ನಾಗಪುರ (ಮಹಾರಾಷ್ಟ್ರ): ಅಪಘಾತವೊಂದರಲ್ಲಿ ತೀರಿಕೊಂಡ 82 ವರ್ಷ ವಯಸ್ಸಿನ ವಯೋವೃದ್ಧ ಪುರುಷೋತ್ತಮ ಪುಟ್ಟೇವಾರ್ ಸಾವಿನ ರಹಸ್ಯವನ್ನು ಭೇದಿಸಿರುವ ಪೊಲೀಸರು ಅದು ಕೇವಲ ಅಪಘಾತವಲ್ಲ, ಬೇಕೆಂದೇ ಮಾಡಲಾದ ಹಿಟ್ ಅಂಡ್ ರನ್ ಕೊಲೆ ಎಂಬುದನ್ನು ಬಯಲುಗೊಳಿಸಿದ್ದಾರೆ.
ಟೌನ್ ಪ್ಲಾನಿಂಗ್ ಕಮಿಷನ್ ನಲ್ಲಿ ಸಹಾಯಕ ನಿರ್ದೇಶಕಿ ಆಗಿರುವ ಅರ್ಚನಾ ಮನೀಶ್ ಪುಟ್ಟೇವಾರ್ (53) ಎಂಬಾಕೆ ಮುನ್ನೂರು ಕೋಟಿ ರುಪಾಯಿ ಆಸ್ತಿಗಾಗಿ ತನ್ನ ಮಾವನನ್ನೇ ಅಪಘಾತದ ಹೆಸರಲ್ಲಿ ಕೊಲೆ ಮಾಡಿಸಿದ್ದಾಳೆ. ಅರ್ಚನಾ ಈಗ ಪೊಲೀಸರ ಅತಿಥಿಯಾಗಿದ್ದು, ಜೈಲು ಕಂಬಿ ಎಣಿಸುತ್ತಿದ್ದಾಳೆ.
ಘಟನೆ ಕುರಿತು ಇಂದು ಪಿಟಿಐ ಸುದ್ದಿಸಂಸ‍್ಥೆಯೊಂದಿಗೆ ವಿವರಗಳನ್ನು ಹಂಚಿಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅರ್ಚನಾ ನಡೆಸಿದ ಅಪಘಾತದ ನಾಟಕಕ್ಕೆ ಒಂದು ಕೋಟಿ ರುಪಾಯಿ ಖರ್ಚು ಮಾಡಿದ್ದಾಳೆ ಎಂದು ಹೇಳಿದ್ದಾರೆ. ಕೊಲೆ ಮಾಡಿದರೂ ಅದು ಅಪಘಾತದಂತೆ ಕಾಣಬೇಕು ಎಂಬುದು ಅರ್ಚನಾ ಉದ್ದೇಶವಾಗಿತ್ತು. ಇದಕ್ಕಾಗಿ ಆಕೆ ವ್ಯವಸ್ಥಿತ ಷಡ್ಯಂತ್ರ ಹೂಡಿದ್ದಳು.
ಮಾವನನ್ನು ಕೊಲ್ಲಲು ಅರ್ಚನಾ ತನ್ನ ಗಂಡನ ಡ್ರೈವರ್ ಬಾಡ್ಗೆ ಎಂಬಾತನ ಸಹಾಯ ಪಡೆದಿದ್ದಳು. ಜೊತೆಗೆ ನೀರಜ್ ನಿಮ್ಜೆ ಮತ್ತು ಸಚಿನ್ ಧಾರ್ಮಿಕ್ ಎಂಬ ಇನ್ನಿಬ್ಬರನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದ್ದಳು. ಅರ್ಚನಾ ಜೊತೆಗೆ ಈ ಮೂವರ ಮೇಲೂ ಪೊಲೀಸರು ಐಪಿಸಿ ಸೆಕ್ಷನ್ 302 ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಎಲ್ಲ ಆರೋಪಿಗಳ ಮೊಬೈಲ್ ಫೋನ್ ಗಳನ್ನು ಸೀಜ್ ಮಾಡಿದ್ದಾರೆ.
ಘಟನೆ ನಡೆದ ದಿನ ಪುರುಷೋತ್ತಮ ಪುಟ್ಟೇವಾರ್ ತಮ್ಮ ಪತ್ನಿ ಶಕುಂತಲಾ ಅವರನ್ನು ಭೇಟಿಯಾಗಲು ಅವರು ದಾಖಲಾಗಿದ್ದ ಆಸ್ಪತ್ರೆಗೆ ತೆರಳಿದ್ದರು. ಶಕುಂತಲಾ ಅವರಿಗೆ ಇತ್ತೀಚಿಗಷ್ಟೇ ಸರ್ಜರಿಯೊಂದು ನಡೆದು, ಅದರಿಂದ ಚೇತರಿಸಿಕೊಳ್ಳುತ್ತಿದ್ದರು.
ಆಸ್ಪತ್ರೆಯಿಂದ ಹೊರಗೆ ಬಂದು ತಮ್ಮ ವಾಹನದ ಬಳಿ ಹೋಗಲು ಪುರುಷೋತ್ತಮ ಅವರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವರ ಮೇಲೆ ಹರಿದು, ಅವರು ಅಲ್ಲೇ ಮೃತಪಟ್ಟಿದ್ದರು. ಪುರುಷೋತ್ತಮ ಅವರನ್ನು ಗುದ್ದಿದ ಕಾರು ಅಲ್ಲಿಂದ ನಾಪತ್ತೆಯಾಗಿತ್ತು. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ನಂತರ ಇದು ಕೇವಲ ಅಪಘಾತವಲ್ಲ, ಕೊಲೆ ಎಂಬ ವಿಷಯ ತನಿಖೆಯಿಂದ ಹೊರಬಿದ್ದಿದೆ.