8  ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಮಾರಾಟ ಪ್ರತಿನಿಧಿ ಬಂಧನ

Most read



ಬೆಂಗಳೂರು: ಕೆಲಸ ಕೊಟ್ಟಿದ್ದ ಮಾಲೀಕರ ಅಂಗಡಿ ಮತ್ತು ಪರಿಚಿತರ ಅಂಗಡಿಗಳ ಮಾಲೀಕರು ಮಾರಾಟಕ್ಕೆಂದು ನೀಡಿದ್ದ 8 ಕೋಟಿ ರೂ.ಗಳ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ನರೇಶ್ ಶರ್ಮಾ
ಬಂಧಿತ ಆರೋಪಿ. ಈತನಿಂದ ರೂ. 5 ಲಕ್ಷ ನಗದು ಹಾಗೂ 45 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನರೇಶ್ ಶರ್ಮಾ ಕೆಲಸ ಮಾಡುತ್ತಿದ್ದ ಆಭರಣ ಅಂಗಡಿ ಹಾಗೂ ಪರಿಚಿತರ ಅಂಗಡಿಗಳ ಮಾಲೀಕರು ಈತನಿಗೆ ಮಾರಾಟ ಮಾಡಲು ಆಭರಣಗಳನ್ನು ನೀಡುತ್ತಿದ್ದರು. ಹೀಗೆ ನೀಡಿದ್ದ ರೂ. 8 ಕೋಟಿ ಮೌಲ್ಯದ ಸುಮಾರು 9 ಕೆ.ಜಿ 462 ಗ್ರಾಂ. ತೂಕದ ಚಿನ್ನಾಭರಣದೊಂದಿಗೆ ಈತ
ಪರಾರಿಯಾಗಿದ್ದ. ಈತನ ಅಂಗಡಿ ಮಾಲೀಕ ವಿಕ್ರಮ್ ಜ್ಯುವೆಲ್ಲರ್ಸ್ ಮಾಲೀಕ ವಿಕ್ರಮ್ ಕಾರ್ಯ ಅವರು ದೂರು ನೀಡಿದ್ದರು.

ಶರ್ಮಾ ಒಂದು ಬಾರಿ ಚಿನ್ನಾಭರಣಗಳನ್ನು ಕೊಯಮತ್ತೂರಿಗೆ ಕೊಂಡೊಯ್ದು ಮಾರಾಟ ಮಾಡಿಕೊಂಡು ಬಂದಿದ್ದ. ಮತ್ತೆ ಜನವರಿ 8ರಂದು ಉಳಿದ ಚಿನ್ನಾಭರಣಗಳನ್ನು ತೆಗೆದುಕೊಂಡು ಮಾರಾಟಕ್ಕೆ ಹೊರ ರಾಜ್ಯಕ್ಕೆ ತೆರಳಿದ್ದ. ಆಗಿನಿಂದ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಯಾರ
ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಲಖನೌ ನಗರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಕ್ರಮ್ ಅವರ ಚಿನ್ನಾಭರಣ ಅಂಗಡಿಯಲ್ಲಿ ಆರೋಪಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈ ನಂಬಿಕೆಯ ಮೆಲೆ ಈತನಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಮಾರಾಟ ಮಾಡಲು ಆರೋಪಿಗೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


More articles

Latest article