Sunday, September 8, 2024

ಸ್ತ್ರೀವಾದವನ್ನು ಬೋಧಿಸುವುದು ಪರಮ ಸಂಕಟದ ಕೆಲಸ

Most read

ಸ್ತ್ರೀವಾದವೆಂದಾಕ್ಷಣ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಬುದ್ಧಿ ಬಲಿಯದ ಜನರ ಮೆದುಳುಗಳಲ್ಲಿ ಬರುವುದು ಕೇವಲ ಇದೊಂದು ಪುರುಷ ವಿರೋಧಿ ಧ್ವನಿ ಅಥವಾ ಸ್ತ್ರೀ ವಾದಿಗಳೆಲ್ಲರೂ ಪುರುಷ ವಿರೋಧಿಗಳು ಎಂಬ ತಪ್ಪು ಕಲ್ಪನೆಗಳು ಮತ್ತು ಮೂರ್ಖ ಆಲೋಚನೆಗಳು ಮಾತ್ರ. ಇಂತಹದ್ದೇ ಆಲೋಚನೆಗಳಿದ್ದ ವಿದ್ಯಾರ್ಥಿಗಳಿಗೆ ನಾನು ಸಹಜವಾಗಿಯೇ ವಿಲನ್ ಆಗಿ ಕಾಣುವುದು ಸಹಜ – ಶೃಂಗಶ್ರೀ ಟಿ, ಉಪನ್ಯಾಸಕಿ.

ಶಿಕ್ಷಕಿಯಾಗಿ ಹಲವು ವಿದ್ಯಾರ್ಥಿಗಳಿಗೆ ನಾನು ಬಹಳ ಅಚ್ಚುಮೆಚ್ಚು. ಇನ್ನು ಕೆಲವರಿಗೆ ನಾನೊಬ್ಬಳು ಖಳನಾಯಕಿ. ವಿಲನ್ ಇದ್ದಹಾಗೆ. ಹಾಗಂತ ನಾನೇನು ಅವರನ್ನು ಹೊಡೆದದ್ದಾಗಲಿ ಸುಖಾ ಸುಮ್ಮನೆ ಬೈದು ಅವರನ್ನು ನಿಂದಿಸಿ ಹಿಂಸಿಸಿದಾಗಲಿ ಇಲ್ಲ. ಆದರೂ ಕೂಡ ನಾನಂತೂ ಕೆಲವರಿಗೆ ವಿಲನ್ ಮಾದರಿಯೇ. ಪೂರ್ಣವಾಗಿ ಓದಿ ತಿಳಿಯದ, ಸಮಾಜದ ಸ್ಥಿತಿಗತಿಗಳನ್ನ ಅರಿಯದ, ಇತಿಹಾಸವನ್ನ ಓದದ ಹೆಣ್ಣಿನ  ಸಂಕಟಗಳನ್ನ ಅರಿಯದ ವಿದ್ಯಾರ್ಥಿಗಳಿಗೆ ಸ್ತ್ರೀವಾದವನ್ನು ಬೋಧಿಸುವುದು ಪರಮ ಸಂಕಟದ ಕೆಲಸ. 

ಸ್ತ್ರೀವಾದವೆಂದರೆ ? ಶತಶತಮಾನಗಳಿಂದಲೂ ಕೂಡ ಹೆಣ್ಣನ್ನು ಇಂಚಿಂಚು ಹಿಂಸಿಸಿ, ಅಸ್ತಿತ್ವವೇ ಇಲ್ಲದಂತೆ ಮಾಡಿ, ಅವಳನ್ನ ಎಲ್ಲಾ ರೀತಿಯಲ್ಲೂ ಅಡಿಯಾಳನ್ನಾಗಿಸಿ ಶೋಷಿಸುವ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಹೆಣ್ಣಿನ ಸಮಾನತೆಗಾಗಿ  ಅವಳ ಸ್ವಾತಂತ್ರ್ಯಕ್ಕಾಗಿ ಉತ್ತಮ ಬದುಕಿಗಾಗಿ ಅವಳ ಹಕ್ಕುಗಳಿಗಾಗಿ ಹುಟ್ಟಿಕೊಂಡ ಹೋರಾಟ ಅಥವಾ ಚಳುವಳಿ ಎಂಬ ಸಾಮಾನ್ಯ ಜ್ಞಾನವೂ ಎಷ್ಟೋ ಜನರಿಗೆ ಇವತ್ತಿಗೂ ಬಂದಿಲ್ಲ.

ಆದರೆ ಸ್ತ್ರೀವಾದವೆಂದಾಕ್ಷಣ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಬುದ್ಧಿ ಬಲಿಯದ ಜನರ ಮೆದುಳುಗಳಲ್ಲಿ ಬರುವುದು ಕೇವಲ ಇದೊಂದು ಪುರುಷ ವಿರೋಧಿ ಧ್ವನಿ ಅಥವಾ ಸ್ತ್ರೀ ವಾದಿಗಳೆಲ್ಲರೂ ಪುರುಷ ವಿರೋಧಿಗಳು ಎಂಬ ತಪ್ಪು ಕಲ್ಪನೆಗಳು ಮತ್ತು ಮೂರ್ಖ ಆಲೋಚನೆಗಳು ಮಾತ್ರ. ಇಂತಹದ್ದೇ ಆಲೋಚನೆಗಳಿದ್ದ ವಿದ್ಯಾರ್ಥಿಗಳಿಗೆ ನಾನು ವಿಲನ್ ಆಗಿ ಕಾಣುವುದು ಸಹಜ. ಎಷ್ಟೋ ವಿದ್ಯಾರ್ಥಿಗಳು ನನ್ನನ್ನು ಕಂಡಾಕ್ಷಣ ಮಾತಾಡಿಸುವುದಿರಲಿ ಒಂದು ಸಣ್ಣ ನಗುವನ್ನು ಕೂಡ ನೀಡುವುದಿಲ್ಲ. ಇವೆಲ್ಲವೂ ಅವರ ತಪ್ಪುಗಳಲ್ಲ. ಅವರ ಗ್ರಹಿಕೆಯ ತಪ್ಪು. ಅವರೊಳಗಡೆ ಹುದುಗಿರುವ ಹುಟ್ಟಿನಿಂದಲೂ ಕೂಡ ಬೆಳೆಸಿಕೊಂಡು ಬಂದ ಆಚರಿಸಿಕೊಂಡು ಬಂದ ಪಿತೃ ಪ್ರಧಾನ ವ್ಯವಸ್ಥೆಯ ಅಹಮಿಕೆ, ದರ್ಪ ಮತ್ತು ಅಧಿಕಾರದ ನಡವಳಿಕೆಗಳೇ ಕಾರಣ. ಗಂಡೇ ಹೆಚ್ಚು ಬಲಶಾಲಿ, ಪರಾಕ್ರಮಿ, ವೀರ ಮತ್ತು ಅವನೇ ಶ್ರೇಷ್ಠ ಹೆಣ್ಣು ಕನಿಷ್ಠ ಎಂಬ ತಪ್ಪು ಕಲ್ಪನೆಗಳನ್ನ ಸೃಷ್ಟಿಸಿ ಅವರ ತಲೆಯಲ್ಲಿ ತುಂಬಲಾಗಿದೆ. 

ಹುಟ್ಟಿದ ಮಗುವಿನಿಂದಲೂ ಕೂಡ ಗಂಡು ಹೆಣ್ಣಿನ ನಡುವೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅಜಗಜಾಂತರ ವ್ಯತ್ಯಾಸಗಳನ್ನ ಸೃಷ್ಟಿಸಲಾಗಿದೆ. ಗಂಡಿಗೆ ತಂದುಕೊಡುವ ಆಟಿಕೆಗಳು ಕೇವಲ ಕ್ರಿಕೆಟ್ ಬ್ಯಾಟ್, ಬಾಲ್, ಜೀಪು, ಕಾರು, ಬಸ್, ಟ್ರಾಕ್ಟರ್, ಜೆಸಿಬಿ ನಂತಹ ಆಟಿಕೆಗಳು ಅದೇ ಹೆಣ್ಣಿಗೆ ಗೊಂಬೆ, ಅಡುಗೆ ಆಟಿಕೆಗಳು, ಮೇಕಪ್ ವಸ್ತುಗಳು ಇಂತಹವೇ. ಮಕ್ಕಳು ಮಾನಸಿಕವಾಗಿ ಜಗತ್ತು ಅರಿಯುವ ಮುನ್ನವೇ ಈ ಎಲ್ಲಾ ತಾರತಮ್ಯಗಳನ್ನ ರೂಢಿ ಮಾಡಿ ಕೊಂಡಿರುತ್ತಾರೆ. ಹಾಗಿದ್ದಾಗ ಗಂಡಿನ ಸ್ಥಾನವನ್ನ, ವಸ್ತುಗಳನ್ನ ಹೆಣ್ಣು ಬಳಸಿದಾಗ ಅಸಹಜವಾಗಿ ಕಾಣುವ, ಆವೇಶದಿಂದ ವರ್ತಿಸುವ ಸ್ಥಿತಿ ನಿರ್ಮಾಣವಾಗುತ್ತದೆ. 

ಚಿತ್ರ ಕೃಪೆ: ವಾಟ್ಸ್ಯಪ್

ಇಂಚಿಂಚು ಬಿಡಿಸಿ ಸ್ಪಷ್ಟವಾಗಿ ಸ್ತ್ರೀವಾದ ಎಂದರೇನು ?  ಅದು ಹುಟ್ಟಿಕೊಂಡ ಬಗೆ ಹೇಗೆ ?  ಅದರ ಮೂಲ ತತ್ತ್ವಗಳೇನು ? ಅದರ ಇತಿಹಾಸವೇನು ? ಉದ್ದೇಶಗಳೇನು ? ಅದರ ಕಾರ್ಯಗಳೇನು? ಎಂಬಿತ್ಯಾದಿಗಳ ಬಗೆಗೆ ವಿವರಿಸಿ ಹೇಳಿದರೂ ಕೂಡ ಅವರೊಳಗಿರುವ ಪುರುಷ ಕೇಂದ್ರಿತ ಚಿಂತನೆಗಳು ಇವುಗಳನ್ನು ಸಹಜವಾಗಿ ಪರಿಗಣಿಸುವಲ್ಲಿ ಅವರನ್ನು ತಡೆಯುತ್ತದೆ. 

ಹಾಗಾಗಿ ಸ್ತ್ರೀವಾದವನ್ನು ಬೋಧಿಸುವವರು, ಸ್ತ್ರೀ ಸಮಾನತೆಗಾಗಿ ಹೋರಾಡುವವರು, ಪುರುಷ ಅಹಂಕಾರವನ್ನು ಪ್ರಶ್ನಿಸುವವರು ಸಹಜವಾಗಿ ವಿಲನ್ ಗಳಾಗುತ್ತಾರೆ. ಆ ವಿಲನ್ ಗಳ ಪಟ್ಟಿಯಲ್ಲಿ ನಾನೂ ಒಬ್ಬಳು. ಇನ್ನು ಮುಂದುವರಿದು ಈ ಪುರುಷ ಪ್ರಧಾನ ವ್ಯವಸ್ಥೆಯ ಎಲ್ಲಾ ಕಟ್ಟುಪಾಡುಗಳನ್ನು ವಿರೋಧಿಸಿ ಮೆಟ್ಟಿನಿಂತು ತನ್ನದೇ ರೀತಿಯ ಸ್ವತಂತ್ರವಾದ ಬದುಕನ್ನ ಆರಿಸಿಕೊಂಡು ಬದುಕುವ, ಬಹಳ ಬೋಲ್ಡ್ ಆಗಿ ತನ್ನ ಲೈಂಗಿಕ ಆಸಕ್ತಿಗಳ, ಲೈಂಗಿಕ ಇಚ್ಛೆಗಳ, ಮದುವೆ, ಮಕ್ಕಳು, ಗಂಡ, ಪ್ರಿಯಕರ ಇವರುಗಳ ಬಗೆಗೆ ಬಹಳ ಮುಕ್ತವಾಗಿ ಬರೆಯುವಂತಹ ಲೇಖಕಿಯರ ಕಾವ್ಯಗಳನ್ನ ಪದ್ಯಗಳನ್ನ ಅವರು ಬರೆದ ಪುಸ್ತಕಗಳನ್ನ ವಿವರಿಸುವುದು ಬಹಳ ಕಷ್ಟ. ಉದಾಹರಣೆಗೆ ಕಮಲಾದಾಸ್ ರವರ ‘An Introduction’ ಅಥವಾ  ಪ್ರತಿಭಾನಂದ ಕುಮಾರ್ ಅವರ ಆತ್ಮಕತೆಯಾದ ‘ಅನುದಿನದ ಅಂತರಗಂಗೆ’ ಅಥವಾ ಮಹಾಶ್ವೇತಾ ದೇವಿ, ವೈದೇಹಿ, ಸಿಮೊನ್ ದ ಬೋವ,  ಕೇಟ್  ಮಿಲ್ಲೆಟ್,  ವರ್ಜಿನಿಯಾ ವೂಲ್ಫ್ , ಬೆಟ್ಟಿ ಫ್ರೀಡನ್ ಮುಂತಾದ ಸ್ತ್ರೀವಾದಿಗಳ ಬದುಕು ಬರವಣಿಗೆಗಳನ್ನು ಒಳಗಿಳಿಸಿ ಕೊಳ್ಳುವುದು, ಸಹಜವಾಗಿ ತೆಗೆದುಕೊಳ್ಳುವುದು ಸುಲಭದ ಮಾತಲ್ಲ.

 ಕಮಲಾ ದಾಸ್  ಅವರ ಇಂಗ್ಲಿಷ್ ನ ‘An Introduction’ ಪದ್ಯವನ್ನ ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಮುಖಭಾವಗಳಂತೂ ನೋಡುವ ಹಾಗಿರುವುದಿಲ್ಲ. ಗಂಡಿನಂತೆ ತಾನು ಕೂಡ  ಮದುವೆಯಾಗಿಯೂ ತನ್ನ ಗಂಡನಿಂದ ಪ್ರೀತಿ ಸಿಗದಿದ್ದಾಗ ಮತ್ತೊಬ್ಬ ಪ್ರಿಯಕರನಿಂದ ಪ್ರೀತಿ ಬಯಸುವ ಲೇಖಕಿಯ ಮನೋ ಇಂಗಿತವನ್ನು, ಬದುಕನ್ನು ಸಹಜವಾಗಿ ಸ್ವೀಕರಿಸುವುದಕ್ಕೆ ಸಾಧ್ಯವೇ ಇಲ್ಲ. ಕಾರಣ ಗಂಡಿಗೆ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಅವಕಾಶಗಳಿವೆ. ಅದೇ ಹೆಣ್ಣು ಗಂಡ ಸತ್ತಮೇಲೆ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡುವ, ವಿಧವೆಯಾಗಿಯೇ ಉಳಿಯಬೇಕೆಂಬ ಕಟ್ಟುಪಾಡುಗಳನ್ನ ಪಾಲಿಸಿಕೊಂಡು ಬಂದ ಸಂಸ್ಕೃತಿಯಲ್ಲವ ನಮ್ಮದು..?! 

ಲೇಖಕಿಯ ಲೈಂಗಿಕ ಕಿರುಕುಳದ ಅನುಭವಗಳನ್ನು ವಿವರಿಸುವಾಗಲಂತೂ ನಾನೇನೋ ಘೋರ ಅಪರಾಧ ಮಾಡಿರುವಂತೆ ಮಾಡುತ್ತಿದ್ದೇನೆಂಬಂತೆ ನನ್ನನ್ನ ನೋಡುವ ವಿದ್ಯಾರ್ಥಿಗಳಿಗೆ ನಾನು ಯಾವ ರೀತಿ ಕಾಣುತ್ತಿದ್ದೇನೋ ಗೊತ್ತಿಲ್ಲ. ಅವರಿಗಂತೂ ಉಸಿರು ಕಟ್ಟಿಸುವ ವಾತಾವರಣ. ನನಗೂ ಇವರಿಗೆಲ್ಲ ಇವೆಲ್ಲವನ್ನೂ ಅರ್ಥೈಸುವುದಾದರೂ ಹೇಗೆಂಬ ಸಂಕಟ. ಒಟ್ಟಿನಲ್ಲಿ ನಾನಂತೂ ಲೈಂಗಿಕತೆ, ಸ್ತ್ರೀವಾದ, ಸೆಕ್ಸ್, ಮದುವೆ, ಪ್ರೀತಿ, ಪ್ರೇಮ, ಮಕ್ಕಳು, ಹೆಣ್ಣಿನ ಸ್ವಾತಂತ್ರ್ಯ ಈ ವಿಚಾರಗಳ ಬಗೆಗೆ ಮುಕ್ತವಾಗಿ ಹೇಳುವಾಗ ಸಾಂಪ್ರದಾಯಿಕ ಪುರುಷ ಪ್ರಧಾನ ಮನಸ್ಥಿತಿಗಳಿಗೆ ವಿಲನ್ ನಂತೆ ಅಸಹಜವಾಗಿ, ವಿಚಿತ್ರ ಅನ್ಯಗ್ರಹ ಜೀವಿಯಂತೆ ಕಂಡದ್ದಂತು ಅಕ್ಷರಶಃ ಸತ್ಯ. 

ಮೊದಲಿನಿಂದಲೂ ಸೆಕ್ಸ್, ಪ್ರೀತಿ, ಪ್ರೇಮ, ಪ್ರಣಯ, ಪೀರಿಯಡ್, ಲೈಂಗಿಕ ಆಸಕ್ತಿ ಮತ್ತು ಲೈಂಗಿಕ ಸ್ವಾತಂತ್ರ್ಯ ಈ ವಿಷಯಗಳ ಬಗ್ಗೆ ಮಾತಾಡುವುದು ಅಕ್ಷಮ್ಯ ಅಪರಾಧ ಎಂದು ಅದರ ಬಗೆಗೆ ಮಾತನಾಡುವುದು ನಿಷೇಧ ಅಥವಾ ಟ್ಯಾಬೂ ಟಾಪಿಕ್ ನಂತೆ ಬಿಂಬಿಸಿರುವ ಸಮಾಜದಲ್ಲಿ ಇವೆಲ್ಲದರ ಬಗೆಗೆ ಮುಕ್ತವಾಗಿ ವಿವರಿಸಿದಾಗ ಅಥವಾ ಮಾತನಾಡಿದರೂ ಸಹ ತಪ್ಪಾಗಿಯೇ ಕಾಣುತ್ತದೆ. 

ಪ್ರತಿ ತರಗತಿಯಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ತನ್ನಿಷ್ಟದಂತೆ ಮದುವೆಯಾಗುವ ತನ್ನಿಷ್ಟದವನನ್ನ ಆರಿಸಿಕೊಳ್ಳುವ, ಪೀರಿಯಡ್ಸ್ ನ ಸಮಯದಲ್ಲಿ ಪಾಲಿಸುವ ಸಾಂಪ್ರದಾಯಿಕ ಆಚರಣೆಗಳನ್ನ ಪ್ರಶ್ನಿಸುವುದನ್ನ,  ಕೆಲಸ ಬದುಕು ಮದುವೆ ಮಕ್ಕಳು ಈ ಎಲ್ಲಾ ವಿಚಾರಗಳಲ್ಲಿ  ಹೆಣ್ಣನ್ನ ನಿರ್ಬಂಧಿಸುವುದರ ಬಗೆಗೆ ಪ್ರಶ್ನಿಸಿ ಸುಲಭವಾಗಿ ಒಪ್ಪಿಕೊಳ್ಳಬೇಡಿರಿ ಎಂಬುದನ್ನ ತಾಕೀತು ಮಾಡುವಾಗಲಂತೂ ನಾನು ಪಕ್ಕಾ ಪುರುಷ ವಿರೋಧಿಯೇ ಎಂದು ತೀರ್ಮಾನಕ್ಕೆ ಬರುತ್ತಾರೆ. ಅದೇ ವಿಷಯಗಳಿಗೆ ನನ್ನ ಮತ್ತು ನನ್ನ ವಿದ್ಯಾರ್ಥಿಗಳ ನಡುವೆ ಎಷ್ಟೋ ಬಾರಿ ವಾದಗಳು ಆಗಿರುವ ನಿದರ್ಶನಗಳಿವೆ. 

ಚಿತ್ರ ಕೃಪೆ: ವಾಟ್ಸ್ಯಾಪ್

ಸ್ರ್ತೀ ಸಮಾನತೆ, ಅವಳಿಚ್ಛೆಯ ಬದುಕು, ಅವಳ ಸ್ವಾತಂತ್ರ್ಯ, ಹಕ್ಕು ಅಂದಾಗಲೆಲ್ಲಾ ಎಷ್ಟೋ ವಿದ್ಯಾರ್ಥಿಗಳು “ಹಾಗಾದರೆ ನಾವು ಮನೇಲಿ ಕೂರ್ತಿವಿ, ಹುಡುಗಿಯರೇ ಹೋಗಿ ದುಡುಕೊಂಡ್ ಬರ್ಲಿ. ಅವರಿಗೆ ಕೊಟ್ಟ ಸ್ವಾತಂತ್ರ್ಯ ಜಾಸ್ತಿ ಆಗಿದೆ. ಹುಡಿಗೀರು ಹುಡುಗರಿಗಿಂತ ಜಾಸ್ತಿ ಕುಡಿಯೋದು ಸೇದೋದು ಎಲ್ಲಾ ಮಾಡ್ತಾರೆ. ದಿನಕ್ಕ್ ಒಬ್ಬನ್ನ ಲವ್ ಮಾಡಿ ಕೈ ಕೊಡ್ತಾರೆ. ತುಂಡ್ ತುಂಡ್ ಬಟ್ಟೆ ಹಾಕಂಡು ನಮ್ ಸಂಸ್ಕೃತಿ ಹಾಳ್ ಮಾಡ್ತಾರೆ ಈ ಜೀನ್ಸ್ ಪ್ಯಾಂಟ್ ಈ ಹುಡುಗೀರು ಹಾಕಂಡ್ ಮೇಲೆಯೇ ಜಾಸ್ತಿ ರೇಟ್ ಆಯ್ತು ಮೇಡಮ್” ಅಂತ ಇನ್ನೂ ಏನೋನೊ ತಮ್ಮ ತಲೆಗೆ ಬಂದ ವಾದಗಳನ್ನ ಮಂಡಿಸ್ತಾರೆ. 

ಅವರು ಕುಡಿಬೋದು, ಸಿಗರೇಟು ಸೇದ್ಬೋದು. ಅದೇ ಹುಡುಗಿಯರು ಮಾಡಿದ್ರೆ ಅದು ಘೋರ ಪಾಪ, ಅವರು ಫ್ಯಾಷನ್ ಅಂತ ಹರಿದ ಬಟ್ಟೆಗಳನ್ನ ಹಾಕ್ಬೋದು. ಅದೇ ಹೆಣ್ಣು ಮಕ್ಕಳು ಹಾಕೋ ಹಾಗಿಲ್ಲ. ಅವರು ಪಾರ್ಟಿ ಪಬ್ ಅಂತೆಲ್ಲಾ ಹೋಗ್ಬೋದು. ಅದೇ ಹೆಣ್ಣು ಹೋಗೊದಕ್ಕೆ ಒಪ್ಪುವುದಿಲ್ಲ. ಇವೆಲ್ಲವೂ ಮತ್ತೆ ಅದೇ ಪುರುಷ ಕೇಂದ್ರಿತ ಚಿಂತನೆಗಳೇ. ಅವುಗಳನ್ನು ಎಷ್ಟೇ ಬದಲಾಯಿಸಲು ಅರ್ಥೈಸಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. 

ಇನ್ನು ಕೆಲವೊಮ್ಮೆ ಜೆಂಡರ್ ಸ್ಟಡೀಸ್‌ಗಳ ಬಗೆಗೆ ಪೀರಿಯಡ್, ಸೆಕ್ಸ್, ಮದುವೆ, ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಮುಕ್ತವಾಗಿ ವಿವರಿಸುವಾಗ, ಮಾತಾಡುವಾಗ ಸ್ವಲ್ಪವೂ ಸೂಕ್ಷ್ಮತೆ ಇಲ್ಲದವಳಂತೆ ಅಸಹಜವಾಗಿ  ಕಾಣಿಸುವ, ಬಹಳ ನೆಗೆಟಿವ್ ಆಗಿ ಕಾಣುವ ತಾಪತ್ರಯಗಳು ಹೆಚ್ಚಿವೆ. ಕಾಲಕ್ರಮೇಣ ಜಗತ್ತು ಬದಲಾದಂತೆ. ಸೈನ್ಸ್, ಟೆಕ್ನಾಲಜಿ ಮುಂದುವರಿದು ಹೆಣ್ಣಿನ ಬದುಕಿನ ಸ್ಥಿತಿ ಸಂಪೂರ್ಣವಲ್ಲದಿದ್ದರೂ ಬದಲಾಗಿದೆ. ಆದರೆ ಎಷ್ಟು ಮಂದಿ ಈ ಎಲ್ಲಾ ಬದಲಾವಣೆಗಳನ್ನ ಸಂಪೂರ್ಣವಾಗಿ ಒಪ್ಪಿದ್ದಾರೆ ?

ಇವೆಲ್ಲ ವಿರೋಧಗಳನ್ನ ಸ್ವೀಕರಿಸಿ ಸ್ತ್ರೀವಾದ ಮತ್ತು ಅದರ ವಿವಿಧ ರೂಪಗಳನ್ನು ವಿವರಿಸುವುದು ಭೋದಿಸುವುದು ಹುಟ್ಟಿದಾಗಿನಿಂದಲೂ ರೂಢಿಸಿಕೊಂಡು ಬಂದ ಪಿತೃ ಪ್ರಧಾನ ಗುಣಗಳನ್ನ ಕಿತ್ತೊಗೆಯುವುದು ತೀರ ತ್ರಾಸದಾಯಕ ಕೆಲಸವಂತೂ ಹೌದು.

ಶೃಂಗಶ್ರೀ ಟಿ

ಅತಿಥಿ ಉಪನ್ಯಾಸಕಿ, ಶಿವಮೊಗ್ಗ

ಇದನ್ನೂ ಓದಿ- ಹೆಣ್ಮಕ್ಳು ಒಳ ಉಡುಪುಗಳನ್ನು ಎಲ್ಲರಿಗೂ ಕಾಣುವಂತೆ ಒಣಗಿಸ್ಬೇಕಾ? ಒಣಗಿಸ್ಬಾರ್ದಾ?



More articles

Latest article