ಬೆಂಗಳೂರು : ಅನಿಲ ಸಿಲಿಂಡರ್ ಗಳ ಪರಿಸ್ಥಿತಿ ಗಂಭೀರವಾಗಿದೆ, ಕೇಂದ್ರ ಸರ್ಕಾರ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಎರಡನೇ ಪತ್ರ ಬರೆಯುತ್ತಿದ್ದಾರೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಮಾತನಾಡಿದ ಅವರು, ಇವತ್ತು ನಾನು ಮತ್ತೆ ನಮ್ಮ ಅಧಿಕಾರಿಗಳು ಆಯಿಲ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ದೇವೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಏರ್ ಲೈನ್ಸ್, ಇಂದಿರಾ ಕ್ಯಾಂಟೀನ್ , ರೈಲ್ವೇ ಕ್ಯಾಂಟೀನ್ ಗಳಿಗೆ 5,200 ವಾಣಿಜ್ಯ ಸಿಲಿಂಡರ್ ನೀಡುತ್ತೇವೆ.
ಆಟೋ ರಿಕ್ಷಾ ಗಳಿಗೆ 2,540 ಸಿಲಿಂಡರ್ ನೀಡಲು ತೀರ್ಮಾನ ಮಾಡಲಾಗಿದೆ. ಆಟೋದವರು ಸ್ವಲ್ಪ ಕಡಿಮೆ ಸಿಲಿಂಡರ್ ಬಳಕೆ ಮಾಡಬೇಕು. ಹೋಟೆಲ್ ಗಳಿಗೆ ಒಂದು ದಿನಕ್ಕೆ 1 ಸಾವಿರ ವಾಣಿಜ್ಯ ಸಿಲಿಂಡರ್ ನೀಡಲಾಗುವುದು. ಹೋಟೆಲ್ ಮಾಲೀಕರು ಎಲೆಕ್ಟ್ರಿಕ್ ಸ್ಟೋವ್ ಹೆಚ್ಚು ಬಳಕೆ ಮಾಡಬೇಕು.
ರಾಜ್ಯದಲ್ಲಿ ಹೋಟೆಲ್ ಗಳಿಗೆ ಪ್ರತಿ ದಿನ 30 ಸಾವಿರ ವಾಣಿಜ್ಯ ಸಿಲಿಂಡರ್ ಬಳಕೆ ಆಗುತ್ತಿತ್ತು. ಈಗ 1 ಸಾವಿರ ಸಿಲಿಂಡರ್ ನೀಡುತ್ತೇವೆ. ಕೇಂದ್ರ ಸರ್ಕಾರ ಶೇ. 20 ರಷ್ಟು ವಾಣಿಜ್ಯ ಬಳಕೆಗೆ ನೀಡಿ ಎಂದು ಹೇಳಿದೆ. ಹೀಗಾಗಿ ನಾವು ಎಲ್ಲರಿಗೂ ಹಂಚಿಕೆ ಮಾಡುತ್ತಿದ್ದೇವೆ ಎಂದರು.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ನಿರ್ದೇಶಕ ಸಿದ್ಧಾರ್ಥ್ ಅಗರವಾಲ್ ಮಾತನಾಡಿ, ಗೃಹ ಬಳಕೆದಾರರು ಆತಂಕ ಪಡುವ ಅವಶ್ಯಕತೆ ಇಲ್ಲ. ಆತಂಕದಿಂದ ಸಿಲಿಂಡರ್ ಬುಕ್ ಮಾಡುವ ಅವಶ್ಯಕತೆ ಇಲ್ಲ. ಗೋಡೌನ್ ಹಾಗೂ ಎಜೆನ್ಸಿಗಳಿಗೆ ಹೋಗುವ ಅವಶ್ಯಕತೆ ಇಲ್ಲ, ನಾವೇ ಮನೆಗೆ ಸರಭರಾಜು ಮಾಡ್ತೇವೆ ಎಂದಿದ್ದಾರೆ.

