ನಮ್ಮ ಜಾಗೃತ ಮನಸ್ಸು ಅಥವಾ ಕಾನ್ಷಿಯಸ್ ಮನಸು ಎಚ್ಚರಿಕೆಯ ವಿಷಯಗಳಲ್ಲಿ ತೊಡಗಿಕೊಂಡಾಗ, ನಮ್ಮ ಸಬ್‌ಕಾನ್ಷಿಯಸ್ ಮನಸು ತೆರೆಯ ಹಿನ್ನೆಲೆಯಲ್ಲಿ ಸದ್ದೇ ಇಲ್ಲದೆ ತನ್ನ ಕೆಲಸವನ್ನು ಮುಂದುವರೆಸುತ್ತಾ ಕಾರ್ಯನಿರ್ವಹಿಸುತ್ತದೆ. ತರ್ಕಬದ್ಧವಾಗಿ ಯೋಚಿಸಲು ಜಾಗೃತ ಮನಸು ಕಾರಣವಾದರೆ, ಭಾವನೆಗಳು ಜಲಪಾತವಾಗಿ ಧುಮ್ಮಿಕ್ಕಲು ಸುಪ್ತ ಮನಸು ಕಾರಣ. ಈ ಸುಪ್ತ ಮನಸಿನ ಅಗಾಧ ಶಕ್ತಿಯ ಬಗ್ಗೆ ಬರೆದಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ. ರೂಪಾ ರಾವ್.
ಯಾವುದೋ ಧ್ಯಾನದಲ್ಲಿ ಕಾರ್ ಡ್ರೈವಿಂಗ್ ಮಾಡುತ್ತಿದ್ದವಳು, ಏನೋ ಅಡ್ಡ ಬಂತು ಎಂದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಎಲ್ಲಿದ್ದೇನೆ ಎಂದು ಸುತ್ತಲೂ ನೋಡಿದೆ. ಹೌದು ಅಷ್ಟು ಹೊತ್ತೂ ನಾನು ಏನನ್ನೋ ಯೋಚಿಸುತ್ತಲೇ ಡ್ರೈವ್ ಮಾಡುತ್ತಿದ್ದೆ. ಹೀಗೆ ಮನಸು ಅಲ್ಲೆಲ್ಲೋ ಅಲೆದಾಡುತ್ತಿದ್ದರೂ, ಮತ್ತೇನನ್ನೋ ಯೋಚಿಸುತ್ತಿದ್ದರೂ ನಾನು ಸರಿ ದಾರಿಯಲ್ಲಿಯೇ ಓಡಿಸುತ್ತಿದ್ದೆ. ಇದಕ್ಕೆ ಕಾರಣ ನನ್ನ ಸಬ್ ಕಾನ್ಷಿಯಸ್ ಮನಸು, ಸುಪ್ತ ಮನಸು ಅಥವಾ ಉಪ ಪ್ರಜ್ಞೆ. ಈ ಉಪ ಮನಸ್ಸು ನನ್ನ ಡ್ರೈವಿಂಗ್ ಅನ್ನು ಯಾವುದೇ ಅಡೆ ತಡೆ ಇಲ್ಲದೆ ನೋಡಿಕೊಂಡಿದೆ, ಯಾವುದೇ ಸಮಸ್ಯೆಗಳಿಲ್ಲದೆ ನನಗೆ ಮಾರ್ಗದರ್ಶನ ನೀಡಿದೆ. ಈ ಅನುಭವವು ನಮ್ಮ ಒಳ ಮನಸ್ಸಿನ ಅದ್ಭುತ ಶಕ್ತಿಯನ್ನು ಮತ್ತೆ ಎತ್ತಿ ತೋರಿಸಿತು.
ಮನಸು, ಇದು ಆಲೋಚನೆಗಳು ಮತ್ತು ಭಾವನೆಗಳ ವಿಶಾಲವಾದ ಅರಿವಿನ ಸಮುದ್ರದಂತೆ. ಇಲ್ಲಿ ಆಲೋಚನೆಗಳು ಮತ್ತು ಭಾವನೆಗಳು ಅಲೆಗಳಂತೆ ಎದ್ದು ಬಂದು ಹೋಗುತ್ತಿರುತ್ತವೆ. ನಮ್ಮ ಎಲ್ಲಾ ಆಲೋಚನೆಗಳು ಮತ್ತು ಭಾವನೆಗಳು ನೆಲೆಸಿರುವ ಸ್ಥಳ ಈ ಮನಸ್ಸು. ಇಲ್ಲಿ ನಮ್ಮ ನೆನಪುಗಳನ್ನು ಸಂಗ್ರಹಿಸಿಡುತ್ತೇವೆ. ನಾವು ಕಲಿಯುವುದು, ಕನಸು ಕಾಣುವ ಸ್ಥಳವೂ ಇದೇ. ನಮ್ಮೊಂದಿಗೆ ಅಥವಾ ಬೇರೆಯವರೊಂದಿಗೆ ನಾವು ಸಂವಾದ ನಡೆಸಬಹುದಾದ ಸ್ಥಳವೂ ಇದೇ.
ಮನಸಿನ ಶಕ್ತಿ ಅಗಾಧ, ನಮ್ಮೆಲ್ಲಾ ಭಾವನೆಗಳು, ವರ್ತನೆಗಳಿಗೂ ಮೂಲವೇ ಮನಸು. ಅಂದರೆ ಪ್ರಜ್ಞೆ, ಗ್ರಹಿಕೆ, ಆಲೋಚನೆ, ನಿರ್ಧಾರ ಮತ್ತು ಸ್ಮರಣೆಗಳನ್ನ ಒಟ್ಟುಗೂಡಿಸಿದರೆ ಅದೇ ಈ ಮನಸ್ಸಿನ ಗುಣಲಕ್ಷಣಗಳು. ಎಲ್ಲಾ ಆಲೋಚನೆಗಳಿಗೂ ತಾಣ ಈ ಮನಸೇ. ಎಲ್ಲಾ ವರ್ತನೆಗಳಿಗೂ ಮೂಲ ತಾಣ ಇಲ್ಲಿಯೇ.
ನಮ್ಮ ಜಾಗೃತ ಮನಸ್ಸು ಅಥವಾ ಕಾನ್ಷಿಯಸ್ ಮನಸು ಎಚ್ಚರಿಕೆಯ ವಿಷಯಗಳಲ್ಲಿ ತೊಡಗಿಕೊಂಡಾಗ, ನಮ್ಮ ಸಬ್‌ಕಾನ್ಷಿಯಸ್ ಮನಸು ತೆರೆಯ ಹಿನ್ನೆಲೆಯಲ್ಲಿ ಸದ್ದೇ ಇಲ್ಲದೇ ತನ್ನ ಕೆಲಸವನ್ನು ಮುಂದುವರೆಸುತ್ತಾ ಕಾರ್ಯನಿರ್ವಹಿಸುತ್ತದೆ. ತರ್ಕಬದ್ದವಾಗಿ ಯೋಚಿಸಲು ಜಾಗೃತ ಮನಸು ಕಾರಣವಾದರೆ, ಭಾವನೆಗಳು ಜಲಪಾತವಾಗಿ ಧುಮ್ಮಿಕ್ಕಲು ಸುಪ್ತ ಮನಸು ಕಾರಣ.
ಇಂದು ಈ ಸುಪ್ತ ಮನಸಿನ ಅಗಾಧ ಶಕ್ತಿಯ ಬಗ್ಗೆ ಮಾತಾಡುವ.
ನೀವು ಗಮನಿಸಿರಬಹುದು, ಕೆಲವು ಸಮಯದಲ್ಲಿ ನಾವು ಬೇಡ ಎಂದುಕೊಂಡರೂ ಕೆಲವು ತಪ್ಪುಗಳನ್ನು ಮಾಡಿರುತ್ತೇವೆ, ಇನ್ನೂ ಕೆಲವು ಸಲ ಕೆಲವು ಒಳ್ಳೆಯ ವಿಷಯಗಳನ್ನು ಅಳವಡಿಸಿ ಕೊಳ್ಳೋಣ ಎಂದುಕೊಂಡರೂ ಅದು ಸಾಧ್ಯವಾಗುವುದಿಲ್ಲ.ಏಕೆಂದರೆ ಅದಕ್ಕೂ ಕಾರಣ ಸುಪ್ತ ಮನಸು. ಈ ವಿದ್ಯಮಾನಕ್ಕೆ ಕಾರಣ ಮೆದುಳಿನ ಬೇಸಲ್ ಗ್ಯಾಂಗ್ಲಿಯಾ. ಇದು ನಮ್ಮ ದೇಹದ ಹಾಗು ನಾವು ನಿಯಮಿತವಾಗಿ ಮೈಗೂಡಿಸಿಕೊಂಡಿರುವ ಅಭ್ಯಾಸ ಅಥವಾ ಕೆಲಸಗಳನ್ನು ಅಪ್ರಯತ್ನಪೂರ್ವಕವಾಗಿ ತಂತಾನೇ ಮಾಡಲು ಕಾರಣವಾಗಿದೆ. ಬೇಕಾದರೆ ನೆನಪಿಸಿಕೊಳ್ಳಿ, ಟೈಪಿಂಗ್ ಕಲಿಯುವಾಗ ಇದೇ ರೀತಿಯ ಪ್ರಕ್ರಿಯೆಯು ಸಂಭವಿಸುತ್ತದೆ. ಆರಂಭದಲ್ಲಿ, ಪ್ರತಿ ಕೀಯನ್ನು ಕೀಲಿಸುವಾಗ ಜಾಗೃತ ಗಮನ ಬೇಕಾಗುತ್ತದೆ. ಆದರೆ ಅಭ್ಯಾಸದೊಂದಿಗೆ ನಮ್ಮ ಬೆರಳುಗಳು ಸ್ವಲ್ಪ ತಂತಾನೆ ಚಲಿಸುತ್ತವೆ. ಮುಂದೆ ಹೀಗೇ ನಮ್ಮ ಮನಸು ಬೇರೆಯದನ್ನು ಯೋಚಿಸುತ್ತಿದ್ದರೂ ಟೈಪಿಂಗ್ ಸರಾಗವಾಗಿ ಮುಂದುವರೆಯುತ್ತದೆ. ಇದನ್ನು ಪ್ರೊಸೀಜರಲ್ ಮೆಮೋರಿ ಅಥವಾ ಇಂಪ್ಲಿಸಿಟ್ ಮೆಮೋರಿ ಎಂದೂ ಕರೆಯಬಹುದು. ಇದು ಪ್ರಯತ್ನ ಪೂರ್ವಕವಾಗಿ ಯೋಚಿಸದೇ ಕೆಲವು ಕೆಲಸಗಳನ್ನು ಹೇಗೆ ತಂತಾನೆ ನಿರ್ವಹಿಸುವುದು ಎಂದು ತಿಳಿಯುವ ಲಾಂಗ್ ಟರ್ಮ್ ಮೆಮೋರಿಯ ಒಂದು ವಿಧವಾಗಿದೆ.
ಭಾವನೆಗಳನ್ನು ನಿರ್ವಹಿಸುವಲ್ಲಿಯೂ ಕೂಡ ಸಬ್‌ಕಾನ್ಷಿಯಸ್ ಮನಸ್ಸು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ, ಯಾವುದಾದರೂ ಒತ್ತಡದ ಪರಿಸ್ಥಿತಿಯನ್ನು ಎದುರಿಸಿದಾಗ, ಒಂದು ಭಯ ಅಥವಾ ಬೆದರಿಕೆಯನ್ನು ನಾವು ಪ್ರಜ್ಞಾಪೂರ್ವಕವಾಗಿ ಗುರುತಿಸುವ ಮೊದಲೇ ನಮ್ಮ ದೇಹವು ವೇಗದ ಹೃದಯ ಬಡಿತ ಮತ್ತು ಅಂಗೈ ಬೆವರಿನ ಮೂಲಕ ನಮಗೆ ಸೂಚನೆ ಕೊಡುತ್ತದೆ. ದಾರಿಯಲ್ಲಿ ನಡೆಯುತ್ತಿರುವಾಗ ಅಡ್ಡವಾಗಿ ಹಾವು ಕಂಡಕೂಡಲೇ ಮೂರು ಅಡಿ ಹಿಂದೆ ಹಾರಲು ಇದೇ ಕಾರಣ.
ಇದಕ್ಕೆ ಮೂಲ ಕಾರಣ ಏನೆಂದರೆ ಭಾವನೆಗಳನ್ನು ಸಂಸ್ಕರಿಸುವ ಕೆಲಸ ಮಾಡುವ ಮೆದುಳಿನ ಭಾಗವಾದ ಅಮಿಗ್ಡಾಲಾ. ಈ ಬಗ್ಗೆ ಮುಂದೆ ಸಂಭವಿಸಬಹುದಾದ ಅಪಾಯಗಳಿಗೆ ಜಾಗೃತ ಮನಸ್ಸಿಗಿಂತ ವೇಗವಾಗಿ ಪ್ರತಿಕ್ರಿಯಿಸುತ್ತದೆ. ಈ ನಡೆ ಕೆಲವೊಮ್ಮೆ ನಮಗೆ ಗೊಂದಲವನ್ನೂ ಉಂಟು ಮಾಡಬಹುದು. ಉದಾಹರಣೆಗೆ ನಾವು ದಾರಿಯಲ್ಲಿ ನಡೆಯುವಾಗ ಅಡ್ಡವಾಗಿ ಬಂದದ್ದು ಹಾವಾಗಿರದೇ ಹಗ್ಗವಾಗಿದ್ದಾಗ, ಯಾರೋ ನಮ್ಮ ಹಿಂದೆ ಬರುತ್ತಿರುವುದನ್ನು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ನಮಗೆ ಹಲ್ಲೆ ಮಾಡಲೆಂದೇ ಬರುತ್ತಿದ್ದಾರೆ ಎಂದು ತಿಳಿಯುವುದು ಇತ್ಯಾದಿ. ಹಾಗಾಗಿ ಈ ಸಬ್‌ಕಾನ್ಷಿಯಸ್ ಮನಸನ್ನು ನಮಗೆ ಹೆಚ್ಚು ಪೂರಕವಾಗುವಂತೆ ತರಬೇತಿ ನೀಡುವುದು ಮತ್ತು ಹೊಸ ಅಭ್ಯಾಸಗಳನ್ನು ರೂಪಿಸುವುದು ಬಹಳ ಮುಖ್ಯ, ಇದೀಗ ಒಂದು ಕಲೆ ಮತ್ತು ವಿಜ್ಞಾನವೂ ಹೌದು.
ಇದುವರೆಗಿನ ಸಂಶೋಧನೆಗಳ ಪ್ರಕಾರ ಸಬ್‌ಕಾನ್ಷಿಯಸ್ ಮನಸಿನಲ್ಲಿ ಬೇರೂರಿದ ಅಭ್ಯಾಸ, ನಂಬಿಕೆ ಇವುಗಳನ್ನು ಮರೆಯುವುದು ಕಷ್ಟ. ನಮ್ಮ ಸುಪ್ತ ಮನಸನ್ನು ನಮಗೆ ಪಾಸಿಟೀವ್ ಆಗಿ ಉಪಯೋಗವಾಗುವ ಹಾಗೆ ಬಳಸಿಕೊಳ್ಳಬೇಕೆಂದರೆ ಮೊದಲು ನಮ್ಮ ಮಿದುಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ದೀರ್ಘಾವಧಿಯಲ್ಲಿ ಪ್ರಜ್ಞಾಪೂರ್ವಕವಾಗಿ ಆಯ್ಕೆಗಳನ್ನು ಪದೇ ಪದೇ ಪುನರಾವರ್ತಿಸಿದಾಗ ಅದು ಅಭ್ಯಾಸವಾಗಿ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ನಮ್ಮ ಮೆದುಳಿನಲ್ಲಿ ಹೊಸ ನ್ಯೂರಲ್ ಪಾತ್ ಅಥವಾ ನರವ್ಯೂಹ ಸೃಷ್ಟಿ ಆಗುತ್ತದೆ. ಈ ಪ್ರಕ್ರಿಯೆಯನ್ನು ನ್ಯೂರೋಪ್ಲಾಸ್ಟಿಸಿಟಿ ಎನ್ನುತ್ತೇವೆ. ಯಾವುದೇ ಕೆಲಸವನ್ನು ಪದೇ ಪದೇ ಮಾಡುತ್ತಿದ್ದಾಗ ಅಥವಾ ಯಾವುದಾದರೂ ವಿಷಯವನ್ನು ಸುಪ್ತ ಮನಸಿಗೆ ನಾಟುವಂತೆ ಮಾಡಿದಾಗ ಈ ನ್ಯೂರಲ್ ಜಾಲಗಳು ಇನ್ನಷ್ಟು ಪ್ರಬಲವಾಗುತ್ತಾ ಹೋಗುತ್ತವೆ.
ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾದ ಮೆದುಳಿನ ನಿರ್ಧಾರದ ಭಾಗಗಳಾದ ಪ್ರಿ-ಫ್ರಂಟಲ್ ಕಾರ್ಟಿಕ್ಸ್ ನ ಅಗತ್ಯವೇ ಇಲ್ಲದೆ ಈ ಕೆಲಸಗಳು ಸ್ವ ಚಾಲನೆ ಆಗುತ್ತವೆ. ಆದ್ದರಿಂದಲೇ ಯಾವುದೇ ಒಂದು ವಿಷಯ ಅಥವಾ ಕೆಲಸ ಒಂದು ಅಭ್ಯಾಸವಾಗಿ ಬದಲಾಗಬೇಕಾದರೆ ಸ್ಥಿರವಾದ ಅಭ್ಯಾಸ ಮತ್ತು ಸತತ ಪ್ರಯತ್ನದಿಂದ ಮಾತ್ರ ಸಾಧ್ಯ. ಒಂದು ಹೊಸ ಅಭ್ಯಾಸ, ಕಲಿಕೆ ಮೈಗೂಡ ಬೇಕೆಂದರೆ 16, 22, 48 ದಿನಗಳು ಅಥವಾ ಕೆಲವೊಮ್ಮೆ ಮೂರು ತಿಂಗಳು ಇನ್ನೂ ಕೆಲವರಿಗೆ ಎರಡು ವರ್ಷಗಳೇ ಬೇಕಾಗುತ್ತದೆ. ಈ ಅವಧಿಯಲ್ಲಿನ ಸತತ ಡೆಡಿಕೇಶನ್, ನಾವು ಯಾವುದೇ ಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳಲು ಮತ್ತು ಮೆದುಳಿನ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಬ್‌ಕಾನ್ಷಿಯಸ್ ಮನಸ್ಸಿಗೆ ತರಬೇತಿ ನೀಡುವುದು ಹೇಗೆ?
ಅತ್ಯಂತ ಉತ್ತಮ ಮಾರ್ಗವೆಂದರೆ ಪುನರಾವರ್ತನೆ ಮತ್ತು ವಿಶ್ಯುಲೈಸೆನ್ಸ್ ಮೂಲಕ. ಒಂದು ಕಾರ್ಯವನ್ನು ಪದೇ ಪದೇ ಅಭ್ಯಾಸ ಮಾಡುವ ಮೂಲಕ ಅಥವಾ ಬೇಕಾದ ಫಲಿತಾಂಶವನ್ನು ವಿಶ್ಯುಲೈಸ್ ಮಾಡಿಕೊಳ್ಳುವ ಮೂಲಕ, ಯಾವುದೇ ಹೊಸ ಅಭ್ಯಾಸವನ್ನು ದಿನದಲ್ಲಿ ಅಳವಡಿಸಿ ಕೊಳ್ಳಬೇಕೆಂದರೆ ಸುಪ್ತ ಮನಸನ್ನು ಪ್ರೋಗ್ರಾಮ್ ಸಹಾ ಮಾಡಬಹುದು. ಉದಾಹರಣೆಗೆ, ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿ ಕೊಳ್ಳಬೇಕೆಂದುಕೊಂಡರೆ ಅದನ್ನು ಒಂದು ನಿರ್ಧಿಷ್ಟ ಸಮಯದಲ್ಲಿ ಪ್ರತಿ ನಿತ್ಯ ಮಾಡಬೇಕು. ಜೊತೆಗೆ ಆ ವ್ಯಾಯಾಮವನ್ನು ಮಾಡಿದಾಗ, ಅದರಿಂದ ಸಾಗುವ ಆರೋಗ್ಯ, ಫಿಟ್ನೆಸ್, ಶಕ್ತಿ ಮತ್ತು ಸಂತೋಷವನ್ನು ಕಲ್ಪಿಸಿ ಕೊಳ್ಳಬೇಕು. ಕಾಲಾನಂತರದಲ್ಲಿ ಸುಪ್ತಮನಸು ಆ ಸಮಯವನ್ನು ವ್ಯಾಯಾಮದ ಸಕಾರಾತ್ಮಕ ಅನುಭವದೊಂದಿಗೆ ಹೊಂದಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅಭ್ಯಾಸವನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ.
ಸುಪ್ತ ಮನಸ್ಸನ್ನು ತರಬೇತಿ ಮಾಡಲು ಅಫರ್ಮೇಶನ್ಸ್ (ನಮ್ಮ ಮನಸಿಗೆ ನಾವೇ ಹೇಳಿಕೊಳ್ಳುವ ಸಕಾರಾತ್ಮಕ ಹೇಳಿಕೆಗಳು) ಮತ್ತೊಂದು ಶಕ್ತಿಶಾಲಿ ದಾರಿ. ನಮ್ಮ ಬಗ್ಗೆ ಮತ್ತು ನಮ್ಮ ಗುರಿಗಳ ಬಗ್ಗೆ ಸಕಾರಾತ್ಮಕ ಹೇಳಿಕೆಗಳನ್ನು ನಿರಂತರವಾಗಿ ಪುನರಾವರ್ತಿಸುವ ಮೂಲಕ, ನಾವು ನಮ್ಮ ಸಬ್‌ಕಾನ್ಷಿಯಸ್ ನಂಬಿಕೆಗಳ ಮೇಲೆ ಪ್ರಭಾವ ಬೀರಬಹುದು. ಉದಾಹರಣೆಗೆ, ಯಾರಿಗಾದರೂ ಆತ್ಮವಿಶ್ವಾಸದ ಕೊರತೆ ಇದ್ದಲ್ಲಿ, “ನನ್ನ ಸಾಮರ್ಥ್ಯಗಳಲ್ಲಿ ನಾನು ಸಮರ್ಥನಾಗಿದ್ದೇನೆ/ಳಾಗಿದ್ದೇನೆ ಮತ್ತು ಆತ್ಮವಿಶ್ವಾಸ ಹೊಂದಿದ್ದೇನೆ” ಎಂಬಂತಹ ಹೇಳಿಕೆಗಳು ಅವರ ಸುಪ್ತ ಮನಸನ್ನು ತಮ್ಮ ಬಗೆಗಿನ ಗುರಿಯನ್ನು ಮುಟ್ಟಲು ಸಹಾಯ ಮಾಡುತ್ತದೆ.
ನಮಗೇನು ಬೇಕೋ ಅದನ್ನು ಪಡೆಯಲು / ಕಲಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಸಹ ಮುಖ್ಯ. ನಮ್ಮ ಸುತ್ತಮುತ್ತಲಿನ ಪರಿಸರವು ನಮ್ಮ ಸುಪ್ತ ಮನಸ್ಸಿನ ಮೇಲೆ ಮೇಲೆ ಬಹಳ ಪ್ರಭಾವ ಬೀರುತ್ತದೆ. ಒಂದು ವೇಳೆ ಹೆಚ್ಚು ಓದುವ ಅಭ್ಯಾಸವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರೆ, ಅವರು ಪುಸ್ತಕಗಳನ್ನು ಸುಲಭವಾಗಿ ತಲುಪುವಂತೆ ಮಾಡಿಕೊಳ್ಳಬೇಕು ಮತ್ತು ಆರಾಮದಾಯಕವಾದ ಓದುವ ಸ್ಥಳವನ್ನು ಆರಿಸಿಕೊಳ್ಳಬೇಕು. ಓದುವ ಬಗೆಗಿನ ಕೆಲವು ಕೋಟ್‌ಗಳನ್ನು ಹಾಗು ಫೋಟೋಗಳನ್ನು ಅಲ್ಲಲ್ಲಿ ಗೋಡೆಯ ಮೇಲೋ ಅಥವಾ ಕನ್ನಡಿಯ ಮೇಲೋ ಎಲ್ಲಾದರೂ ಅಂಟಿಸಿ ಕೊಳ್ಳಬೇಕು. ಇದು ನಮ್ಮ ಉಪಪ್ರಜ್ಞೆಯನ್ನು ಆ ಜಾಗವನ್ನು ಓದುವ ಆನಂದದೊಂದಿಗೆ ಹೊಂದಿಸಲು ಸೂಚಿಸುತ್ತದೆ, ಇದು ಅಭ್ಯಾಸವನ್ನು ಬಲಪಡಿಸುತ್ತದೆ.
ಮೈಂಡ್ ಫುಲ್‌ನೆಸ್ ಮತ್ತು ಧ್ಯಾನ ಈ ಅಭ್ಯಾಸಗಳು ಪ್ರಜ್ಞಾಪೂರ್ವಕ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತವೆ. ಹೀಗೆ ಹೊರಗಿನ ಗದ್ದಲ ಗಲಭೆಗಳಿಗೆ ಗಮನಕೊಡದೆ ಮನಸನ್ನು ಶಾಂತಗೊಳಿಸಿಕೊಂಡಾಗ ಯಾವುದೇ ವಿಷಯ ಸುಲಭವಾಗಿ ಮನಸಿನ ಆಳವಾದ ಪದರಗಳಿಗೆ ಪ್ರವೇಶಿಸಲು ನಮಗೆ ಅನುವು ಮಾಡಿಕೊಡುತ್ತದೆ. ನಿಯಮಿತ ಧ್ಯಾನದ ಮೂಲಕ ನಾವು ನಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಬೆಳೆಸಿ ಕೊಳ್ಳಬಹುದು, ಇದು ಸಬ್ ಕಾನ್ಷಿಯಸ್‌ನಲ್ಲಿ ಅಡಕವಾಗಿರುವ ಪ್ಯಾಟರ್ನ್ ಗಳ ಮೇಲೆ ಪ್ರಭಾವ ಬೀರಲು ಮತ್ತು ಮರು ರಚಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ನಮ್ಮ ವೈಯಕ್ತಿಕ ಬೆಳವಣಿಗೆ ಅಥವಾ ಪ್ರಗತಿಗೆ ಅಡ್ಡಿಯಾಗುವ ನಕಾರಾತ್ಮಕ ಚಿಂತನೆಯ ಮಾದರಿಗಳನ್ನು ಗುರುತಿಸಿ ಅವುಗಳನ್ನು ಬದಲಾಯಿಸಲು ಮೈಂಡ್ ಫುಲ್‌ನೆಸ್ ಸಹಾಯ ಮಾಡುತ್ತದೆ.
ಜಾಗೃತ ಮತ್ತು ಉಪಪ್ರಜ್ಞೆ ಮನಸ್ಸಿನ ನಡುವಿನ ಪರಸ್ಪರ ಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಜೀವನದ ವಿವಿಧ ವಿಷಯಗಳಿಗೆ ಸಹಾಯವಾಗುತ್ತೆ. ಕ್ರಿಕೆಟ್ ಮುಂತಾದ ಆಟಗಳಲ್ಲಿ ಬಹಳಷ್ಟು ಆಟಗಾರರು ತಮ್ಮ ಗೆಲುವಿಗೆ ಪ್ರೋಗ್ರಾಂ ಮಾಡಲು ಸಬ್ ಕಾನ್ಷಿಯಸ್ ವಿಶ್ಯುಲೈಸೇಶನ್ ತಂತ್ರಗಳನ್ನು ಪುನರಾವರ್ತಿತವಾಗಿ ಮನಸಿನಲ್ಲಿ ನೋಡುತ್ತಾರೆ. ಇದು ರಿಯಲ್ ಟೈಮಿನಲ್ಲಿ ಆಟ ಆಡುವಾಗ ಅವರ ಆಟದ ನಡೆಗಳನ್ನು ಬಹುತೇಕ ಸ್ವಯಂಚಾಲಿತವಾಗಿ ಮಾಡಬಹುದು. ದೈನಂದಿನ ಜೀವನದಲ್ಲಿ ಸಹ, ಸಬ್ಕಾನ್ಷಿಯಸ್ ಅನ್ನು ಬಳಸಿಕೊಳ್ಳುವುದು ಪ್ರಯೋಜನಕಾರಿ.
ತುಂಬಾ ಜನ ಸುಪ್ತ ಮನಸು ಅಂದ ಕೂಡಲೆ ಪವಾಡ, ಅಗೋಚರ, ಅಮಾನುಷ ಶಕ್ತಿ ಎಂದುಕೊಳ್ಳುತ್ತಾರೆ. ಆದರೆ ಸುಪ್ತಮನಸು ನಮ್ಮದೇ ಮನಸಿನ ಭಾಗ ಇದು ಯಾವುದೇ ಅತೀಂದ್ರಿಯ ಶಕ್ತಿಯಲ್ಲ. ಸಬ್‌ಕಾನ್ಷಿಯಸ್ ಮನಸು ಮನುಷ್ಯನ ಅತ್ಯಂತ ಪ್ರಬಲ ಮಿತ್ರ. ಇದು ನಮ್ಮ ದೈನಂದಿನ ಕಾರ್ಯಗಳನ್ನು ನಿಯಮಿತವಾಗಿ ನಿರ್ವಹಿಸಲು, ಭಾವನೆಗಳನ್ನು ನಿಯಂತ್ರಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಮೇಲೆ ಪ್ರಭಾವ ಬೀರಲು ತೆರೆಮರೆಯಲ್ಲಿ ದಣಿವರಿಯದೆ ಕೆಲಸ ಮಾಡುತ್ತದೆ. ಅದರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿಯಂತ್ರಿಸುವ ಮೂಲಕ ನಾವು ನಮ್ಮ ದಕ್ಷತೆ, ಭಾವನಾತ್ಮಕ ಯೋಗಕ್ಷೇಮ ಮತ್ತು ಜೀವನ ಖುಷಿಯನ್ನು ಸುಧಾರಿಸಬಹುದು.
ಡಾ ರೂಪಾ ರಾವ್,
ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ
ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ.
ಸಂಪರ್ಕ ಸಂಖ್ಯೆ: 97408 66990