ಬೆಂಗಳೂರು: ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರು ನಷ್ಟದ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲ ಚಿತ್ರಮಂದಿರದ ಮಾಲೀಕರು ಸಹ ಸಿಬ್ಬಂದಿಗಳಿಗೆ ಸಂಬಳ ಕೊಡಲಾಗದೆ, ಥಿಯೇಟರ್ ಮೆಂಟೈನ್ ಮಾಡುವುದಕ್ಕೆ ಆಗದೆ ಎಷ್ಟೋ ಸಿಂಗಲ್ ಥಿಯೇಟರ್ ಗಳನ್ನು ಮುಚ್ಚಿ ವಾಣಿಜ್ಯ ಕಟ್ಟಡವಾಗಿ ಪರಿವರ್ತಿಸುತ್ತಿದ್ದಾರೆ. ಇಂಡಸ್ಟ್ರಿ ಸರಿಯಾಗಬೇಕು ಅಂದ್ರೆ, ನಿರ್ಮಾಪಕರು ಸಿನಿಮಾ ಮಾಡುವ ಮನಸ್ಸು ಮಾಡಬೇಕು ಅಂದ್ರೆ ಸ್ಟಾರ್ ಗಳ ಸಿನಿಮಾಗಳು ತೆರೆಗೆ ಬರಬೇಕು. ವರ್ಷಕ್ಕೆ ಒಬ್ಬ ಸ್ಟಾರ್ ಎರಡು ಸಿನಿಮಾವಾದರೂ ಮಾಡಬೇಕಿದೆ. ಇದೀಗ ಫಿಲ್ಮ್ ಚೆಂಬರ್ ನಲ್ಲಿ ಇಂದು ಇದರ ಬಗ್ಗೆಯೇ ಚರ್ಚೆ ನಡೆಸಿ, ನಿರ್ಧಾರಕ್ಕೆ ಬರಲಾಗಿದೆ.
ಐಪಿಎಲ್ ಫೀವರ್, ಲೋಕಸಭಾ ಚುನಾವಣೆಯ ಹಿನ್ನೆಲೆ ಯಾವುದೇ ಬಿಗ್ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗದ ಕಾರಣ ತಮಿಳುನಾಡಿನಲ್ಲಿ ಒಂದು ತಿಂಗಳುಗಳ ಕಾಲ ಥಿಯೇಟರ್ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆಯೂ ನಿರ್ಧಾರ ಮಾಡುವುದಕ್ಕೆ ಇಂದು ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆದಿತ್ತು. ಆ ಸಭೆಯಲ್ಲಿ ಥಿಯೇಟರ್ ಮುಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ, ಸ್ಟಾರ್ ನಟರ ಬಳಿ ಮನವಿ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. “ಕನ್ನಡ ಚಿತ್ರರಂಗದ ಕುರಿತು ಇಷ್ಟು ದಿನಗಳಲ್ಲಿ ಈಗ ಸಭೆಯಾಗುತ್ತಿರುವುದು ಒಳ್ಳೆಯ ವಿಚಾರ. ತೆಲಂಗಾಣದ ಪರಿಸ್ಥಿತಿ ನಮ್ಮ ಗಮನಕ್ಕಿದೆ. ಆದರೆ, ಕರ್ನಾಟಕದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡುವುದು ಸರಿಯಲ್ಲ. ತಾತ್ಕಾಲಿಕವಾಗಿ ಸಿಂಗ್ ಸ್ಕ್ರೀನ್ ಥಿಯೇಟರ್‌ಗಳನ್ನು ಬಂದ್ ಮಾಡಿದರೆ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ. ಪ್ರದರ್ಶಕರು, ವಿತರಕರು ಹಾಗೂ ನಿರ್ಮಾಪಕರು ಸದ್ಯಕ್ಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಿಗೆ ರಿಲೀಸ್ ಪ್ಲಾನ್ ಮಾಡಲು ಆಗುತ್ತಿಲ್ಲ. ಸ್ಟಾರ್ ಚಿತ್ರಗಳು ಹೆಚ್ಚಾಗುವುದು ಮುಂದೆಯೂ ಅಸಾಧ್ಯ ಎಂಬಂತಿದೆ. ಥಿಯೇಟರ್‌ಗಳನ್ನು ಮುಚ್ಚಿದರೆ ಮುಂದಾಗುವ ಪರಿಣಾಮಗಳ ಬಗ್ಗೆಯೂ ಗಮನ ಇರಬೇಕು. ಹಾಗಾಗಿ, ಚಿತ್ರಮಂದಿರಗಳನ್ನು ಮುಚ್ಚಬಾರದು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಟಿಕೆಟ್ ರೇಟ್ ಕಡಿಮೆ ಮಾಡುವುದು, ಯುಎಫ್ಒ, ಕ್ಯೂಬ್ ರೇಟ್ ಕಡಿಮೆ ಮಾಡುವ ಕುರಿತು ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತೇವೆ. ಕೇರಳದಲ್ಲಿ ಸರ್ಕಾರದ್ದೇ ಸ್ವಂತ ಒಟಿಟಿ ವ್ಯವಸ್ಥೆ ಇದೆ. ಇದು ಕರ್ನಾಟಕದಲ್ಲೂ ಜಾರಿಗೆ ಬರಬೇಕು. ಕಲಾವಿದರು ಕೂಡ ಸಹಕಾರ ನೀಡಬೇಕು. ಮೂರ್ನಾಲ್ಕು ದಿನದಲ್ಲಿ ಸ್ಟಾರ್ ನಟರ ಜತೆ ಸಭೆ ನಡೆಸಲಾಗುತ್ತದೆ ಎಂದಿದ್ದಾರೆ.

                                    