ಮುಳಬಾಗಲು: ಶಿಕ್ಷಕಿಯ ಕತ್ತು ಕೊಯ್ದು ಭೀಕರವಾಗಿ ಕೊಲೆಗೈದಿದ್ದ ಎಲ್ಲ ಆರೋಪಿಗಳನ್ನು ಕೋಲಾರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 14 ರಂದು ಸಂಜೆ ಶಿಕ್ಷಕಿ ದಿವ್ಯಶ್ರೀ (43) ಕೊಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಸುಂಕೂ ಲೇಔಟ್ ನಲ್ಲಿ ನಡೆದ ಈ ಘಟನೆಯಿಂದ ಮುಳಬಾಗಲು ಮಾತ್ರವಲ್ಲದೆ ಇಡೀ ಕೋಲಾರ ಜಿಲ್ಲೆ ಬೆಚ್ಚಿಬಿದ್ದಿತ್ತು.
ಮೃತ ದಿವ್ಯಶ್ರೀ ವಾಸವಿದ್ದ ಮನೆಯನ್ನೇ ಬರೆದುಕೊಡುವಂತೆ ಬೆದರಿಕೆ ಹಾಕಿದ್ದ ಆರೋಪಿಗಳು ಆಕೆ ಒಪ್ಪದ ಹಿನ್ನೆಲೆಯಲ್ಲಿ ಕೊಲೆಗೈದಿದ್ದರು.
ಮಾಸ್ಟರ್ ಮೈಂಡ್ ತಿರುಮನಹಳ್ಳಿ ರಂಜಿತ್, ಕೊಂಡೇನಹಳ್ಳಿ ಯುವರಾಜ್, ನಂಗಲಿ ಷಾಹಿದ್ ಪಾಷ ಸೇರಿದಂತೆ 4 ಜನ ಬಾಲಕರನ್ನು ಬಂಧಿಸಿದ್ದಾರೆ.
ಆಗಸ್ಟ್ 14 ರಂದು ಸಂಜೆ ಮನೆಗೆ ತೆರಳಿದ್ದ ಆರೋಪಿಗಳು ಶಿಕ್ಷಕಿಯ ಮನೆಯನ್ನೇ ಬರೆದುಕೊಡುವಂತೆ ಬೆದರಿಕೆಯೊಡ್ಡಿದ್ದರು. ಸಿನಿಮಾ ಸ್ಟೈಲ್ ನಲ್ಲಿ ಮನೆ ಕಬ್ಜಾ ಮಾಡಲು ಹೋದ ಯುವಕರು ಕೊನೆಗೆ ಶಿಕ್ಷಕಿಯನ್ನು ದಾರುಣವಾಗಿ ಸಾಯಿಸಿದ್ದರು.
ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಮಾರ್ಗದರ್ಶನದಲ್ಲಿ ಅಪರ ರಕ್ಷಣಾಧಿಕಾರಿ ಜಗದೀಶ್ ರವಿಶಂಕರ್, ಡಿಎಸ್ಪಿ ನಂದಕುಮಾರ್ ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವರದಿ: ಸಾಯಿನಾಥ್ ದರ್ಗಾ