಂದೆ ನಿಲ್ಲಿಸಿರುತ್ತಿದ್ದ ಬೈಕ್ಗಳನ್ನು ಚಿಟಕಿ ಹೊಡೆಯುವಷ್ಟರಲ್ಲಿ ಹ್ಯಾಂಡಲ್ ಲಾಕ್ ಮುರಿದು ಓಡಿಸಿಕೊಂಡು ಪರಾರಿಯಾಗುತ್ತಿದ್ದ. ಈ ರೀತಿ ಗಳಿಸಿದ ಹಣದಲ್ಲಿ ಮೋಜಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು, ಚಿತ್ತೂರು, ತಿರುಪತಿ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತನ್ನ ಕೈಚಳಕ ತೋರಿದ್ದಾನೆ.
ಪ್ರಸಾದಬಾಬು ಪ್ರತಿದಿನ ಸಂಜೆ ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ. ಕೆ.ಆರ್.ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಡಿಕೊಂಡು ದುಬಾರಿ ಬೆಲೆಯ ಬೈಕ್ ಯಾರ ಮನೆ ಮುಂದೆ ನಿಲ್ಲಿಸಲಾಗಿದೆ ಎಂದು ಗುರುತಿಸಿಕೊಳ್ಳುತ್ತಿದ್ದ. ಕ್ಷಣ ಮಾತ್ರದಲ್ಲಿ ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದ್ದು ಅದೇ ದಿನ ಕದ್ದ ಬೈಕ್ನಲ್ಲೇ ಊರಿಗೆ ಮರಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರಸಾದ್ ಬಾಬು ಸ್ಕ್ರೂ ಡ್ರೈವರ್ ಬಳಸಿಯೇ ಬೈಕ್ ನ ಲಾಕ್ ಓಪನ್ ಮಾಡುತ್ತಿದ್ದ. ಹೆಡ್ಲೈಟ್ ಭಾಗದ ಒಳಗೆ ಇರುವ ಎರಡು ವೈರ್ಗಳನ್ನು ಜೋಡಿಸಿ ಸೆಲ್ಫ್ ಸ್ಟಾರ್ಟ್ ಮಾಡಿ ಬೈಕ್ ಕದ್ದು ಪರಾರಿಯಾಗುತ್ತಿದ್ದ. ಬೈಕ್ ಅನ್ನು ಹೇಗೆ ಕದಿಯುತ್ತಿದ್ದೆ ಎಂದು ಪೊಲೀಸರ ಮುಂದೆಯೇ ಮುಂದೆಯೇ ಕದ್ದು ತನ್ನ ಕೈಚಳಕ ತೋರಿಸಿದ್ದಾನೆ.
ಆರೋಪಿ ಪ್ರಸಾದ್ ಬಾಬು ಒಟ್ಟು 20 ರಾಯಲ್ ಎನ್ ಫೀಲ್ಡ್, 30 ಪಲ್ಸರ್ ಬೈಕ್, 40 ಆ್ಯಕ್ಟಿವಾ ಸೇರಿ ಹಲವು ದುಬಾರಿ ಬೈಕ್ಗಳನ್ನು ಕದ್ದಿದ್ದಾನೆ. ಸದ್ಯ ಪೊಲೀಸರು ಈತನನ್ನು ಬಂಧಿಸಿ ಸುಮಾರು 1.45 ಕೋಟಿ ರೂಪಾಯಿ ಮೌಲ್ಯದ 100 ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.