ಕನ್ನಡ ಪ್ಲಾನೆಟ್ ವಿಶೇಷ ವರದಿ
ಬೆಂಗಳೂರು: ಶಾಲಾಮಕ್ಕಳ ಪಠ್ಯಪುಸ್ತಕಗಳು ಪ್ರತಿವರ್ಷ ಒಂದಿಲ್ಲೊಂದು ರೀತಿಯಲ್ಲಿ ವಿವಾದಕ್ಕೆ ಎಡೆಯಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಎಂಬ ಬಲಪಂಥೀಯ ಟ್ರಾಲರ್ ಕೈಗೆ ಪಠ್ಯಪುಸ್ತಕ ಪರಿಷ್ಕರಣೆಯ ಜವಾಬ್ದಾರಿ ನೀಡಿ ಆದ ಅವಾಂತರ ಮರೆಯುವ ಮುನ್ನವೇ ಈ ವರ್ಷದ ಪಠ್ಯಪುಸ್ತಕಗಳಲ್ಲಿ ತಪ್ಪುಗಳ ಸರಮಾಲೆ ಕಂಡುಬಂದಿದೆ.
ಕನ್ನಡ ಪ್ಲಾನೆಟ್ ಆರನೇ ತರಗತಿಯ ಸಿರಿ ಕನ್ನಡ, ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ (ಪರಿಷ್ಕೃತ 2024, ಭಾಗ-1) ಮುದ್ರಣಗೊಂಡಿರುವ ಒಂದು ಕವಿತೆಯಲ್ಲಿ ಆಗಿರುವ ದೋಷಗಳನ್ನು ಮುಂದಿಡುತ್ತಿದೆ. ಉಳಿದ ಪುಟಗಳಲ್ಲಿ ಇನ್ನೆಷ್ಟು ತಪ್ಪುಗಳಾಗಿರಬಹುದು ಎಂದು ಯಾರಾದರೂ ಊಹಿಸಬಹುದಾಗಿದೆ.
ಈ ಪಠ್ಯಪುಸ್ತಕದ 55, 56ನೇ ಪುಟಗಳಲ್ಲಿ ʻನೀ ಹೋದ ಮರುದಿನʼ ಎಂಬ ಕವಿ ಚೆನ್ನಣ್ಣ ವಾಲೀಕಾರ ಅವರ ಜನಪ್ರಿಯ ಕವಿತೆಯನ್ನು ಮುದ್ರಿಸಲಾಗಿದೆ. ಪದ್ಯದ ಎರಡನೇ ಸಾಲಿನಲ್ಲಿ ʻಆಗ್ಯಾದೋʼ ಆಗಿರಬೇಕಾದ ಶಬ್ದ ʻಹಾಗ್ಯಾದೋʼ ಆಗಿದೆ. ಮೊದಲ ಚರಣದ ಎರಡನೇ ಸಾಲಿನಲ್ಲಿ ʻದೇಕುವುದುʼ ಎಂಬ ಪದದ ಬದಲಿಗೆ ʻಕೇಕುವುದುʼ ಎಂದು ತಪ್ಪಾಗಿ ಬಳಸಲಾಗಿದೆ. ಅದೇ ಚರಣದ ಮೂರನೇ ಸಾಲಿನಲ್ಲಿ ʻಹೋದಲ್ಲʼ ಎಂಬ ಪದವಿದೆ, ಅದು ಹೋದಲ್ಲೆಲ್ಲ ಆಗಿರಬೇಕಿತ್ತು. ನಂತರದ ಸಾಲು ʻಉರಿ ಹಚ್ಚಿ ಬಿಡುತ್ತಾರೆ ಒಳಗೆʼ ಎಂದು ಮುದ್ರಿಸಲಾಗಿದೆ. ಅದು ʻ ಉರಿ ಹಚ್ಚಿ ಬಿಡುತ್ತಾರ ಒಳಗʼ ಆಗಬೇಕಿತ್ತು. ಇಲ್ಲಿ ಕವಿತೆಯಲ್ಲಿ ಬಳಸಿದ ಪ್ರಾಸವನ್ನೇ ಇಲ್ಲದಂತೆ ಮಾಡಲಾಗಿದೆ.
ಇನ್ನು ಕವಿತೆಯ ಕೊನೆಯ ಚರಣದ ಹಿಂದಿನ ಚರಣದಲ್ಲಿ ʻರೋಡಿಗಿದ್ದವರೆಲ್ಲʼ ಎಂಬ ಪದವನ್ನು ʻರೊಡಿಗಿದ್ದವರೆಲ್ಲʼ ಎಂದು ಬಳಸಲಾಗಿದೆ. ಈ ತಪ್ಪುಗಳ ಸರಣಿ ಇಲ್ಲಿಗೆ ಮುಗಿಯುವುದಿಲ್ಲ. ಕವಿಕೃತಿ ಪರಿಚಯದಲ್ಲೂ ಅದು ಆವರಿಸಿಕೊಂಡಿದೆ.
ಕವಿತೆ ಬರೆದಿರುವ ಚೆನ್ನಣ್ಣ ವಾಲೀಕಾರ ಅವರ ತಂದೆಯ ಹೆಸರು ಧೂಳಪ್ಪ. ಆದರೆ ಇಲ್ಲಿ ಅದು ಧಳಪ್ಪ ಆಗಿದೆ. ತಾಯಿಯ ಹೆಸರು ಸಾಬಮ್ಮ. ಆದರೆ ಅದು ಇಲ್ಲಿ ಸಾಬವ ಆಗಿದೆ. ಕೃತಿಗಳ ಹೆಸರುಗಳಲ್ಲಿ ರಾಶಿರಾಶಿ ತಪ್ಪುಗಳಿವೆ. ʻಮರದ ಮೇಲಿನ ಗಾಳಿʼ ಎಂಬ ಕೃತಿ ಇಲ್ಲಿ ʻಮರದ ನೀರಿನ ಗಾಳಿʼ ಎಂದು ಬರೆಯಲಾಗಿದೆ. ಪ್ಯಾಂಥರ್ ಪದ್ಯಗಳು ಇಲ್ಲಿ ಪ್ಯಾಂಥರ್ಸ್ ಪದ್ಯಗಳಾಗಿವೆ. ಚೆನ್ನಣ್ಣ ವಾಲೀಕಾರರ ವ್ಯೋಮಾವ್ಯೋಮ ಮಹಾಕಾವ್ಯದ ಹೆಸರನ್ನು ಇಲ್ಲಿ ವ್ಯೋಮ ವ್ಯೋಮ ಎಂದು ಬರೆಯಲಾಗಿದೆ. ʻಸುನೀತಗಳ ಸುಕಾವ್ಯಾಮೃತʼವನ್ನು ʻಸುನೀತಂಗಳ ಸುಖಾವ್ಯಾಮೃತʼ ಮಾಡಲಾಗಿದೆ. ವಾಲೀಕಾರರು ʻಅವಿವೇಕಿ ರಾಜ ಕಥೆʼ ಎಂಬ ನಾಟಕವನ್ನು ಬರೆದಿದ್ದಾರೆ. ವಿಶೇಷವೆಂದರೆ ಈ ಕೃತಿಯ ಹೆಸರನ್ನು ಸಾರಾಸಗಟಾಗಿ ಬದಲಾಯಿಸಿ ʻನರಭಕ್ಷಕ ರಾಜನ ಕಥೆʼ ಎಂದು ಮುದ್ರಿಸಲಾಗಿದೆ!
ನೀ ಹೋದ ಮರುದಿನ ಪದ್ಯವನ್ನು ಕಳೆದ ಐದು ವರ್ಷಗಳಿಂದ ಆರನೇ ತರಗತಿ ಪಠ್ಯದಲ್ಲಿ ಬೋಧಿಸಲಾಗುತ್ತಿದೆ. ಆದರೆ ಇಷ್ಟೊಂದು ತಪ್ಪುಗಳು ಹೇಗೆ ಉಳಿದವು? ಶಿಕ್ಷಕರು ಇಲ್ಲಿನ ತಪ್ಪುಗಳನ್ನೇ ಬೋಧಿಸುತ್ತಾ ಬಂದಿದ್ದಾರೆಯೇ? ಮಕ್ಕಳು ಹೀಗೆ ತಪ್ಪುತಪ್ಪಾಗಿ ಪದ್ಯವನ್ನು ಕಲಿಯಬೇಕೆ? ಪಠ್ಯಪುಸ್ತಕಗಳ ಮುದ್ರಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಕಿಂಚಿತ್ತಾದರೂ ಜವಾಬ್ದಾರಿ ಇದೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಕೊನೆಯದಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತಾದ ಪಠ್ಯದಲ್ಲೇ ಇಷ್ಟೊಂದು ತಪ್ಪುಗಳು ಕಾಣಿಸಿಕೊಂಡಿರುವುದು ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಎಂಬ ಗಂಭೀರ ಪ್ರಶ್ನೆಯೂ ಉದ್ಭವಿಸಿದೆ.