ಹೊಸ ಪ್ರಯೋಗಗಳು, ಅದರಲ್ಲೂ ವಿಶೇಷವಾಗಿ ಹಣಕಾಸಿನ ಆಯಾಮವುಳ್ಳ ದೊಡ್ಡ ಮಟ್ಟಿನ ಬದಲಾವಣೆಗಳು ಮೊದಲಿಗೆ ಬಂದು ಗೂಡು ಕಟ್ಟುವುದು ಮಹಾನಗರಗಳ ಒಡಲಿನಲ್ಲೇ. ಹಳ್ಳಿಗಳು ಈ ದೇಶದ ಬೆನ್ನೆಲುಬು ಅಂತ ಒಂದೆಡೆ ಹೇಳುತ್ತಲೇ, ಇನ್ನೊಂದೆಡೆ ಮಹಾನಗರಗಳು ಸದ್ದಿಲ್ಲದೆ ಗತ್ತಿನಿಂದ ಮೀಸೆ ತಿರುವುತ್ತಿರುವುದು ನಮ್ಮ ನಡುವಿನ ಸತ್ಯಗಳಲ್ಲೊಂದು – ಪ್ರಸಾದ್ ನಾಯ್ಕ್, ದೆಹಲಿ.
ಬಾಲ್ಯಕಾಲದಲ್ಲಿ ಹಳ್ಳಿಯಲ್ಲಿದ್ದ ನಮ್ಮಂಥವರಿಗೆ ಪೇಟೆಗೆ ಹೋಗುವುದೆಂದರೇನೇ ಒಂದು ದೊಡ್ಡ ಖುಷಿ.
ಕರಾವಳಿ ಭಾಗದಲ್ಲಿ “ಪೇಂಟೆ” ಎಂದು ಆಡುಭಾಷೆಯಲ್ಲಿ ಹೇಳಲಾಗುತ್ತಿದ್ದ ಈ ಪೇಟೆಯು ಒಂದು ರೀತಿಯಲ್ಲಿ ಪುಟ್ಟ ಪಟ್ಟಣವಷ್ಟೇ ಆಗಿತ್ತು. ನಾವಿದ್ದ ಪ್ರದೇಶಕ್ಕಿಂತ ಒಂದಿಷ್ಟು ವಿಸ್ತಾರವಾದ, ಜನನಿಬಿಡ ಮತ್ತು ಚಟುವಟಿಕೆಗಳಿಂದ ತುಂಬಿದ್ದ ಜಾಗ. ಆದರೆ ಬಾವಿಯೊಳಗಿದ್ದ ಕಪ್ಪೆಗಳಿಗೆ ಊರ ತೊರೆಯು ಸಮುದ್ರದಂತೆ ಕಾಣುವುದು ಸಹಜವಾದ್ದರಿಂದ ಈ ಆಕರ್ಷಣೆಯು ನಮಗೆ ಸ್ವಾಭಾವಿಕವಾಗಿತ್ತು ಕೂಡ. ಜಾಗತೀಕರಣದ ನಂತರದ ದಿನಗಳಲ್ಲಿ ಈ ಆಕರ್ಷಣೆಯು ಬಹುತೇಕರಿಗೆ ನಿಧಾನವಾಗಿ ಮಹಾನಗರಗಳತ್ತ ಹೊರಳಿಕೊಂಡಿತು. ಪ್ರತಿಯೊಂದು ನಗರವನ್ನೂ ಸ್ಮಾರ್ಟ್ ಸಿಟಿಗಳಾಗಿ ಪರಿವರ್ತಿಸುತ್ತೇವೆ ಅಂತೆಲ್ಲ ಸದ್ಯ ನಮ್ಮ ರಾಜಕಾರಣಿಗಳ ಭಾಷಣಗಳಲ್ಲಿ ಕೇಳಿಬರುವುದು ಕೂಡ ಇಂಥದ್ದೇ ಒಂದು ಸಾಮೂಹಿಕ ಸಾಮಾಜಿಕ ಪ್ರಜ್ಞೆಯ ಆಯಾಮಗಳಲ್ಲೊಂದು.
ನಮ್ಮ ಮಾಧ್ಯಮಗಳು ಕೂಡ ಮಹಾನಗರಗಳ ಕತೆಗಳನ್ನೇ ಸಾಮಾನ್ಯವಾಗಿ ದೊಡ್ಡ ಮತ್ತು ಪ್ರಮುಖ ವಿಷಯಗಳನ್ನಾಗಿ ಜನಸಾಮಾನ್ಯರ ಮುಂದಿಡುತ್ತಾ ಬಂದಿವೆ. ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವು ಇದಕ್ಕೊಂದು ಒಳ್ಳೆಯ ನಿದರ್ಶನ. ನಿರ್ಭಯಾ ಪ್ರಕರಣದ ಮುಂಚೆ ಭಾರತದಲ್ಲಿ ಅತ್ಯಾಚಾರಗಳು ನಡೆಯುತ್ತಿರಲಿಲ್ಲ ಅಂತಲ್ಲ. ಆದರೆ ಹೀಗೊಂದು ದುರಂತವು ರಾಷ್ಟ್ರರಾಜಧಾನಿಯಲ್ಲಿ ನಡೆದಿದ್ದು ಈ ಘಟನೆಗೊಂದು ವಿಶೇಷ ಪ್ರಾಮುಖ್ಯತೆಯನ್ನು ದಕ್ಕಿಸಿತು. ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳಾಗಿ, ಜನಸಾಮಾನ್ಯರೂ ಅಕ್ಷರಶಃ ಬೀದಿಗಿಳಿಯುವಂತಾಗಿ ಅದು ದೊಡ್ಡ ಮಟ್ಟಿನ ಸಂಚಲನವನ್ನೇ ಸೃಷ್ಟಿಸಿತು. ದೇಶದ ಇತಿಹಾಸದಲ್ಲಿ ಮೈಲುಗಲ್ಲು ಎಂಬಂತೆ ಈ ಪ್ರಕರಣವು ದಾಖಲಾಯಿತು. ಇದು ಮಹಾನಗರವೊಂದರ ಮಹಿಮೆ!
ಇತ್ತೀಚೆಗಿನ ಪಹಲ್ಗಾಂವ್ ದಾಳಿಯ ನಂತರ ಎರಡೂ ದೇಶಗಳ ಮುಖ್ಯವಾಹಿನಿಯ ಮಾಧ್ಯಮಗಳ ನಿರ್ಲಜ್ಜ ನಡೆಯಲ್ಲೂ ಈ ಎಳೆಯನ್ನು ನಾವು ಗಮನಿಸಬಹುದು. ಕರಾಚಿ ಬಂದರಿನ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ನಾಶ ಮಾಡಲಾಯಿತು ಎಂದು ಭಾರತದ ಕೆಲ ಸುದ್ದಿವಾಹಿನಿಗಳು ಹೇಳಿಕೊಂಡವು. ಭಾರತೀಯ ಸೇನೆಯು ಇಡೀ ಇಸ್ಲಾಮಾಬಾದ್ ಪ್ರದೇಶವನ್ನು ವಶಪಡಿಸಿಕೊಂಡಿದೆ ಎಂದು ಒಂದು ನ್ಯೂಸ್ ಚಾನೆಲ್ ಹೇಳಿಕೊಂಡರೆ, ಇನ್ನೊಂದು ನ್ಯೂಸ್ ಚಾನೆಲ್ ಲಾಹೋರ್ ಸರ್ವನಾಶವಾಯಿತು ಎಂದು ಎದೆ ತಟ್ಟಿಕೊಂಡಿತು. ಅತ್ತ ಪಾಕಿಸ್ತಾನದ ಸೇನಾಧಿಕಾರಿಗಳು ಕೂಡ ದೆಹಲಿ ಸೇರಿದಂತೆ ಉತ್ತರಭಾರತದ ಹಲವು ನಗರ-ಮಹಾನಗರಗಳಿಗೆ ನಾವು ರಾಕ್ಷಸ ಹೊಡೆತವನ್ನು ನೀಡಿದ್ದೇವೆ ಎಂದು ಕೊಚ್ಚಿಕೊಂಡರು. ಇವ್ಯಾವುದೂ ಸತ್ಯವಲ್ಲ ಎಂಬುದು ಬೇರೆ ಮಾತು. ಆದರೆ ತಮ್ಮ ಕತೆಯಲ್ಲಿ ಮಹಾನಗರಗಳನ್ನು ಎಳೆತರುವುದು ಅದೆಷ್ಟು ಗ್ಲಾಮರ್ ಮತ್ತು ರೋಚಕತೆಯನ್ನು ತರಬಲ್ಲದು ಎಂಬುದನ್ನು ಇವರೆಲ್ಲರೂ ತಿಳಿದುಕೊಂಡಿದ್ದಾರೆ ಎಂಬುದು ಗಮನಾರ್ಹ ಅಂಶ.
ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಯೋತ್ಪಾದಕರ ವಿಚಾರಧಾರೆಗಳಲ್ಲೂ ಇಂಥದೊಂದು ಸಾಮ್ಯತೆಯನ್ನು ನಾವು ಗಮನಿಸಬಹುದು. 2008ರ ಮುಂಬೈ ದಾಳಿಯ ಹಿಂದಿದ್ದ ಮಾಸ್ಟರ್ ಮೈಂಡ್ ಡೇವಿಡ್ ಹೆಡ್ಲಿ ದಿಲ್ಲಿ, ಪುಣೆ ಮತ್ತು ಮುಂಬೈ ಸೇರಿದಂತೆ ಹಲವು ಮಹಾನಗರಗಳ ಮೇಲೆ ಕಣ್ಣಿಟ್ಟಿದ್ದ. ಇವೆಲ್ಲ ಜಾಗಗಳಿಗೆ ಖುದ್ದಾಗಿ ಹೋಗಿ ಸ್ಥಳ ಪರಿಶೀಲನೆಯನ್ನೂ ಮಾಡಿದ್ದ. ಕೊನೆಗೂ ಇದಕ್ಕೆ ಬಲಿಯಾಗಿದ್ದು ನಮ್ಮ ಮುಂಬೈ ಎಂದು ಬರೆಯುತ್ತಾರೆ ಖ್ಯಾತ ಲೇಖಕ ಹುಸೇನ್ ಝಾಯ್ದಿ. ಮಹಾನಗರಗಳ ಮೇಲೆ ಬಾಂಬ್ ದಾಳಿ ಮಾಡಿದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂಬುದು ಒಂದು ಅಂಶವಾದರೆ, ವಿದೇಶೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂದರೆ ದಾಳಿಯು ಜಾಗತಿಕ ಮಟ್ಟದಲ್ಲೂ ಭಾರೀ ಗುಲ್ಲೆಬ್ಬಿಸುತ್ತದೆ ಎಂಬುದು ಈ ದಾಳಿಯ ಹಿಂದಿದ್ದ ಸೂತ್ರಧಾರರ ಲೆಕ್ಕಾಚಾರವಾಗಿತ್ತು. ಸಾಮಾನ್ಯವಾಗಿ ವಿದೇಶೀಯರೇ ಹೆಚ್ಚು ಕಾಣಸಿಗುತ್ತಿದ್ದ ಛಬಡ್ ಹೌಸ್ ಮತ್ತು ಲಿಯೋಪೋಲ್ಡ್ ಕೆಫೆಯಂತಹ ಸ್ಥಳಗಳನ್ನು ಬಂದೂಕುಧಾರಿ ಉಗ್ರಗಾಮಿಗಳು ಗುರಿಯಾಗಿಸಿದ್ದ ಹಿಂದಿರುವ ಕಾರಣವೂ ಇದೇ ಆಗಿತ್ತು.
ಸಾಮಾನ್ಯವಾಗಿ ಮಹಾನಗರಗಳ ಸುದ್ದಿಗಳು ಮುಖಪುಟದಲ್ಲಿ ಮತ್ತು ಹಳ್ಳಿಗಳ ಸುದ್ದಿಗಳು ಒಳಪುಟಗಳಲ್ಲಿ ಪ್ರಕಟವಾಗುವ ಪರಿಪಾಠವು ಬಹುಷಃ ಜನಸಾಮಾನ್ಯರ ಸುಪ್ತಪ್ರಜ್ಞೆಯಲ್ಲೂ ಗಟ್ಟಿಯಾಗಿ ಬೇರೂರಿದೆ. ಹೆಚ್ಚಿನಂಶ ಈ ಕಾರಣದಿಂದಾಗಿ ಮಹಾನಗರದಲ್ಲಿ ವಾಸಿಸುವವರು ತಾವು ಉಳಿದವರಿಗಿಂತ ಶ್ರೇಷ್ಠವೇನೋ ಎಂಬಂತೆ ಒಳಗೊಳಗೇ ಮಂಡಿಗೆ ಮೆಲ್ಲುತ್ತಿರುತ್ತಾರೆ. ಉಳಿದವುಗಳು ಹಾಗಿರಲಿ, ನೀರಿನಂತಹ ಮೂಲಭೂತ ಅವಶ್ಯಕತೆಯನ್ನೇ ಒಮ್ಮೆ ನೋಡೋಣ! ದಿನರಾತ್ರಿ ಲಭ್ಯವಿದೆ ಎಂಬಂತೆ ಕಾಣುವ ನೀರನ್ನು ಬೇಕಾಬಿಟ್ಟಿ ಪೋಲು ಮಾಡುವ ಮಹಾನಗರಗಳ ಬಹುತೇಕ ನಿವಾಸಿಗಳಿಗೆ ತಮ್ಮ ಪಾಲಿಗೆ ಸಿಗುತ್ತಿರುವ ಈ ನೀರು, ನಮ್ಮ ಹಳ್ಳಿಗರ ನ್ಯಾಯದ ಪಾಲಿನಿಂದ ಎತ್ತಿ ಕೊಡುತ್ತಿರುವ ಒಂದಂಶ ಎಂಬ ಪರಿಜ್ಞಾನವೇ ಇರುವುದಿಲ್ಲ. ಮಹಾರಾಷ್ಟ್ರದ ವಿದರ್ಭದಂತಹ ಹಳ್ಳಿಗಳಲ್ಲಿ ಹೊಲವೊಂದರಲ್ಲಿ ಆರು ಕಡೆ ಕೊಳವೆಬಾವಿ ತೆಗೆದು, ಆರೂ ಬಾರಿ ನೀರು ಸಿಗದೆ ಸಾಲ-ಸೋಲಗಳಿಂದ ಕಂಗಾಲಾಗುವ ರೈತನೊಬ್ಬನ ಬಗ್ಗೆ ಚರ್ಚೆಯಾಗುವುದಿಲ್ಲ. ಆದರೆ ನೀರಿನ ಅಭಾವವಿರುವ ಹೊರತಾಗಿಯೂ ಐ.ಪಿ.ಎಲ್ ಆಯೋಜಿತ ಕ್ರೀಡಾಂಗಣಗಳಲ್ಲಿ ನೀರಿನ ಟ್ಯಾಂಕರುಗಳು ಜಲಧಾರೆಯನ್ನು ಸುರಿಸುವುದು ಹೆಚ್ಚು ಸುದ್ದಿಯಾಗುತ್ತದೆ. ಬಹುಷಃ ಇದನ್ನು ಉದ್ದೇಶಿಸಿಯೇ ಖ್ಯಾತ ಲೇಖಕ-ಪತ್ರಕರ್ತರಾದ ಪಿ. ಸಾಯಿನಾಥ್ ಒಮ್ಮೆ ಹೀಗಂದಿದ್ದರು: “ಭಾರತದೊಳಗಡೆ ಎರಡು ದೇಶವಿದೆ. ಒಂದು ಬಿ.ಪಿ.ಎಲ್ ಭಾರತ. ಇನ್ನೊಂದು ಐ.ಪಿ.ಎಲ್ ಭಾರತ!”
ಮಹಾನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಬಗ್ಗೆ ಚರ್ಚೆಯಾದಾಗಲೆಲ್ಲ ನಮ್ಮ ಶಕ್ತಿಕೇಂದ್ರಗಳಲ್ಲಿ ಕೇಳಲು ಸಿಗುವ ಮಾತೆಂದರೆ ನಾವಿನ್ನು ರೋಪ್ ವೇ ತರುತ್ತೇವೆ ಎಂಬುದು. ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಫುಡ್ ಡೆಲಿವರಿ app ಗಳು ಡೆಲಿವರಿ ಹುಡುಗರ ಬದಲಾಗಿ, ಡ್ರೋನುಗಳಲ್ಲಿ ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಯಶಸ್ವಿ ಪ್ರಯೋಗಗಳನ್ನು ಕೂಡ ಪಶ್ಚಿಮದ ಕೆಲ ದೇಶಗಳು ಅಲ್ಲಲ್ಲಿ ಮಾಡಿವೆ. ಒಟ್ಟಾರೆಯಾಗಿ ಹೇಳುವುದಾದರೆ ಹೊಸ ಪ್ರಯೋಗಗಳು, ಅದರಲ್ಲೂ ವಿಶೇಷವಾಗಿ ಹಣಕಾಸಿನ ಆಯಾಮವುಳ್ಳ ದೊಡ್ಡ ಮಟ್ಟಿನ ಬದಲಾವಣೆಗಳು ಮೊದಲಿಗೆ ಬಂದು ಗೂಡು ಕಟ್ಟುವುದು ಮಹಾನಗರಗಳ ಒಡಲಿನಲ್ಲೇ. ಹಳ್ಳಿಗಳು ಈ ದೇಶದ ಬೆನ್ನೆಲುಬು ಅಂತ ಒಂದೆಡೆ ಹೇಳುತ್ತಲೇ, ಇನ್ನೊಂದೆಡೆ ಮಹಾನಗರಗಳು ಸದ್ದಿಲ್ಲದೆ ಗತ್ತಿನಿಂದ ಮೀಸೆ ತಿರುವುತ್ತಿರುವುದು ನಮ್ಮ ನಡುವಿನ ಸತ್ಯಗಳಲ್ಲೊಂದು.
ಇಲ್ಲಿರುವುದಕ್ಕಿಂತ ಅಗಾಧವಾದದ್ದು ಅಲ್ಲೇನೋ ಇದೆ ಎಂಬ ನಮ್ಮ ಆಸೆ-ಆಮಿಷಗಳು ಇದಕ್ಕೆ ಕಾರಣವೇ? ಸರಕಾರದ ಬೊಕ್ಕಸವನ್ನು ಸದಾ ತುಂಬಿಸುವ, ಚಿನ್ನದ ಮೊಟ್ಟೆಯಿಡುವ ಕೋಳಿ ಎಂಬ ಒಂದೇ ಕಾರಣಕ್ಕೆ ಮಹಾನಗರಗಳು ಪ್ರಭುತ್ವಕ್ಕೆ ಹೆಚ್ಚು ಹತ್ತಿರವೇ? ಕಾರಣಗಳು ಅದೇನೇ ಇರಲಿ. ಹಳ್ಳಿಗಳು ಪಟ್ಟಣಗಳಾಗಲು, ಪಟ್ಟಣಗಳು ನಗರಗಳಾಗಲು, ನಗರಗಳು ಮಹಾನಗರಗಳಾಗಲು ಪ್ರಯತ್ನಿಸುತ್ತಲೇ ಇವೆ. ಇವುಗಳು ಸಾಲದು ಎಂಬಂತೆ ವಿಕಾಸವೆಂದರೆ ಇದಿಷ್ಟೇ ಎಂಬ ಜನಪ್ರಿಯ ವಾದವನ್ನೂ ಹರಿಯಬಿಡಲಾಗುತ್ತಿದೆ. ಸದ್ಯದ ಮಟ್ಟಿಗಂತೂ ಮಹಾನಗರಿ ಮತ್ತು ಮಹಾತ್ವಾಕಾಂಕ್ಷೆಗಳೆಂದರೆ ಒಂದೇ ನಾಣ್ಯದ ಎರಡು ಮುಖಗಳು.
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಕಃಶ್ಚಿತವಲ್ಲ ಎಂದು ಬರೆದಿದ್ದರು ರಾಷ್ಟ್ರಕವಿ ಕುವೆಂಪು. ಮಹಾನಗರಗಳು ಇದನ್ನು ಒಪ್ಪಲಿ, ಬಿಡಲಿ. ಆದರೆ ನಿಸ್ಸಂದೇಹವಾಗಿ ಇದು ಮಹಾನಗರಗಳಿಗೂ ಅನ್ವಯಿಸುವಂತಹ ಮಾತು.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.