ಬಿಜೆಪಿ ಸೇರಿಕೊಂಡ ಟೀಕಾಕಾರರು: ಭಕ್ತರ ಕಾಲೆಳೆದ ಮಹಮದ್ ಜುಬೇರ್

Most read

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮಹಮದ್ ಜುಬೇರ್ ಭಕ್ತರ ಕಾಲೆಳೆಯುವುದರಲ್ಲಿ ನಿಸ್ಸೀಮರು. ಬಿಜೆಪಿಯ ಕಟುಟೀಕಾಕಾರರಾಗಿ ಭಕ್ತರ (ಮೋದಿ ಭಕ್ತರು) ಕೆಂಗಣ್ಣಿಗೆ ಗುರಿಯಾಗಿದ್ದ ಹಲವು ನಾಯಕರುಗಳು ಈಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹಿಂದೆ ಅವರನ್ನು ನಿಂದಿಸಿದ್ದ ಭಕ್ತರೇ ಹೊತ್ತು ಮೆರೆಸುತ್ತಿರುವ ಕುರಿತು ಜುಬೇರ್ ಕಾಲೆಳೆದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇಂಥ ಒಂಭತ್ತು ನಾಯಕರುಗಳ ಪೋಸ್ಟರ್ ಒಂದನ್ನು ಶೇರ್ ಮಾಡಿರುವ ಜುಬೇರ್ ಎಲ್ಲರ ಹಿನ್ನೆಲೆಗಳನ್ನು ಬಿಡಿಸಿಟ್ಟಿದ್ದಾರೆ.

ಅವರ ಪೋಸ್ಟ್ ನ ಪೂರ್ಣಪಾಠ ಹೀಗಿದೆ.

ಬಡಪಾಯಿ ಭಕ್ತರೇ,
ಶೆಹಜಾದ್ ಪೂನಾವಾಲಾ ಮೋದಿ, ಆರ್‌ಎಸ್ಎಸ್ ಬಿಜೆಪಿಯನ್ನು ತಾಲಿಬಾನ್, ಐಸಿಸ್, ಬೋಕೋ ಹರಾಮ್ (ನೈಜೀರಿಯಾದಲ್ಲಿ ಆರಂಭಗೊಂಡ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ) ಇತ್ಯಾದಿಗಳಿಗೆ ಹೋಲಿಸಿ ಪುಂಖಾನುಪುಂಖವಾಗಿ ಬರೆಯುತ್ತಿದ್ದರು. ಭಕ್ತರು ಶೆಹಜಾದ್ ಅವರನ್ನು ಬೈದರು, ಆತನ ತಾಯಿಯನ್ನೂ ಬೈದರು. ಈಗ ಶೆಹಜಾದ್ ಬಿಜೆಪಿ ಸೇರಿದ್ದಾರೆ. ಅದೇ ಭಕ್ತರು ಈಗ ಶೆಹಜಾದ್ ಅವರಿಂದ ಫಾಲೋ ಮಾಡಿಸಿಕೊಳ್ಳಲು ಹೆಮ್ಮೆ ಪಡುತ್ತೇವೆ ಎಂದು ಪೋಸ್ಟ್ ಹಾಕುತ್ತಿದ್ದಾರೆ.

ಖುಷ್ಬೂ ಸುಂದರ್, ಮೋದಿ, ಬಿಜೆಪಿ, ಆರ್ ಎಸ್ ಎಸ್ ವಿರುದ್ಧ ಬರೆಯುತ್ತಿದ್ದರು. ಭಕ್ತರು ಅವರನ್ನು ಬಿಡದೇ ನಿಂದಿಸಿದರು, ಆಕೆಯ ಧರ್ಮದ ಮೂಲವನ್ನು ಎತ್ತಿ ಆಡಿದರು. ಖುಷ್ಬೂ ನಂತರ ಬಿಜೆಪಿ ಸೇರಿದರು. ಈಗ ಅದೇ ಭಕ್ತರು ಖುಷ್ಬೂ ಅವರ ಟ್ವೀಟ್ ಗಳನ್ನು ಕೊಂಡಾಡುತ್ತಿದ್ದಾರೆ.

ಜ್ಯೋತಿರಾದಿತ್ಯ ಸಿಂಧ್ಯಾ ಇದೇ ಬಿಜೆಪಿ ಆರ್ ಎಸ್ ಎಸ್ ಮೋದಿ ವಿರುದ್ಧ ಮಾತನಾಡುತ್ತಿದ್ದರು. ಭಕ್ತರು ಸಿಂಧ್ಯಾ ಅವರನ್ನು ದ್ರೋಹಿ ಎಂದರು, ಹಿಂದೂ ವಿರೋಧಿ ಎಂದರು. ಸಿಂಧ್ಯಾ ಅವರ ಪೂರ್ವಜರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು ಎಂದು ಜರಿದರು. ಸಿಂಧ್ಯಾ ನಂತರ ಬಿಜೆಪಿ ಸೇರಿದರು. ಈಗ ಸಿಂದ್ಯಾ ಅವರ ಟ್ವೀಟ್ ಗಳಿಗೆ ಇದೇ ಭಕ್ತರು ಹೊಗಳಿಕೆಯ ಮಳೆಯನ್ನೇ ಸುರಿಸುತ್ತಿದ್ದಾರೆ.

ಕಪಿಲ್ ಮಿಶ್ರಾ ಕೂಡ ಬಿಜೆಪಿ, ಆರ್.ಎಸ್. ಎಸ್., ಮೋದಿಯ ಕಟುಟೀಕಾಕಾರಾಗಿದ್ದರು. ದೆಹಲಿ ವಿಧಾನಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧಅನೈತಿಕ ಸಂಬಂಧ (ಸ್ನೂಪ್ ಗೇಟ್ ಹಗರಣ)ದ ಆರೋಪ ಮಾಡಿದ್ದರು. ಭಕ್ತರು ಯಥಾಪ್ರಕಾರ ಮಿಶ್ರಾ ಅವರನ್ನೂ ಅವರ ಕುಟುಂಬವನ್ನೂ ಮನಸೋ ಇಚ್ಛೆ ನಿಂದಿಸಿದರು. ನಂತರ ಕಪಿಲ್ ಮಿಶ್ರಾ ಬಿಜೆಪಿ ಸೇರಿದರು. ಕಪಿಲ್ ಮಿಶ್ರಾ ನಮ್ಮನ್ನು ಫಾಲೋ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತೇವೆ ಎಂದು ಇದೇ ಭಕ್ತರು ಬರೆದುಕೊಂಡರು. ಈಗ ಮಿಶ್ರಾ ಅವರೇ ಭಕ್ತರ ಪ್ರಮುಖ ಹಿಂದುತ್ವ ಹೀರೋ ಆಗಿದ್ದಾರೆ.

ಶಾಜಿಯಾ ಇಲ್ಮಿ ಕೂಡ ಬಿಜೆಪಿ, ಆರ್.ಎಸ್.ಎಸ್, ಬಿಜೆಪಿಯ ಕೋಮುವಾದಿ ರಾಜಕಾರಣದ ವಿರುದ್ಧ ಮಾತನಾಡುತ್ತ ಬಂದಿದ್ದರು. ಸಹಜವಾಗಿ ಅವರು ಭಕ್ತರ ಟಾರ್ಗೆಟ್ ಆಗಿದ್ದರು. ನಂತರ ಆಕೆ ಬಿಜೆಪಿ ಸೇರಿದರು. ಈಗ ಅವರ ಮೇಲೆ ಭಕ್ತರಿಗೆ ಅತಿಪ್ರೀತಿ.

ಗೌರವ್ ಭಾಟಿಯಾ ಕೂಡ ಮೋದಿ, ಆರ್ ಎಸ್ ಎಸ್, ಬಿಜೆಪಿ ವಿರುದ್ಧ ಮಾತಾಡಿಕೊಂಡು ಬಂದವರು. ಗೌರವ್ ಈಗ ಬಿಜೆಪಿಯಲ್ಲಿದ್ದಾರೆ. ಭಕ್ತರ ಡಾರ್ಲಿಂಗ್ ಆಗಿದ್ದಾರೆ.

ಇನ್ನು ಶೆಹ್ಲಾ ರಶೀದ್ ಅವರು ಕೂಡ ಮೋದಿ, ಆರ್.ಎಸ್.ಎಸ್, ಬಿಜೆಪಿಯನ್ನು ವಿರೋಧಿಸಿಕೊಂಡೇ ಬಂದವರು. ವರ್ಷಗಳ ಕಾಲ ಆಕೆಯನ್ನು ಭಕ್ತರು ನಿಂದಿಸಿದರು. ಆಕೆಯ ಕುರಿತು ಕೀಳುಮಟ್ಟದ ಮೀಮ್ ಗಳನ್ನು ಮಾಡಿದರು. ಈಗ ಶೆಹ್ಲಾ ಮೋದಿಯನ್ನು ಬಿಜೆಪಿಯನ್ನು ಹೊಗಳುತ್ತಿದ್ದಾರೆ. ಭಕ್ತರು ಈಗ ಶೆಹ್ಲಾ ಅವರ ಟ್ವೀಟ್ ಗಳನ್ನು ರೀಟ್ವೀಟ್ ಮಾಡುತ್ತಿದ್ದಾರೆ.

ಜಯಂತ್ ಚೌಧುರಿ ಕೂಡ ಮೋದಿಯ ಟೀಕಾಕಾರರು. ಭಕ್ತರು ಅವರನ್ನು ದಾರುಣವಾಗಿ ಟ್ರಾಲ್ ಮಾಡಿದರು. ನಂತರ ಜಯಂತ್ ಬಿಜೆಪಿ ಸೇರಿದರು. ಈಗ ಜಯಂತ್ ಗುಣಗಾನ ನಡೆಯುತ್ತಿದೆ.

ಇತ್ತೀಚಿಗಷ್ಟೇ ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ರೈತ ಪ್ರತಿಭಟನೆ ಸಂದರ್ಭದಲ್ಲಿ ಮೋದಿ, ಬಿಜೆಪಿ ವಿರುದ್ಧ ಸಮರವನ್ನೇ ಸಾರಿದ್ದರು. ಭಕ್ತರು ಎಂದಿನಂತೆ ವಿಜೇಂದರ್ ಅವರನ್ನು ಬೈದರು, ಖಾಲಿಸ್ತಾನಿ ನೀನು ಎಂದು ನಿಂದಿಸಿದರು. ಈಗ ವಿಜೇಂದರ್ ಬಿಜೆಪಿ ಸೇರಿದ್ದಾರೆ. ಭಕ್ತರು ಈಗ ವಿಜೇಂದರ್ ಜೊತೆಯೂ ರಾಜಿಯಾಗಿ ಅವರನ್ನು ಹೊಗಳಲಿದ್ದಾರೆ.

ಇದೆಲ್ಲ ಕೆಲವು ಉದಾಹರಣೆಗಳು ಮಾತ್ರ, ಇಂಥ ನೂರಾರು ಉದಾಹರಣೆಗಳು ಇವೆ.

More articles

Latest article