ಹೊಳೆನರಸೀಪುರ: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಮುಖಂಡ ದೇವರಾಜೇಗೌಡನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ವಿನಂತಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಇಂದು ನ್ಯಾಯಾಲಯಕ್ಕೆ ರಜೆ ಇರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಘುವುದು.
ದೇವರಾಜೇಗೌಡನನ್ನು ಇರಿಸಲಾಗಿರುವ ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಹೀತ್ ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವರಾಜೇಗೌಡನ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ನಿನ್ನೆ ಹಿರಿಯೂರಿನಿಂದ ಕರೆತಂದ ನಂತರ ಸತತ ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆ ಹಿರಿಯೂರು ಟೋಲ್ ಬಳಿ ಹಿರಿಯೂರು ಪೊಲೀಸರು ದೇವರಾಜೇಗೌಡನನ್ನು ವಶಕ್ಕೆ ಪಡೆದು, ಹೊಳೆನರಸೀಪುರ ಪೊಲೀಸರಿಗೆ ಒಪ್ಪಿಸಿದ್ದರು.
ತಮ್ಮ ನಿವೇಶನವೊಂದರ ಮಾರಾಟ ವಿಚಾರವಾಗಿ ವಕೀಲ ದೇವರಾಜೇಗೌಡ ಸಂಪರ್ಕ ಮಾಡಿದ್ದ. ನಂತರ ಸಹಾಯ ಮಾಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿ ಏ.1ರಂದೇ ದೂರು ನೀಡಿದ್ದಾರೆ. ಹೆದರಿಸಿ, ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ, ವೀಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ದೇವರಾಜೇಗೌಡ ಆಗಾಗ ವೀಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸುತ್ತಿದ್ದ ಎಂದು ಸಂತ್ರಸ್ಥೆ ದೂರು ನೀಡಿದ್ದಾರೆ. ದೂರು ಆದರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇ8 ರಂದು ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದ. ಜಾಮೀನು ಅರ್ಜಿ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿತ್ತು.
ಹಾಸನ ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಾಮಕಾಂಡದ ವಿಡಿಯೋಗಳನ್ನು ಹರಿಬಿಟ್ಟ ಆರೋಪವೂ ದೇವರಾಜೇಗೌಡನ ಮೇಲಿದ್ದು, ಈಗಾಗಲೇ ಒಮ್ಮೆ ಆತನ ವಿಚಾರಣೆ ನಡೆಸಿದ್ದಾರೆ. ನಂತರ ದೇವರಾಜೇಗೌಡನಿಗೆ SIT ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಆತ ಬಂದಿರಲಿಲ್ಲ. SIT ಕೂಡ ದೇವರಾಜೇಗೌಡನ ಕಸ್ಟಡಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.