ಹೊಸದಿಲ್ಲಿ: ಕಾಂಗ್ರೆಸ್ ನೇತಾರ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತ ಹೋದಂತೆ ಅವರು ಬಹುತೇಕ ಸಂದರ್ಭದಲ್ಲಿ ಧರಿಸುವ ಬಿಳಿಯ ಬಣ್ಣದ ಟೀ ಶರ್ಟ್ ಕುರಿತು ಕುತೂಹಲದ ಚರ್ಚೆ ನಡೆಯುತ್ತ ಬಂದಿದೆ. ರಾಹುಲ್ ಗಾಂಧಿ ಬಿಳಿಯ ಬಣ್ಣದ ಟೀಶರ್ಟನ್ನೇ ಯಾಕೆ ಧರಿಸುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸುಗಳಲ್ಲೂ ಸುಳಿದಾಡಿವೆ.
ರಾಹುಲ್ ಗಾಂಧಿ ದೇಶದ ರಾಜಕಾರಣಿಗಳ ಪೈಕಿ ಅತ್ಯಂತ ಸದೃಢರಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಕಿ.ಮೀ ನಡೆದೇ ಸಾಗಿದ ರಾಹುಲ್ ಗಾಂಧಿಯವರ ದೈಹಿಕ ಸಾಮರ್ಥ್ಯದ ಬಗ್ಗೆ ಎಲ್ಲರೂ ಹುಬ್ಬೇರಿಸುವಂತಾಗಿತ್ತು.
2022ರಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಆರಂಭಿಸಿದಾಗ ಅವರು ಬಿಳಿಯ ಟೀ ಶರ್ಟ್, ಕಾರ್ಗೋ ಪ್ಯಾಂಟ್ ಧರಿಸಿ ನಡೆಯುತ್ತಿದ್ದರು. ನಂತರ ಅವರು ಬಟ್ಟೆಯ ಬಣ್ಣ ಬದಲಾಯಿಸಬಹುದು ಎಂದು ಹಲವರು ಭಾವಿಸಿದ್ದರಾದರೂ ರಾಹುಲ್ ಬಿಳಿಯ ಬಣ್ಣಕ್ಕೇ ಅಂಟಿಕೊಂಡಿದ್ದರು.
ಯಾಕೆ ನೀವು ಬಿಳಿಯ ಟೀಶರ್ಟನ್ನೇ ಧರಿಸುತ್ತೀರಿ ಎಂದು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದಾಗ, ಇದನ್ನು ಧರಿಸಿದರೆ ಥಂಡಿಯಾಗುವುದಿಲ್ಲ. ನಮ್ಮ ದೇಶದ ಬಡವರಿಗೆ ಬೇಸಿಗೆ ಅಥವಾ ಚಳಿ ಆಗುತ್ತದೆಯೇ ಎಂದು ಕೇಳುವವರು ಯಾರೂ ಇಲ್ಲವಲ್ಲ ಎಂದು ಭಾವುಕರಾಗಿ ನುಡಿದಿದ್ದರು.
ನಿನ್ನೆ ತಮ್ಮ ಜನ್ಮದಿನದ ಸಂದರ್ಭದಲ್ಲಿ ತಮ್ಮ ಟೀಶರ್ಟ್ ಬಣ್ಣದ ಕುರಿತು ರಾಹುಲ್ ಗಾಂಧಿ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಬರೆದಿರುವ ಅವರು, `ಜನ್ಮದಿನದ ಹಾರೈಕೆಗಾಗಿ ಧನ್ಯವಾದಗಳು. ನಾನು ಯಾಕೆ ಬಿಳಿಯ ಟೀಶರ್ಟ್ ಧರಿಸುತ್ತೇನೆ ಎಂದು ಆಗಾಗ ಕೇಳಲಾಗುತ್ತದೆ. ಬಿಳಿಯ ಟೀ ಶರ್ಟ್ ಮನುಷ್ಯ ಘನತೆ, ಪಾರದರ್ಶಕತೆ ಮತ್ತು ಸರಳತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಅವರು ತಮ್ಮ ಅನುಯಾಯಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದು, ಗೆದ್ದವರಿಗೆ ಬಿಳಿಯ ಟೀ ಶರ್ಟ್ ಗಿಫ್ಟ್ ಕೊಡುವುದಾಗಿ ಹೇಳಿದ್ದಾರೆ. ನಿಮ್ಮ ಬದುಕಿನಲ್ಲಿ ಪಾರದರ್ಶಕತೆ, ಘನತೆ ಮತ್ತು ಸರಳತೆ ಎಷ್ಟು ಮುಖ್ಯ ಎಂಬುದನ್ನು ವಿಡಿಯೋ ಮಾಡಿ #WhiteTshirtArmy ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಪೋಸ್ಟ್ ಮಾಡಿ. ನಾನು ನಿಮಗೆ ಬಿಳಿಯ ವೈಟ್ ಟೀ ಶರ್ಟ್ ಉಡುಗೊರೆಯಾಗಿ ಕೊಡುತ್ತೇನೆ ಎಂದು ಅವರು ಹೇಳಿದ್ದಾರೆ.