ನ್ಯಾಯಾಧೀಶರತ್ತ ಶೂ ಎಸೆದ ಪ್ರಕರಣ – ಇದು ಬೇರೂರಿರುವ ವ್ಯಾಧಿ ಆಳಕ್ಕಿಳಿದಿರುವ ವ್ಯಸನ

Most read

ನ್ಯಾಯಾಧೀಶರತ್ತ ಶೂ ಎಸೆದ ಪ್ರಕರಣವನ್ನು, ಆಳವಾಗಿ ಬೇರೂರುತ್ತಿರುವ ದ್ವೇಷಾಸೂಯೆಗಳ ಸಾಂಸ್ಕೃತಿಕ ವ್ಯಸನ ಮತ್ತು ಸಾಮಾಜಿಕ ವ್ಯಾಧಿಯಾಗಿ (Social Malaise) ನೋಡಬೇಕಿದೆ. ಇದಕ್ಕೆ ಸಮರ್ಥವಾದ ಚಿಕಿತ್ಸಕರು ವರ್ತಮಾನದ ಭಾರತದಲ್ಲಿ ಕಾಣದೆ ಇರುವುದು ಒಪ್ಪಲೇಬೇಕಾದ ಸತ್ಯ. ಈ ಉದಾತ್ತ ಮಾದರಿಗಳ ಜಗತ್ತಿನಲ್ಲಿ ಡಾ. ಅಂಬೇಡ್ಕರ್‌ ಅವರನ್ನು ದಾಟಿ ನಮಗೆ ಯಾರೂ ಕಾಣುತ್ತಲೂ ಇಲ್ಲ. ಇದನ್ನು ನಿಭಾಯಿಸುವುದು ಹೇಗೆ ? ನಾ ದಿವಾಕರ, ಚಿಂತಕರು.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಅವರ ಮೇಲೆ ಕಲಾಪದ ವೇಳೆಯಲ್ಲೇ  ರಾಕೇಶ್‌ ಕಿಶೋರ್‌ ಎಂಬ ವಕೀಲರು ನಡೆಸಿರುವ ದಾಳಿ ಈಗ ಬಹುಚರ್ಚಿತ ವಿಷಯವಾಗಿರುವುದು ಸಹಜವೇ. ಮಾಧ್ಯಮಗಳ ವರದಿಗಳಲ್ಲೇ ಹಲವು ವ್ಯತ್ಯಯಗಳು ಎದ್ದು ಕಾಣುತ್ತಿದ್ದರೂ, ವಕೀಲ ರಾಕೇಶ್‌ ಕಿಶೋರ್‌ ನ್ಯಾಯಾಧೀಶರತ್ತ ಶೂ ಎಸೆದಿರುವುದು, ʼಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲʼ ಎಂದು ಘೋಷಿಸಿರುವುದು ವಾಸ್ತವ. ಕೆಲವು ಮಾಧ್ಯಮ ವರದಿಗಳಲ್ಲಿ ಶೂ ಎಸೆಯಲಾಗಿದೆ ಎಂದೇ ವರದಿಯಾಗಿದೆ.

ಈ ವಾಸ್ತವಿಕ – ತಾಂತ್ರಿಕ ವಿಷಯಗಳಿಂದಾಚೆ ಬಾರ್‌ ಕೌನ್ಸಿಲ್‌ ಸದಸ್ಯತ್ವದ ಗುರುತಿನ ಚೀಟಿ ಮತ್ತು ಸುಪ್ರೀಂಕೋರ್ಟ್‌ ಬಾರ್‌ ಸಂಘಟನೆಯ (SBCA)  ತಾತ್ಕಾಲಿಕ ಸದಸ್ಯತ್ವ  ಹೊಂದಿರುವ, 72 ವರ್ಷದ ಹಿರಿಯ ವಕೀಲರೊಬ್ಬರು ತಮ್ಮ ವೃತ್ತಿಪರತೆ-ವೃತ್ತಿಧರ್ಮವನ್ನೂ ಉಲ್ಲಂಘಿಸಿ ಈ ಕೃತ್ಯ ಎಸಗಿರುವುದು ಅಕ್ಷಮ್ಯ. ಮತ್ತೊಂದೆಡೆ ಬಾರ್‌ ಕೌನ್ಸಿಲ್‌ ಕೂಡಲೇ ವಕೀಲ ರಾಕೇಶ್‌ ಅವರ ಪರವಾನಗಿಯನ್ನು ರದ್ದುಪಡಿಸಿದ್ದು, ಅಮಾನತು ಆದೇಶ ಜಾರಿಗೊಳಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ಸಂವಿಧಾನವನ್ನೇ ಧಿಕ್ಕರಿಸುವ ಈ ಕೃತ್ಯದಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಬೇಕಿತ್ತಲ್ಲವೇ ? ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್‌ ಕಾನೂನು ಕ್ರಮವನ್ನು ಮುಂದುವರೆಸದೆ ಇರುವುದರಿಂದ, ಆರೋಪಿಯನ್ನು ಬಿಡುಗಡೆ ಮಾಡಿರುವುದಾಗಿ ವರದಿಯಾಗಿದೆ.

ತಮ್ಮ ಈ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದೇ ಹೇಳಿರುವ ರಾಕೇಶ್‌̧  ತಮ್ಮ ಬಂಧನದ ವೇಳೆ “ ಸನಾತನ ಧರ್ಮಕ್ಕೆ ಅಪಮಾನವಾಗುವುದನ್ನು ಸಹಿಸುವುದಿಲ್ಲ ” ಎಂದು ಹೇಳಿರುವುದು ಇಡೀ ಘಟನೆಯನ್ನು ತಕ್ಷಣದ ಖಂಡನೆ, ಪ್ರತಿಭಟನೆಗಳನ್ನೂ ದಾಟಿ ಪರಾಮರ್ಶಿಸಬೇಕಾದ ಅಗತ್ಯತೆಯನ್ನು ಸೃಷ್ಟಿಸಿದೆ. ಏಕೆಂದರೆ ಆರೋಪಿ ರಾಕೇಶ್‌ ಕಿಶೋರ್‌ ʼಸನಾತನ ಧರ್ಮದ ಹಿತರಕ್ಷಣೆʼ ಯ ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಘೋಷಣೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ʼ ಸನಾತನವಾದ ʼ ಎಂಬ ಚಾರಿತ್ರಿಕ-ಬೌದ್ಧಿಕ ಚಿಂತನಾ ಕ್ರಮವೂ, ಸಾಂಸ್ಕೃತಿಕ ರಾಜಕಾರಣದ ಅಂಗಳದಲ್ಲಿ ಹೇಗೆ ರಾಜಕೀಯ ಅಸ್ತ್ರವಾಗಿದೆ ಎಂದು ಅರ್ಥವಾಗುತ್ತದೆ.

ಪ್ರತಿಭಟನೆಗಳನ್ನು ದಾಟಿ ನೋಡಿದಾಗ

ಸಾರ್ವಜನಿಕ ಸಂಕಥನದಲ್ಲಿ, ಈ ದುಷ್ಕತ್ಯವನ್ನು ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ವ್ಯಕ್ತವಾದ ಹೇಳಿಕೆಗಳಲ್ಲಿ ಸಹಜವಾಗಿಯೇ ʼಸನಾತನಿ vs ಸಂವಿಧಾನ ʼ, ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದಿಂದ ʼ ದಲಿತ vs ಸನಾತನಿ ಅಥವಾ ಮನುವಾದಿ ʼ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ವ್ಯಕ್ತಿಗತ ನೆಲೆಯಲ್ಲಿ, ವ್ಯಕ್ತಿನಿಷ್ಠವಾಗಿ ನೋಡಿದಾಗ ಇದು ಒಪ್ಪುವಂತಹ ವ್ಯಾಖ್ಯಾನವೇ ಆದರೂ, ವಸ್ತುನಿಷ್ಠವಾಗಿ ನೋಡುವುದಾದರೆ, ಇಲ್ಲಿ ನಮಗೆ ಮುಖ್ಯವಾಗಿ ಕಾಣಬೇಕಿರುವುದು ಕೆಲವು ಗಂಭೀರ ಅಂಶಗಳು.

  1. ದಲಿತ ಸಮುದಾಯದ ವ್ಯಕ್ತಿ ದೇಶದ ಅತ್ಯುನ್ನತ ಹುದ್ದೆಯಲ್ಲಿರುವುದನ್ನು ಸಹಿಸದ ಒಂದು ಸಮಾಜ ನಮ್ಮ ನಡುವೆ ಇದೆ. ಇದು ಸಾಂದರ್ಭಿಕವಾಗಿ ಪ್ರತಿಕ್ರಿಯಿಸುತ್ತಿರುತ್ತದೆ.
  2. ಸನಾತನ ಧರ್ಮವನ್ನು ಕುರಿತು ವ್ಯಾಖ್ಯಾನ ಮಾಡುವುದನ್ನೇ ಘೋರ ಅಪರಾಧ ಎಂದು ಪರಿಭಾವಿಸುವ ಒಂದು ಸಾಂಪ್ರದಾಯಿಕ ಸಮಾಜ ಜೀವಂತವಾಗಿದೆ. ಇದು ರಾಜಕೀಯವಾಗಿಯೂ ಸಕ್ರಿಯವಾಗಿದೆ.
  • ಭಾರತೀಯ ಸಮಾಜದಲ್ಲಿ ನಿಧಾನವಾಗಿ ಬೇರೂರುತ್ತಿರುವ, ಈಗಾಗಲೇ ಆಳಕ್ಕಿಳಿದಿರುವ ಜಾತಿ-ಮತ ದ್ವೇಷ, ಅಸಹನೆ ಮತ್ತು ಪ್ರಾಚೀನ ಭಾರತದ ಮರು ವ್ಯಾಖ್ಯಾನವನ್ನು ಸಹಿಸಿಕೊಳ್ಳದ ಬೌದ್ಧಿಕ ಮನಸ್ಥಿತಿ ಸಮಾಜದ ಎಲ್ಲ ಸ್ತರಗಳಿಗೂ ವ್ಯಾಪಿಸಿದೆ.
  • ಈ ಮನಸ್ಥಿತಿಗೆ ಕಾರಣವಾದ ಸೈದ್ಧಾಂತಿಕ ಬಲಪಂಥೀಯ ಚಿಂತನಾಧಾರೆಗಳು, ಸಾಂಸ್ಥೀಕರಣಗೊಳಿಸಲಾಗಿರುವ ಬೌದ್ಧಿಕ ವ್ಯಾಖ್ಯಾನಗಳು ಹಾಗೂ ರಾಜಕೀಕರಣಕ್ಕೊಳಗಾಗಿರುವ ಧರ್ಮ ಮತ್ತು ಸಂಸ್ಕೃತಿಯ ಸಂಕಥನಗಳು, ಅಸಹನೆಯನ್ನು ಹೆಚ್ಚಿಸುವ ಬಲವಾದ ವಿದ್ಯಮಾನಗಳಾಗಿವೆ.

ಈ ಮೂಲಭೂತ ಅಂಶಗಳನ್ನು ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕ ಚೌಕಟ್ಟಿನಲ್ಲಿ, ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಮರುವಿಮರ್ಶೆಗೆ ಒಳಪಡಿಸಬೇಕಾಗಿದೆ.

ಸನಾತನ ಧರ್ಮ-ಆಧುನಿಕತೆಯ ಸಂಘರ್ಷ

ಸನಾತನ ಧರ್ಮ ಮತ್ತು ಅದರ ಮೌಲ್ಯಗಳ ಬಗ್ಗೆ ಶತಮಾನಗಳಿಂದಲೂ ಭಿನ್ನ ವ್ಯಾಖ್ಯಾನ, ವಿಮರ್ಶೆ ಮತ್ತು ಪ್ರತಿರೋಧದ ಬೌದ್ಧಿಕ ಸಂಕಥನಗಳು ನಡೆಯುತ್ತಲೇ ಬಂದಿವೆ. 12ನೆ ಶತಮಾನದಿಂದ 20ನೆ ಶತಮಾನದವರೆಗೂ ಸನಾತನ ಧರ್ಮದ ಮೌಲ್ಯಗಳು  ಮರುವಿಮರ್ಶೆಗೊಳಪಡುತ್ತಲೇ ಬಂದಿದ್ದು, ಭಾರತೀಯ ವಿಚಾರಧಾರೆಯ ಒಂದು ಭಾಗವಾಗಿದೆ. ಈ ಪ್ರಜಾಸತ್ತಾತ್ಮಕ ಬೌದ್ಧಿಕ ಚಿಂತನ-ಮಂಥನದ ಮಾದರಿಯೇ ಭಾರತೀಯ ಸಮಾಜವನ್ನು ಹಾಗೂ ಇಲ್ಲಿನ ನೆಲಮೂಲ ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿರಿಸಿರುವುದು ವಾಸ್ತವ. ಹಾಗಾಗಿ ಸುಪ್ರೀಂಕೋರ್ಟ್‌ನಲ್ಲಿ ನಡೆದ ಘಟನೆಯನ್ನು ʼ ಸನಾತನಿ vs ಸಂವಿಧಾನ ʼ ಅಥವಾ ʼ ಮನುವಾದಿ vs ಸಂವಿಧಾನʼಎಂದು ವ್ಯಾಖ್ಯಾನಿಸುವುದು ಸನಾತನ ಮೌಲ್ಯಗಳು, ಮನುವಾದದ ತತ್ವಗಳು ಇವುಗಳನ್ನು ಸಂಕುಚಿತಗೊಳಿಸಿ, ನಿರ್ದಿಷ್ಟ ಘಟನೆಗಳಿಗೆ ಸೀಮಿತಗೊಳಿಸಿದಂತಾಗುತ್ತದೆ.

ಶೂ ಎಸೆದ ವಕೀಲ ರಾಕೇಶ್‌ ರೋಶನ್

ಈ ಘಟನೆಯ ಆರೋಪಿ ರಾಕೇಶ್‌ ಕಿಶೋರ್‌ ಚಿಂತನಾಧಾರೆಯನ್ನು ಸ್ವೀಕರಿಸುವ, ಸ್ವಾಗತಿಸುವ, ಸಮ್ಮತಿಸುವ ಸಮಾಜವೊಂದು ನಮ್ಮ ನಡುವೆ ಕ್ರಿಯಾಶೀಲವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತೀಯ ಸಮಾಜ ಎದುರಿಸುತ್ತಿರುವ ಬೌದ್ಧಿಕ ಸಂದಿಗ್ಧತೆ ಮತ್ತು ವೈರುಧ್ಯಗಳನ್ನು ಮರುವಿಮರ್ಶೆ ಮಾಡಲು ಸಾಧ್ಯವಾಗುತ್ತದೆ. ಕಳೆದ ಮೂರು ದಶಕಗಳಲ್ಲಿ ಉಲ್ಬಣಿಸಿರುವ ಮತೀಯವಾದ, ಮತ ದ್ವೇಷ, ಜಾತಿ ದ್ವೇಷ ಮತ್ತು ಕಳೆದ ಹತ್ತು ವರ್ಷಗಳಲ್ಲಿ ಈ ಮನೋಭಾವದ ರಾಜಕೀಯ-ಸಾಂಸ್ಕೃತಿಕ ಸಾಂಸ್ಥೀಕರಣದ ಪ್ರಕ್ರಿಯೆಗಳನ್ನು, ಸಾಂವಿಧಾನಿಕ ಮೌಲ್ಯಗಳ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡಬೇಕಿದೆ. ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ತಾಯಿ ಶ್ರೀಮತಿ ಕಮಲ್‌ತಾಯಿ ಗವಾಯಿ, ಆರೆಸ್ಸೆಸ್‌ ಸಂಘಟನೆಯ ಶತಮಾನೋತ್ಸವದ ಆಹ್ವಾನಿತ ಅತಿಥಿಯಾಗಿ, ಆಹ್ವಾನವನ್ನು ತಿರಸ್ಕರಿಸಿರುವುದು, ಅಂಬೇಡ್ಕರ್‌ ಭಾರತೀಯ ಸಮಾಜಕ್ಕೆ, ಮಹಿಳಾ ಸಮೂಹ ಮತ್ತು ತಳಸಮುದಾಯಗಳಿಗೆ ನೀಡಿರುವ ಆತ್ಮಸ್ಥೈರ್ಯದ ಸಂಕೇತವಾಗಿ ನೋಡಬೇಕಿದೆ

ಸಾಮಾಜಿಕ ವ್ಯಾಧಿಯ ಆಳ ವ್ಯಾಪ್ತಿ

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರತ್ತ ಶೂ ಎಸೆದ ಪ್ರಕರಣವನ್ನು, ಆಳವಾಗಿ ಬೇರೂರುತ್ತಿರುವ ದ್ವೇಷಾಸೂಯೆಗಳ ಸಾಂಸ್ಕೃತಿಕ ವ್ಯಸನ ಮತ್ತು ಸಾಮಾಜಿಕ ವ್ಯಾಧಿಯಾಗಿ (Social Malaise) ನೋಡಬೇಕಿದೆ. ಇದಕ್ಕೆ ಸಮರ್ಥವಾದ ಚಿಕಿತ್ಸಕರು ವರ್ತಮಾನದ ಭಾರತದಲ್ಲಿ ಕಾಣದೆ ಇರುವುದು ಒಪ್ಪಲೇಬೇಕಾದ ಸತ್ಯ. ಈ ಉದಾತ್ತ ಮಾದರಿಗಳ ಜಗತ್ತಿನಲ್ಲಿ ಡಾ. ಅಂಬೇಡ್ಕರ್‌ ಅವರನ್ನು ದಾಟಿ ನಮಗೆ ಯಾರೂ ಕಾಣುತ್ತಲೂ ಇಲ್ಲ. ಇದನ್ನು ನಿಭಾಯಿಸುವುದು ಹೇಗೆ ? ಗ್ರಾಂಥಿಕವಾಗಿ ಲಭ್ಯವಾಗುವ ಮಾರ್ಗದರ್ಶಿ ಸೂತ್ರಗಳು, ಪರಿಹಾರೋಪಾಯದ ಸಂಕಥನಗಳು, ಶಮನಕಾರಿ ತತ್ವಗಳು, ಸಮಾಜದ ನಿತ್ಯ ಬದುಕಿನಲ್ಲಿ ವೈಯಕ್ತಿಕವಾಗಿ, ಸಾಂಘಿಕವಾಗಿ, ಸಾಂಸ್ಥಿಕವಾಗಿ ಕಾಣದೆ ಹೋದಾಗ ಹೊಸ ತಲೆಮಾರಿನ ಯುವ ಸಮೂಹ, ವಿಶೇಷವಾಗಿ ಮಿಲೆನಿಯಂ ಯುವ ಜಗತ್ತು, ಅನ್ಯ ಮಾರ್ಗ ಕಾಣದೆ, ವ್ಯಾಪಕವಾಗಿ ಪ್ರಸರಣವಾಗುತ್ತಿರುವ ಸನಾತನ ಮೌಲ್ಯಗಳು, ಸಾಂಪ್ರದಾಯಿಕ ನಂಬಿಕೆಗಳು ಮತ್ತು ಪ್ರಾಚೀನ ಆಚರಣೆ-ವಿಧಿವಿಧಾನಗಳನ್ನೇ ಅನುಕರಿಸುತ್ತದೆ.

ಆರೆಸ್ಸಸ್‌ ಕಾರ್ಯಕ್ರಮದ ಆಮಂತ್ರಣ ನಿರಾಕರಿಸಿದ ಗವಾಯಿಯವರ ಅಮ್ಮ

ಕಳೆದ ಹತ್ತು ವರ್ಷಗಳಲ್ಲಿ ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ, ಹಿಂದೂ ಧರ್ಮದ ಸಾಂಪ್ರದಾಯಿಕತೆಯ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಂರಕ್ಷಣೆಯ ಚೌಕಟ್ಟಿನಲ್ಲಿ, ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರ ವಿರುದ್ಧ ಈ ರೀತಿಯ ಬೌದ್ಧಿಕ-ಭೌತಿಕ- ಸಾಂಕೇತಿಕ ದಾಳಿಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಪ್ರತಿಯಾಗಿ ದೇಶದ ಪುರೋಗಾಮಿ, ಜನಪರ ಮನಸ್ಸುಗಳು ಸಾರ್ವಜನಿಕವಾಗಿ ಪ್ರತಿಭಟಿಸುತ್ತಲೇ ಇವೆ. ಸಂವಿಧಾನ ವಿರೋಧ ಚಟುವಟಿಕೆಗಳ ವಿರುದ್ಧ ಉಗ್ರ ರಾಜ್ಯವ್ಯಾಪಿ ಹೋರಾಟಗಳೂ ನಡೆದಿವೆ. ಈ ಪ್ರತಿರೋಧಗಳು ಆ ಕ್ಷಣದ ಪ್ರತಿಕ್ರಿಯೆಗಳಾಗಿ, ಶೀಘ್ರವಾಗಿ ಸಾರ್ವಜನಿಕರ ನೆನಪಿನಿಂದ ದೂರವಾಗಿಬಿಡುತ್ತವೆ. ಮೂಲ ವಿವಾದ ಅಥವಾ ವಿಷಯವೂ ಸಹ ವಿಸ್ಮೃತಿಗೆ ಜಾರಿಬಿಡುತ್ತದೆ.

ಹೊಸ ಮಾದರಿಗಳ ಅಗತ್ಯತೆ

ಆದರೆ ಈ ದಾಳಿಯನ್ನು ನಡೆಸುವ ಮನಸ್ಥಿತಿಯಾಗಲೀ, ತಾತ್ವಿಕ ನೆಲೆಗಳಾಗಲೀ, ಸಾಂಸ್ಥಿಕ ರೂಪಗಳಾಗಲೀ ಬದಲಾಗುವುದಿಲ್ಲ. ಇದು ನಮ್ಮ ಮುಂದಿನ ಜಟಿಲ ಸವಾಲು. ಹೊಸ ತಲೆಮಾರಿಗೆ ಈ ಪ್ರತಿರೋಧದ ಮೂಲ ಕಾರಣ ಮತ್ತು ಅದರ ಹಿಂದಿನ ಉದಾತ್ತ ಧ್ಯೇಯೋದ್ದೇಶಗಳನ್ನು ತಲುಪಿಸಬೇಕಾದರೆ, ನಾವು ಹೊಸ ಮಾದರಿಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳ ಕಾರ್ಯಕಾರಣ ಸಂಬಂಧಗಳನ್ನು ಹಾಗೂ ವರ್ತಮಾನದ ಸಮಾಜದ ತಿಳುವಳಿಕೆಯನ್ನು ಮರುವಿಮರ್ಶೆ ಮಾಡುವ ರೀತಿಯಲ್ಲಿ ಈ ಮಾದರಿಗಳನ್ನು ಸಿದ್ಧಪಡಿಸಬೇಕಿದೆ.

ಇದು ನಮ್ಮ ಭವಿಷ್ಯದ ಹಾದಿಯಾಗಬೇಕಿದೆ. ಸಂವಿಧಾನದ ರಕ್ಷಣೆ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯನ್ನೂ ಮೀರಿದಂತೆ, ಭಾರತದ ಸಮನ್ವಯ ಸಂಸ್ಕೃತಿಯನ್ನು ಭವಿಷ್ಯಕ್ಕೂ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಅತ್ಯವಶ್ಯವಾಗಿದೆ. ಇದಕ್ಕೆ ಬೇಕಾದ ಮಾನವ ಸಂಪನ್ಮೂಲಗಳು, ಬೌದ್ಧಿಕ ಸಂಪತ್ತು ಮತ್ತು ಜ್ಞಾನ ಭಂಡಾರ ನಮ್ಮಲ್ಲಿ ಹೇರಳವಾಗಿದೆ. ಆದರೆ ಇದನ್ನು ಬಳಸಿಕೊಳ್ಳಲು ಬೇಕಾದ ತಾತ್ವಿಕ ಐಕಮತ್ಯ ಮತ್ತು ಸೈದ್ಧಾಂತಿಕ ಐಕ್ಯತೆಯ ಕೊರತೆ ಅದನ್ನು ಮಸುಕಾಗಿಸುತ್ತಿದೆ.

ಈ ವ್ಯತ್ಯಯವನ್ನು, ಕೊರತೆಯನ್ನು ದಾಟಿ ಹೊರಬರುವುದು ವರ್ತಮಾನದ ಪುರೋಗಾಮಿ ಮನಸ್ಸುಗಳ ಆದ್ಯತೆಯಾಗಬೇಕಿದೆ. ಭವಿಷ್ಯದ ತಲೆಮಾರು ಮತ್ತು ಇತಿಹಾಸ ವರ್ತಮಾನದ ಹಿರಿಯ-ಪರಿಣತ ಸಮಾಜವನ್ನು ನೆನಪಿಡಬೇಕಾದರೆ ಇದು ಆಗಲೇಬೇಕಿದೆ. ಹಿರಿಯ ತಲೆಮಾರಿನ ಬೌದ್ಧಿಕ ಸಂಪತ್ತನ್ನು ಕಿರಿಯರಿಗೆ ವರ್ಗಾಯಿಸುವ ವಿಧಾನವನ್ನು ಮೀರಿ, ಈ ಹೊಸ ಚಿಂತನ-ಮಂಥನ ಮಾದರಿಯನ್ನು ರೂಪಿಸಬೇಕಿದೆ. ಆಗ ನಮಗೆ, ಯುವ ತಲೆಮಾರಿನ ಮನಸ್ಸಿನ ಹೊಯ್ದಾಟಗಳು, ಸಂದಿಗ್ಧತೆಗಳು ಮತ್ತು ಅಪಕಲ್ಪನೆಗಳು ಅರಿವಾಗುತ್ತವೆ. ಇದನ್ನು ಸರಿಪಡಿಸುವ ಹಾದಿಯಲ್ಲಿ ಸ್ವಾತಂತ್ರ್ಯದ ಪೂರ್ವಸೂರಿಗಳು ನೆರವಾಗುತ್ತಾರೆ. ಆದರೆ ವರ್ತಮಾನದ ಹೆಜ್ಜೆಗಳ, ಭವಿಷ್ಯದ ಗುರಿಯ ವಾರಸುದಾರರು ನಾವೇ ಆಗಿರುತ್ತೇವೆ. ಇದು ನಾವು ಗಂಭೀರವಾಗಿ ಯೋಚಿಸಬೇಕಾದ ಒಂದು ಕಾರ್ಯಸೂಚಿ.

ನಾ. ದಿವಾಕರ

ಚಿಂತಕರು.

More articles

Latest article