ಬೆಂಗಳೂರು: ಸೌಮ್ಯರೆಡ್ಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಖಚಿತ ಮಾತುಗಳನ್ನಾಡಿದರು.
ಬೊಮ್ಮನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದ ಭರ್ಜರಿ ರೋಡ್ ಶೋದಲ್ಲಿ ನೆರೆದಿದ್ದ ಹತ್ತು ಸಾವಿರಕ್ಕೂ ಅಧಿಕ ಜನಸಮುದಾಯದ ಸಮ್ಮುಖದಲ್ಲಿ ಮಾತನಾಡಿದ ಅವರು ಈ ಬಾರಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸೋಲಾಗುತ್ತದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ, ತೇಜಸ್ವಿಸೂರ್ಯ ಸೋಲಿಸಿ ಸೌಮ್ಯರೆಡ್ಡಿಗೆ ನ್ಯಾಯ ಕೊಡಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ಪದ್ಮನಾಭನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಕ್ತವಾದ ಭರ್ಜರಿ ಜನ ಬೆಂಬಲಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಸೌಮ್ಯರೆಡ್ಡಿ ಭಾರೀ ಅಂತರದಲ್ಲಿ ಗೆಲ್ಲುತ್ತಾರೆ. ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.