ಹತ್ತು ವರ್ಷ ಕಳೆದರೂ ಮುಗಿಯದ ಮಹಿಳೆ ಹತ್ಯೆ ಪ್ರಕರಣ: ನಂದಿನಿ ಲೇಔಟ್ ಪೊಲೀಸರ ನಿರ್ಲಕ್ಷ್ಯ!

Most read

ಕಳೆದ ಹತ್ತು ವರ್ಷದ ಹಿಂದೆ ನಡೆದ ಮಹಿಳೆಯೊಬ್ಬರ ಹತ್ಯೆ ಪ್ರಕರಣಕ್ಕೆ ಇಂದಿಗೂ ಮುಕ್ತಿ ನೀಡಿಲ್ಲದಿರುವ ಘಟನೆ ಬೆಂಗಳೂರಿನ ನಂದಿನ ಲೇಔಟ್ ಠಾಣೆಯಲ್ಲಿ ನಡೆದಿದೆ.  ನಮಗೆ ನ್ಯಾಯ ಸಿಗುತ್ತದೆ, ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಕಾಯುತ್ತ ಕುಳಿತಿರುವ ಕುಟುಂಬಕ್ಕೆ ಇಂದಿಗೂ ಸಹ ನ್ಯಾಯಕ್ಕಾಗಿ ಬೆಂಗಳೂರಿಗೂ ಚಿಕ್ಕಮಗಳೂರಿಗೂ ಅಲೆದಾಡುತ್ತಾ ಸುಸ್ತಾಗಿದ್ದಾರೆ.

ಬೆಂಗಳೂರಿನ ನಂದಿನಿ ಲೇಔಟ್  ಎಫ್.ಟಿ.ಐ. ಸರ್ಕಲ್‌ನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಫ್ಲೈಓವರ್ ಬಳಿ ಒಬ್ಬ ಹೆಂಗಸು ರಕ್ತದ ಮಡುವಿನಲ್ಲಿ ಮಕಾಡೆಯಾಗಿ ಸತ್ತು ಬಿದ್ದಿರುವುದು ಕಂಡು ಬಂದಿತ್ತು. ಯಾರೋ ಅಪರಿಚಿತರು ದಿನಾಂಕ 25/7/2014ರ ರಾತ್ರಿ ಯಾವುದೋ ಉದ್ದೇಶದಿಂದ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಹೆಂಗಸನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ತಿಮ್ಮರಾಯಿಗೌಡ ಎಂಬುವವರು ಅಂದೇ ದೂರು ನೀಡಿದ್ದರು.

26/7/2014 ರಂದು ಫಿರ್ಯಾದುದಾರರಾದ ತಿಮ್ಮರಾಯಿಗೌಡ ಬಿನ್ ಲೇಟ್ ಚಿಕ್ಕರಂಗಯ್ಯ, 45 ವರ್ಷ, ನಂ. 15/4, 1ನೇ ಮೈನ್, 2ನೇ ಕ್ರಾಸ್, 2ನೇ ಬ್ಲಾಕ್, ನಂದಿನಿ ಲೇಔಟ್, ಬೆಂಗಳೂರು. ದೂರು ನೀಡಿ ಈ ದಿನ ಬೆಳಿಗ್ಗೆ 8-00 ಗಂಟೆ ಸುಮಾರಿನಲ್ಲಿ ನಾನು ರಾಜ್ ಕುಮಾರ್ ಸಮಾಧಿ ಬಳಿ ನಡೆದು ಹೋಗುತ್ತಿದ್ದಾಗ ಶವ ಕಾಣಿಸಿರುವುದಾಗಿ ಈ ದೂರನ್ನು ದಾಖಲಿಸಿದ್ದಾರೆ.

ಸೂಕ್ತವಾಗಿ ತನಿಖೆ ನಡೆಸಿದಾಗ ಈ ಮೃತದೇಹವು ಚಿಕ್ಕಮಗಳೂರಿನ ಬೆಳವಾಡಿ ಗ್ರಾಮದ ಬಿಟಿ ನಾಗರಾಜ್ ಎಂಬುವವರ ಮಗಳಾಗಿದ್ದು ಅವರು ಬೆಳವಾಡಿ ಗ್ರಾಮದ ವಿನಯ್ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಯಾದ ದಿನದಿಂದ ಮಹಿಳೆಯ ಪತಿ ವಿನಯ್ ನಾಪತ್ತೆಯಾಗಿದ್ದು, ಮಹಿಳೆಯ ಕುಟುಂಬದವರು ವಿನಯ್ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ಸಹ ದಾಖಲಿಸಿದ್ದಾರೆ. ಆದರೆ ಅಲ್ಲಿಂದ ಇಲ್ಲಿವರೆಗೂ ಯಾವುದೇ ಹಂತದ ತನಿಖೆಯಾಗಿಲ್ಲ ಎಂಬುದು ಕುಟುಂಬಸ್ತರ ಅಳಲು.

ಈ ಕುರಿತು ಕುಟುಂಬ ಸದಸ್ಯೆಯಾಗಿರುವ ಮಮತ ಅವರು ಮಾತನಾಡಿ, 2014ರಲ್ಲಿ ನನ್ನ ಚಿಕ್ಕಪ್ಪನ ಮಗಳು ಕೊಲೆಯಾಗಿದ್ದಾರೆ. ಹತ್ತು ವರ್ಷದಲ್ಲಿ ಆರಂಭದಲ್ಲಿ ಮಾತ್ರ ಒಂದಷ್ಟು ತನಿಖೆ ಮಾಡಿ ಕೈಬಿಟ್ಟಿದ್ದಾರೆ. ಕೇಳಿದರೆ ಕೊಲೆ ಆರೋಪಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

2013ರಲ್ಲಿ ಚಿಕ್ಕಮಗಳೂರಿನ ಬೆಳವಾಡಿಯಲ್ಲಿರುವ ಚಿಕ್ಕಪ್ಪನ ಮಗಳು ಮತ್ತು ವಿನಯ್ ಇಬ್ಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ನನ್ನ ಚಿಕ್ಕಪ್ಪ ನಾಗರಾಜ್ ಅವರಿಗೆ ಹಣ ಮತ್ತು ಬೆಳ್ಳಿ ಚಿನ್ನ ಕೊಡಿ ಎಂದು ವಿನಯ್ ಪೀಡಿಸಿದ್ದಾನೆ. ನಂತರ ಇದೇ ಉದ್ದೇಶಕ್ಕೆ ಆತ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಈಗ ತನಿಖೆ ಎಲ್ಲಿಯವರೆಗೆ ಬಂತು ಎಂದು ಆರ್‌ಟಿಐ ಸಲ್ಲಿಸಿದ್ದು, ಮಾಹಿತಿ ನೀಡಿ ನೇರವಾಗಿ ಠಾಣೆಗೆ ಬಂದು ಸೂಕ್ತ ತನಿಖೆಯ ವಿಷಯದ ಮಾಹಿತಿ ಪಡೆದುಕೊಳ್ಳಬೇಕಾಗಿ ಕೋರಿದ್ದಾರೆ.  ಈಗ ಆರೋಪಿ ಹೈದರಾಬಾದ್‌ನಲ್ಲಿ ನೆಲೆಸಿರುವುದು ಕಂಡುಬಂದಿದ್ದು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಏನು ಮಾಡುತ್ತಾರೋ ಕಾದು ನೋಡಬೇಕು. ಆದರೆ ಹತ್ತು ವರ್ಷದಿಂದ ಈ ಪ್ರಕರಣವನ್ನು ನಂದಿನಿ ಲೇಔಟ್‌ ಪೊಲೀಸರು ನಿರ್ಲಕ್ಷಿಸಿದ್ದು ಬೇಸರ ತಂದಿದೆ ಎಂದು ಹೇಳಿದ್ದಾರೆ.

ಆದರೆ ಒಂದು ಕೊಲೆ ಪ್ರಕರಣವನ್ನು ತಾರ್ಕಿಕ ಅಂತ್ಯ ಮಾಡದೇ ಹತ್ತು ವರ್ಷಗಳ ಕಾಲ ಎಳೆದಾಡುತ್ತಿರುವುದು ಪೊಲೀಸ್ ಇಲಾಖೆಗೆ ಘನತೆಗೆ ಶೋಭೆ ತರುವಂತದಲ್ಲ ಎಂಬುದು ಮಾಧ್ಯಮದ ನಿಲುವು.

More articles

Latest article