ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದ ಆತ್ಯಾಚಾರದಲ್ಲಿ ಬಲಿಯಾದ ಸೌಜನ್ಯ ತಾಯಿ ಕುಸುಮಾವತಿ ಅವರಿಗೆ ʼಕೊಂದವರು ಯಾರುʼ ಆಂದೋಲನ ಪತ್ರ ಬರೆದಿದೆ. ಮಗಳ ಸಾವಿನ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಸುಮಾವತಿ ಅವರ ಗಟ್ಟಿತನ ಹಾಗೂ ತಾಳ್ಮೆಗೆ ಬೆಂಬಲ ಸೂಚಿಸಿ ಅಭಿನಂದನೆ ಸೂಚಿಸಿದೆ.
ʼಕೊಂದವರು ಯಾರುʼ ಸಂಘಟನೆ ಬರೆದಿರುವ ಪತ್ರದ ಸಾರಾಂಶ ….
ನಿಮ್ಮ ಮನೆ ಮತ್ತು ಮನದಲ್ಲಿ ಶೂನ್ಯ ಭಾವನೆ ಮೂಡಿಸಿದ ಒಡಲಾಳದ ನೋವಿನ ಹೊರತಾಗಿಯೂ ನ್ಯಾಯಕ್ಕಾಗಿ ನೀವು ನಡೆಸಿರುವ ಹೋರಾಟವನ್ನು ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿರುವ ನಿಮ್ಮ ಗಟ್ಟಿತನಕ್ಕೆ ಮೊತ್ತ ಮೊದಲಿಗೆ ತುಂಬು ಹೃದಯದ ಅಭಿನಂದನೆಗಳು.
ಮಗಳು ಸೌಜನ್ಯಳ ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಪತ್ತೆ ಮಾಡುವವರೆಗೆ ವಿರಮಿಸುವುದಿಲ್ಲ ಎಂಬ ದೃತಿಗೆಡದ ನಿಮ್ಮ ಪ್ರಯತ್ನದ ಫಲವಾಗಿ ಮರುತನಿಖೆ ಕೋರಿದ ನಿಮ್ಮ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ ವಿಚಾರಣೆಗೆ ಸ್ವೀಕರಿಸಿದೆ. ಈ ಸುದೀರ್ಘ, ನೋವಿನ ಹದಿನಾಲ್ಕು ವರ್ಷಗಳಲ್ಲಿ ನಿಮ್ಮನ್ನು ಕಾಡಿದ ಏಕಾಂಗಿತನ, ಇತರರ ಅನುಮಾನಗಳು ಹಾಗೂ ಸುಳ್ಳು ಆರೋಪಗಳ ನಂತರವೂ ನಿರಾಶರಾಗದೆ, ದಣಿವಾಯಿತೆಂದು ಹಿಂತೆಗೆಯದೆ ದೇಶದ ಸರ್ವೋಚ್ಛ ನ್ಯಾಯಾಲಯದ ಬಾಗಿಲು ತಟ್ಟಿರುವ ನಿಮ್ಮ ದಿಟ್ಟತನ ಅಭಿನಂದನೀಯ ಮಾತ್ರವಲ್ಲ, ನಮಗೆಲ್ಲ ಅದೊಂದು ಮಾದರಿಯಾಗಿದೆ.
ನಿಮ್ಮ ಮನದಾಳದಲ್ಲಿ ಮಡುಗಟ್ಟಿರುವ ನೋವು ಮತ್ತು ಆಕ್ರೋಶಕ್ಕೆ ಕಾನೂನು ಹೋರಾಟದ ಮೂಲಕವೇ ಪರಿಹಾರ ದೊರಕಿಸಿಕೊಳ್ಳಲು ನೀವು ನಡೆಸಿರುವ ಹೋರಾಟ ಅಸಾಮಾನ್ಯವಾದುದು. ದುರಂತವೆಂದರೆ, ಈ ದೇಶದಲ್ಲಿ ಮುಗ್ಧ ಯುವತಿಯರು, ಪುಟ್ಟ ಬಾಲಕಿಯರು, ವೃದ್ಧೆಯರ ಮೇಲೂ ಅತ್ಯಾಚಾರಗಳು ನಡೆಯುವುದು, ಅದನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಾಧನೆಯಂತೆ ಹಂಚಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಅತ್ಯಾಚಾರಿಗಳು ಹಾಗೂ ಕೊಲೆಗಡುಕರನ್ನು ಸನ್ಮಾನಿಸುವ ಮೂಲಕ ತಾವೆಷ್ಟು ಕ್ರೂರಿಗಳು, ನೀಚರು, ಕನಿಷ್ಠ ಮನುಷ್ಯತ್ವ ಇಲ್ಲದವರು ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಅತ್ಯಾಚಾರ ಮಾಡಿರುವುದು ಬಹಿರಂಗವಾದೀತು ಎಂದು ಅಂಜಿ ಕೊಲೆ ಮಾಡುತ್ತಾರೆ, ಬೆಂಕಿಯಲ್ಲಿ ಸುಡುತ್ತಾರೆ. ಇವೆಲ್ಲವು ನಮ್ಮ ಸಮಾಜ ಇನ್ನೂ “ಕತ್ತಲ ಕಾಲ”ದಲ್ಲಿ ಇದೆಯೇನೋ ಎಂಬ ಅನುಮಾನ ಮೂಡಿಸುತ್ತದೆ. ಪರಿಸ್ಥಿತಿ ಹೀಗಿರುವಾಗಲೂ ನೀವು ಅಪಾರ ಧೈರ್ಯದಿಂದ ಕಾನೂನು ಹೋರಾಟ ನಡೆಸಿರುವುದು ಅಭಿನಂದನೀಯ ಹಾಗೂ ಅನುಕರಣೀಯ.
ಅತ್ಯಂತ ಕ್ರೂರ ಹಿಂಸೆಯಲ್ಲಿ ಮಗಳು ಗತಿಸಿದ ನೋವಿನಲ್ಲೂ ಸೌಜನ್ಯಳ ತಂದೆಯ ಅನಾರೋಗ್ಯ, ಇನ್ನಿಬ್ಬರು ಹೆಣ್ಣು ಮಕ್ಕಳ ಶಿಕ್ಷಣ-ಬದುಕಿನ ಕಡೆಗೆ ಗಮನ ನೀಡುತ್ತಲೇ ಅಪರಾಧಿಗಳನ್ನು ಗುರುತಿಸಲು ಪ್ರಯತ್ನ ಮುಂದುವರೆಸಿದ್ದೀರಿ. ಸೌಜನ್ಯಳ ಸಹೋದರಿಯರನ್ನು ನಿಮ್ಮಂತೆಯೇ ದಿಟ್ಟವಾಗಿ ರೂಪಿಸಿದ್ದೀರಿ. ಕಳೆದ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯಲ್ಲಿ ನಡೆದ ನ್ಯಾಯ ಸಮಾವೇಶದಲ್ಲಿ, “ಈ ಹೋರಾಟ ಸೌಜನ್ಯಳಿಗಾಗಿ ಮಾತ್ರವಲ್ಲ, ಅವಳಂತಹ ಎಲ್ಲ ಹೆಣ್ಣುಮಕ್ಕಳಿಗಾಗಿ” ಎಂದು ನೀವು ಮತ್ತು ನಿಮ್ಮ ಮಗಳು ಹೇಳಿದ ಮಾತುಗಳು ನಿಮ್ಮ ವೈಯಕ್ತಿಕ ನೋವಿಗೆ ಮೀರಿದ ನ್ಯಾಯ ಮತ್ತು ಸತ್ಯವನ್ನು ಎತ್ತಿ ಹಿಡಿದಿವೆ. ಇದು ಒಗ್ಗಟ್ಟು, ಬಂಧುತ್ವ, ಕಾಳಜಿ ಹಾಗೂ ನ್ಯಾಯದಲ್ಲಿ ನೀವು ಇರಿಸಿದ ಅನಿಶ್ಚಲ ಬದ್ದತೆಯನ್ನು ತೋರಿಸುತ್ತದೆ.
ಗಂಡಾಳ್ವಿಕೆಯ ಸಮಾಜವು ಎಷ್ಟೇ ಸವಾಲುಗಳನ್ನು ಒಡ್ಡಿದರೂ ಮಹಿಳೆಯು ಅನ್ಯಾಯದ ವಿರುದ್ಧ ಹಾಗೂ ಮಾನವೀಯತೆಯ ಪರವಾಗಿ ಮತ್ತಷ್ಟು ದೃಢವಾಗಿ ನಿಲ್ಲುತ್ತಾಳೆ ಎನ್ನುವುದಕ್ಕೆ ನೀವು ಉದಾಹರಣೆಯಾಗಿದ್ದೀರಿ.
ನಿಮ್ಮ ಹೋರಾಟಕ್ಕೆ “ಕೊಂದವರು ಯಾರು” ಆಂದೋಲನವು ಸಂಪೂರ್ಣವಾದ ನೈತಿಕ ಹಾಗೂ ಮಾನಸಿಕ ಬೆಂಬಲವನ್ನು, ಹೋರಾಟದ ಭರವಸೆಯನ್ನು ನೀಡುತ್ತದೆ. ಯಾವುದೇ ಹಿಂಜರಿಕೆ ಇಲ್ಲದೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಮತ್ತೆ ಹೇಳಬಯಸುತ್ತೇವೆ.

