ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಅವರ ವಿರುದ್ಧ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು ಕೊಲೆ ನಡೆದ ಶೆಡ್ ಗೆ ಜೂನ್ 8ರಂದು ದರ್ಶನ್ ಬಂದು ಹೋಗಿರುವ ಸಿಸಿ ಟಿವಿ ದೃಶ್ಯಾವಳಿಗಳು ಪೊಲೀಸರ ಕೈ ಸೇರಿವೆ.
ಜೂನ್ 8ರಂದು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದಕ್ಕೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತರಲಾಗಿತ್ತು. ಆತನಿಗೆ ಅಲ್ಲೇ ಟಾರ್ಚರ್ ನೀಡಿ ಹಿಂಸಿಸಲಾಗಿತ್ತು. ರಿಯಲ್ ಎಸ್ಟೇಟ್ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿದ್ದ ಈ ಶೆಡ್ ಅನ್ನು ಖಾಸಗಿ ಸಂಸ್ಥೆಯೊಂದಕ್ಕೆ ಬಾಡಿಗೆ ನೀಡಲಾಗಿದ್ದು, ಅಲ್ಲಿ ಸಾಲ ತೀರಿಸದೆ ಸೀಜ್ ಆದ ವಾಹನಗಳನ್ನು ತಂದು ಇಡಲಾಗುತ್ತಿತ್ತು. ಇದೇ ಶೆಡ್ ನಲ್ಲಿ ರೇಣುಕಾಸ್ವಾಮಿಯ ದಾರುಣ ಹತ್ಯೆ ನಡೆದಿತ್ತು.
ಜೂನ್ 8ರಂದು ರಾತ್ರಿ 8 ಗಂಟೆಗೆ ನಟ ದರ್ಶನ್ ತಮ್ಮ ಕಾರಿನಲ್ಲಿ ಇದೇ ಶೆಡ್ ಗೆ ಬಂದಿರುವುದು ಮತ್ತು 9-30 ಕ್ಕೆ ಅಲ್ಲಿಂದ ಹೋಗುತ್ತಿರುವುದು ಸಿಸಿ ಟಿವಿ ದೃಶ್ಯಾವಳಿಗಳಿಂದ ತಿಳಿದುಬರುತ್ತದೆ. ದರ್ಶನ್ ಒಳಗೆ ಬರುವ ಮತ್ತು ಹೊರಹೋಗುವ ಎರಡೂ ಸಿಸಿ ಟಿವಿ ದೃಶ್ಯಗಳು ಪೊಲೀಸರ ಕೈ ಸೇರಿವೆ. ಕೊಲೆಯಲ್ಲಿ ದರ್ಶನ್ ಪಾತ್ರ ಇರುವುದು ಸ್ಪಷ್ಟವಾದ ನಂತರವೇ ಪೊಲೀಸರು ಆತನನ್ನು ಮೈಸೂರಿನಿಂದ ಬಂಧಿಸಿ ಕರೆತಂದಿದ್ದಾರೆ.
ಕಳೆದ ಭಾನುವಾರ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ಕೂಡಿಟ್ಟುಕೊಂಡು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ನಂತರ ಆತನ ಮೃತದೇಹವನ್ನು ಸುಮನಹಳ್ಳಿ ಸಮೀಪದ ರಾಜಾಕಾಲುವೆ ಬಳಿ ಎಸೆದು ಹೋಗಲಾಗಿತ್ತು. ಮೃತದೇಹ ಪತ್ತೆಯಾಗುತ್ತಿದ್ದಂತೆ ತನಿಖೆ ಆರಂಭಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಮೃತನ ಗುರುತು ಪತ್ತೆ ಮಾಡಿದ್ದಲ್ಲದೆ ಕೊಲೆಯ ಸಂಚನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇಂದು ಬೆಳಿಗ್ಗೆ ಮೈಸೂರಿನ RADISON BLUE ಹೊಟೇಲ್ ನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್ ಇನ್ನೇನು ತಮ್ಮ ಸಿನಿಮಾದ ಶೂಟಿಂಗ್ ಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು. ಈ ನಡುವೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸುಮಾರು ಹತ್ತು ಮಂದಿ ಆರೋಪಿಗಳನ್ನೂ ಹಲವೆಡೆ ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಮತ್ತೊಂದೆಡೆ ಪ್ರಕರಣದ ಕೇಂದ್ರಬಿಂದುವಾಗಿರುವ ದರ್ಶನ್ ಗೆಳತಿ ಮತ್ತು ಚಿತ್ರನಟಿ ಪವಿತ್ರಾ ಗೌಡ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದರು.
ದರ್ಶನ್ ಸೇರಿದಂತೆ ಎಲ್ಲಾ 13 ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.