Sunday, September 8, 2024

ಮನೆ ಊಟ, ಹಾಸಿಗೆ, ಬಟ್ಟೆ ಕೇಳಿದ್ದ ದರ್ಶನ್ ಅರ್ಜಿ ವಜಾಗೊಳಿಸಿದ ಕೋರ್ಟ್

Most read

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರು ಮನೆ ಊಟ, ಹಾಸಿಗೆ, ಬಟ್ಟೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 24ನೇ ಎಸಿಎಂಎಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಜೈಲಿನಲ್ಲಿ ನೀಡುತ್ತಿರುವ ಆಹಾರವನ್ನು ತಮ್ಮಿಂದ ಜೀರ್ಣಿಸಿಕೊಳ್ಳಲಾಗದೆ ಅತಿಸಾರ ಉಂಟಾಗಿದ್ದು, ಪದೇ ಪದೇ ಭೇದಿಯಾಗುತ್ತಿದೆ. ಪರಿಣಾಮ ದೇಹದ ತೂಕ ಕಡಿಮೆಯಾಗಿದೆ ಎಂಬ ಕಾರಣ ನೀಡಿ ಮನೆಯ ಊಟ ತರಿಸಲು ಅನುಮತಿ ಕೋರಿ ದರ್ಶನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು, ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದ್ದಾರೆ.

ಕಳೆದ ವಾರ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಾದ ಆಲಿಸಿದ ನ್ಯಾಯಾಲಯವು ಇಂದಿಗೆ ತೀರ್ಪನ್ನು ಜುಲೈಗೆ ಕಾಯ್ದಿರಿಸಿತ್ತು. ಇದೀಗ ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ. ಜೈಲಿನ ನಿಯಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ ಎಂದು ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು.

ಜೈಲೂಟದಿಂದ ದರ್ಶನ್‌ಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಆದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ.

More articles

Latest article