ಸೆಲೆಬ್ರಿಟಿಯೊಬ್ಬನ ಕಾರ್ಯಕ್ಷೇತ್ರವು ಯಾವುದೇ ಆಗಿರಲಿ, ಖ್ಯಾತಿಯ ಗ್ಲಾಮರ್ ಲೋಕವು ಹೊರಜಗತ್ತಿಗೆ ಆಕರ್ಷಣೀಯವಾಗಿ ಕಾಣುವುದು ಸಹಜ. ಆದರೆ ಅಭಿಮಾನಿಯೊಬ್ಬ ಕಟ್ಟರ್ ಅನುಯಾಯಿಯಾಗಿಬಿಟ್ಟ ಕೂಡಲೇ ಒಂದಲ್ಲ ಒಂದು ರೀತಿಯಲ್ಲಿ ಕಂದಾಯವನ್ನು ತೆರಲು ಸಿದ್ಧನಾಗ ಬೇಕಾಗುತ್ತದೆ. ಅದು ವೈಯಕ್ತಿಕ ಸಂಬಂಧಗಳು, ವೃತ್ತಿಬದುಕಿನಿಂದ ಹಿಡಿದು ತೀರಾ ಪ್ರಾಣದವರೆಗೂ ಆಗಬಹುದು- ಪ್ರಸಾದ್ ನಾಯ್ಕ್, ದೆಹಲಿ.
ಸಮಾಜದಲ್ಲಿರುವ ಬಲಾಢ್ಯರಿಗೆ ಶಕ್ತಿಶಾಲಿಯಾದ ಒಂದು ಇಕೋ ಸಿಸ್ಟಮ್ ಕೂಡ ಇರುವುದು ಸಹಜ.
ಅದು ಮೇ 22, 1987 ರ ರಾತ್ರಿ. ಆ ಸದ್ದಿಗೆ ಪಾಷ್ ವಠಾರವಾದ ಪಾಲಿ ಹಿಲ್ ನಲ್ಲಿದ್ದ ಹಲವು ಮನೆಗಳು ಬೆಚ್ಚಿ ಬಿದ್ದಿದ್ದವು. ಏನಾಯಿತಪ್ಪಾ ಎಂದು ದಿಗಿಲಾಗಿ ತಮ್ಮ ಮನೆಯಿಂದಲೇ ಮೆಲ್ಲಗೆ ಹೊರಗಡೆ ಇಣುಕಿ ನೋಡಿದರೆ, ಅಲ್ಲಿ ಆತ ತನ್ನ ಪ್ರೇಯಸಿಯ ಹೆಸರನ್ನು ಹೇಳಿಕೊಂಡು ಜೋರಾಗಿ ರೋಧಿಸುತ್ತಿದ್ದ. ಅವನ ಕೈಯಲ್ಲೊಂದು ರೈಫಲ್ ಇತ್ತು. ಹುಚ್ಚು ಹಿಡಿದವನಂತೆ ಬೇಕಾಬಿಟ್ಟಿ ಗುಂಡು ಹಾರಿಸಿದ ಪರಿಣಾಮವಾಗಿ ಅವನದ್ದೇ ಮನೆಯ ಕಿಟಕಿಯ ಗಾಜುಗಳು ಛಿದ್ರವಾಗಿದ್ದವು. ಆ ಪ್ರೇಯಸಿ ಇನ್ಯಾರೂ ಅಲ್ಲ. ಎಂಭತ್ತರ ದಶಕದಲ್ಲಿ ಖ್ಯಾತ ನಟಿಯಾಗಿದ್ದ ಟೀನಾ ಮುನಿಮ್. ಇತ್ತ ಗುಂಡು ಹಾರಿಸಿದ ಭೂಪನೂ ಅಂತಿಂಥವನಲ್ಲ. ಅವನು ನಟ ಸಂಜಯ್ ದತ್.
ನಂತರ ಪೋಲೀಸರೇನೋ ಓಡೋಡಿ ಬಂದರು. ಆದರೆ ಸಂಜಯ್ ಅಲ್ಲಿಂದ ಪಲಾಯನಗೈದಿದ್ದ. ಹೀಗೆ ಕಳ್ಳಬೆಕ್ಕಿನಂತೆ ಓಡಿಹೋದವನು ಶರಣಾಗಿದ್ದು ಮರುದಿನ. ಸಂಜಯನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಮತ್ತು ಪಾಸ್‍ಪೋರ್ಟನ್ನು ವಶಪಡಿಸಿಕೊಳ್ಳಲಾಯಿತು. ಒಂದಿಷ್ಟು ವಿಚಾರಣೆಯೂ ಆಯಿತು. “ನಾನು ಗನ್ ಅನ್ನು ಶುಚಿಗೊಳಿಸುತ್ತಿದ್ದಾಗ ಕೈತಪ್ಪಿ ಗುಂಡು ಸಿಡಿಯಿತು” ಎಂದು ಸಂಜಯ್ ಹೇಳಿಕೆ ಕೊಟ್ಟ. ಅವನು ಫೈರಿಂಗ್ ಮಾಡಿದ್ದ ಆ ರಾತ್ರಿ ಭಯಂಕರ ನಶೆಯಲ್ಲಿದ್ದಿದ್ದನ್ನು ಅಲ್ಲಿದ್ದ ಕೆಲವರು ಕಂಡಿದ್ದರು. ಆದರೆ ಇದೊಂದು ಗಂಭೀರವಾದ ಪ್ರಕರಣವೆಂದು ಬಹುಷಃ ಯಾರಿಗೂ ಅನ್ನಿಸಲಿಲ್ಲ. ಹೀಗಾಗಿ ಸೆಕ್ಷನ್-336 ಜಡಿದಿದ್ದರೂ ಐನೂರು ರೂಪಾಯಿಗೆ ಜಾಮೀನು ಸಿಕ್ಕಿತು. ಹೀಗೆ ಲಾಕಪ್ಪಿನಿಂದ ಹೊರಬಂದ ಸಂಜಯನಿಗೆ ಆಗ ಕೇವಲ 23 ವರ್ಷ ವಯಸ್ಸು.
ಮುಂದೆ ಮುಂಬೈ ನಗರವು 1993 ರಲ್ಲಿ ಎಂದೂ ಕಂಡರಿಯದ ಸರಣಿ ಸ್ಫೋಟಗಳಿಗೆ ತತ್ತರಿಸಿ ಹೋಯಿತು. ಸುಳಿವಿನ ಜಾಡು ಹಿಡಿಯುತ್ತಾ ಹೋದ ಮುಂಬೈ ಪೋಲೀಸರಿಗೆ ಹಿನ್ನೆಲೆಯು ಮುಂಬೈ ಅಂಡರ್‌ವರ್ಲ್ಡ್‌ನಿಂದ ಶುರುವಾಗಿ ಸಂಜಯನ ಬುಡದವರೆಗೂ ಬಂದಿತು. ಸಂಜಯ್ ದತ್ ತನ್ನ ಮನೆಯಲ್ಲಿ ಗಿಟಾರ್ ಮತ್ತು ಟೆನ್ನಿಸ್ ಬಾಲ್ ಗಳನ್ನಿಟ್ಟುಕೊಂಡಿದ್ದ ಎಂಬ ಮಾಹಿತಿ ಸಿಗುತ್ತಿದ್ದಂತೆ ಪೋಲೀಸರು ಮತ್ತಷ್ಟು ಚುರುಕಾಗಿಬಿಟ್ಟಿದ್ದರು. ಈ ವಿಚಾರದಲ್ಲಿ ಶಂಕೆ, ಬಂಧನ, ವಿಚಾರಣೆ, ವಿವಾದ, ಅವಮಾನ, ಕೋರ್ಟ್ ಕೇಸು, ಜೈಲು ಶಿಕ್ಷೆ, ಜಾಮೀನು, ಬಿಡುಗಡೆ… ಹೀಗೆ ನಂತರದ ದಶಕಗಳಲ್ಲಿ ಬಹಳಷ್ಟು ಸಂಗತಿಗಳು ಆಗಿಹೋದವು. ಇದೇನು ಗಿಟಾರ್, ಟೆನ್ನಿಸ್ ಬಾಲ್ ಅನ್ನುತ್ತೀರಾ? ಅಂದಹಾಗೆ ಭೂಗತಲೋಕದ ಭಾಷೆಯಲ್ಲಿ ಗಿಟಾರ್ ಎಂದರೆ ಎ.ಕೆ-56 ರೈಫಲ್, ಟೆನ್ನಿಸ್ ಬಾಲ್ ಅಂದರೆ ಹ್ಯಾಂಡ್ ಗ್ರೆನೇಡ್!
ಇಲ್ಲೂ ಸೆಲೆಬ್ರಿಟಿ ಆರೋಪಿಯನ್ನು ರಕ್ಷಿಸಲು ಒಂದೊಳ್ಳೆಯ ಇಕೋ ಸಿಸ್ಟಮ್ ವ್ಯವಸ್ಥಿತವಾಗಿ ಕೆಲಸ ಮಾಡಿತು. ಅಷ್ಟೇ ಅಲ್ಲ. ಇದು ಹಲವು ವರ್ಷಗಳ ಕಾಲ ನಿರಂತರವಾಗಿ ಮುಂದುವರಿಯಿತು. ಈಗಲೂ ಅದು ಅಲ್ಲಲ್ಲಿ ಒಂದಿಷ್ಟು ಕಾಣುವುದುಂಟು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ “ಸಂಜೂ” ಚಿತ್ರದಲ್ಲಿ ಖ್ಯಾತ ನಿರ್ದೇಶಕ ಹಿರಾನಿಯವರು ಕಟ್ಟಿಕೊಡುವ ಸಂಜಯನ ಕಥನ. “ಸಂಜಯ್ ಯಾವತ್ತಿಗೂ ದೇಶದ್ರೋಹಿಯಾಗಿರಲಿಲ್ಲ, ಭಯೋತ್ಪಾದಕನಾಗಿರಲಿಲ್ಲ. ಅವನಿಗೆ ಶಿಕ್ಷೆಯಾಗಿದ್ದು ಆರ್ಮ್ಸ್‌ಆಕ್ಟ್ ಕಾಯಿದೆಯ ಅಡಿಯಲ್ಲಿ ಮಾತ್ರ” ಎಂಬ ವಾದವನ್ನೇ ಚಿತ್ರವು ಬಲವಾಗಿ ಮಂಡಿಸುತ್ತದೆ. ಸಂಜಯ್ ಕೂಡ ಕೆಲವು ಸಂದರ್ಶನಗಳಲ್ಲಿ “ಮುಂಬೈಯಲ್ಲಿ ಗಲಭೆಗಳಾಗುತ್ತಿದ್ದಾಗ ನನಗೆ ವಿಪರೀತ ಭಯವಾಗಿತ್ತು. ಹೀಗಾಗಿ ಕುಟುಂಬದ ರಕ್ಷಣೆಗಾಗಿ ಚಿತ್ರರಂಗದ ಕೆಲ ಗೆಳೆಯರಿಂದ ರೈಫಲ್ ಗಳನ್ನು ತರಿಸಿಕೊಂಡು ಮನೆಯಲ್ಲಿಟ್ಟುಕೊಂಡೆ. ಅದುವೇ ನನ್ನಿಂದಾದ ದೊಡ್ಡ ತಪ್ಪು”, ಎಂದು ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಈ ವಾದವನ್ನು ಬಯೋಪಿಕ್ ನಲ್ಲೂ ಭಾವನಾತ್ಮಕವಾಗಿ ಹೆಣೆದು ಆತನಿಗಾಗಿ ಚಂದದ, ಮುಗ್ಧ ಇಮೇಜ್ ಒಂದನ್ನು ಕಟ್ಟಿಕೊಡಲಾಗುತ್ತದೆ.
ಆದರೆ ಇದು ಸತ್ಯವೇ ಎಂಬುದನ್ನು ಪರಿಶೀಲಿಸಲು ಈ ಘಟನೆಯ ಮತ್ತಷ್ಟು ಆಳಕ್ಕಿಳಿಯಬೇಕು. ಹಾಗೆ ನೋಡಿದರೆ ಮುಂಬೈ ಶಹರದಲ್ಲಿ ಗಲಭೆಗಳಾಗುವ ಮುನ್ನವೇ ಸಂಜಯ್ ದತ್ ಬಳಿ ಶಸ್ತ್ರಗಳಿದ್ದವು. ಬೇಟೆಯನ್ನು ಬಹಳ ಹಚ್ಚಿಕೊಂಡಿದ್ದ ಈತನ ಬಳಿ ಲೈಸೆನ್ಸ್ ಹೊಂದಿದ ಮೂರು ಆಯುಧಗಳಿದ್ದವು. ನೀಲಗಾಯಿ, ಜಿಂಕೆಯಂತಹ ಪ್ರಾಣಿಗಳನ್ನು ಬೇಟೆಯಾಡಲು ಬೋಲ್ಟ್ ಆಕ್ಷನ್ ಬ್ರೂನೋ .270 ರೈಫಲ್ ಇದ್ದರೆ, ಹುಲಿ-ಆನೆಗಳಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು .375 ಹಾಲಂಡ್ ಆಂಡ್ ಹಾಲಂಡ್ ಮ್ಯಾಗ್ನಮ್ ಡಬಲ್ ಬ್ಯಾರೆಲ್ ರೈಫಲ್ಲುಗಳಿದ್ದವು. ಇವುಗಳಲ್ಲದೆ ಒಂದು ಶಾಟ್-ಗನ್ ಮತ್ತು ಆಟೋಮ್ಯಾಟಿಕ್ ಪಿಸ್ಟಲ್ ಬೇರೆ ಜೊತೆಗಿತ್ತು. ಮನೆಯಲ್ಲಿ ಆಟಿಕೆಗಳಂತೆ ಇಷ್ಟೆಲ್ಲಾ ಗನ್ನುಗಳನ್ನಿಟ್ಟುಕೊಂಡ ವ್ಯಕ್ತಿಗೆ ಆತ್ಮರಕ್ಷಣೆಯ ನೆಪದಲ್ಲಿ ಹೆಚ್ಚುವರಿಯಾಗಿ ಎ.ಕೆ-56 ಏಕೆ ಬೇಕಾಯಿತು? ಇದು ಉತ್ತರವಿಲ್ಲದ ಪ್ರಶ್ನೆ.
ಲೇಖಕ ಯಾಸಿರ್ ಉಸ್ಮಾನ್ ಬರೆಯುವಂತೆ ಸಂಜಯ್ ಆ ಕಾಲದಲ್ಲೇ ಅಪರಾಧ ಜಗತ್ತಿನ ದೊಡ್ಡ ಅಭಿಮಾನಿಯಾಗಿದ್ದ. ಭೂಗತಲೋಕದಲ್ಲಿ “ಭಾಯಿ”ಗಳ ಸಖ್ಯ, ಅಲ್ಲಿನ ದೊಡ್ಡ ಕುಳಗಳ ಜೊತೆಗೆ ಓಡಾಡುವುದು ಆತನಿಗೆ ಭಾರೀ ರೋಮಾಂಚನವನ್ನು ತರುತ್ತಿತ್ತು. “ಈ ಪಟ್ಟಿಯಲ್ಲಿ ಯಾವ್ಯಾವ ಮಾದಕ ದ್ರವ್ಯಗಳನ್ನು ನೀನು ಈವರೆಗೆ ಬಳಸಿದ್ದೀಯಾ?” ಎಂದು ರಿಹಾಬ್ ಕೇಂದ್ರದಲ್ಲಿ ಅಮೆರಿಕನ್ ತಜ್ಞರು ಒಮ್ಮೆ ಈತನಿಗೆ ಚೆಕ್-ಲಿಸ್ಟ್ ಒಂದನ್ನು ಕೊಟ್ಟರೆ, ಸಂಜಯ್ ಎಲ್ಲದಕ್ಕೂ ಟಿಕ್ ಒತ್ತಿದ್ದ. ಇಷ್ಟೆಲ್ಲ ಮಾದಕ ದ್ರವ್ಯಗಳನ್ನು ಕುರುಕಲು ತಿಂಡಿಯಂತೆ ಸೇವಿಸಿದವನು ಹೇಗೆ ಬದುಕುಳಿದಿದ್ದಾನೆ ಎಂಬುದೇ ಅಲ್ಲಿದ್ದ ವೈದ್ಯರಿಗೊಂದು ದೊಡ್ಡ ಒಗಟಾಗಿತ್ತಂತೆ.
ಇಷ್ಟೆಲ್ಲಾ ರೋಚಕ ಹಿನ್ನೆಲೆಯುಳ್ಳ ಹೊರತಾಗಿಯೂ ಈತನನ್ನು ಅಗೋಚರ ಇಕೋ-ಸಿಸ್ಟಮ್ ಒಂದು ಸದಾಕಾಲ ಕಾಪಾಡುತ್ತದೆ. ಬಯೋಪಿಕ್, ಪ್ರೆಸ್ ಮೀಟ್, ಸೆಲೆಬ್ರಿಟಿ ಬೈಟ್… ಇತ್ಯಾದಿ ಪಿ.ಆರ್ ಚಟುವಟಿಕೆಗಳು ಇವುಗಳದ್ದೇ ಒಂದು ವಿಸೃತ ರೂಪ. ಈ ವ್ಯವಸ್ಥೆಯು ಅವನನ್ನು ಮುಗ್ಧ ಎನ್ನುತ್ತದೆ. ಅವನ ಮನಸ್ಸು ಮಗುವಿನಂತೆ, ಹೀಗಾಗಿಯೇ ಅವನನ್ನು “ಸಂಜು ಬಾಬಾ” ಎಂದು ಕರೆಯುತ್ತೇವೆ ಎನ್ನುತ್ತದೆ. ಅಂಥಾ ವಿವಾದದ ಸಮಯದಲ್ಲೂ ಸುಭಾಷ್ ಘೈ ನಿರ್ದೇಶನದ “ಖಳನಾಯಕ್” (1993) ಚಿತ್ರವು ಬಿಡುಗಡೆಯಾಗಿ ಭರ್ಜರಿ ಕಾಸು ಎಣಿಸುತ್ತದೆ. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡಕ್ಕೆ ಬಾಂಬ್ ದಾಳಿ ಮಾಡಿದ ದುರುಳರ ಪಟ್ಟಿಯಲ್ಲಿ ಸಂಜಯನ ಹೆಸರೂ ಕೇಳಿಬಂದಾಗ, ಹಿರಿಯ ನಟ ಮತ್ತು ರಾಜಕಾರಣಿಯಾಗಿದ್ದ ಶತ್ರುಘ್ನ ಸಿನ್ಹಾ ಹೀಗಂದಿದ್ದರಂತೆ: “ಏನು? ಅವನಾ? ಸ್ಟಾಕ್ ಎಕ್ಸ್‌ಚೇಂಜ್ ಅಂದ್ರೇನು ಎಂಬುದೂ ಅವನಿಗೆ ಗೊತ್ತಿರಲಿಕ್ಕಿಲ್ಲ!”
ಹಲವಾರು ದೇಶಗಳಲ್ಲಿ ಸೆಲೆಬ್ರಿಟಿಯಾಗುವ ಮತ್ತು ಇದರೊಂದಿಗೆ ಗುರಾಣಿಯಾಗಿ ಬರುವ ಇಕೋ-ಸಿಸ್ಟಮ್ ಗಳು ಇವರನ್ನು ಸದಾ ರಕ್ಷಿಸುವುದು ಹೀಗೆ. ಆದರೆ ದುರಾದೃಷ್ಟವೆಂದರೆ ಈ ಸೆಲೆಬ್ರಿಟಿಗಳ ಅಭಿಮಾನಿಗಳಿಗೆ ಅಥವಾ ಭಕ್ತರಿಗೆ ಇಂತಹ ವಿಲಾಸಗಳಿರುವುದಿಲ್ಲ. ಈ ಮಂದಿ ಜೈಲು ಪಾಲಾದರೆ ಅಲ್ಲೇ ಕೊಳೆಯಬೇಕು. ಸಿಕ್ಕಸಿಕ್ಕವರ ಒದೆ ತಿನ್ನಬೇಕು. ಕೋರ್ಟು-ಕಚೇರಿಗಳೆಂದು ಅಲೆಯುತ್ತಾ ತಮ್ಮ ಯೌವನವನ್ನು ಸವೆಸಿಬಿಡಬೇಕು. ತನ್ನ ಬದುಕಿನ ಅಮೂಲ್ಯ ವರ್ಷಗಳು ಎಲ್ಲಿ ಕಳೆದುಹೋದವು ಎಂದು ಹಿಂತಿರುಗಿ ನೋಡುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಲೋಕವು ಎಂತೆಂಥಾ ದಿಗ್ಗಜರನ್ನೇ ಮರೆತು ಬಿಡುತ್ತದಂತೆ. ಹೀಗಿರುವಾಗ ಸಾಮಾನ್ಯರದ್ದೇನು ಲೆಕ್ಕ!
ನಾವು ಸೆಲೆಬ್ರಿಟಿಯೊಬ್ಬನ ಕೆಲಸವನ್ನು ಮೆಚ್ಚಬಹುದು. ಹಾಗಂತ ಖ್ಯಾತನಾಮನೊಬ್ಬನ ಪ್ರತಿಯೊಂದನ್ನೂ ಮೆಚ್ಚಬೇಕೆಂದಿಲ್ಲವಲ್ಲ. ಮೇಲಿನ ಉದಾಹರಣೆಯನ್ನೇ ನೋಡಿದರೆ ಸಂಜಯ್ ದತ್ ಇಂಡಸ್ಟ್ರಿ ಕಂಡ ಮಹಾಪ್ರತಿಭಾವಂತನೇನಲ್ಲ. ಮುನ್ನಾಭಾಯಿ ಸರಣಿ, ವಾಸ್ತವ್, ಸಾಜನ್… ಇತ್ಯಾದಿ ಬೆರಳೆಣಿಕೆಯ ಚಿತ್ರಗಳನ್ನು ಬಿಟ್ಟರೆ ಬಹಳ ಕಾಲ ನೆನಪಿನಲ್ಲಿಡುವ ಚಿತ್ರಗಳನ್ನೇನೂ ಆತ ನೀಡಲಿಲ್ಲ. ಆದರೆ ಮುನ್ನಾಭಾಯಿ ಸರಣಿಯಲ್ಲಿ ಆತನ ನಟನೆಯನ್ನು ಮೆಚ್ಚುವ ಅಭಿಮಾನಿಗಳಿಗೆ, ಉಳಿದ ಪ್ರಕರಣಗಳ ಬಗ್ಗೆಯೂ ವಿವರವಾಗಿ ಗೊತ್ತಿದ್ದರೆ ಆತನಿಗೆ ಕಂಡಕಂಡಲ್ಲಿ ಜೈಕಾರ ಬೀಳುವುದಿಲ್ಲ. ಹಾಗೆ ನೋಡಿದರೆ ಬಂಗಾರದ ಮನುಷ್ಯನಂತೆ ಬಾಳಿದ ತಂದೆ ಸುನಿಲ್ ದತ್ ಸ್ಥಾನಮಾನಕ್ಕೆ, ಮಗ ಸಂಜಯ್ ದತ್ ಯಾವ ರೀತಿಯಲ್ಲೂ ಹೋಲಿಕೆಯಾಗುವುದಿಲ್ಲ. ಸಂಜಯ್ ಇದೊಂದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಅದು ಬೇರೆ ಮಾತು.
ಅಷ್ಟಕ್ಕೂ “ಸೆಲೆಬ್ರಿಟಿ” ಎಂಬ ಪದವು ಸವಕಲಾಗಿ ಹಲವು ದಶಕಗಳೇ ಕಳೆದಿವೆ. ನಾವು ಮಾತ್ರ ಇಂದಿಗೂ ಇದಕ್ಕೆ ಜೋತು ಬೀಳುವುದೊಂದು ವಿಚಿತ್ರ. ಸ್ಫುರದ್ರೂಪಿ, ಅಮೆರಿಕನ್ ಸರಣಿ ಹಂತಕ ಟೆಡ್ ಬಂಡಿಯನ್ನೇ ತೆಗೆದುಕೊಳ್ಳಿ. ಬಂಡಿ ತನ್ನ ಜೀವಿತಾವಧಿಯಲ್ಲಿ ಮೂವತ್ತಕ್ಕೂ ಹೆಚ್ಚು ಯುವತಿಯರನ್ನು ಬರ್ಬರವಾಗಿ ಕೊಲೆ ಮಾಡಿದ್ದ (ಇದು ಪೋಲೀಸ್ ಇಲಾಖೆಯ ದಾಖಲೆಗಳಿಗೆ ಸಿಕ್ಕ ಅಧಿಕೃತ ಸಂಖ್ಯೆಯಷ್ಟೇ). ಯಾವ ರಾಕ್ಷಸನಿಗೂ ಮುಜುಗರವಾಗುವಷ್ಟು ಅಮಾನವೀಯವಾಗಿ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದ್ದ. ಅದಷ್ಟೋ ಬಾರಿ ತಾನು ಹೆಣ್ಣುಮಕ್ಕಳನ್ನು ಕೊಂದು ಎಸೆದ ಜಾಗಗಳಿಗೇ ಮತ್ತೊಮ್ಮೆ, ಮಗದೊಮ್ಮೆ ಹೋಗಿ ನಿಧಾನವಾಗಿ ಕೊಳೆಯುತ್ತಿದ್ದ ಶವಗಳನ್ನೇ ಸಂಭೋಗಿಸಿ ಬರುತ್ತಿದ್ದ. ಇಂದಿಗೂ “ಟೆಡ್ ಬಂಡಿ” ಎಂದರೆ ಮನೋವೈದ್ಯರಿಗೊಂದು ಅಧ್ಯಯನದ ವಸ್ತು.
ಇಂತಿಪ್ಪ ಟೆಡ್ ಬಂಡಿ ಕೋರ್ಟಿನಲ್ಲಿ ತನ್ನ ವಾದವನ್ನು ಮಂಡಿಸಲು ಬಂದರೆ, ಆತನನ್ನು ನೋಡಲೆಂದೇ ನೂರಾರು ಹೆಣ್ಣುಮಕ್ಕಳು ದೇಶದ ವಿವಿಧ ಮೂಲೆಗಳಿಂದ ಬರುತ್ತಿದ್ದರು. ಆಕರ್ಷಕ ನಗುಮುಖ, ಕೆದರಿಲ್ಲದ ಕ್ರಾಪು, ಟರ್ಟಲ್ ನೆಕ್ ಟಿ-ಶರ್ಟಿನ ಮೇಲೆ ಮಟ್ಟಸವಾಗಿ ಧರಿಸಿದ್ದ ಕೋಟ್, ಸಪೂರ ಟೈ, ಇದೊಂದು ವಿಚಾರಣೆಯಲ್ಲ; ಬದಲಾಗಿ ಸಿನೆಮಾ ಒಂದರ ಶೂಟಿಂಗ್ ಎಂಬಂತೆ ಬಂಡಿ ತನ್ನ ನಾಜೂಕು ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದ ಪರಿ, ಕೋರ್ಟ್‍ರೂಮಿನ ಹಿಂಭಾಗದಲ್ಲಿ ಅವನನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಯುವತಿಯರನ್ನು ಕಡೆಗಣ್ಣಿನಲ್ಲಿ ದಿಟ್ಟಿಸುತ್ತಾ ಅವನು ಎಸೆಯುತ್ತಿದ್ದ ಚಿಕ್ಕ ಕಿರುನಗೆ… ಹೀಗೆ ತನ್ನ ಕಾಲಕ್ಕೆ ಯಾವ ಹಾಲಿವುಡ್ ನಟನೂ ಚಿಲ್ಲರೆ ಅನ್ನಿಸುವಂತಿನ “ಸೆಲೆಬ್ರಿಟಿ”ಯಾಗಿದ್ದ ಟೆಡ್ ಬಂಡಿ. ಈ ಸುರಸುಂದರಾಂಗನನ್ನು ನೋಡಲು ಯುವತಿಯರು ಹುಚ್ಚೆದ್ದು ಬರುತ್ತಿದ್ದರು. ಏನೋ ಒಂಥರಾ ಸಖ್ಖತ್ತಾಗಿದ್ದಾನೆ ಎಂದು ಬಾಯ್ತುಂಬಾ ಹೇಳುತ್ತಿದ್ದರು. ಹಾಗಿತ್ತು ಅವನ ಮೋಡಿ.
ಹಾಗಂತ ಬಂಡಿಯಂತಹ ಕ್ರೂರ ಅಪರಾಧಿಯೊಬ್ಬನಿಗೆ ಇಕೋ-ಸಿಸ್ಟಮ್ ಇರಲಿಲ್ಲವೇ? ಖಂಡಿತ ಇತ್ತು. ಬಹುಷಃ “ಸೆಲೆಬ್ರಿಟಿ” ಎಂಬ ಪೊಳ್ಳು ಪದವೇ ಆತನಿಗೆ ಅದನ್ನು ದಯಪಾಲಿಸಿತ್ತು. ಟ್ಯಾಬ್ಲಾಯ್ಡ್ ಮಾಧ್ಯಮಗಳಿಗೆ ಆತನಿಂದ ರೋಚಕ ಕತೆಗಳು ಬೇಕಿದ್ದವು. ಇವನೂ ಪತ್ರಕರ್ತರಿಗೆ ದುಬಾರಿ ಶುಲ್ಕ ಹೇರಿ ಜೈಲಿನಿಂದಲೇ ಸಂದರ್ಶನಗಳನ್ನು ನೀಡುತ್ತಿದ್ದ. ತನ್ನನ್ನು ಸ್ಟಾರ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ. ಕೊನೆಗೆ ಇದು ಎಷ್ಟರ ಮಟ್ಟಿಗೆ ಹೋಯಿತೆಂದರೆ ಬಂಡಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಕೂಡ ಎನ್-ಕ್ಯಾಷ್ ಮಾಡಿಕೊಳ್ಳಲು ಹಲವರು ಯತ್ನಿಸಿದ್ದರು. ಆದರೆ ಎಲ್ಲ ಇಕೋ-ಸಿಸ್ಟಮ್ ಗಳೂ ಕೊನೆಗೆ ವಿಫಲವಾದವು. ಅತ್ತ ಬಂಡಿ ಪ್ರಖ್ಯಾತ ಜೈಲೊಂದರ ಎಲೆಕ್ಟ್ರಿಕ್ ಕುರ್ಚಿಯಲ್ಲಿ ಕೂತು ಹೆಣವಾಗಿಬಿಟ್ಟರೆ, ಇತ್ತ ಹಲವರು ಜೈಲಿನ ಆವರಣದಾಚೆ ನಿಂತು ಪಟಾಕಿ ಹಚ್ಚಿ ಸಂಭ್ರಮಿಸಿದ್ದರು.
ಸೆಲೆಬ್ರಿಟಿಗಳೆಂದು ಕರೆಸಿಕೊಳ್ಳುವ ಮಂದಿಗೆ ಹೀಗೆ “ಕಲ್ಟ್” ಮಾದರಿಯಲ್ಲಿ ಅನುಯಾಯಿಗಳು ಹುಟ್ಟಿಕೊಳ್ಳುವಾಗ ಅಲ್ಲಿ ಬೇರೆಯದ್ದೇ ಒಂದು ಗೊಂದಲದ ಪರಿಸ್ಥಿತಿ ಸೃಷ್ಟಿಯಾಗಿಬಿಡುತ್ತದೆ. ಅಂದು ರಾಕ್ಷಸೀ ಹಂತಕ ಟೆಡ್ ಬಂಡಿಯನ್ನು ಆರಾಧಿಸುತ್ತಿದ್ದ ಯುವತಿಯರಿಗೂ, ಇಂದು ಗಂಭೀರ ಪ್ರಕರಣಗಳಲ್ಲಿ ಲಾಕಪ್ಪಿನ ಹಿಂದೆ ಬಿದ್ದಿರುವ ಸೆಲೆಬ್ರಿಟಿಗಳನ್ನು ಸಮರ್ಥಿಸುವ ಅಭಿಮಾನಿಗಳನ್ನು ಕಂಡಾಗಲೂ ಆಗುವ ಆತಂಕ ಈ ಬಗೆಯದ್ದೇ. ನವೆಂಬರ್ 18, 1978 ರಂದು ಗಯಾನಾದಲ್ಲಿ ಜಿಮ್ ಜೋನ್ಸ್ ಎಂಬ ಧಾರ್ಮಿಕ ಗುರುವೊಬ್ಬ “ನೀವೆಲ್ಲ ಈಗಿಂದೀಗಲೇ ಆತ್ಮಹತ್ಯೆ ಮಾಡಿಕೊಳ್ಳಿ” ಎಂದು ತನ್ನ ಅನುಯಾಯಿಗಳಿಗೆ ಕರೆ ಕೊಟ್ಟಿದ್ದ. ಆತನ ಪ್ರಭಾವವು ಅವನ ಅನುಯಾಯಿಗಳಲ್ಲಿ ಅದೆಷ್ಟಿತ್ತೆಂದರೆ ಆತ ಹೀಗೆ ಹೇಳಿದ ಎಂಬ ಏಕೈಕ ಕಾರಣಕ್ಕೆ ಒಂದೇ ಹೊತ್ತಿನಲ್ಲಿ, ಒಂದೇ ಕ್ಯಾಂಪಿನಡಿಯಲ್ಲಿ ಬರೋಬ್ಬರಿ 900 ಮಂದಿ ಹೆಣವಾಗಿಬಿಟ್ಟಿದ್ದರು. ಬಹುಷಃ ಅಷ್ಟು ದೊಡ್ಡ ಮಟ್ಟಿನ ಸಾಮೂಹಿಕ ಆತ್ಮಹತ್ಯೆಯೊಂದನ್ನು ಜಗತ್ತು ಕಂಡಿದ್ದು ಅದೇ ಮೊದಲು ಮತ್ತು ಅದೇ ಕೊನೆ.
ಸೆಲೆಬ್ರಿಟಿಯೊಬ್ಬನ ಕಾರ್ಯಕ್ಷೇತ್ರವು ಯಾವುದೇ ಆಗಿರಲಿ, ಖ್ಯಾತಿಯ ಗ್ಲಾಮರ್ ಲೋಕವು ಹೊರಜಗತ್ತಿಗೆ ಆಕರ್ಷಣೀಯವಾಗಿ ಕಾಣುವುದು ಸಹಜ. ಆದರೆ ಅಭಿಮಾನಿಯೊಬ್ಬ ಕಟ್ಟರ್ ಅನುಯಾಯಿಯಾಗಿಬಿಟ್ಟ ಕೂಡಲೇ ಒಂದಲ್ಲ ಒಂದು ರೀತಿಯಲ್ಲಿ ಕಂದಾಯವನ್ನು ತೆರಲು ಸಿದ್ಧನಾಗಬೇಕಾಗುತ್ತದೆ. ಅದು ವೈಯಕ್ತಿಕ ಸಂಬಂಧಗಳು, ವೃತ್ತಿಬದುಕಿನಿಂದ ಹಿಡಿದು ತೀರಾ ಪ್ರಾಣದವರೆಗೂ ಆಗಬಹುದು. ಕೊನೆಗೂ ಇವೆಲ್ಲದರ ಒಟ್ಟಾರೆ ಪರಿಣಾಮಗಳು ಮಾತ್ರ ಹೆಣಭಾರದಂತೆ ಬಂದು ಬೀಳುವುದು ಸಮಾಜದ ಮಡಿಲಿಗೆ.
ನೋಡನೋಡುತ್ತಿರುವಂತೆ ನಮ್ಮ ನಡುವೆ ಭಯಾನಕ “ಕಲ್ಟ್” ಸಂಸ್ಕೃತಿಗಳು ಸೃಷ್ಟಿಯಾಗುವುದು ಹೀಗೆಯೇ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ-http://“ರಾಜಕಾರಣವೆಂಬ ಮುಗಿಯದ ಮೋಟಿವೇಷನ್ನು” https://kannadaplanet.com/the-unending-motivation-of-politics/