ಕತ್ತಲೆಯೇ ಸೋಕದಂತೆ ಭಾಸವಾಗುವ ಮಹಾನಗರದ ಬೀದಿಗಳಲ್ಲೂ ಕರಾಳ ಜಗತ್ತೊಂದು ತಣ್ಣಗೆ ಅಟ್ಟಹಾಸ ಮೆರೆಯುತ್ತಿರುತ್ತದೆ. ಗಾಜಿನ ಗೋಪುರವೆಂಬ ಹೆಸರಿನಲ್ಲಿ ಪಾರದರ್ಶಕತೆಯ ಭ್ರಮೆಯನ್ನು ಹುಟ್ಟಿಸಿದರೂ, ಇಲ್ಲಿಯ ಕೆಲ ಮೂಲೆಗಳು ತಮ್ಮದೇ ಆದ ರೀತಿಯಲ್ಲಿ ನಿಗೂಢವಾಗಿರುತ್ತವೆ– ಪ್ರಸಾದ್ ನಾಯ್ಕ್, ದೆಹಲಿ.
ಮೆಟ್ರೋ ಸಿಟಿಗಳೆಂದರೆ ನನ್ನ ಮಟ್ಟಿಗೆ ಕುರುಡರು ವರ್ಣಿಸುವ ಆನೆಗಳಿದ್ದಂತೆ.
ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ತಟ್ಟುತ್ತದೆ. ಅದಕ್ಕೆ ಹಲವು ಅವತಾರಗಳಿರುತ್ತವೆ. ತರಹೇವಾರಿ ಮುಖವಾಡಗಳಿರುತ್ತವೆ. ಅದು ಆಯಾ ಸನ್ನಿವೇಶಗಳಿಗೆ ತಕ್ಕಂತೆ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತಲೂ ಇರುತ್ತದೆ. ಇವುಗಳಲ್ಲದೆ ತನಗೂ ಇಲ್ಲಾಗುವ ಘಟನೆಗಳಿಗೂ ಸಂಬಂಧವೇ ಇಲ್ಲವೆಂಬಂತಿನ ಮಹಾನಗರಗಳ ನಿರ್ಲಿಪ್ತತೆಯು ಯಾರಿಗಾದರೂ ಗಾಬರಿಯನ್ನು ಹುಟ್ಟಿಸುವಂಥದ್ದು. ಸದಾ ಕಣ್ಣು ಕೋರೈಸುವ, ಝಗಮಗಿಸುವ ದೀಪಗಳಿಂದ ಕಂಗೊಳಿಸುವ ಮಹಾನಗರಿಗಳು ನಿದ್ದೆಗೇನೋ ಜಾರದಿರಬಹುದು. ಹಾಗಂತ ಇಲ್ಲಿ ಕತ್ತಲೆಯ ಮೂಲೆಗಳಿಲ್ಲ ಎಂದು ಹೇಳುವುದು ಸಾಧ್ಯವಿಲ್ಲವಲ್ಲ!
ನಾನು ದಿಲ್ಲಿಗೆ ಬಂದ ಹೊಸತರಲ್ಲಿ ನನ್ನ ಇಂಜಿನಿಯರಿಂಗ್ ಸಹಪಾಠಿಯಾಗಿದ್ದ ಅರುಣಾಚಲ ಮೂಲದ ಸೌರಭ್ ಗುಪ್ತಾನ ರೂಮಿನಲ್ಲಿ ಸೇರಿಕೊಂಡಿದ್ದೆ. ಆತ ಗೌರವರ್ಣದ, ಕುಳ್ಳಗಿನ ದೇಹಪ್ರಕೃತಿಯ, ಪಾದರಸದಷ್ಟಿನ ಚುರುಕು ಬುದ್ಧಿಯ ವ್ಯಕ್ತಿ. ಎಲ್ಲರೂ ಅವನನ್ನು “Sawyer” ಎಂದು ಕರೆಯುತ್ತಿದ್ದರು. ಈ ಅಡ್ಡಹೆಸರಿನ ಮೂಲವೇನೆಂಬುದು ಬಹುಷಃ ಹೆಸರಿಟ್ಟವನಿಗೂ ಈಗ ಮರೆತುಹೋಗಿರಬಹುದು. ಅಂದಹಾಗೆ ನಾವಿಬ್ಬರು ಒಂದೇ ತರಗತಿಯಲ್ಲಿದ್ದರೂ ಹೇಳಿಕೊಳ್ಳುವಂತಿನ ಗೆಳೆತನವೇನೂ ನಮ್ಮ ನಡುವಿನಲ್ಲಿರಲಿಲ್ಲ. ಆದರೆ ನಮ್ಮ ಕಾಲೇಜಿನಿಂದ ನಾವಿಬ್ಬರೇ ಈ ಸಂಸ್ಥೆಗೆ ಆಯ್ಕೆಯಾಗಿದ್ದ ಪರಿಣಾಮವಾಗಿ ಇಬ್ಬರೂ ಜೊತೆಯಾಗಿ ದಿಲ್ಲಿ ಸೇರಿಕೊಂಡಿದ್ದೆವು. ವಿಶೇಷವಾಗಿ ನಾನು ಉತ್ತರಭಾರತಕ್ಕೆ ಹೊಸಬನಾಗಿದ್ದರಿಂದ ಅವನ ಛತ್ರಛಾಯೆಯಲ್ಲಿ ಸೇರಿಕೊಳ್ಳುವುದು ಅಂದಿಗೆ ನನ್ನ ಅನಿವಾರ್ಯತೆಯೂ ಆಗಿತ್ತು.
ಸಾಯರ್ ತನ್ನ ಕಾಲೇಜು ದಿನಗಳಿಂದಲೇ ತಂಟೆಕೋರನಾಗಿ ಕುಖ್ಯಾತನಾಗಿದ್ದನಂತೆ. ನಾನು ನನ್ನ ಕಾಲೇಜು ದಿನಗಳಲ್ಲಿ ಹಾಸ್ಟೆಲ್ ನಲ್ಲಿರದಿದ್ದ ಪರಿಣಾಮವಾಗಿ ಈ ಬಗ್ಗೆ ನನಗೆ ಅಷ್ಟಾಗಿ ತಿಳಿದಿರಲಿಲ್ಲ. ಇತ್ತ ನನಗೆ ಬೇರೇನಿರದಿದ್ದರೂ ಹೊಸ ಕತೆಗಳು ಮತ್ತು ಅನುಭವಗಳ ತಲಾಶೆಯಂತೂ ಖಂಡಿತ ಇತ್ತು. ಹೀಗಾಗಿ ಅಚ್ಚರಿ ಎಂಬಂತೆ ಅದ್ಹೇಗೋ ತಮ್ಮ ತಾಳ-ಮೇಳಗಳು ಸೇರಿಕೊಂಡವು. ಒಮ್ಮೆ ನಮ್ಮ ಪುಟ್ಟ ರೂಮಿಗೆ ಮೂವರು ಗೆಳೆಯರನ್ನು ಆಹ್ವಾನಿಸಿದ ಸಾಯರ್ “ಇವತ್ತು ರಾತ್ರಿ ನಿಮಗೆಲ್ಲರಿಗೆ ನಾನು ಲಾಸ್ ವೇಗಾಸ್ ತೋರಿಸುತ್ತೇನೆ” ಎಂದು ಘೋಷಿಸಿದ್ದ. ಗುರುಗ್ರಾಮದ ಕೆಲ ಬೀದಿಗಳು ಯಾವ ಆಮ್-ಸ್ಟರ್ ಡ್ಯಾಮಿಗೆ ಕಮ್ಮಿಯಿಲ್ಲವೆಂದೂ, ಇಲ್ಲಿಯ ಕೆಲ ಎಲೀಟ್ ಕ್ಲಬ್ಬುಗಳು ಅಂತಾರಾಷ್ಟ್ರೀಯ ಕಸೀನೋಗಳಿಗೂ ಸಾಟಿಯಾಗಬಲ್ಲವು ಎಂಬುದು ಅವನ ದಾವೆಯಾಗಿತ್ತು. ಅವನನ್ನು ಬಿಟ್ಟು ಉಳಿದವರ್ಯಾರಿಗೂ ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದ ಪರಿಣಾಮವಾಗಿ ಎಲ್ಲರೂ ಆಯಿತು ಎಂಬಂತೆ ತಲೆಯಾಡಿಸಿದ್ದರು. ನಾಯಕತ್ವವು ಹೇಗೂ ಅವನದ್ದಾಗಿದ್ದರಿಂದ ಅವನ ದಾರಿಯನ್ನೇ ಹಿಡಿದು ಹೋದರಾಯಿತು ಎಂಬ ಉಡಾಫೆ ನಮ್ಮೆಲ್ಲರದ್ದಾಗಿತ್ತು.
ಸಾಯರ್ ಈ ಮಧ್ಯೆ ತನ್ನ ನಿತ್ಯದ ಓಡಾಟಗಳಿಗಾಗಿ ಹಳೆಯ ಆಕ್ಸೆಂಟ್ ಕಾರೊಂದನ್ನು ಖರೀದಿಸಿದ್ದ. ದಿಲ್ಲಿಯ ಚಂದದ, ಅಗಲ ರಸ್ತೆಗಳಲ್ಲಿ ತನ್ನ ಡಕೋಟ ಕಾರನ್ನು ಜುಮ್ಮೆಂದು ಓಡಿಸುವುದು ಅವನ ಆಯ್ದ ಶೋಕಿಗಳಲ್ಲೊಂದಾಗಿತ್ತು. ಆ ರಾತ್ರಿ ಎಲ್ಲರೂ ಸೇರಿ ಅದರಲ್ಲೇ ಹೋಗುವುದೆಂದು ತೀರ್ಮಾನವಾಯಿತು. ಕಾರನ್ನು ಖರೀದಿಸಿದ ದಿನದಿಂದ ಒಮ್ಮೆಯೂ ಅದು ನೀರಿನ ಮುಖವನ್ನು ಕಂಡಿರಲಿಲ್ಲ. ಹೀಗಾಗಿ ನಗರದ ಧೂಳು, ಕೆಸರು, ಮೈಲಿಗೆಗಳೆಲ್ಲವೂ ತನ್ನಲ್ಲೇ ಮೈದಾಳಿದೆ ಎಂಬಂತೆ ವಿಚಿತ್ರವಾಗಿ ತೋರುತ್ತಿತ್ತು ಆ ಹಳೇ ಶೈಲಿಯ, ಉದ್ದ ಮೂತಿಯ ಕಾರು. ಅಂತೂ ಖುದ್ದಾಗಿ ಅಡುಗೆ ಮಾಡಿ, ರಾತ್ರಿಯ ಭರ್ಜರಿ ಊಟವನ್ನು ಮುಗಿಸಿ ಐವರ ಸವಾರಿಯು ಮಹಾನಗರಿಯ ಕೆಲ ಕುಖ್ಯಾತ ಬೀದಿಗಳತ್ತ ಹೊರಡಲು ಅಣಿಯಾಗಿತ್ತು.
ಈ ಹಿಂದೆ ಹೇಳಿದಂತೆ ಐವರು ಕುತೂಹಲಿಗಳ ಈ ತಂಡಕ್ಕೆ ಸಾಯರ್ ಸಾರಥಿಯಾಗಿದ್ದ. ನನ್ನನ್ನೂ ಸೇರಿದಂತೆ ಉಳಿದ ಮೂವರು ಕೂಡ ಶಹರಕ್ಕೆ ತಕ್ಕಮಟ್ಟಿಗೆ ಹೊಸಬರಾಗಿದ್ದರು. ಹೀಗಾಗಿ ಕುತೂಹಲವು ಅವಶ್ಯಕತೆಗಿಂತ ಒಂದು ಹಿಡಿ ಹೆಚ್ಚೇ ಇತ್ತು ಎಂದರಡ್ಡಿಯಿಲ್ಲ. ಅಂತೂ ನಮ್ಮ ಮನೆಯಿಂದ ಹೊರಟು ಅರ್ಧ ತಾಸಿನ ಬಳಿಕ ಸಾಯರ್ ಹೇಳಿದ್ದ ನೈಟ್ ಕ್ಲಬ್ ಒಂದನ್ನು ನಾವು ತಲುಪಿದೆವು. ಆಗ ನಮಗಾಗಿದ್ದ ದೊಡ್ಡ ಅಚ್ಚರಿಯೆಂದರೆ ಹಗಲಿನ ಹೊತ್ತಿಗೆ ಎಲ್ಲಾ ಬೀದಿಗಳಂತೆ ಸಾಮಾನ್ಯವಾಗಿದ್ದ ಈ ಬೀದಿಯು, ರಾತ್ರಿಯ ಹೊತ್ತು ಬೇರೆಯದೇ ರೂಪವನ್ನು ತಾಳಿದಂತಿತ್ತು. ಇನ್ನು ಇವೆಲ್ಲವನ್ನು ನೋಡಲೆಂದು ಬಹಳಷ್ಟು ಮಂದಿ ಸಾಲುಗಟ್ಟಿ ಬರುವುದನ್ನು ನೋಡಿದಾಗ ಈ ಸಂಗತಿಯು ರಹಸ್ಯವಾಗಿಯೇನೂ ಉಳಿದಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತಿತ್ತು. ಹೀಗೆ ಒಂದಿಷ್ಟು ಕುತೂಹಲ, ಹಿಂಜರಿಕೆ, ಭಯ, ಸಂಕೋಚಗಳ ಸಹಿತವಾಗಿಯೇ ನಾವೆಲ್ಲರೂ ಆ ವಿಲಕ್ಷಣ ಸ್ಥಳವನ್ನು ತಲುಪಿ ಮುಂದೇನು ಎಂಬಂತೆ ಗೊಂದಲದಲ್ಲಿ ನಿಂತಿದ್ದೆವು.
ಹಾಗಂತ ಆ ಜಾಗವು ಒಂದು ರಹಸ್ಯಮಯ ಮೂಲೆಯಲ್ಲಿತ್ತೇ? ಖಂಡಿತ ಇಲ್ಲ. ಅದು ಮಹಾನಗರದ ಮುಖ್ಯ ಬೀದಿಯೊಂದರಲ್ಲಿ, ಜನಪ್ರಿಯ ಶಾಪಿಂಗ್ ಮಾಲ್ ಒಂದರಲ್ಲೇ ಇತ್ತು. ನೈಟ್ ಕ್ಲಬ್ ಹೆಸರಿನಲ್ಲಿ ಅಲ್ಲಿ ಬೇರೆ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಿದ್ದವು. ನೈಟ್ ಕ್ಲಬ್ಬಿನಲ್ಲಿ ಕುಣಿಯಲೆಂದೇ ಅಲ್ಲಿ ಕಣ್ಣು ಕುಕ್ಕುವಂತೆ ಅಲಂಕೃತರಾಗಿದ್ದ ಹೆಣ್ಣು ಮಕ್ಕಳು, ತೃತೀಯಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಮಾರುವೇಷದಲ್ಲಿದ್ದಾರೆಂದು ಹೇಳಲಾಗುವ ಕೆಲ ವಂಚಕರು ಅಲ್ಲಿ ಬರುತ್ತಿದ್ದರು. ಇನ್ನು ಈ ಮಂದಿಯನ್ನು ನೋಡಲು ಕುತೂಹಲದಿಂದ ಬರುತ್ತಿದ್ದವರು, ಇವರೊಂದಿಗೆ ಕುಣಿಯಲು-ಕಿಂಚಿತ್ತು ಸ್ಪರ್ಶ ಸುಖಕ್ಕಾಗಿ ಹಾತೊರೆದು ಹಣ ತೆತ್ತು ಬರುತ್ತಿದ್ದವರು, ಉಬ್ಬುಹೊಟ್ಟೆಯ ಮಧ್ಯವಯಸ್ಕ ಗಂಡಸರು, ಕಾಲೇಜು ವಿದ್ಯಾರ್ಥಿಗಳು, ಕಂಠಪೂರ್ತಿ ಕುಡಿದು ವಿನಾಕಾರಣ ಗಲಾಟೆಯೆಬ್ಬಿಸುತ್ತಿದ್ದ ಬಲಿಷ್ಠ ಮೈಕಟ್ಟಿನ ಸ್ಥಳೀಯ ಪೈಲ್ವಾನರು, ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸಿಕೊಂಡು ಕೂದಲಿಗೆ ವಿಚಿತ್ರ ಬಣ್ಣಗಳನ್ನು ಬಳಿದುಕೊಂಡು ಜೋಕರ್ ಗಳಂತೆ ಕಾಣುತ್ತಿದ್ದ ಫ್ಯಾಷನ್ ಹುಚ್ಚರು… ಹೀಗೆ ಹಲವು ಬಗೆಯ ಮಂದಿಯನ್ನು ಅಲ್ಲಿ ಕಾಣಬಹುದಿತ್ತು. ಇವರೆಲ್ಲರನ್ನು ನೋಡುತ್ತಿದ್ದರೆ ಇವರ್ಯಾರೂ ಈ ಸ್ಥಳಕ್ಕೆ ಹೊಸಬರಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದಿತ್ತು. ಯಾವ ಮೂಲೆಯಲ್ಲಿ ಏನೆಲ್ಲ ಲಭ್ಯವಿದೆ, ಎಲ್ಲೆಲ್ಲಿ ಏನೇನು ವ್ಯವಹಾರಗಳು ನಡೆಯುತ್ತವೆ ಎಂಬಿತ್ಯಾದಿ ಸಂಗತಿಗಳಿಗೆ ಅವರೆಲ್ಲ ಪರಿಚಿತರಾಗಿದ್ದಂತಿತ್ತು. ಇನ್ನು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಆಟೋರಿಕ್ಷಾಗಳಲ್ಲಿ ಹಣದ ಕೊಡುಕೊಳ್ಳುವಿಕೆಯ ವ್ಯವಹಾರಗಳು ಮುಕ್ತವಾಗಿ ನಡೆಯುತ್ತಿದ್ದವು. ಎಲ್ಲದಕ್ಕಿಂತ ದೊಡ್ಡ ತಮಾಷೆಯೆಂದರೆ ಇವೆಲ್ಲ ನಗರದ ಪೋಲೀಸರ ಕಣ್ಗಾವಲಿನಲ್ಲೇ ನಡೆಯುತ್ತಿತ್ತು.
ಹಾಗೆ ನೋಡಿದರೆ ಇಂತಹ ಜನಜಂಗುಳಿಯ ನಡುವೆ ಆ ಪರಿಸರಕ್ಕೆ ಹೊಸಬರಾಗಿದ್ದ ನಾವು ಪೆದ್ದರಂತೆ ಕಣ್ಣು ಬಿಡುತ್ತಾ, ಕಂಗಾಲಾಗಿ ಅಡ್ಡಾಡುತ್ತಿದ್ದೆವು. ಸುಮಾರು ಒಂದು ತಾಸು ಕಳೆಯುವಷ್ಟರಲ್ಲಿ ಇದು ನಮಗೆ ಸರಿಹೊಂದುವ ಜಾಗವಲ್ಲ ಎಂಬುದು ಅರಿವಾಗಿ ನಾವಾಗಿಯೇ ಹೊರಬಿದ್ದಿದ್ದೂ ಆಯಿತು. ಅಸಲಿಗೆ ನೈಟ್ ಕ್ಲಬ್ಬುಗಳನ್ನು ಕತೆ-ಕಾದಂಬರಿ-ಸಿನೆಮಾಗಳಲ್ಲಷ್ಟೇ ಕಂಡಿದ್ದ ನಮ್ಮಂತಹ ದೇಸಿ ಬಾಲಂಗೋಚಿಗಳಿಗೆ ಸಾಯರ್ ತೀರಾ “ಲಾಸ್ ವೇಗಾಸ್” ಅಲ್ಲದಿದ್ದರೂ, ತಕ್ಕಮಟ್ಟಿಗೆ ಕೊಲಂಬಿಯಾದ ಬೀದಿಗಳನ್ನಂತೂ ತೋರಿಸಿದ್ದ. ಹಾಗೆ ನೋಡಿದರೆ ಶಹರದ ಓಪನ್ ಸೀಕ್ರೆಟ್ ನಂತಿದ್ದ ಈ ಸಂಗತಿಯು ಸ್ಥಳೀಯರಿಗೆ ಸಾಮಾನ್ಯವೂ ಆಗಿರಬಹುದು. ಆದರೆ ನೆಟ್ಟಗೆ ನಡೆಯಲು ಗೊತ್ತಿಲ್ಲದ ಐವರು ಹುಡುಗರು ಮಾತ್ರ ಏಕಾಏಕಿ ಹೈ-ಜಂಪ್ ಮಾಡಲು ಹೋಗಿ ಕಾಲು ಮುರಿದುಕೊಂಡಂತಾಗಿತ್ತು.
ಅಂದಹಾಗೆ ನಮ್ಮ ಅವಾಂತರಗಳ ಸರಣಿಯು ಅಲ್ಲಿಗೆ ಮುಗಿಯುವಂತೆ ಕಾಣಲಿಲ್ಲ. ಇವೆಲ್ಲ ಕಸರತ್ತುಗಳು ಸಾಕೆಂದು ಮನೆಗೆ ಮರಳಲು ಐವರಲ್ಲಿ ಇಬ್ಬರು ಅಣಿಯಾದೆವು. ಹೀಗಾಗಿ ಉಳಿದ ಮೂವರು ಒಲ್ಲದ ಮನಸ್ಸಿನೊಂದಿಗೆ ಅನಿವಾರ್ಯವಾಗಿ ಹಿಂತಿರುಗಬೇಕಾಯಿತು. ಆದರೆ ಅಷ್ಟರಲ್ಲಿ ತಂಡದಲ್ಲಿದ್ದ ಒಂದಿಬ್ಬರು ಹೆಚ್ಚೇ ಕುಡಿದಿದ್ದರು. ಹೀಗಾಗಿ ಅವರನ್ನು ಪುಸಲಾಯಿಸಿ ಮರಳಿ ಕರೆತರುವುದೇ ಒಂದು ಸಾಹಸವಾಯಿತು. ಮುಂದೆ ಸಾಯರ್ ಮಹಾಶಯನ ಆಕ್ಸೆಂಟ್ ಕಾರು ರಸ್ತೆಗಿಳಿದ ನಂತರ ಅದು ಬೇರೆಯದ್ದೇ ಕಾರಣದಿಂದಾಗಿ ಪೋಲೀಸರ ಗಮನ ಸೆಳೆದು, ನಾವೆಲ್ಲ ಕೆಲ ಕ್ಷಣಗಳ ಕಾಲ ಬೀದಿಗೆ ಬಿದ್ದೆವು. “ನೀವೆಲ್ಲ ಎಲ್ಲೋ, ಏನೋ, ಮಾಡಬಾರದ್ದು ಮಾಡಿ ಪರಾರಿಯಾಗಿ ಬಂದಿದ್ದೀರಿ”, ಎಂದು ಒಬ್ಬ ಖಾಕಿಧಾರಿ ಅಧಿಕಾರಿ ಗದರಿಸುತ್ತಿದ್ದ. ಅಸಲಿಗೆ ನಾವೆಲ್ಲ ಹಾಗೆ ಕಾಣುತ್ತಿದ್ದೆವು ಎಂಬುದಕ್ಕಿಂತ, ತಡರಾತ್ರಿಯಲ್ಲಿ ಹೇಗ್ಹೇಗೋ ಓಡುತ್ತಿದ್ದ, ಧೂಳಿನಲ್ಲಿ ಮಿಂದೆದ್ದು, ನೋಡಲೂ ವಿಚಿತ್ರವಾಗಿದ್ದ ನಮ್ಮ ಕಾರು ಅಂಥದೊಂದು ಅಭಿಪ್ರಾಯವನ್ನು ಅವರಲ್ಲಿ ಮೂಡಿಸಿತ್ತು. ಇದ್ಯಾವುದೋ ಕದ್ದ ಕಾರಿರಬಹುದು ಎಂಬ ಸಂದೇಹದಲ್ಲಿ ಹೀಗೆ ನಾವುಗಳು ಅಂದು ಅನಿರೀಕ್ಷಿತವಾಗಿ ಪೋಲೀಸರ ಚುರುಕು ಕಣ್ಣಿಗೆ ಆಹಾರವಾಗಿಬಿಟ್ಟಿದ್ದೆವು. ಮುಂದೆ ನಮ್ಮ ಸಾರಥಿಯೇ ತನ್ನ ವಾಕ್ಚಾತುರ್ಯ ಮತ್ತು ವ್ಯವಹಾರ ಚಾತುರ್ಯದೊಂದಿಗೆ ಈ ಚಕ್ರವ್ಯೂಹದಿಂದ ನಮ್ಮನ್ನು ಯಶಸ್ವಿಯಾಗಿ ಹೊರತಂದಿದ್ದು ನಾವೆಲ್ಲ ಇಂದಿಗೂ ನೆನಪಿಸಿಕೊಳ್ಳುವ ಸಂಗತಿಗಳಲ್ಲೊಂದು.
ಹೀಗೆ ಮಹಾನಗರಗಳಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಘಟನೆಗಳು ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಮ್ಮಲ್ಲಿ ಹುಟ್ಟಿಸಿಬಿಡುತ್ತವೆ. ಸುಮಾರು ಒಂದು-ಒಂದೂವರೆ ವರ್ಷದ ಹಿಂದೆ ನಾವು ಪ್ರತಿನಿತ್ಯ ಓಡಾಡುವ, ನಾವಿರುವ ಮಹಾನಗರಿಯು ಅದೆಷ್ಟೇ ಸುರಕ್ಷಿತ ಎಂದು ಹೇಳಿಕೊಂಡರೂ ಕೆಲವು ಸನ್ನಿವೇಶಗಳು, ಕೆಲವು ನೋಟಗಳು, ಕೆಲವು ಕತ್ತಲ ಮೂಲೆಗಳು ಇಂದಿಗೂ ಬೆನ್ನಹುರಿಯಲ್ಲಿ ವಿಚಿತ್ರ ನಡುಕಗಳನ್ನು ಹುಟ್ಟಿಸುತ್ತವೆ. ಈ ಮಹಾನಗರವನ್ನು, ಇಲ್ಲಿಯ ಜನರನ್ನು ನಾವು ಅರಿತೇ ಇಲ್ಲ ಎಂಬಂತಹ ಅಸುರಕ್ಷಿತ ಭಾವವನ್ನು ಕಾರಣವಿಲ್ಲದೆ ದಿನರಾತ್ರಿಗಳ ಭೇದವಿಲ್ಲದೆ ಜನರಿಂದ ಗಿಜಿಗುಡುವ ರಸ್ತೆಯೊಂದರಲ್ಲೇ ಯುವತಿಯೋರ್ವಳನ್ನು ಅಪಹರಿಸಿ, ಬೇರೆಡೆಗೆ ಕರೆದೊಯ್ದು, ಆಕೆಯನ್ನು ಕೆಲ ಮಂದಿ ಬರ್ಬರವಾಗಿ ಅತ್ಯಾಚಾರ ಮಾಡಿ, ಕಸದ ಮೂಟೆಯಂತೆ ಎಸೆದು ಹೋಗಿದ್ದರು. ಸ್ಥಳೀಯ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿಲ್ಲದ ಪಕ್ಷದಲ್ಲಿ ಈ ಬಗ್ಗೆ ಆಸುಪಾಸಿನವರಿಗೂ ತಿಳಿಯುವ ಸಾಧ್ಯತೆಗಳೇ ಇರಲಿಲ್ಲ. ಮಹಾನಗರಗಳಲ್ಲಿ ನಡೆಯುವ ಯಾವುದೇ ಘಟನೆಗಳು ಸುದ್ದಿಯಾಗುವಷ್ಟಿನ ವೇಗದಲ್ಲೇ ಜನಮಾನಸದಲ್ಲಿ ತೆರೆಮರೆಗೆ ಸರಿದುಹೋಗುವುದು ಹೀಗೆ.
ಕತ್ತಲೆಯೇ ಸೋಕದಂತೆ ಭಾಸವಾಗುವ ಮಹಾನಗರದ ಬೀದಿಗಳಲ್ಲೂ ಕರಾಳ ಜಗತ್ತೊಂದು ತಣ್ಣಗೆ ಅಟ್ಟಹಾಸ ಮೆರೆಯುತ್ತಿರುತ್ತದೆ. ಗಾಜಿನ ಗೋಪುರವೆಂಬ ಹೆಸರಿನಲ್ಲಿ ಪಾರದರ್ಶಕತೆಯ ಭ್ರಮೆಯನ್ನು ಹುಟ್ಟಿಸಿದರೂ, ಇಲ್ಲಿಯ ಕೆಲ ಮೂಲೆಗಳು ತಮ್ಮದೇ ಆದ ರೀತಿಯಲ್ಲಿ ನಿಗೂಢವಾಗಿರುತ್ತವೆ. ಇಲ್ಲಿ ಪಿ.ಸಿ.ಆರ್ ವ್ಯಾನುಗಳು ತಮ್ಮದೇ ಕತೆಗಳನ್ನು ಹೇಳುತ್ತವೆ. ಎಲ್ಲೋ ಒಂದು ಸುದ್ದಿಯು ಕೊಂಚ ಸದ್ದು ಮಾಡಿದರೆ ಉಳಿದ ತೊಂಭತ್ತೊಂಭತ್ತು ಸುದ್ದಿಗಳು ಇಲ್ಲದ ಕತ್ತಲಿನಲ್ಲೇ ಸದ್ದಿಲ್ಲದೆ ಕರಗಿಹೋಗಿರುತ್ತವೆ.
ಮಹಾನಗರಗಳ ಮೋಡಿಯು ಈ ಬಗೆಯಲ್ಲೂ ನಮ್ಮಲ್ಲಿ ಸ್ವಾರಸ್ಯವನ್ನು ಹುಟ್ಟಿಸಬಹುದು.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ಮೆಟ್ರೋಸಿಟಿಯಲ್ಲೊಂದು ಇಳಿಸಂಜೆ” https://kannadaplanet.com/one-evening-in-in-the-metrocity/