ಬೆಂಗಳೂರಿನ ರಸ್ತೆಗಳ ನಿರ್ವಹಣೆಯನ್ನು ‘ಇಎಲ್ ಸಿಐಟಿಎ’ಗೆ ವಹಿಸಲು ಕಿರಣ್ ಮಜುಂದಾರ್ ಷಾ ಅಗ್ರಹ

Most read

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಯಾವುದೇ ಸರ್ಕಾರಕ್ಕೆ ಬೃಹತ್ ಸವಾಲಿನ ಕೆಲಸ. ದಶಕಗಳಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಲಕ್ಷಾಂತರ ಕೋಟಿ ರೂ.ಗಳನ್ನು ಸುರಿಯಲಾಗಿದೆ. ಆ ಹಣವೆಲ್ಲವೂ ರಾಜಕಾಲುವೆ, ಚರಂಡಿ, ರಸ್ತೆಗುಂಡಿಗಳಲ್ಲಿ ಕೊಚ್ಚಿ ಹೋಗಿದೆ ಎಂದು ಕೇಳಲೇಬೇಕಾಗುತ್ತದೆ.

ಬೆಂಗಳೂರಿನಲ್ಲಿ ರಸ್ತೆಗಳ ನಿರ್ವಹಣೆಯಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರು ಬೆಂಗಳೂರಿನ ರಸ್ತೆಗಳನ್ನು ನಿರ್ವಹಿಸುವುದು ಬಿಬಿಎಂಪಿ ಗುತ್ತಿಗೆದಾರರಿಂದ ಸಾಧ್ಯವಿಲ್ಲ. ಆದ್ದರಿಂದ ಈ ಹೊಣೆಗಾರಿಕೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿಗೆ (ಇಎಲ್ ಸಿಐಟಿಎ) ನೀಡಿ ಎಂದು ಸಲಹೆ ನೀಡಿದ್ದಾರೆ.

ಕಳೆದ ವಾರ ಸುರಿದ ಭಾರಿ ಮಳೆಗೆ ಅನೇಕ ಐಟಿ ಕಾರಿಡಾರ್ ಅನೇಕ ಪ್ರದೇಶಗಳು ಜಲಾವೃತವಾಗಿದ್ದವು. ಆಗ ಷಾ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ಅಭಿಪ್ರಾಯ ಸಾಕಷ್ಟು ವೈರಲ್ ಆಗಿದೆ. ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿ ರಸ್ತೆ ನಿರ್ವಹಣೆಯನ್ನು ಇಎಲ್ ಸಿಐಟಿಎ ಗೆ ವಹಿಸಿ ಎಂದು ಆಗ್ರಹಪಡಿಸಿದ್ದಾರೆ.

ಏನಿದು ಇಎಲ್ ಸಿಐಟಿಎ ?
ಸ್ವಾಯತ್ತ ಸಂಸ್ಥೆಯಾಗಿರುವ ಇಎಲ್ ಸಿಟಿಐಎ ಬೆಂಗಳೂರಿನ ಹೊರವಲಯದ 300ಕ್ಕೂ ಹೆಚ್ಚು ಕಂಪನಿಗಳಿಗೆ ಸ್ಥಳಾವಕಾಶ ನೀಡಿರುವ 902 ಎಕರೆಯಲ್ಲಿ ಸ್ಥಾಪಿಸಲ್ಪಟ್ಟಿರುವ ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶದ ನಿರ್ವಹಣೆ ಮಾಡುತ್ತಿದೆ. ರೋಡ್ ಮೆಟ್ರಿಕ್ಸ್ ಅಳವಡಿಸಿಕೊಂಡು ಇಎಲ್ ಸಿಟಿಐಎ ವ್ಯವಸ್ಥಿತವಾಗಿ ಮತ್ತು ವೈಜ್ಞಾಕವಾಗಿ ರಸ್ತೆಗಳನ್ನು ನಿರ್ವಹಿಸುತ್ತಿದೆ. ಕೃತಕ ಬುದ್ದಿಮತ್ತೆ (ಎಐ) ಅಳವಡಿಸಿಕೊಂಡಿದ್ದು ಈ ಎಐ ಪ್ರತಿ 15 ದಿನಗಳಿಗೊಮ್ಮೆ ರಸ್ತೆಗಳನ್ನು ಸ್ಕ್ಯಾನ್ ಮಾಡಿ, ರಸ್ತೆ ಹಾಳಾಗಿರುವುದನ್ನು ಗುರುತಿಸುತ್ತದೆ. ಇದರಿಂದ ಒಂದು ಸಣ್ಣ ಸಮಸ್ಯೆಯನ್ನೂ ತ್ವರಿತವಾಗಿ ಗುರುತಿಸಿ ಸರಿಪಡಿಸಲು ಸಹಕಾರಿಯಾಗಿದೆ ಎಂದೂ ಷಾ ವಿವರಿಸಿದ್ದಾರೆ.

ರಸ್ತೆ ಗುಂಡಿಗಳು ನಿರ್ಮಾಣವಾಗಲು ರಸ್ತೆಗಳಲ್ಲಿ ನೀರು ನಿಲ್ಲುವುದು ಮತ್ತು ದುರ್ಬಲ ಚರಂಡಿ ವ್ಯವಸ್ಥೆ ಪ್ರಮುಖ ಕಾರಣ. ಇಐಸಿಟಿಐಎ 75 ಮಳೆ ನೀರು ಕೊಯ್ಲು ಗುಂಡಿಗಳನ್ನು ಸ್ಥಾಪಿಸಿದ್ದು, ಅತ್ಯುತ್ತಮ ಒಳ ಚರಂಡಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಮತ್ತು ಭಾರೀ ಮಳೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮತ್ತು ಮಳೆಗಾಲದಲ್ಲೂ ರಸ್ತೆಗಳು ಒಣಗಿರುವಂತೆ ನೋಡಿಕೊಳ್ಳುತ್ತಿದೆ ಎಂದೂ ತಿಳಿಸಿದ್ದಾರೆ. ತಮ್ಮ ಅಭಿಪ್ರಾಯಗಳಿಗೆ ಪೂರಕವಾಗಿ ಎಲೆಕ್ಟ್ರಾನಿಕ್ಸ್ ಸಿಟಿಯ ರಸ್ತೆಗಳ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅನೇಕ ನೆಟ್ಟಿಗರು ಷಾ ಅವರನ್ನು ಬೆಂಬಲಿಸಿ ಇಐಸಿಟಿಐಎ ಗೆ ರಸ್ತೆಗಳ ನಿರ್ವಹಣೆಯನ್ನು ವಹಿಸುವಂತೆ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ. ಬೆಂಗಳೂರಿನಲ್ಲಿ 12,282 ಕಿಮೀ ರಸ್ತೆ ಜಾಲವಿದೆ. ಜೊತೆಗೆ 1,344,84 ಪೂರಕ ರಸ್ತೆಗಳು ಮತ್ತು 11,533,16 ಕಿಮೀ ವಲಯ ರಸ್ತೆಗಳ ಜಾಲವಿದೆ. ಬೆಸ್ಕಾಂ, ಒಳ ಚರಂಡಿ ಮಂಡಲಿ ಗ್ಯಾಸ್ ಪೈಪ್ ಲೈನ್, ಒಎಫ್ ಸಿ ಕೇಬಲ್, ರಸ್ತೆ ಗುಂಡಿಗಳು ಬೀಳಲು ಕಾರಣವಾಗಿವೆ.

More articles

Latest article