ಬೆಂಗಳೂರು: ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕನ್ನಡ ಚಿತ್ರನಟಿ ರಮ್ಯಾ (Ramya) ಭಾಗಿಯಾಗಿದ್ದಾರೆ ಎಂದು ಏಷಿಯಾನೆಟ್, ಸುವರ್ಣ ನ್ಯೂಸ್ ಚಾನೆಲ್ ಭಿತ್ತರಿಸಿದ್ದ ಸುದ್ದಿಗೆ ಸಂಬಂಧಿಸಿದಂತೆ ನಟಿ ರಮ್ಯಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಮೊಕದ್ದಮೆಯನ್ನು ರದ್ದುಪಡಿಸುವಂತೆ ಸುದ್ದಿವಾಹಿನಿಯ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಯುವುದು ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
31 ಮೇ, 2013 ರಂದು ಸುವರ್ಣ ಸುದ್ದಿವಾಹಿನಿ (Suverna News Channel) ತಮ್ಮ ವ್ಯಕ್ತಿತ್ವಕ್ಕೆ ಕುಂದುಂಟಾಗುವಂತೆ ಹಾಗೂ ಸಿನಿಮಾ ರಂಗದಲ್ಲಿ ತಮ್ಮ ಹೆಸರು ಹಾಳಾಗುವ ರೀತಿಯಲ್ಲಿ ಆಧಾರ ರಹಿತವಾಗಿ ತಾವು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವಂತೆ ಬಿಂಬಿಸಿತ್ತು ಎಂದು ಆರೋಪಿಸಿ ಐಪಿಸಿ ಸೆಕ್ಷನ್ 500 ರ ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯವು 2016ರಲ್ಲಿ ಆರೋಪಿ ಸುದ್ದಿವಾಹಿನಿಯ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕಳಿಸಿತ್ತು.
ಆರೋಪಿಗಳು ತಮಗೆ ಸೆಕ್ಷನ್ 499ರ ಅಡಿಯಲ್ಲಿ ರಕ್ಷಣೆ ನೀಡಬೇಕು, ತಮ್ಮ ಮೇಲಿನ ಮಾನನಷ್ಟ ಮೊಕದ್ದಮೆ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ನಟಿ ರಮ್ಯಾ ಅವರ ದೂರನ್ನು ಪುರಸ್ಕರಿಸಿ ಸುವರ್ಣ ಚಾನೆಲ್ ಹಾಕಿದ್ದ ಅರ್ಜಿಯನ್ನು ರದ್ದುಪಡಿಸಿದೆ.