ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು ಹಂಚಿಕೊಳ್ಳಲೊಬ್ಬ ಬಾಳಸಂಗಾತಿ ಬೇಕು. ಒಬ್ಬ ಒಂದೊಳ್ಳೆಯ ಗೆಳೆತನದ ತಲಾಶೆಯಲ್ಲಿದ್ದರೆ, ಇನ್ನೊಬ್ಬ ಹೊಸ ಗ್ರಾಹಕನೊಬ್ಬನಿಗಾಗಿ ಗಾಳ ಹಾಕುತ್ತಿರಬಹುದು – ಪ್ರಸಾದ್ ನಾಯ್ಕ್, ದೆಹಲಿ.
ಮೆಟ್ರೋ ಟೈಮ್ಸ್ -7
ಕೆಲವು ಉಕ್ತಿಗಳನ್ನು ನಾವು ಅದೆಷ್ಟು ಬಾರಿ ಬಳಸಿರುತ್ತೇವೆ ಎಂದರೆ ಅವುಗಳು ಕ್ರಮೇಣ ಮಹಾಬೋರು ಅನ್ನಿಸಿಬಿಟ್ಟಿರುತ್ತವೆ.
ಉದಾಹರಣೆಗೆ ಮಹಾನಗರಗಳಲ್ಲಿ ಕಾರ್ಪೋರೆಟ್ ಗಾದೆಯಂತೆ ಅತಿಯಾಗಿ ಬಳಸಲ್ಪಡುವ “ನೆಟ್ವರ್ಕ್ ಈಸ್ ನೆಟ್ ವರ್ತ್” ಎಂಬ ಮಾತು. ನಿಮ್ಮ ಸಂಪರ್ಕಗಳೇ ನಿಮ್ಮ ನಿಜವಾದ ಸಂಪತ್ತು ಎನ್ನುತ್ತದೆ ಈ ಆಧುನಿಕ ಲೋಕದ ಉಕ್ತಿ. ತಕ್ಕಮಟ್ಟಿಗೆ ಇದು ಸತ್ಯವೂ ಹೌದು. ಆದರೆ ಸಂಪರ್ಕಗಳನ್ನು ಹೆಚ್ಚಿಸಿಕೊಂಡ ಮಾತ್ರಕ್ಕೆ ನಮ್ಮೆಲ್ಲ ಇಕ್ಕಟ್ಟಿನ ಕೆಲಸಗಳು ಅನಾಯಾಸವಾಗಿ ನಡೆದುಹೋಗುತ್ತವೆ ಎಂಬುದು ಮಾತ್ರ ಶುದ್ಧ ಕಟ್ಟುಕತೆಯೇ. ಬಿಲ್ ಕ್ಲಿಂಟನ್, ಕಿಸ್ಸಿಂಗರ್ ರಂತಹ ದಿಗ್ಗಜರು ತಮ್ಮ ಸಂಪರ್ಕಗಳನ್ನು ಬಹಳ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದರಂತೆ. ಬಹಳ ಸಂಕೀರ್ಣವಾಗಿದ್ದ ಇವರುಗಳ ಕಾಂಟಾಕ್ಟ್ ಲಿಸ್ಟಿನಲ್ಲಿ ಜನಸಾಮಾನ್ಯರ ಹೆಸರುಗಳೂ ಇರುತ್ತಿದ್ದವು ಎನ್ನಲಾಗುತ್ತದೆ. ಇನ್ನು ಇವರಿಬ್ಬರೂ ರಾಜಕೀಯ ಕ್ಷೇತ್ರದಲ್ಲಿದ್ದ ಪರಿಣಾಮವಾಗಿ ಸಂಘಟನೆಯ ನಿಟ್ಟಿನಲ್ಲಿ ಇವುಗಳು ಬಹು ಉಪಯುಕ್ತವೂ ಆಗುತ್ತಿತ್ತಂತೆ.
ಹೀಗಾಗಿ ಜನರು ಸಾಮಾನ್ಯವಾಗಿ ಒಂದೆಡೆ ಸೇರುವ ಪಾರ್ಟಿ, ಮೀಟಿಂಗ್, ಔತಣಕೂಟ… ಇತ್ಯಾದಿಗಳಿಗೆ ಹೆಚ್ಚಿನ ಆಕರ್ಷಣೆ ಮತ್ತು ಪ್ರಾಮುಖ್ಯತೆಗಳು ಸಿಗುವ ಬಗೆಯನ್ನು ನಾವು ಮಹಾನಗರಗಳಲ್ಲಿ ಕಾಣಬಹುದು. ಆದರೆ ಇದನ್ನು ಶುದ್ಧ ಸಮಯಹಾಳು ಅನ್ನುವವರ ವರ್ಗವೂ ಇದೆ. ಖ್ಯಾತ ಲೇಖಕ ಖುಷ್ವಂತ್ ಸಿಂಗ್ ಇದಕ್ಕೊಂದು ಒಳ್ಳೆಯ ಉದಾಹರಣೆ. ಶ್ರೀಮಂತರ ಪಾರ್ಟಿಗಳಲ್ಲಿ ಅಡ್ಡಾಡಿಕೊಂಡು, ಸಿಕ್ಕಸಿಕ್ಕವರೊಂದಿಗೆ ಹರಟೆ ಹೊಡೆಯುವುದು ಅವರಿಗೆ ಕಿಂಚಿತ್ತೂ ಇಷ್ಟವಿರಲಿಲ್ಲವಂತೆ. ಈ ಅಮೂಲ್ಯ ಸಮಯವನ್ನು ಏಕಾಂತ, ಓದು ಅಥವಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದು ಅವರ ಅಭಿಪ್ರಾಯವಾಗಿರಬಹುದು. ಹೀಗೆ ತಮ್ಮ ದಿನಚರಿಯನ್ನು ಬಹಳ ಶಿಸ್ತಿನಿಂದ ಪಾಲಿಸುತ್ತಿದ್ದ ಖುಷ್ವಂತ್ ಸಿಂಗ್ ಸಾಹಿತ್ಯಲೋಕದಲ್ಲಿ ದೊಡ್ಡ ಹೆಸರನ್ನು ಪಡೆದಿರುವುದು ಅಚ್ಚರಿಯ ಸಂಗತಿಯೇನಲ್ಲ ಬಿಡಿ.
ಹಾಗಂತ ಎಲ್ಲವನ್ನೂ, ಎಲ್ಲರನ್ನೂ ನೆಟ್ವರ್ಕಿಂಗ್ ಎಂಬ ವಿಶಾಲ ವಿಭಾಗದಡಿಯಲ್ಲೇ ಹಾಕಲಾಗುವುದಿಲ್ಲ. ಏಕೆಂದರೆ ಈ ಬಗೆಯ ಸೋಷಿಯಲೈಸಿಂಗ್ ಕಸರತ್ತುಗಳಲ್ಲಿ ಇನ್ನಿತರ ಆಯಾಮಗಳೂ ಇರುತ್ತವೆ. ಹಲವರು ಸಂಗಾತಿಗಳ ತಲಾಶೆಯಲ್ಲಿರುತ್ತಾರೆ. ಇನ್ನು ಕೆಲವರು ಹೊಸ ಗೆಳೆತನಗಳಿಗಾಗಿ ಹಂಬಲಿಸುತ್ತಾರೆ. ಉಳಿದವರು ಮತ್ಯಾವುದೋ ನಿರೀಕ್ಷೆಗಳನ್ನು ಹೊತ್ತುಕೊಂಡು ಬಂದಿರಲೂಬಹುದು. ನನ್ನಂತಹ ಕೆಲವರು ತಮ್ಮ ಆಸುಪಾಸಿನಲ್ಲಿರುವ ಸಮಾನ ಮನಸ್ಕರನ್ನು ಒಗ್ಗೂಡಿಸಿ ಏನಾದರೊಂದು ಚಟುವಟಿಕೆಯಲ್ಲಿ ವ್ಯಸ್ತರಾಗಿಯೂ ಇರುವುದುಂಟು.
ಇಂದು ಇಂತಹ ತರಹೇವಾರಿ ಚಟುವಟಿಕೆಗಳಿಗೆ ಹತ್ತು ಹಲವು ಚಂದದ ಹೆಸರುಗಳಿವೆ. ಆದರೆ ನಮ್ಮ ಕಾಲೇಜು ದಿನಗಳಲ್ಲಿ ಇವೆಲ್ಲ ನಮಗೆ ಗೊತ್ತೇ ಇರಲಿಲ್ಲ. ಒಮ್ಮೆ ಹೀಗಾಯಿತು. ದೇಶದ ವಿವಿಧ ಮೂಲೆಗಳಿಂದ ಬಂದಿರುವ ವಿದ್ಯಾರ್ಥಿಗಳ ಮಧ್ಯೆ, ಕರಾವಳಿ ಭಾಗದ ನಾವು ನಾಲ್ಕೈದು ವಿದ್ಯಾರ್ಥಿಗಳು ನಮ್ಮದೇ ಆದ ಚಿಕ್ಕ, ಅನಧಿಕೃತ ಗುಂಪೊಂದನ್ನು ಕಟ್ಟಿಕೊಂಡಿದ್ದೆವು. ಅದಕ್ಕೆ “ಲೋಕೋ” ಎಂಬ ಸಪ್ಪೆ ಹೆಸರೊಂದನ್ನೂ ಇಡಲಾಗಿತ್ತು. ಎಲ್ಲಾದರೂ ಸಮಯ ಸಿಕ್ಕರೆ ಒಂದಿಷ್ಟು ಹರಟೆ ಹೊಡೆಯುತ್ತಿದ್ದೆವು ಎಂಬುದನ್ನು ಬಿಟ್ಟರೆ ಈ ಸೋ ಕಾಲ್ಡ್ ಗುಂಪಿಗೆ ಹೇಳಿಕೊಳ್ಳುವಂತಹ ಮಹಾ ಧ್ಯೇಯೋದ್ದೇಶಗಳೂ ಇರಲಿಲ್ಲ. ಬಹುಷಃ ಇಂಥದ್ದೊಂದು ಅಸ್ತಿತ್ವದಲ್ಲಿತ್ತು ಎಂಬುದು ಕೂಡ ನಮ್ಮ ಬಹಳಷ್ಟು ಮಂದಿ ಸಹಪಾಠಿಗಳಿಗೆ ಗೊತ್ತಿರಲಿಕ್ಕಿಲ್ಲ.
ಹೀಗಿರುವಾಗ ಎಂದಿನಂತೆ ಅದೂ ಒಂದು ಸಾಮಾನ್ಯ ದಿನ. ಸೆಮಿಸ್ಟರ್ ಪರೀಕ್ಷೆಗಳು ಮುಗಿದಿದ್ದವು. ರಜೆಗಳು ಶುರುವಾಗಲು ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿತ್ತು. ಹೀಗಾಗಿ ಆ ಸೀಸನ್ನಿನ ಕೊನೆಯ ಅಧಿವೇಶನ ಎಂಬಂತೆ ನಾವೆಲ್ಲರೂ ಅಂದು ಸೇರಿದೆವು. ಎಂದಿನಂತೆ ಕೈಯಲ್ಲಿ ಕಾಸಿಲ್ಲದ ಪರಿಣಾಮವಾಗಿ ಗುಂಪಿನಲ್ಲಿದ್ದ ಒಬ್ಬ ಧಾರಾಳಿಯೇ ಅಂದೂ ಧಾರಾಳಿಯಾಗಿ ಎಲ್ಲರಿಗೂ ಒಂದೊಂದು ಪಪ್ಸ್ ತೆಗೆಸಿಕೊಟ್ಟಿದ್ದ. ಆ ದಿನಗಳಲ್ಲಿ ತೀರಾ ಕಡಿಮೆ ಖರ್ಚಿನಲ್ಲಿ ಸಂತೃಪ್ತಿಯನ್ನು ಕೊಡುತ್ತಿದ್ದ ವಿಶೇಷ ತಿಂಡಿಯದು.
ಇರಲಿ. ರಜೆ ಮುಗಿಯುವಷ್ಟರಲ್ಲಿ ಎಲ್ಲರೂ ಒಂದೊಂದು ನೀಳ್ಗತೆಯನ್ನು ಬರೆದು ತರಬೇಕು ಎಂಬಲ್ಲಿಗೆ ಆ ಮೀಟಿಂಗು ಕೊನೆಗೊಂಡಿತ್ತು. ಅಂದಹಾಗೆ ಆ ಕತೆಯಲ್ಲಿ ಇಂತಿಂಥಾ ಅಂಶಗಳಿರಬೇಕು ಎಂಬ ವಿಚಿತ್ರ ಷರತ್ತುಗಳೂ ಇದ್ದವು. ವಿಶೇಷವಾಗಿ ನಾವೇ ಆ ನೀಳ್ಗತೆಯಲ್ಲಿ ಪಾತ್ರಗಳಾಗಿರಬೇಕು ಅಥವಾ ನಮಗೆ ಹೋಲಿಕೆಯಿರುವ ಪಾತ್ರಗಳು ಹೆಚ್ಚಿರಬೇಕು, ಸದ್ಯದ ವರ್ತಮಾನ ಮತ್ತು ಭವಿಷ್ಯಗಳು ಬರುವಂತೆ ಕತೆಯನ್ನು ಹೆಣೆದಿರಬೇಕು, ನೋಡಲು ಮೋಜೆನಿಸುವ ಬ್ಲಾಕ್-ಬಸ್ಟರ್ ಸಿನೆಮಾದಂತೆ ಓದಲು ಮಜವಾಗಿರಬೇಕು… ಹೀಗೆ ಏನೇನೋ ಷರತ್ತುಗಳು.
ಅಷ್ಟಕ್ಕೂ ಅಂದು ಈ ಹುಚ್ಚು ನಿರ್ಧಾರವನ್ನು ಯಾರು ಮಂಡಿಸಿ ಯಶಸ್ವಿಯಾದರು ಎಂಬುದು ನನಗಂತೂ ನೆನಪಿಲ್ಲ. ಏಕೆಂದರೆ ನಮ್ಮ ಗುಂಪಿನಲ್ಲಿ ಯಾರೂ ಬರಹಗಾರರಿರಲಿಲ್ಲ. ಅಸಲಿಗೆ ಆಗಿನ್ನೂ ನಾನು ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರಲಿಲ್ಲ. ಇನ್ನು ನಮ್ಮ ಲೋಕೋ ಗುಂಪಿನಲ್ಲಿ ನನ್ನ ಮತ್ತು ಮತ್ತೋರ್ವ ಹುಡುಗನನ್ನು ಬಿಟ್ಟರೆ ಉಳಿದವರ್ಯಾರಿಗೂ ಅಷ್ಟಾಗಿ ಓದಿನ ಹಿನ್ನೆಲೆಯಿರಲಿಲ್ಲ. ಆದರೂ ಆಯ್ತಾಯ್ತು ಎಂದು ತಲೆಯಾಡಿಸುತ್ತಾ ನಾವು ಕೊನೆಯ ದಿನವನ್ನೂ, ರುಚಿಕರ ಪಪ್ಸ್ ಅನ್ನೂ ಭರ್ಜರಿಯಾಗಿ ಮುಗಿಸಿ ಮನೆಗಳತ್ತ ಮರಳಿದೆವು.
ಅಂತೂ ರಜಾದಿನಗಳು ಮುಗಿದವು. ನಾವು ಮತ್ತೆ ಸೇರಿದ್ದೆವು. ನಮ್ಮ ಕೊನೆಯ ಮೀಟಿಂಗಿನಲ್ಲಿ ನಿರ್ಧಾರವಾದಂತೆ ನಾನು ನೀಳ್ಗತೆಯೊಂದಿಗೆ ಬಂದಿದ್ದೆ. ವಿಚಿತ್ರವೆಂದರೆ ಉಳಿದ ಯಾರಿಗೂ ಈ ಬಗ್ಗೆ ನೆನಪಿರಲಿಲ್ಲ. ಪಪ್ಸ್ ಹೊಟ್ಟೆಯೊಳಗೆ ಕರಗಿಹೋದ ಬೆನ್ನಿಗೆ, ಎಲ್ಲರಿಗೂ ಈ ಕತೆಯ ಟಾಸ್ಕ್ ಮೂರ್ಖತನದ್ದು ಎಂದೆನಿಸಿ ಅದನ್ನು ಅಲ್ಲಿಗೇ ಮರೆತುಬಿಟ್ಟಿದ್ದರು. ಆದರೆ ನಾನೊಬ್ಬ ಮಾತ್ರ ಪೆದ್ದನಂತೆ ಬಹಳ ತಲೆಕೆಡಿಸಿಕೊಂಡು, ನೀಳ್ಗತೆಯೊಂದನ್ನು ಸಿದ್ಧಪಡಿಸಿ ಕಾಲೇಜಿಗೆ ಮರಳಿದ್ದೆ. ಅಸಲಿಗೆ ಬರೆಯುತ್ತಾ ಹೋದಂತೆ ಕತೆಯು ಹೆಚ್ಚೇ ದೀರ್ಘವಾಗಿಬಿಟ್ಟಿತ್ತು. ಒಂದಿಷ್ಟು ಸಾಹಸ, ಪ್ರಣಯ, ರೋಚಕ ತಿರುವುಗಳು… ಹೀಗೆ ಏನೇನೋ ಜನಪ್ರಿಯ ಮಸಾಲೆಗಳಿದ್ದ ಅದು ಸರಿಸುಮಾರು ನಲವತ್ತು ಪುಟಗಳವರೆಗೆ ಚಾಚಿಕೊಂಡಿತ್ತು. ಇದೊಂದು ಮಿನಿ ಕಾದಂಬರಿಯೇ ಆಯಿತಪ್ಪಾ ಎಂದು ಓದಿದ ನಮ್ಮ ಹುಡುಗನೊಬ್ಬ ಅಚ್ಚರಿಯಿಂದ ಹೇಳಿಕೊಂಡಿದ್ದ. ಅಸಲಿಗೆ ನಾನು ಏನೋ ಒಂದು ಬರೆದಿದ್ದೇನೆ ಅನ್ನುವುದಕ್ಕಿಂತ, ಇವನು ಕಾಲಹರಣದ ಹರಟೆಯನ್ನು ನಿಜಕ್ಕೂ ಇಷ್ಟು ಗಂಭೀರವಾಗಿ ತೆಗೆದುಕೊಂಡಿದ್ದ ಎಂಬುದೇ ಎಲ್ಲರಿಗೆ ಅಚ್ಚರಿ ಮತ್ತು ತಮಾಷೆಯ ಸಂಗತಿಯಾಗಿತ್ತು.
ನಮ್ಮ ನಡುವಿನಲ್ಲಾದರೂ ಅಷ್ಟೇ. ಸಾಮಾನ್ಯವಾಗಿ ಸಮಾನಮನಸ್ಕ ಮತ್ತು ಕ್ರಿಯಾಶೀಲ ಮಂದಿಯೊಂದಿಗೆ ಬೆರೆತಿರುವಾಗ ಏನಾದರೊಂದು ಹೊಸ ಸಂಗತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಇನ್ನು ಸೋಷಿಯಲೈಸಿಂಗ್ ಹೆಸರಿನಲ್ಲಿ ಕೇವಲ ಅವಶ್ಯಕತೆ-ಕೊಡುಕೊಳ್ಳುವಿಕೆಗಳಿಗಷ್ಟೇ ಸೀಮಿತವಾಗಿರುವ ತೆಳು ಸಂಬಂಧಗಳನ್ನು ಸೃಷ್ಟಿಸಿಕೊಂಡು, ಅವುಗಳಲ್ಲಿ ಕಳೆದುಹೋಗುವುದಕ್ಕಿಂತ ಇದು ನೂರು ಪಟ್ಟು ವಾಸಿ. ನಟಿ ವಿದ್ಯಾ ಬಾಲನ್ ಸಂದರ್ಶನವೊಂದರಲ್ಲಿ ಮಾತಾಡುತ್ತಾ “ಆಧುನಿಕರಾದ ನಾವು ಹೊಸ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸದಾ ಒಂದು ಬಗೆಯ ವಿಚಿತ್ರ ಗಡಿಬಿಡಿಯಲ್ಲಿರುತ್ತೇವೆ. ವ್ಯಕ್ತಿಯೊಬ್ಬನನ್ನು ನೈಜರೂಪದಲ್ಲಿ ಅರಿತುಕೊಳ್ಳುವ ಆಸಕ್ತಿಯು ನಮ್ಮಲ್ಲಿ ಮರೆಯಾಗಿದೆ. ಈ ಹೊಸ ಪರಿಚಯದಿಂದಾಗಿ ನಮಗೇನು ಲಾಭ ದಕ್ಕಬಹುದು ಎಂಬ ವಿಲಕ್ಷಣ ಹಪಾಹಪಿಯೇ ಹೆಚ್ಚಿನವರ ಗುರಿಯಾಗಿರುತ್ತದೆ”, ಎನ್ನುತ್ತಾರೆ.
ಹಾಗೆ ನೋಡಿದರೆ ಸಾರ್ವಜನಿಕ ಜೀವನದಲ್ಲಿರುವವರಿಗೆ ಇದು ಸಹಜವೂ ಕೂಡ. ಅದರಲ್ಲೂ ಗಾಜಿನ ಅರಮನೆಗಳಲ್ಲಿ ಬೆಚ್ಚಗಿರುವ ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರಿರುವ ಹೊರಜಗತ್ತನ್ನು ಹೋಲಿಸಿ ಇದನ್ನಿಲ್ಲಿ ಹೇಳುತ್ತಿದ್ದೇನೆ. ಹೊರಜಗತ್ತಿನ ವ್ಯಕ್ತಿಯಾಗಿ ಪತ್ರಕರ್ತನೊಬ್ಬನನ್ನು ಉದಾಹರಣೆಯಾಗಿ ಪರಿಗಣಿಸುವುದಾದರೆ ಆತ ಅದೆಂಥದ್ದೇ ಪ್ರಭಾವಿ ಪತ್ರಕರ್ತನಾಗಿದ್ದರೂ ಖ್ಯಾತ ಚಿತ್ರನಟನೊಬ್ಬನೊಂದಿಗೆ, ಕ್ರೀಡಾಪಟುವೊಂದಿಗೆ ಅಥವಾ ರಾಜಕಾರಣಿಯೊಂದಿಗೆ ದೀರ್ಘಕಾಲದವರೆಗೆ ಅತ್ಯಾಪ್ತ ಒಡನಾಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ಬಹಳ ತಾಳ್ಮೆ, ಸಮಯ ಮತ್ತು ಶ್ರಮವನ್ನು ಬೇಡುವಂಥದ್ದು. ಹೀಗಿರುವಾಗ ಇವೆಲ್ಲಾ ಅಂಶಗಳು ಎರಡೂ ಕಡೆಯಲ್ಲಿದ್ದು ಆಪ್ತಸಂಬಂಧವೊಂದು ಸೃಷ್ಟಿಯಾಗುವುದು ಮತ್ತು ಕಾಲಾಂತರದಲ್ಲಿ ಉಳಿಯುವುದು ತೀರಾ ಅಪರೂಪ.
ಆದರೆ ಈ ಬಗೆಯ ಅಗೋಚರ ದ್ವೀಪಗಳು ಮೇಲಿನ ಅಪವಾದಗಳನ್ನು ಹೊರತುಪಡಿಸಿ, ನಮ್ಮಂತಹ ಜನಸಾಮಾನ್ಯರ ಮಧ್ಯೆಯೂ ನಿಧಾನವಾಗಿ ಸೃಷ್ಟಿಯಾಗುತ್ತಿರುವುದು ಆಧುನಿಕ ಜೀವನಶೈಲಿಯ ಒಂದು ಶಾಪವೂ ಹೌದು. ಹೀಗಾಗಿಯೇ “ಸ್ಮಾಲ್-ಟಾಕ್” ಎಂಬ ಎರಡು ಸಾಮಾನ್ಯ ಪದಗಳು, ಬಹಳ ಜನಪ್ರಿಯ ಮತ್ತು ಆಕರ್ಷಣೀಯ ಪದಗಳಾಗಿ ಬದಲಾಗುತ್ತವೆ. ಏನು-ಹೇಗೆ-ಎಷ್ಟು ಮಾತನಾಡಿದರೆ ಇಂತಿಷ್ಟು ಲಾಭ ಗ್ಯಾರಂಟಿ ಎಂಬುದನ್ನು ಹೇಳಿಕೊಡುವ ತರಬೇತಿ ಸಂಸ್ಥೆಗಳು ಅಣಬೆಯಂತೆ ಹುಟ್ಟಿಕೊಳ್ಳುತ್ತವೆ. ಈ ಸಂಬಂಧದಿಂದಾಗಿ ನನಗೇನು ಸಿಗಲಿದೆ ಎಂಬ ಪ್ರಶ್ನೆಯೇ ಮುಖ್ಯವಾಗಿ, ಆಗಂತುಕನೊಬ್ಬನೊಂದಿಗೆ ಚಿಕ್ಕದೊಂದು ಹರಟೆಯ ಸುಖವೂ ಸದ್ದಿಲ್ಲದೆ ಸೋರಿಹೋಗುತ್ತದೆ.
ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು ಹಂಚಿಕೊಳ್ಳಲೊಬ್ಬ ಬಾಳಸಂಗಾತಿ ಬೇಕು. ಒಬ್ಬ ಒಂದೊಳ್ಳೆಯ ಗೆಳೆತನದ ತಲಾಶೆಯಲ್ಲಿದ್ದರೆ, ಇನ್ನೊಬ್ಬ ಹೊಸ ಗ್ರಾಹಕನೊಬ್ಬನಿಗಾಗಿ ಗಾಳ ಹಾಕುತ್ತಿರಬಹುದು. ಅಲ್ಲೆಲ್ಲೋ ಒಬ್ಬ ಅನಾಮಿಕ ಟ್ರೋಲ್ ವೀರ, ಅಪ್ಪಟ ಟೈಂಪಾಸ್ ಶೂರ. ಮತ್ತೆಲ್ಲೋ ಒಂದು ನಿಗೂಢ ಹನಿಟ್ರ್ಯಾಪ್ ಜಾಲ. ನಮ್ಮೆಲ್ಲರದ್ದು ಒಂದೇ ಮೈದಾನ. ಆದರೆ ಎಲ್ಲರ ಆಟಗಳೂ ವಿಭಿನ್ನ.
ನೆಟ್ವರ್ಕಿಂಗ್ ಸೇರಿದಂತೆ ಎಲ್ಲಾ ಬಗೆಯ ಹುಡುಕಾಟಗಳು ಬದುಕೆಂಬ ಮುಖ್ಯರಸ್ತೆಯ ಒಳಹಾದಿಗಳಷ್ಟೇ. ಒಳಹಾದಿಗಳು ನಮ್ಮನ್ನು ದಾರಿ ತಪ್ಪಿಸುವಂತಾಗದಿರಲಿ.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.