ಸಕಲೇಶಪುರ: ಸರ್ಕಾರದಿಂದ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಜಾಗ ಉಪವಿಭಾಗಾದಿಕಾರಿಗಳ ನ್ಯಾಯಾಲಯದಲ್ಲಿ ರದ್ದಾದ ಹಿನ್ನೆಲೆಯಲ್ಲಿ ಕುಟುಂಬವೊಂದು ದಯಾಮರಣಕ್ಕೆ ಕೋರಿ ಪತ್ರ ಬರೆದಿರುವ ಘಟನೆ ತಾಲೂಕಿನ ಯಸಳೂರು ಹೋಬಳಿ ಗೌಡರಬೈಲು ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಸಂತ್ರಸ್ಥ ಜನಾರ್ದನ್ ಆಚಾರ್ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ, ತಮ್ಮ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರಲ್ಲದೆ, ಇಡೀ ಕುಟುಂಬಕ್ಕೆ ದಯಾಮರಣದ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಜನಾರ್ದನ್ ಆಚಾರ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಇಷ್ಟು:
ಯಸಳೂರು ಹೋಬಳಿ, ಗೌಡರಬೈಲು ಗ್ರಾಮದ ಸ.ನಂ.1 ರಲ್ಲಿ 1-02 ಎಕರೆ ಜಮೀನನ್ನು ಅಕ್ರಮ – ಸಕ್ರಮದಡಿ ಅನಧಿಕೃತ ಸಾಗುವಳಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಮೀನು ಮಂಜೂರಾಗಿರುತ್ತದೆ. ಈ ಜಮೀನಿಗೆ ಸಂಬಂಧಿಸಿದಂತೆ ಸಂತೋಷ್ ಎಂಬುವರು ದೂರು ನೀಡಿದ್ದರಿಂದ 13.06.2024 ರಂದು ಉಪವಿಭಾಗಾಧಿಕಾರಿಗಳು ನಮ್ಮ ಜಮೀನಿನ ಮಂಜೂರಾತಿ ರದ್ದು ಮಾಡಿರುತ್ತಾರೆ.
ಆದರೆ ನಮಗೆ ಸಕಲೇಶಪುರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಓ.ಎಸ್.ನಂ.233/2017 ರಲ್ಲಿ ನ್ಯಾಯಾಲಯವು ಶಾಶ್ವತ ನಿರೋದಾಜ್ಞೆ ಆದೇಶ ಮಾಡಿ ಆದೇಶ ಮಾಡಿರುತ್ತದೆ. ಅಲ್ಲದೆ ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮತ್ತು ಹಾಸನ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದು, ಈ ಅಪೀಲು ಘನ ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ.
ಆದರೆ 25.07.2024 ರಂದು ಕುರುಭತ್ತೂರು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯವರು ನಾವು ಸಾಗುವಳಿ ಮಾಡಿಕೊಂಡು ಜಮೀನಿನಲ್ಲಿ ವಾಸವಿರುವ ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುತ್ತಾರೆ. ಆದರೆ ಆ ನೋಟಿಸ್ ನಲ್ಲಿ ಶೆಡ್ ಎಂದು ನಮೂದಾಗಿರುತ್ತದೆ. ನಾವು ನಮ್ಮ ಜಾಗದಲ್ಲಿ 11 * 23 ಅಳತೆಯ ಶೀಟ್ ಮನೆಯನ್ನು ನಿರ್ಮಾಣ ಮಾಡಿರುತ್ತೇವೆ.
ಇದಲ್ಲದೆ ಯಸಳೂರು ಉಪತಹಸೀಲ್ದಾರ್ ಕಚೇರಿಯಿಂದ ಯಸಳೂರು ಹೋಬಳಿ, ಗೌಡರಬೈಲು ಗ್ರಾಮದ ಸ.ನಂ.1 ರಲ್ಲಿ 1-02 ಎಕರೆ ಜಮೀನನ್ನು ಮಾನ್ಯ ಉಪವಿಭಾಗಾಧಿಕಾರಿಗಳ ಆದೇಶದಂತೆ ಖುಲ್ಲಾ ಪಡಿಸಲು ಆದೇಶಿಸಿರುತ್ತಾರೆ.
ನಮಗೆ ಗೌಡರಬೈಲು ಗ್ರಾಮದ ಸ.ನಂ.1 ರಲ್ಲಿ 1-02 ಎಕರೆ ಜಮೀನು ಹೊರತುಪಡಿಸಿ, ಬೇರೆ ಎಲ್ಲೂ ಸಹ ಜಮೀನಿರುವುದಿಲ್ಲ. ನಾನು ಈ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡು ನನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಪ್ರಕರಣ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಸಹ ದಬ್ಬಾಳಿಕೆಯಿಂದ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದರಿಂದ ಬೇಸತ್ತು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದೇವೆ.
ಜನಾರ್ದನ್ ಅವರ ದಯಾಮರಣದ ಮನವಿ ಕುರಿತು ಉಪವಿಭಾಗಾಧಿಕಾರಿ ಡಾ.ಶ್ರುತಿ ಪ್ರತಿಕ್ರಿಯಿಸಿದ್ದು, ಜಾಗ ಮಂಜೂರಾದ ಸಮಯದಲ್ಲಿ ಅಂದಿನ ಅಧಿಕಾರಿಗಳು ಪಾಳು ಜಮೀನು ಎಂದು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಮೀನು ಮಂಜುರಾತಿಯನ್ನು ರದ್ದುಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.