ಹಾಸನ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ವಿಕೃತ ಕಾಮಕಾಂಡದ ಆರೋಪಿ ಹಾಸನ ಸಂಸದ ಮತ್ತು ಈ ಬಾರಿಯ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಸಂಸದ ಪ್ರಜ್ವಲ್ ರೇವಣ್ಣನನ್ನು ಇಂದು ಬೋರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಪ್ರಜ್ವಲ್ ವಿಚಾರಣೆ ಅಗತ್ಯವಿರುವುದರಿಂದ ಕನಿಷ್ಠ ಹತ್ತು ದಿನಗಳ SIT ಕಸ್ಟಡಿಗೆ ನೀಡುವಂತೆ SIT ಪರ ವಕೀಲರು ವಿನಂತಿಸುವ ಸಾಧ್ಯತೆ ಇದೆ.
34 ದಿನಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಪೊಲೀಸರೊಂದಿಗೆ ಕಣ್ಣಾಮುಚ್ಚೆ ಆಟವಾಡಿದ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ರದ್ದಾಗುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಭಾರತಕ್ಕೆ ಬಂದು ನಿನ್ನೆ ತಡರಾತ್ರಿ ವಿಮಾನನಿಲ್ದಾಣದಲ್ಲೇ ಬಂಧನಕ್ಕೆ ಒಳಗಾಗಿದ್ದಾನೆ.
ಪ್ರಜ್ವಲ್ ರೇವಣ್ಣನ ಮೇಲೆ ಈಗಾಗಲೇ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದಲ್ಲದೆ, ಅಧಿಕಾರ ಮತ್ತು ಹಣದ ಆಮಿಷ ಬಳಸಿ ನೂರಾರು ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡು, ಅದನ್ನೆಲ್ಲ ವಿಡಿಯೋ ಮಾಡಿಕೊಂಡ ಆರೋಪಗಳನ್ನು ಎದುರಿಸುತ್ತಿದ್ದಾನೆ.
ಪ್ರಜ್ವಲ್ ರೇವಣ್ಣ ಇದ್ದ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ CISF ತಂಡ ಆತನನ್ನು ವಶಕ್ಕೆ ಪಡೆದುಕೊಂಡು SIT ಅಧಿಕಾರಿಗಳಿಗೆ ಒಪ್ಪಿಸಿತು.
ರಾತ್ರಿಯೇ ಪ್ರಜ್ವಲ್ ನನ್ನು SIT ಪೊಲೀಸರು ಸಿಐಡಿ ಕಚೇರಿಗೆ ಕರೆತಂದರು. ನಿನ್ನೆ ಆತನ ಬಂಧನ ತಡರಾತ್ರಿಯಲ್ಲಿ ನಡೆದ ಕಾರಣ ಯಾವುದೇ ವಿಚಾರಣೆ ನಡೆಯಲಿಲ್ಲ.