ಅತಿಮಾನವ ಯುಗ ಮತ್ತು ಹವಾಗುಣ ಬದಲಾವಣೆ

Most read

ಅದೇನೇ ಕಸರತ್ತುಗಳನ್ನು ಮಾಡಿದರೂ ನಮ್ಮನ್ನು ಈಗಿನ ಏರುತ್ತಿರುವ ಭೂಮಿಯ ಬಿಸಿ ಖಂಡಿತಾ ಉಳಿಸಲಾರದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹವಾಗುಣ ಬದಲಾವಣೆ ನೆಲ, ನದಿ, ಸಮುದ್ರ, ಪ್ರಸ್ಥಭೂಮಿ, ಹಿಮನದಿ, ಪರ್ವತ, ಮರುಭೂಮಿ…ಯಾವುದನ್ನೂ ಇದು ಬಿಡುವುದಿಲ್ಲ. ಹಂತಹಂತವಾಗಿ ಜೀವಿಗಳನ್ನು ಕಣ್ಮರೆ ಮಾಡುತ್ತಾ ಹೋಗುತ್ತದೆ. ಇಲ್ಲಿಯವರೆಗೆ ಮನುಕುಲ ಊಹಿಸದ ಅನಾಹುತಗಳಿಗೆ ಕಾರಣವಾಗಲಿದೆ – ನಾಗರಾಜ ಕೂವೆ, ಪರಿಸರ ಬರಹಗಾರರು

ಮಲೆನಾಡಿನ ಕಾಲೇಜೊಂದರಲ್ಲಿ ‘Climate Change and Youth’ ಎಂಬ ಪರಿಸರ-ಕೃಷಿ ಜಾಗೃತಿ ಅಭಿಯಾನದಲ್ಲಿ ಹವಾಗುಣ ಬದಲಾವಣೆಯ ಬಗೆಗೆ ಮಾತನಾಡುತ್ತಿದ್ದೆ. ಸಂವಾದದಲ್ಲಿ ವಿದ್ಯಾರ್ಥಿಯೊಬ್ಬ ‘ಪರಿಸರದಲ್ಲಿನ ಎಲ್ಲವನ್ನೂ ನಾಶ ಮಾಡುತ್ತಾ ಸಾಗುತ್ತಿರುವ ಮನುಷ್ಯರು ನಿಜಕ್ಕೂ ಈ ಭೂಮಿಗೆ ಅಗತ್ಯವಿದ್ದಾರೆಯೇ?’ ಎಂದು ತುಂಬಾ ಗಂಭೀರವಾಗಿ ಪ್ರಶ್ನಿಸಿದ. ಆಗ ನನಗೆ ಇಡೀ ಮನುಷ್ಯ ಚರಿತ್ರೆಯೇ ಒಮ್ಮೆ ಕಣ್ಮುಂದೆ ಹಾದು ಹೋದಂತೆ ಭಾಸವಾಯಿತು.

ನಾವು ‘ಹೋಮೋಸೆಪಿಯನ್’ ಹೆಸರಿನ ಮನುಷ್ಯರು. ನಮಗಿಂತ ಹಿಂದೆ ಹತ್ತು ಹಲವು ಮನುಷ್ಯ ಪ್ರಭೇದಗಳಿದ್ದವು. ನಾವು ಸೇರಿರುವ ‘ಹೋಮೋ’ ಎಂಬ ಈ ವಂಶದಲ್ಲೇ ಅಸ್ಟ್ರೆಲೋಪಿತಿಕಸ್, ಹೋಮೋಹೆಬಿಲಿಸ್, ಹೋಮೋಎರಕ್ಟಸ್… ಎಂದೆಲ್ಲಾ ಇದ್ದರು. ಸಂಶೋಧನೆಯ ಪ್ರಕಾರ ಈ ಒಂದೊಂದು ಪ್ರಭೇದ ವಿಕಾಸವಾಗಲೂ ಕನಿಷ್ಠ ಐದು ಲಕ್ಷದಷ್ಟು ವರ್ಷಗಳನ್ನು ತೆಗೆದುಕೊಂಡಿದೆ.

 ‘ಹೋಮೋಸೆಪಿಯನ್’ ಹೆಸರಿನ ನಮ್ಮ ಪ್ರಭೇದ ಭೂಮಿಗೆ ಬಂದು ಸರಿಸುಮಾರು ಮೂರು ಲಕ್ಷ ವರ್ಷಗಳಾಗಿದೆ. ಹಿಂದಿನ ಎಲ್ಲಾ ಪ್ರಭೇದಗಳು ಕೇವಲ ಒಂದೊಂದೇ ಪ್ರದೇಶಕ್ಕೆ ಸೀಮಿತವಾಗಿದ್ದವು. ಹೊಸ ಪ್ರಭೇದ ಹುಟ್ಟಿದಾಗ ಆಹಾರಕ್ಕಾಗಿ, ಆವಾಸಕ್ಕಾಗಿ ತುಂಬಾ ಪೈಪೋಟಿ ಇರುತ್ತಿತ್ತು. ಅದರಿಂದಾಗಿ ಹಿಂದಿನ ಪ್ರಭೇದಗಳು ಹಂತಹಂತವಾಗಿ ನಶಿಸಿ ಹೋದವು. ಹೀಗಿರುವಾಗ ಹೋಮೋಸೆಪಿಯನ್ ರು ಆರ್ಟಿಕ್ ನ ಅತೀಶೀತಕ್ಕೂ, ಸಹಾರಾ ಮರಳುಗಾಡಿನ ಅತೀ ಉಷ್ಣಕ್ಕೂ ಒಗ್ಗಿಕೊಂಡು ಬಿಟ್ಟರು.  ಈ ‘ಅತೀ’ಗಳಿಗೆ ಹೊಂದಿಕೊಳ್ಳುವಿಕೆಯೇ ಆಧುನಿಕ ಮನುಷ್ಯರಿಗೆ ಬದುಕುಳಿಯುವ ಸಾಮರ್ಥ್ಯವನ್ನು ಗಳಿಸಿಕೊಟ್ಟಿತು.

ಸೋಜಿಗದ ಸಂಗತಿಯೆಂದರೆ ಇವತ್ತು ಮಾನವರ ಒಂದೇ ಪ್ರಭೇದ ಉಳಿದಿರುವುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಜಾಗತಿಕವಾಗಿ ಚರ್ಮದ ಬಣ್ಣ, ಕೂದಲು, ಬಾಹ್ಯ ಚಹರೆ ಇತ್ಯಾದಿಗಳಲ್ಲಿ ಸಾಕಷ್ಟು ವೈವಿಧ್ಯತೆ ಇರಬಹುದು. ಆದರೆ ಇದು ಪ್ರಭೇದದ ವ್ಯತ್ಯಾಸವಲ್ಲ, ಜನಾಂಗದ ವ್ಯತ್ಯಾಸವಷ್ಟೇ. ಹಾಗಾಗಿ ನಮ್ಮದು ಒಂದೇ ಪ್ರಭೇದ.

ಹಿಂದೊಮ್ಮೆ ಭೂಮಿಯ ಉಷ್ಣಾಂಶ ತೀವ್ರಗತಿಯಲ್ಲಿ ಏರಿದಾಗ ಸಸ್ಯಪ್ರಭೇದಗಳು ನಾಶವಾದವು. ಆಗ ಉಳಿದಿದ್ದ ಪ್ರಾಣಿಗಳನ್ನು ಕೊಲ್ಲಲು ಮನುಷ್ಯರು ಶಿಕಾರಿಗೆ ನಿಂತರು. ಕಲ್ಲುಗಳಿಂದ ಆಯುಧಗಳನ್ನು ತಯಾರಿಸಿದರು. ಇದಕ್ಕೆಲ್ಲಾ ಹಿಂದಿನ ಪ್ರಭೇದಕ್ಕಿಂತ ಜಾಸ್ತಿ ಬುದ್ಧಿ ಖರ್ಚುಮಾಡಬೇಕಾಗಿ ಬಂದು ಮೆದುಳಿನ ವಿಕಾಸ ಸಾಧ್ಯವಾಯಿತು. ನಂತರ ಹಂತಹಂತವಾಗಿ ಆಧುನಿಕ ಮಾನವರು ರೂಪುಗೊಂಡರು. ಜಗತ್ತಿನ ಎಲ್ಲವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ, ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿಯೊಂದನ್ನು ಧ್ವಂಸಗೊಳಿಸುತ್ತಾ ಆ ಮಾನವರು ಇವತ್ತು ಪರಿಸರಕ್ಕೆ ಮಾರಕವಾಗಿಬಿಟ್ಟಿದ್ದಾರೆ. 

ಇವತ್ತು ‘ಅತಿಮಾನವ ಯುಗ’ದಲ್ಲಿ ನಮ್ಮ ಭೂಮಿಗೆ ಏನಾಗಬಹುದು? ಕ್ಷುದ್ರ ಗ್ರಹಗಳು ಭೂಮಿಗೆ ಬಡಿಯದಂತೆ ಅವುಗಳ ಕಕ್ಷೆಯನ್ನೇ ಬದಲಾಯಿಸುವ ಸಾಮರ್ಥ್ಯ ಮಾನವರಿಗೆ ಬಂದಿದೆ. ಯಾವುದೇ ಅಪಾಯವನ್ನು ತಡೆಗಟ್ಟುವಷ್ಟು ತಂತ್ರಜ್ಞಾನ ಬೆಳೆದು ನಿಂತಿದೆ. ಹಾಗಿದ್ದರೂ ಆಧುನಿಕ ಮನುಷ್ಯರು ಈ ಭೂಮಿಯಲ್ಲಿ ಉಳಿಯುವುದು ಕಷ್ಟ! ಏಕೆಂದರೆ ಮನುಷ್ಯರಿಗೆ ಮೂಲಭೂತವಾಗಿ ಬೇಕಾದ ಆಹಾರ ಪೂರೈಕೆಗೆ ಹವಾಗುಣ ಬದಲಾವಣೆ ಪೆಟ್ಟು ಕೊಟ್ಟುಬಿಡುತ್ತದೆ. ಈಗಿರುವ ಸಂಪನ್ಮೂಲಗಳನ್ನು ಇಡೀ ಜಗತ್ತೇ ಬೇಕಾಬಿಟ್ಟಿಯಾಗಿ ಬಳಸುತ್ತಿರುವುದರಿಂದ ಅದು ಇನ್ನೆಷ್ಟು ದಿನ ಬಂದೀತು? ಮುಂದೆ ಬದುಕುಳಿಯುವ ಸಾಧ್ಯತೆ ಎಷ್ಟು? ಬದುಕುವುದಕ್ಕಾಗಿ ಆಹಾರಕ್ಕೆ ಪರ್ಯಾಯವಾಗಿ ಬೇರೊಂದು, ಆನುವಂಶಿಕ ಕಾಯಿಲೆಗಳನ್ನು ತಡೆಯಲು ಜೀನ್ ಎಡಿಟಿಂಗ್… ಇನ್ನೊಂದು ಮತ್ತೊಂದು ಹುಟ್ಟಿಕೊಳ್ಳಬಹುದು. ಆದರೆ ಅದೇನೇ ಕಸರತ್ತುಗಳನ್ನು ಮಾಡಿದರೂ ನಮ್ಮನ್ನು ಈಗಿನ ಏರುತ್ತಿರುವ ಭೂಮಿಯ ಬಿಸಿ ಖಂಡಿತಾ ಉಳಿಸಲಾರದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹವಾಗುಣ ಬದಲಾವಣೆ ನೆಲ, ನದಿ, ಸಮುದ್ರ, ಪ್ರಸ್ಥಭೂಮಿ, ಹಿಮನದಿ, ಪರ್ವತ, ಮರುಭೂಮಿ…ಯಾವುದನ್ನೂ ಇದು ಬಿಡುವುದಿಲ್ಲ. ಹಂತಹಂತವಾಗಿ ಜೀವಿಗಳನ್ನು ಕಣ್ಮರೆ ಮಾಡುತ್ತಾ ಹೋಗುತ್ತದೆ. ಇಲ್ಲಿಯವರೆಗೆ ಮನುಕುಲ ಊಹಿಸದ ಅನಾಹುತಗಳಿಗೆ ಕಾರಣವಾಗಲಿದೆ.

‘ಮತಿವಂತ ಮಾನವ’ ಎಂದು ಕರೆಸಿಕೊಳ್ಳುವ ನಾವು ಒಂದೆರಡು ಮೂಲಭೂತ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ‘ನಾವು ಎಲ್ಲಿಂದ ಇಲ್ಲಿಗೆ ಬಂದೆವು? ಮುಂದೆ ಇಲ್ಲಿಂದ ಎಲ್ಲಿಗೆ ಹೋಗುತ್ತೇವೆ?’. ಈ ಪ್ರಶ್ನೆಗಳಿಗೆ  ಧರ್ಮಶಾಸ್ತ್ರಗಳು ಬೇರೆ ಬೇರೆ ರೂಪಗಳಲ್ಲಿ ಉತ್ತರಿಸಿವೆ. ಆದರೆ ಆ ಚರ್ಚೆಗೆ ನಾವು ಈಗ ಹೋಗುವುದು ಬೇಡ. ಈ ಪ್ರಶ್ನೆಗೆ ಜೀವ ವಿಜ್ಞಾನ ‘ಈ ಭೂಮಿಯ ಎಲ್ಲಾ ಜೀವಿಗಳನ್ನು ಸೃಷ್ಟಿಸಿದ ಸಂಕೀರ್ಣ ನೈಸರ್ಗಿಕ ಪ್ರಕ್ರಿಯೆಗಳು ಮನುಷ್ಯರನ್ನು ಸೃಷ್ಟಿಸಿವೆ. ಅವುಗಳನ್ನೆಲ್ಲಾ ಸೃಷ್ಟಿಸಿದ ಮೂಲ ಧಾತುಗಳೇ ಮಾನವರನ್ನು ಹುಟ್ಟಿಸಿದೆ. ಇಲ್ಲಿಯೇ ವಿಕಸಿಸಿ ರೂಪುಗೊಂಡ ಮಾನವರು ತಮ್ಮ ಬದುಕಿನ ಅವಧಿಯನ್ನು ಮುಗಿಸಿ, ಪುನಃ ಅದೇ ಭೂಮಿಯ ಮೂಲಧಾತುಗಳಲ್ಲಿ ಸೇರಿ ಹೋಗುತ್ತಾರೆ’ ಎಂದು ತುಂಬಾ ಸ್ಪಷ್ಟವಾಗಿ ಹೇಳುತ್ತದೆ. ಅದಾಗಿಯೂ ಪರಿಸರ ವ್ಯವಸ್ಥೆಯ ಉಳಿದೆಲ್ಲಾ ಜೀವಿಗಳಿಗಿಂತ ತಾನು ಶ್ರೇಷ್ಠ ಎಂಬ ತಿಳಿಗೇಡಿ ಮಾನವರ ಯೋಚನಾಕ್ರಮ ಅವರನ್ನು ಪರಿಸರದಿಂದ ದೂರ ನಿಲ್ಲಿಸಿದೆ. 

 ಇಂದು ನಾವು ಅಗತ್ಯವಾಗಿ ಮನವರಿಕೆ ಮಾಡಿಕೊಳ್ಳಬೇಕಾದ ವಿಚಾರವೊಂದಿದೆ. ಭೂಮಿಯಲ್ಲಿನ ಜೀವವೈವಿಧ್ಯ ಎದುರಿಸುತ್ತಿರುವ ಸಂಕಟ, ದುಃಖ, ನೋವು, ಆಕ್ರಂದನ ಎಲ್ಲವೂ ನಮ್ಮ ಮುಂದಿನ ತಲೆಮಾರುಗಳಿಗೆ ಶಾಪವಾಗಿ ಕಾಡಲಿದೆ! ಇದು ಧಾರ್ಮಿಕ ಆಯಾಮದ ಮಾತಲ್ಲ. ಬದಲಾಗಿ ಪರಿಸರದ ಸತ್ಯ. ನಾವು ಕುಡಿಯುತ್ತಿರುವ ನೀರು, ಸೇವಿಸುತ್ತಿರುವ ಆಹಾರ, ಉಸಿರಾಡುತ್ತಿರುವ ಗಾಳಿಯಲ್ಲೇ ಎಲ್ಲವನ್ನೂ ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದೇವೆ. 

ಹವಾಗುಣ ಬದಲಾವಣೆ ಮತ್ತು ಜೀವವೈವಿಧ್ಯದ ನಾಶ ಪರಸ್ಪರ ಅವಲಂಬಿತ ಸಮಸ್ಯೆಗಳು. ಇವೆರಡರ ಪರಿಹಾರವೂ ಕೂಡ ಪರಸ್ಪರ ಅವಲಂಬಿತವಾಗಿದೆ. ಜೀವವೈವಿಧ್ಯ ನಾಶವಾದರೆ ಮನುಷ್ಯರೂ ನಿರ್ನಾಮವಾಗುತ್ತಾರೆ ಎಂದು ನಮಗೆ ಅರ್ಥವಾಗಬೇಕು. ವಾಸ್ತವದಲ್ಲಿ ಭೂಮಿಗೆ ಮನುಷ್ಯರಿಂದ ಆಗಬೇಕಾದುದು ಏನೂ ಇಲ್ಲ. ಅದಕ್ಕೆ ತನ್ನ ನೆಲದ ಮೇಲೆ ಬಾಳಿ, ಬದುಕಿ, ನಶಿಸಿ ಹೋದ ಜೀವಿಗಳ ಸಾಲಿನಲ್ಲಿ ಮನುಷ್ಯರೂ ಒಬ್ಬರಷ್ಟೇ. ತೀರಾ ಇತ್ತೀಚೆಗೆ ಇಲ್ಲಿಗೆ ಕಾಲಿಟ್ಟಿರುವ ತಮ್ಮ ದುರಾಸೆಗಳಿಂದಲೇ ಇಲ್ಲಿನ ಎಲ್ಲವನ್ನೂ ಆಹುತಿ ತೆಗೆದುಕೊಳ್ಳುತ್ತಿರುವ ಮಾನವರು ಹಂತಹಂತವಾಗಿ ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡು ಕಣ್ಮರೆಯಾಗಬಹುದು. ಆಗ ಅವರ ಅವಸಾನಕ್ಕೆ ಮರುಕ ಪಡುವುದಕ್ಕೂ ಯಾರೂ ಇರುವುದಿಲ್ಲ. ಭೂಮಿ ತನ್ನ ಸ್ಥಿತ್ಯಂತರಗಳಲ್ಲಿ ಬದುಕು ಮುಂದುವರೆಸುತ್ತದೆ. 

ನಾಗರಾಜ ಕೂವೆ

ಶೃಂಗೇರಿಯ BEAS Centre ನ ಸಂಸ್ಥಾಪಕರಾದ ಇವರು ಈ ಸಂಸ್ಥೆಯ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ

More articles

Latest article