Sunday, July 14, 2024

ಕ್ಷೀಣಿಸುತ್ತಿರುವ ಮಾನವತೆಯ ನಡುವೆ ವಿಶ್ವಮಾನವ ದಿನಾಚರಣೆ

Most read

ಇಂದು ವಿಶ್ವಮಾನವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮತಿಭ್ರಷ್ಟತೆಗೊಳಗಾಗುತ್ತಿರುವ ಯುವ ಸಮೂಹವನ್ನು ವೈಚಾರಿಕತೆಯ ಹಾದಿಯಲ್ಲಿ ಕರೆದೊಯ್ದು, ವೈಜ್ಞಾನಿಕ ಮನೋಭಾವದ ನೆಲೆಯಲ್ಲಿ ನಿರಂಕುಶಮತಿಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಈ ಸಮಾಜದ ಮೇಲಿದೆ. ಕುವೆಂಪು ಅವರ ʼವಿಚಾರಕ್ರಾಂತಿʼಯ ಕರೆಯನ್ನು ಮತ್ತೆಮತ್ತೆ ಮನನ ಮಾಡಿಕೊಳ್ಳುತ್ತಾ ವಿಶ್ವಮಾನವರಾಗುವ ಕನಸನ್ನು ನನಸಾಗಿಸಬೇಕಿದೆ – ನಾ ದಿವಾಕರ, ಚಿಂತಕರು

ಕನ್ನಡ ಸಾಹಿತ್ಯ ಲೋಕದ ಮೇರು ಚೇತನ ಕುವೆಂಪು ಅವರ ಜನ್ಮ ದಿನವನ್ನು ಅವರೇ ಪ್ರತಿಪಾದಿಸಿದ ವಿಶ್ವಮಾನವತೆಯ ಸಂದೇಶದ ನೆಲೆಯಲ್ಲಿ ಆಚರಿಸಲಾಗುತ್ತದೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಜನಿಸಿ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಸಂಗ್ರಾಮದಿಂದ ಕನ್ನಡದ ಅಸ್ಮಿತೆಗಾಗಿ ನಡೆದ ಹೋರಾಟಗಳವರೆಗೆ ವಿಸ್ತರಿಸಿದ ಕುವೆಂಪು ಅವರ ಸಾಹಿತ್ಯದ ಪಯಣ ನವೋದಯ ಸಾಹಿತ್ಯದಲ್ಲಿ ಸೃಷ್ಟಿಸಿದಂತಹ ಪ್ರತಿಮೆ, ರೂಪಕ ಹಾಗೂ ಜೀವನಾದರ್ಶಗಳು ಇಂದಿಗೂ ಕನ್ನಡದ ನೆಲದಲ್ಲಿ ಸಂಚಲನ ಮೂಡಿಸುತ್ತಲೇ ಬಂದಿವೆ. ಕುವೆಂಪು ಕನಸು ಕಂಡ “ಸರ್ವ ಜನಾಂಗದ ಶಾಂತಿಯ ತೋಟ” ವನ್ನು ಕಟ್ಟುವ ಹಾದಿಯಲ್ಲಿ ಎಡವುತ್ತಲೇ ಬಂದಿರುವ ಕನ್ನಡದ ಸಾಂಸ್ಕೃತಿಕ ನೆಲೆಗಳು ಅವರ ಅಂತರ್‌ ಧ್ವನಿಯಾಗಿ ಧ್ವನಿಸಿದ “ ಎಲ್ಲಿಯೂ ನಿಲ್ಲದೆ ಅನಿಕೇತನವಾಗುವ ಚೇತನ” ವನ್ನು ಇಂದಿಗೂ ಹುಡುಕಾಡುತ್ತಲೇ ಇವೆ. ರವೀಂದ್ರನಾಥ ಠಾಗೋರರ ವಿಶ್ವಮಾನವ ಪರಿಕಲ್ಪನೆಯನ್ನೇ ಮತ್ತಷ್ಟು ವಿಸ್ತರಿಸಿದ ಕುವೆಂಪು ಸಮಕಾಲೀನ ಭಾರತವನ್ನು ಕಾಡುತ್ತಿದ್ದ ಜಾತಿ-ಮತಗಳ ಹೊಟ್ಟನ್ನು ತೂರಿ, ಆಧುನಿಕ ಮಾನವನನ್ನು ಸುತ್ತುವರೆದಿರುವ ತತ್ವಗಳ ಗೋಡೆಗಳನ್ನು ದಾಟಿ, ಸಮಷ್ಟಿ ಪ್ರಜ್ಞೆಯನ್ನು ರೂಢಿಸಿಕೊಳ್ಳುವತ್ತ ಮುನ್ನಡೆಯಲು ವಿಚಾರ ಕ್ರಾಂತಿಗೆ ಆಹ್ವಾನವನ್ನು ನೀಡಿದ್ದರೂ ಅದು ಕನಸಾಗಿಯೇ ಉಳಿದಿದೆ.

ಸಮಕಾಲೀನ ಸವಾಲುಗಳು

ನವ ಉದಾರವಾದ ಹಾಗೂ ಬಂಡವಾಳದ ಜಾಗತೀಕರಣದಿಂದ ಇಂದು ವಿಶ್ವ ಕಿರಿದಾಗಿದೆ. ಭೌಗೋಳಿಕ ವಿಶ್ವ ತಾತ್ವಿಕವಾಗಿ ಅಂಗೈನಲ್ಲಿ ಹಿಡಿದಿಡುವಷ್ಟು ಚಿಕ್ಕದಾಗಿದೆ. ಉತ್ತರದಿಂದ ದಕ್ಷಿಣ ಧ್ರುವದವರೆಗೆ ಕ್ಷಣಮಾತ್ರದಲ್ಲಿ ಸಂಪರ್ಕಿಸುವ ಸಂವಹನ ತಂತ್ರಜ್ಞಾನ ಆಧುನಿಕ ಮಾನವನಿಗೆ ಸಹಮಾನವನನ್ನು ಸಂಪರ್ಕಿಸುವ ಹಾದಿಗಳನ್ನು ಸುಗಮಗೊಳಿಸಿದೆ. ದೇಶದ ಗಡಿರೇಖೆಗಳನ್ನು ಮೀರಿ ಮನುಷ್ಯ ತನ್ನ ಅರಿವಿಗೆ ನಿಲುಕದೆ ಹೋಗಿದ್ದ ಅಥವಾ ಶೋಧಕ್ಕೆ ಒಗ್ಗದೆ ಹೋಗಿದ್ದ ದೂರದ ಸಮಾಜಗಳನ್ನು-ಸಂಸ್ಕೃತಿಗಳನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಿ, ಅರಿತು, ಸಮ್ಮಿಳಿತವಾಗುವ ಒಂದು ವಾತಾವರಣವನ್ನು ತಂತ್ರಜ್ಞಾನ ಸೃಷ್ಟಿಸಿದೆ. ಈವರೆಗೂ ಅಜ್ಞಾತವಾಗಿದ್ದ ಸಾಂಸ್ಕೃತಿಕ ನೆಲೆಗಳು, ಅವುಗಳಲ್ಲಡಗಿರುವ ಮನುಜ ಸೂಕ್ಷ್ಮತೆಗಳು ಆಧುನಿಕ ಸಮಾಜದ ಗ್ರಹಿಕೆಗೆ ಕ್ಷಣಮಾತ್ರದಲ್ಲಿ ನಿಲುಕುವಂತೆ ಮಾಡಿರುವುದು ತಂತ್ರಜ್ಞಾನದ ಹೆಗ್ಗಳಿಕೆ. ಅಂದರೆ ಮಾನವ ಶ್ರಮದ ಹೆಗ್ಗಳಿಕೆ ಎಂದೇ ಅರ್ಥ ಅಲ್ಲವೇ ?

ಆದರೆ ತಾತ್ವಿಕವಾಗಿ ಕಿರಿದಾಗುತ್ತಲೇ ವಿಶಾಲ ಸಮಾಜಕ್ಕೆ ತೆರೆದುಕೊಳ್ಳುತ್ತಿರುವ ಆಧುನಿಕ ವಿಶ್ವವು ಹೊಸ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಔನ್ನತ್ಯವನ್ನು ಸಾಧಿಸುತ್ತಲೇ, ಭೌತಿಕವಾಗಿ ಚಂದ್ರನನ್ನೂ, ಅನ್ಯಗ್ರಹಗಳನ್ನೂ ತಲುಪುವ ಮಟ್ಟಿಗೆ ಏರುತ್ತಲೇ ಆಂತರಿಕವಾಗಿ ತನ್ನ ಮೂಲ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ಕಂಡಾಗ ಅತ್ಯಾಧುನಿಕ ಮಾನವ ದಿನೇದಿನೇ ತಾತ್ವಿಕವಾಗಿ ಕುಬ್ಜವಾಗುತ್ತಿರುವುದೂ ಕಣ್ಣಿಗೆ ರಾಚುತ್ತದೆ. 21ನೆಯ ಶತಮಾನದ ನವ ಭಾರತವು ಸಾಮಾಜಿಕ ನೆಲೆಗಳಲ್ಲಿ ಜಾತಿ ಶ್ರೇಣಿಗಳಿಂದ, ಆರ್ಥಿಕವಾಗಿ ಪ್ರಬಲವಾದ ಮಾರುಕಟ್ಟೆ ಶಕ್ತಿಗಳಿಂದ , ಸಾಂಸ್ಕೃತಿಕವಾಗಿ ಬಹುಸಂಖ್ಯಾತ ಮತದ ಆಧಿಪತ್ಯದಿಂದ ತನ್ನ ನೆಲಮೂಲದ ಬಹುತ್ವವನ್ನು ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲೇ ನಮಗೆ ಕುವೆಂಪು ಅವರು ಮೊಳಗಿದ “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ” ಎಂಬ ಕರೆ ಸಮಕಾಲೀನ ಉದ್ಗೋಷದಂತೆ ಕಾಣುತ್ತಿದೆ.

ಮತೀಯತೆ, ಮತಾಂಧತೆ, ಜಾತಿ ಶ್ರೇಷ್ಠತೆ ಹಾಗೂ ತಾತ್ವಿಕ ಅಂಧಶ್ರದ್ಧೆಗಳಿಂದ ಆವೃತವಾಗಿರುವ ಒಂದು ಬೃಹತ್‌ ಸಮಾಜ ಇಡೀ ದೇಶವನ್ನು ಆವರಿಸುತ್ತಿರುವ ನಿರಂಕುಶ ಪ್ರಭುತ್ವವನ್ನು ಸ್ವಾಗತಿಸುತ್ತಿರುವುದೇ ಅಲ್ಲದೆ ಪೋಷಿಸುತ್ತಲೂ ಬಂದಿದೆ. ಮತಭ್ರಾಂತಿ ಹಾಗೂ ಮೌಢ್ಯ ಈಗ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ಭಾರತೀಯ ಸಮಾಜದ ಅಂತಃಸತ್ವವಾಗಿರುವ ಬಹುತ್ವವನ್ನು ನಾಶಪಡಿಸುವ ರಾಜಕೀಯ ವ್ಯವಸ್ಥೆಯನ್ನೂ ಆವಾಹಿಸಿ, ಆಸ್ವಾದಿಸಿ, ಆರಾಧಿಸುವ ಮಟ್ಟಿಗೆ ಸಮಾಜ ಮತಿಹೀನತೆಯತ್ತ ಸಾಗುತ್ತಿದೆ. ಈ ಮೌಢ್ಯದ ಪರಿಣಾಮವಾಗಿಯೇ ಸುಂದರ ಸಮನ್ವಯ ಸಮಾಜದ ಹಗಲುಗನಸು ಕಾಣಬೇಕಾದ ವಿಶಾಲ ಸಮಾಜವು ನಡುಹಗಲಲ್ಲೇ ಅಂಧಕಾರದಲ್ಲಿರುವಂತೆ ಮೌಲ್ಯಗಳಿಗಾಗಿ ತಡಕಾಡುತ್ತಿದೆ. ನಾವು ಕಳೆದುಕೊಂಡಿರುವುದಾದರೂ ಏನನ್ನು ಎಂಬ ಜಿಜ್ಞಾಸೆಯೂ ಕಾಡದಂತೆ ಮನುಜ ಪ್ರಜ್ಞೆಯನ್ನು ಬಂಧಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಜಕಾರಣ ಜನಮಾನಸವನ್ನು ಆವರಿಸಿದೆ.

“ಉದಾರ ದರ್ಶನವೊಂದನ್ನು ಕಂಡು ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಮತಭ್ರಾಂತಿಯನ್ನು ಬಿಟ್ಟು ಮತಿಯ ದೀವಿಗೆಯನ್ನು ಹಿಡಿದು ಹೊರಡುವಂತೆ “ ನಿರ್ದೇಶಿಸುವ ಕುವೆಂಪು ಅವರ ದಾರ್ಶನಿಕ ನುಡಿಗಳು ವರ್ತಮಾನ ಭಾರತದ ಯುವ ಪೀಳಿಗೆಗೆ ದಿಕ್ಸೂಚಿಯಾಗಬೇಕಿತ್ತಲ್ಲವೇ ? ಆದರೆ ಮತಮೌಢ್ಯದಿಂದ ಜಾತಿ ಮೌಢ್ಯಕ್ಕೆ ಜಿಗಿದು ಈಗ ರಾಜಕೀಯ ಮೌಢ್ಯದೆಡೆಗೆ ದಾಪುಗಾಲು ಹಾಕುತ್ತಿರುವ ಭಾರತೀಯ ಸಮಾಜ ಅನ್ಯಾಯಗಳಿಗೆ ಕುರುಡಾಗಿದೆ, ಆಕ್ರಂದನಗಳಿಗೆ ಕಿವುಡಾಗಿದೆ, ಮನುಜ ವೇದನೆಗಳಿಗೆ ನಿಷ್ಕ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ ವಿಶ್ವವಿದ್ಯಾಲಯದ ಬೌದ್ಧಿಕ ಉತ್ಪನ್ನವೊಂದು ಅತಿಯಾಗಿ ಹರಿದಾಡುತ್ತಿದೆ. ಭಾರತೀಯ ಸಂವಿಧಾನದ ನೇರ ಫಲಾನುಭವಿಗಳಾದ ಬೃಹತ್‌ ಜನಸಮೂಹದ ಒಂದು ಸುಶಿಕ್ಷಿತ ಹಿತವಲಯವು ಇಂದು ಕುಸಿಯುತ್ತಿರುವ ಆರ್ಥಿಕ ಸ್ಥಾವರಗಳಿಗೆ, ಮಹಿಳಾ ದೌರ್ಜನ್ಯಗಳಿಗೆ, ಅತ್ಯಾಚಾರಗಳಿಗೆ, ಭ್ರೂಣ ಹತ್ಯೆಗಳಿಗೆ, ಅಸ್ಪೃಶ್ಯತೆಯಂತಹ ಹೀನಾಚರಣೆಗಳಿಗೆ ಕುರುಡಾಗಿದೆ. ಮತ್ತೊಂದೆಡೆ ಇಂದಿಗೂ ಭಾರತವನ್ನು ಕಾಡುತ್ತಿರುವ ಆರ್ಥಿಕ ಅಸಮಾನತೆ ಮತ್ತು ಬೆತ್ತಲೆ ಮೆರವಣಿಗೆಯಂತಹ ಮಹಿಳಾ ದೌರ್ಜನ್ಯಗಳನ್ನು ಕಣ್ಣೆತ್ತಿಯೂ ನೋಡದ, ನೋಡಿದರೂ ಸಕಾರಣಗಳೊಂದಿಗೆ ನಿರ್ಲಿಪ್ತವಾಗಿರುವ ಒಂದು ನಿಷ್ಕ್ರಿಯ ಸಮಾಜವನ್ನೂ ನಾವು ಕಾಣುತ್ತಿದ್ದೇವೆ.

ರಾಷ್ಟ್ರಕವಿ ಕುವೆಂಪು ಅವರ ನಿರಂಕುಶಮತಿ ಪರಿಕಲ್ಪನೆ ಹಾಗೂ ವಿಶ್ವಮಾನವತೆಯ ದಾರ್ಶನಿಕ ಸತ್ವಗಳನ್ನೇ ಮರೆತಿರುವ ಸಮಾಜ ಆ ಮಹಾಕವಿಯನ್ನೂ ನಿರ್ದಿಷ್ಟ ಜಾತಿಯ ಸಂಕೋಲೆಗಳಲ್ಲಿ ಬಂಧಿಸುವ ಮಟ್ಟಿಗೆ ಅಸ್ಮಿತೆಯ ಲೋಕವೊಂದನ್ನು ಸೃಷ್ಟಿಸಿಕೊಂಡಿದೆ. ತಾತ್ವಿಕವಾಗಿ ವಿಶ್ವ ಕಿರಿದಾಗಿ ಕಾಣುತ್ತಿದ್ದರೂ ಈ ಕಿರಿದಾದ ವಿಶ್ವದಲ್ಲೇ ಭಿನ್ನ ಭೇದಗಳ ಗೋಡೆಗಳನ್ನು ಸೃಷ್ಟಿಸುವಲ್ಲಿ ಅಸ್ಮಿತೆಯ ರಾಜಕಾರಣ ಹಾಗೂ ಸಾಂಸ್ಕೃತಿಕ ವಾತಾವರಣ ಯಶಸ್ವಿಯಾಗಿವೆ. ಆಧುನಿಕ ಸಂವಹನ ಕ್ರಾಂತಿಯು ಭೌಗೋಳಿಕ ವಿಶ್ವವನ್ನು ಕಿರಿದಾಗಿಸಿ ಪ್ರತಿ ವ್ಯಕ್ತಿಯ ಅಂಗೈಯ್ಯಲ್ಲಿರಿಸಿದೆ. ಆದರೆ ಅಂಗೈಯ್ಯಲ್ಲೇ ಕಾಣಬಹುದಾದ ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆ, ಹಿಂಸೆ, ಕ್ರೌರ್ಯ, ಯುದ್ಧೋನ್ಮಾದ, ಜನಾಂಗೀಯ ಹತ್ಯೆ, ಮಾನವ ಹತ್ಯಾಕಾಂಡಗಳತ್ತ ಕಣ್ಣೆತ್ತಿಯೂ ನೋಡದಂತೆ ಮಾನವ ಕುಬ್ಜನಾಗುತ್ತಿದ್ದಾನೆ. ನಾವೇ ಸೃಷ್ಟಿಸಿಕೊಳ್ಳುತ್ತಿರುವ ಕುಬ್ಜತೆಗೆ, ಸಂಕುಚಿತತೆಗೆ ಮತಾಚರಣೆಗಳನ್ನು, ಧರ್ಮಗ್ರಂಥಗಳನ್ನು, ಸಾಂಪ್ರದಾಯಿಕ ಸಂಸ್ಕೃತಿಯನ್ನು ಆರೋಪಿಸುತ್ತಿದ್ದೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯತೆಯನ್ನೂ ಕಿರಿದಾಗಿಸಿ ಆರೋಪಿಸುತ್ತಿದ್ದೇವೆ.

ನಾ ದಿವಾಕರ, ಚಿಂತಕರು

More articles

Latest article