ಔಷಧಿಗಳ ಟೆಸ್ಟಿಂಗ್ ಸಮಯಕ್ಕೆ ಸರಿಯಾಗಿ ನಡೆಸಿ:ಸಚಿವ ದಿನೇಶ್ ಗುಂಡೂರಾವ್ ಸೂಚನೆ

Most read

ಬೆಂಗಳೂರು; ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ  ಬಾಣಂತಿಯರ ಸಾವಿಗೆ ಕಾರಣವಾಗಿರಬಹುದಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಐವಿ ದ್ರಾವಣದ 22 ಬ್ಯಾಚ್ ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಿ ಎಂದು ಸೂಚಿಸಿದರು.

ಈ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ 22 ಬ್ಯಾಚ್ ಗಳ NSQ ವರದಿಯಲ್ಲಿ 13 ಬ್ಯಾಚ್ ಗಳ ವರದಿ ಪ್ರಶ್ನಿಸಿ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬರೋಟಿರಿ ಮೆಟ್ಟಿಲೇರಿದ್ದಾರೆ. ಅದರಲ್ಲಿ 4 ಬ್ಯಾಚ್ ಗಳು ಗುಣಮಟ್ಟ ಹೊಂದಿವೆ ಎಂದು ಸೆಂಟ್ರಲ್ ಡ್ರಗ್ ಲ್ಯಾಬ್ ವರದಿ ನೀಡಿದೆ. ಅಲ್ಲದೇ 13 ಬ್ಯಾಚ್ ಗಳ ಬಗ್ಗೆ ಸೆಂಟ್ರಲ್ ಡ್ರಗ್ ಲ್ಯಾಬ್ ನಿಂದ ವರದಿ ಬರಬೇಕಿದೆ ಎಂದು ಸ್ಪಷ್ಟನೆ ನೀಡಿದರು. ಉಳಿದ 9 ಬ್ಯಾಚ್ ಗಳ ವಿಚಾರವಾಗಿ ಕಂಪನಿಯವರನ್ನ ಪ್ರಾಸಿಕ್ಯೂಷನ್ ಗೆ ಒಳಪಡಿಸಬಹುದಲ್ಲ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಅಲ್ಲದೇ ರಾಜ್ಯದ ಡ್ರಗ್ ಕಂಟ್ರೋಲ್ ಟೆಸ್ಟಿಂಗ್ ನಲ್ಲಿ NSQ ವರದಿ ಬಂದ ಮೇಲೆ ಸೆಂಟ್ರಲ್ ಡ್ರಗ್ ಲ್ಯಾಬ್ ನಲ್ಲಿ ಹೇಗೆ SQ ವರದಿ ಬರಲು ಸಾಧ್ಯ ಎಂಬುದರ ಕುರಿತು ಕುಲಂಕುಶವಾಗಿ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗೆ ಸಚಿವರು ಸೂಚನೆ ನೀಡಿದರು. ಸಮಯಕ್ಕೆ ಸರಿಯಾಗಿ ಔಷಧಿಗಳನ್ನ ಸೂಕ್ತ ರೀತಿಯಲ್ಲಿ ಟೆಸ್ಟಿಂಗ್ ನಡೆಸಿ.. ಜನರ ಜೀವದ ಜೊತೆ ಚೆಲ್ಲಾಟ ಆಡಬೇಡಿ.. ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಟೆಸ್ಟಿಂಗ್ ನಡೆಸುವ ಅಧಿಕಾರಿಗಳಿಗೆ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತರಾಟೆ ತೆಗೆದುಕೊಂಡರು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಐವಿ ದ್ರಾವಣ ಕೂಡ ಒಂದು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿಯ ವರದಿಗಳಿರುವಾಗ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳು ಏನು ಕ್ರಮ ವಹಿಸಿದ್ದಾರೆ. ಟೆಸ್ಟಿಂಗ್ ವರದಿಗಳನ್ನ ಶೀಘ್ರದಲ್ಲಿ ಕೊಡಬೇಕು. ಟೆಸ್ಟಿಂಗ್ ವರದಿಗಳನ್ನ ನೀಡಲು ವಿಳಂಭ ನೀತಿ ಏಕೆ. ಅಲ್ಲದೇ ಸೆಂಟ್ರಲ್ ಲ್ಯಾಬ್ ನಿಂದ ಕೂಡಾ ಟೆಸ್ಟಿಂಗ್ ವರದಿಗಳು ಬರುವುದು ವಿಳಂಭವಾಗುತ್ತಿರುವುದು ಏಕೆ.  ನಿಮಗೆ ಜವಾಬ್ದಾರಿ ಇಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಗರಂ ಆದರು.

ಐವಿ ರಿಂಗರ್ ಲ್ಯಾಕ್ಟೇಟ್ ನ 192 ಬ್ಯಾಚ್ ಗಳಲ್ಲಿ ಟೆಸ್ಟಿಂಗ್ ಗೆ ಬಾಕಿ ಇರುವ ಬ್ಯಾಚ್ ಗಳ ವರದಿ ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ತಾಕೀತು ಮಾಡಿದರು. ಅಲ್ಲದೇ NABL ಲ್ಯಾಬ್ ನಲ್ಲಿ 192 ಬ್ಯಾಚ್ ಗಳು ಐವಿ ದ್ರಾವಣ ಪಾಸಿಟಿವ್ ರಿಪೋರ್ಟ್ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಎಂದರು. ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ ವರದಿಯಲ್ಲಿ 22 ಬ್ಯಾಚ್ ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂದು ವರದಿಯಿದೆ. ಇದರಲ್ಲಿ ಸೆಂಟ್ರಲ್ ಲ್ಯಾಬ್ ನವರು 4 ಬ್ಯಾಚ್ ಗಳಿಗೆ ಮಾತ್ರ ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದ್ದಾರೆ. ಆದರೆ NABL ಲ್ಯಾಬ್ ನವರು 192 ಬ್ಯಾಚ್ ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿದೆ ಎಂದು ವರದಿ ನೀಡಿದ್ದಾರೆ. ಇದು ಹೇಗೆ ಸಾಧ್ಯ. ಈ ಬಗ್ಗೆ ಪರಿಶೀಲನೆ ನಡೆಸಿ. ಲ್ಯಾಬ್ ನವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಔಷಧಿ ಸರಬರಾಜು ನಿಗಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

More articles

Latest article