ವಿಡಿಯೋ ಯಾರು ಲೀಕ್ ಮಾಡಿದ್ರು ಪ್ರಶ್ನೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

Most read

ಹುಬ್ಬಳ್ಳಿ: ಖಾಸಗಿ ವಿಚಾರ ವಿಡಿಯೋ ಮಾಡಿದ್ದೇ ಅಪರಾಧ. ವಿಡಿಯೋ ಯಾರಿಗೋ ಸಿಕ್ಕಿರುತ್ತೆ, ಹರಿಬಿಟ್ಟಿರುತ್ತಾರೆ. ವಿಡಿಯೋ ಮಾಡಿದವರಿಗಿಂತ, ಹರಿಬಿಟ್ಟಿದ್ದು ಅಪರಾಧನಾ? ಒಟ್ಟಿನಲ್ಲಿ ಈ ರೀತಿ ವರ್ತನೆಯೇ ಗಂಭೀರ ಅಪರಾಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ವೈರಲ್ ಆಗಿದ್ದು, ಬಂಧನದ ಅನಿವಾರ್ಯತೆ ಇದೆ. ವಿಡಿಯೋ ನಂದಲ್ಲ ಅಂತ ಪ್ರಜ್ವಲ್ ಬಂದು ಹೇಳಲಿ. ಆಗ ವಿಡಿಯೋ FSLಗೆ ಕೊಡಿ ಅಂತ ಹೇಳುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಜ್ವಲ್ ಕಾಮಕಾಂಡದಿಂದ ಭಾರತೀಯ ಜನತಾ ಪಕ್ಷ ದೇಶಾದ್ಯಂತ ಮುಜುಗರಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪ್ರಕರಣದಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಉಳಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದು, ಪ್ರಹ್ಲಾದ್ ಜೋಶಿ ಹೇಳಿಕೆ ಇದಕ್ಕೆ ಇಂಬು ನೀಡಿದೆ.

ವಿಡಿಯೋಗಳು ಬಿಡುಗಡೆಯಾದ ನಂತರ‌ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಡಿಯೋ ಬಿಡುಗಡೆ ಮಾಡಿದ್ದು ಯಾರು ಎಂಬ ಪ್ರಶ್ನೆಯನ್ನೇ ದೊಡ್ಡದಾಗಿ ಎಲ್ಲ ಕಡೆ ಪ್ರಸ್ತಾಪಿಸುತ್ತಿದ್ದು, ಜೋಶಿ ಹೇಳಿಕೆ ಇದಕ್ಕೆ ವ್ಯತಿರಿಕ್ತವಾಗಿದೆ.

ಈ ನಡುವೆ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಗೆದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್‌ ಹೇಳಿಕೆ ನೀಡಿದ್ದಾರೆ.

ನಮ್ಮ ಹೊಂದಾಣಿಕೆಯಲ್ಲಿ ಪ್ರಜ್ವಲ್‌ ರೇವಣ್ಣ ಇನ್ನೂ ಗೆದ್ದಿಲ್ಲ. ಮೈತ್ರಿ ಬಗ್ಗೆ ನಮ್ಮ ಹೈಕಮಾಂಡ್‌ ನಾಯಕರು ತೀರ್ಮಾನಿಸುತ್ತಾರೆ. ಸದ್ಯಕ್ಕೆ ನಮ್ಮ ವರಿಷ್ಠರು ಏನೂ ಸೂಚನೆ ಕೊಟ್ಟಿಲ್ಲ ಎಂದಿರುವ ಅಶೋಕ್, ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

More articles

Latest article