ಬೆಂಕಿ ಕುಲುಮೆಯಲ್ಲಿ ಅರಳಿದ ರುದ್ರಕಾವ್ಯ..

Most read

ಒಂದು ಸಿನಿಮಾದ  ಒಟ್ಟಾರೆ ಗುರಿಯೇ ಪ್ರೇಕ್ಷಕರಿಗೆ ಮನರಂಜನೆ ಕೊಡುವುದು, ಅಲ್ಲೊಂದಿಲೊಂದು ಸಂದೇಶ ದಾಟಿಸುವುದು, ಟೈಮ್-ಪಾಸ್ʼಗೆ ಮಸಾಲೆಬೆರೆತ ಕಥೆ ಹೇಳುವುದು ಇದಿಷ್ಟೇ ಆಗಿ ಹೋಗಿರುವ ಕಾಲದೊಳಗೆ, ತಳಸಮುದಾಯಗಳ ಚಿತ್ರಗಳ ಜೊತೆಗೇ ಗುರುತಿಸಿಕೊಂಡು ಬಂದಿರುವ ನಿರ್ದೇಶಕ ಪಾ. ರಂಜಿತ್ ಇವೆಲ್ಲವುಗಳ ಆಚೆಗಿನ ಒಂದು ಅದ್ಭುತ ಸಾಧ್ಯತೆಯೊಂದನ್ನು ಶೋಧಿಸಿಕೊಂಡಿದ್ದಾರೆ. ಅದರ ಪ್ರತಿಫಲವೇ ರಂಜಿತ್ʼರ ಹೊಸ ಚಿತ್ರ ತಂಗಳಾನ್.

ರಂಜಿತ್  ಹುಡುಕಿಕೊಂಡಿರುವ ಈ ಹೊಸ ಕಥೆ ಹೇಳುವ ಮಾದರಿ ಸುಲಭಕ್ಕೆ ಕೈಗೆ ಸಿಗುವಂಥದ್ದಲ್ಲ ಇಂಡಿಯಾದಂಥ ದೇಶದಲ್ಲಿ ಚರಿತ್ರೆ ಎಂಬುದು ಹೊಟ್ಟೆ ತುಂಬಿದ ಪಂಡಿತರು ರಾಜ-ಮಹಾರಾಜರನ್ನು, ಅವರ ಶೌರ್ಯ ಪರಾಕ್ರಮಗಳನ್ನು ಹೊಗಳಲೆಂದೇ ಜೋಡಿಸಿಟ್ಟ ಒಂದು ಮೇಲ್ ಸಾಮಾಜಿಕ ವರ್ಗದ ಚಲನವಲನಗಳ ದಾಖಲು ಪ್ರಕ್ರಿಯೆ. ಒಂದಾನೊಂದು ಊರಲ್ಲಿ ಒಬ್ಬ ರಾಜ ಇದ್ದ ಅಂತಲೇ ಶುರುವಾಗುವ ಇವರ ಚರಿತ್ರೆಯ ಕಥೆಗಳಲ್ಲಿ ಹುಡುಕಿದರೂ ನೆಲಮೂಲ ಸಂಸ್ಕೃತಿ, ಶ್ರಮಿಕ ಜಾತಿ-ವರ್ಗ-ಕುಲಗಳ ಪ್ರಸ್ತಾಪವು ಗುಲಗಂಜಿಯಷ್ಟೂ ಸಿಗುವುದಿಲ್ಲ. ಅಕ್ಷರ ಲೋಕದಿಂದಲೇ ಬಹಿಷ್ಕರಿಸಲ್ಪಟ್ಟವರು, ತಮ್ಮ ಮೇಲಾದ ದಬ್ಬಾಳಿಕೆ-ಅನ್ಯಾಯಗಳನ್ನು ಬರೆದಿಡಲೂ ಬಾರದೇ ಮೌಖಿಕ ಜನಪದ ಪರಂಪರಗಳಲ್ಲಿ ತಮ್ಮ ಬದುಕನ್ನು ಅಷ್ಟಿಷ್ಟು ದಾಖಲಿಸಿ ಹೋಗಿದ್ದಾರೆ. ಬಲಾಢ್ಯರು ರಚಿಸಿದ ಚರಿತ್ರೆಯಲ್ಲಿ ತಳಸಮುದಾಯಕ್ಕೆ ಒಂದೆರಡು ಸಾಲುಗಳಷ್ಟೂ ಜಾಗ ಕೊಡಲಾಗಿಲ್ಲ. ನಿರ್ದೇಶಕ ಪಾ. ರಂಜಿತ್ ತಂಗಳಾನ್ ಚಿತ್ರದಲ್ಲಿ ಕೈಯಿಟ್ಟಿರುವುದು ಇದೇ ʼಚರಿತ್ರೆಯಿಂದ ಅಳಿಸಿಹಾಕಲ್ಪಟ್ಟ ಕುಲಗಳʼ ದಾಖಲಾಗದ ಕಥೆಗೆ.

ನಮ್ಮ ಕನ್ನಡನಾಡಿನ ಕೆಜಿಎಫ್ ಚಿನ್ನದ ಗಣಿಯ ಬಗ್ಗೆ ಗಂಧದ ನಾಡು-ಚಿನ್ನದ ಬೀಡು ಎಂದೆಲ್ಲ ಹಾಡಿ ಹೊಗಳುವ ಸಂಪ್ರದಾಯವಿದೆ., ಆ ಚಿನ್ನದ ಬೀಡು ಕೆಜಿಎಫ್ʼನಲ್ಲಿ ಸಾವಿರಾರು ಟನ್ ಚಿನ್ನ ಪತ್ತೆ ಹಚ್ಚಿ, ಚಿನ್ನ ಹೆಕ್ಕಿ ತೆಗೆದು, ಜ್ಯೂವೆಲ್ ಇಂಡಸ್ಟ್ರಿ ಮೂಲಕ  ಮನೆ ಮನೆಗೆ ತಲುಪಿದ ಚಿನ್ನದ ಈ ಪ್ರಯಾಣದಲ್ಲಿ ಜೀವತೆತ್ತ ದಲಿತ ಗಣಿಕೂಲಿಗಳ ಅಸಲಿ ಮೂಲಕಥೆ ಹೇಳುತ್ತಾರೆ ಪಾ. ರಂಜಿತ್. ಒಂದು ಲೆಕ್ಕದಲ್ಲಿ ಇದು ನಮ್ಮದೇ ಕೋಲಾರದ ಕೆಜಿಎಫ್ʼನ ಗಣಿಗಳ ಚಿನ್ನದ ಕೆಳಗೆ ಹರಿದ ದಲಿತರ ಮೈಯ ರಕ್ತದ ಕಥೆ.

ಕಥೆಯೇನೋ ತುಂಬ ಸರಳ. ತಮಿಳುನಾಡಿನ ಉತ್ತರ ಅರ್ಕಾಟ್ ಭಾಗದ ಕುಗ್ರಾಮದಲ್ಲಿ ತಂಗಳಾನ್ ಎಂಬ ಮಧ್ಯವಯಸ್ಕ ದಲಿತ ಹೆಂಡ್ತಿ ಮಕ್ಕಳೊಡನೆ ತನ್ನದೇ ಗೇಣಿಭೂಮಿಯಲ್ಲಿ ರೈತಕೂಲಿಯಾಗಿ ಬದುಕುತ್ತಿರುತ್ತಾನೆ. ತಂಗಳಾನ್ ಮತ್ತವನ ಜನರ ಮೇಲೆ ಅಲ್ಲಿನ ಭೂಮಾಲೀಕರು ನಡೆಸುತ್ತಿದ್ದ ಗೇಣಿ ಜೀತಗಾರಿಕೆಯಿಂದ ಬಿಡುಗಡೆ ಪಡೆಯಲು ಬ್ರಿಟಿಶ್ ಅಧಿಕಾರಿ ಕ್ಲೆಮೆಂಟ್ ಕೆಜಿಎಫ್ʼನಲ್ಲಿ ನಡೆಸಲು ಹೊರಟಿದ್ದ ಚಿನ್ನದ ಅದಿರಿನ ಹುಡುಕಾಟಕ್ಕೆ ಕೂಲಿಯಾಳಾಗಿ ತೆರಳುತ್ತಾನೆ. ಭೂಮಾಲೀಕರ ಬಾಯಿಂದ ತಪ್ಪಿಸಿಕೊಂಡು ಕ್ಲೆಮೆಂಟ್ ಕೈಕೆಳಗೆ ಕೆಲಸ ಮಾಡುವ ಕನ್ನಡದ ಶ್ಯಾನುಭೋಗನ ಕೈಗೆ ಸಿಕ್ಕಿ ಬೀಳುತ್ತಾನೆ. ತಂಗಳಾನ್ ಚಿನ್ನದ ಹುಡುಕಾಟದಲ್ಲಿ ಪಳಗಿದವನು ಎಂದರಿತ ಬ್ರಿಟಿಶ್ ಅಧಿಕಾರಿ ಕ್ಲೆಮೆಂಟ್ ಸಿಕ್ಕ ಚಿನ್ನದಲ್ಲಿ ಪಾಲು ಕೊಡುತ್ತೇನೆಂದು ತಂಗಳಾನ್ʼಗೆ ಮಾತು ಕೊಟ್ಟು, ಇನ್ನಷ್ಟು ಲೇಬರ್ಸ್ ಬೇಕಿದೆಯೆಂದು ತಮಿಳುನಾಡಿನ ಉತ್ತರ ಆರ್ಕಾಟ್ ಕುಗ್ರಾಮಗಳಿಂದ ಇನ್ನಷ್ಟು ಪರಯ ಜಾತಿಯ ದಲಿತ ಕೂಲಿಗಳನ್ನು ಮೈಸೂರು ರಾಜ್ಯದ ಕೆಜಿಎಫ್ʼಗೆ ಕರೆತರಿಸುತ್ತಾನೆ. ಕೆಜಿಎಫ್ʼನಲ್ಲಿ ಚಿನ್ನ ಹುಡುಕುವ ಸಾಹಸದ ಕೆಲಸಕ್ಕೆ ಬಂದ ತಂಗಳಾನ್ ಮತ್ತು ಅವನ ಸಂಗಡಿಗರು ಅಲ್ಲಿದ್ದ ಚಿನ್ನದ ನಿಕ್ಷೇಪವನ್ನು ಕಾಯುತ್ತಿದ್ದ ಆರತಿ ಎಂಬ ಬುಡಕಟ್ಟು ನಾಯಕಿಯ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಹೆಜ್ಜೆ ಹೆಜ್ಜೆಗೂ ಕಾಡುವ ಆರತಿ ಮತ್ತು ಚಿನ್ನ ಹುಡುಕುವಲ್ಲಿನ ಅಪಾಯಗಳ ನಡುವೆ ತಂಗಳಾನ್ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚುತ್ತಾನ? ಅದಕ್ಕೋಸ್ಕರ ಏನೆಲ್ಲ ದುರಂತಗಳನ್ನು ತಂಗಳಾನ್ ಹಾದು ಬರಬೇಕಾಗುತ್ತದೆ ಎಂಬುದು ತಂಗಳಾನ್ ಚಿತ್ರದ ಉಳಿದ ಕಥೆ.

ಈ ಪುಟ್ಟ ಕಥೆಯನ್ನು ಹೇಳಲು ನಿರ್ದೇಶಕ ಪಾ.ರಂಜಿತ್ ಮಾಯಾ ಸದೃಶ (ಮ್ಯಾಜಿಕಲ್ ರಿಯಲಿಸಂ) ಮಾದರಿಯೊಂದನ್ನು ಹುಡುಕಿಕೊಂಡು ಆ ಮಾದರಿಯೊಳಗೆ ಸಂಶೋಧನೆಗಳಿಂದ ದೊರೆತ ಆಕರಗಳನ್ನು ಬೆರೆಸಿ, ಈ ಮಾಂತ್ರಿಕ ವಿಧಾನದೊಳಗೆ ಕಥೆಯನ್ನು ಅದ್ದಿ ತೆಗೆದು ಮೈ ಜುಮ್ಮೆನ್ನಿಸುವ ರೀತಿಯಲ್ಲಿ ನಮ್ಮೆದುರು ಇಟ್ಟಿದ್ದಾರೆ. ಈ ಕಥೆಯೊಳಗೆ ತಂಗಳಾನ್ʼನ ಮುತ್ತಜ್ಜ ಕಾಡಯ್ಯ, ಆರನ್ ಎಂಬ ಜನಪದ ದೈವದ ಉಪಕಥೆಗಳಿವೆ, ಇವೆಲ್ಲವನ್ನೂ ಒಂದರೊಳಗೊಂದು ನೀರಲ್ಲಿ ಸಕ್ಕರೆ ಬೆರೆತಂತೆ ರಂಜಿತ್ ರೋಮಾಂಚನಾಕಾರಿಯಾಗಿ ಬೆಸೆದಿದ್ದಾರೆ. 18ನೇ ಶತಮಾನದ ಕಾಲಘಟ್ಟ, 5ನೇ ಶತಮಾನದ ಲ್ಯಾಂಡ್ ಗಾಡ್ಸ್ ಜೊತೆ ತಂಗಳಾನ್ ಕಥೆ ಕೈ ಹಿಡಿದು ಸಾಗುತ್ತದೆ. ತಂಗಳಾನ್ ಮತ್ತವನ ಮುತ್ತಜ್ಜ ಕಾಡಯ್ಯನಿಗೆ ದೆವ್ವದಂತೆ ಕಾಡುವ ಬುಡಕಟ್ಟು ನಾಯಕಿ ಆರತಿ ಇಡೀ ಚಿತ್ರಕ್ಕೆ ಅವರ್ಣನೀಯ ಮ್ಯಾಜಿಕಲ್ ರಿಯಲಿಸಂನ ಅನುಭವ ಕೊಟ್ಟಿದ್ದಾರೆ. 18ನೇ ಶತಮಾನದಲ್ಲಿ ದಲಿತರ ಮೇಲೆ ಮೇಲ್ಜಾತಿ-ವರ್ಗದ ಭೂಮಾಲೀಕರು ದೇಸೀ ಬ್ರಿಟಿಶ್ ಅಧಿಕಾರಿಗಳು ನಡೆಸುತ್ತಿದ್ದ ದಬ್ಬಾಳಿಕೆಯ ಇಂಚಿಂಚನ್ನೂ ಬಿಡದೆ ನಿರ್ದೇಶಕ ಪಾ. ರಂಜಿತ್ ಇಡೀ ಚಿತ್ರದಲ್ಲಿ ದಾಖಲಿಸುತ್ತಾರೆ. ದಲಿತ ಹೆಂಗಸರ ರವಿಕೆ ತೊಡುವ ಹಕ್ಕನ್ನು ಕಿತ್ತು ಹಾಕಿದ್ದ ದೇಸೀ ದಬ್ಬಾಳಿಕೆಕೋರರಿಗಿಂತ ಉಡಲು ರವಿಕೆ ಕೊಟ್ಟ ಬ್ರಿಟಿಶರು, ಜೀತದ ಬದಲು ಪತ್ರದ ಒಪ್ಪಂದದ ಮೂಲಕ ಸಂಬಳ ಕೊಡುವ ಒಳ್ಳೆಯ ಊಟ, ಗೌರವ, ಸಮಾನತೆ ಕೊಡುವ ಬ್ರಿಟಿಶರ ಮುಕ್ತ ಸಮಾನತೆಯನ್ನೂ ರಂಜಿತ್ ಈ ಕಥೆಯಲ್ಲಿ ಸಮರ್ಥವಾಗಿ ದಾಖಲಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕನ್ನಡದ ಶಾನುಭೋಗನು ನಾಯಕ ತಂಗಳಾನ್ ಧರಿಸಿದ್ದ ಬ್ರಿಟಿಶರು ಕೊಟ್ಟಿದ್ದ ಬಟ್ಟೆಯನ್ನು ಹರಿದು ದಲಿತರು ನಮ್ಮೆದುರು ಜೀತದಾಳುಗಳು ಗುಲಾಮರಾಗಿಯೇ  ಇರಬೇಕೆಂದು ವರ್ಣಾಶ್ರಮದ ಕ್ರೂರತೆ ಪ್ರದರ್ಶಿಸುತ್ತಾನೆ.

ಚಿತ್ರದ ತುಂಬೆಲ್ಲ ಪಾ. ರಂಜಿತ್ ಈ ದೇಶದ ಸಾಮಾಜಿಕ ಏರುಪೇರನ್ನು ಪ್ರಶ್ನಿಸುವ ರೂಪಕಗಳು ಸಾಸಿವೆಯ ಮೇಲೆ ಸಮುದ್ರ ಹರಿದಂತೆ ರೂಪಗಳ ರಾಶಿಯನ್ನೇ ಹರವಿಟ್ಟಿದ್ದಾರೆ. ಪ್ರಕೃತಿಮಾತೆಯನ್ನೇ ಪ್ರತಿನಿಧಿಸುವ ಬುಡಕಟ್ಟು ನಾಯಕಿ ಆರತಿಯ ರೌದ್ರತೆ, ವೀರಗಲ್ಲೊಂದಕ್ಕೆ ಚೈನಿಂದ ಕಾಲುಬಿಗಿದು ಕಟ್ಟಿ ಹಾಕಿದ ಮಾತು ಬಾರದ ಕಪ್ಪುವೃದ್ಧ, ಚಿನ್ನದ ನಿಕ್ಷೇಪದ ಹುಡುಕಾಟ ನಡೆಯುವ ಜಾಗದಲ್ಲಿ ರಾಮಾನುಜಾಚಾರ್ಯನ ಅನುಯಾಯಿಯ ಆದೇಶದಂತೆ ಬುದ್ದ ಪ್ರತಿಮೆಯ ತಲೆ ಕಡಿಯುವ ಸೆಂಗೋನೆ ರಾಜ, ಅದೇ ಬುದ್ದನ ತಲೆಯ ಮೂಲಕ ಚಿನ್ನದ ನಿಕ್ಷೇಪ ಪತ್ತೆ ಹಚ್ಚಿ ಬುದ್ಧನ ತಲೆಯನ್ನು ಕತ್ತೆಯ ಬೆನ್ನ ಮೇಲಿನ ಚೀಲದೊಳಗೆ ಹಾಕಿ ತರುವ ತಂಗಳಾನ್.. ಜನಿವಾರ ದೀಕ್ಷೆ ಕೊಡುವ ಮೂಲಕ ತಳ ಸಮುದಾಯದವರನ್ನು ಬುದ್ದ ಧಮ್ಮದ ಕಡೆ ಹೋಗದಂತೆ ತಡೆಯಲು ರಾಮಾನುಜಾಚಾರ್ಯ ಹೂಡುವ ತಂತ್ರಗಳು, ಹೀಗೆ ಸಾಲು ಸಾಲು ರೂಪಕಗಳ ಮೂಲಕವೇ ಚರಿತ್ರೆಯಲ್ಲಿ ಕಟ್ಟಿರುವ ಬಹಳಷ್ಟು ಮಿಥ್ʼಗಳನ್ನು ಪಾ. ರಂಜಿತ್ ದೃಶ್ಯಗಳ ಮೂಲಕವೇ ಕುಟ್ಟಿ ಕೆಡವಿ ಪುಡಿಗಟ್ಟಿದ್ದಾರೆ. ಇದರೆದುರು ಚಿನ್ನದ ನಿಕ್ಷೇಪ ಕಾಯುವ ಪ್ರಕೃತಿತಾಯಿ ಆರತಿ, ಕಾವಲಿಗೆ ನಿಂತ ಸರ್ಪಗಳ ಮೂಲಕ ನಾಗಕುಲದ ಚರಿತ್ರೆಗೂ ಘನತೆ ಕಲ್ಪಿಸಿಕೊಟ್ಟಿದ್ದಾರೆ.

ಒಂದೆಡೆಯಲ್ಲಿ ಚರಿತ್ರೆಯೆಂದರೆ ಹೇಳಿದ್ದನ್ನು ನಂಬಲೇಬೇಕು ಎಂಬ ದುರಹಂಕಾರದ ಹಿಸ್ಟಾರಿಕಲ್ ನರೇಟಿವ್ಸ್ಗಳನ್ನು ಸಮರ್ಥವಾಗಿ ಮುರಿಯುವ ಪಾ.ರಂಜಿತ್, ಮತ್ತೊಂದೆಡೆಯಲ್ಲಿ ಚರಿತ್ರೆಯ ಪುಟಗಳಿಂದಲೇ ಅಳಿಸಿಹೋದ ಶ್ರಮಿಕರ ಸಂಸ್ಕೃತಿ ಮತ್ತು ಕೆಜಿಎಫ್ ಚಿನ್ನದ ನಿಕ್ಷೇಪ ಹುಡುಕಲು ಪ್ರಾಣತೆತ್ತ ದಲಿತರ ಕಥೆಗಳನ್ನು ಚರಿತ್ರೆಯ ಪುಟಗಳೊಳಗೆ ದಾಖಲೆ ಸಮೇತ ಅಂಟಿಸುತ್ತಾರೆ. ಇದು ಸಿನಿಮಾ ಮಾಧ್ಯಮದ ಮೂಲಕ ಪಾ. ರಂಜಿತ್ ಕಂಡು ಕೊಂಡಿರುವ ಚರಿತ್ರೆಯ ಪುನರ್ ವ್ಯಾಖ್ಯಾನ ಮತ್ತು ರಿಕ್ಲೈಮಿಂಗ್ ಆಫ್ ದಲಿತ್ ಕಾಂಟ್ರಿಬ್ಯೂಷನ್ ಟು ದಿಸ್ ಲ್ಯಾಂಡ್ ಎಂಬುದನ್ನು ಅದೆಷ್ಟೇ ಅಡೆತಡೆ ಬಂದರೂ ಹೇಳಿಯೇ ಹೇಳುತ್ತೇನೆ ಎಂಬ  ರಂಜಿತ್ʼರ ಧೈರ್ಯ ಚಿತ್ರದ ತುಂಬ ಎದ್ದು ಕಾಣಿಸುತ್ತದೆ.

ನಟನಾ ವಿಭಾಗದಲ್ಲಿ ತಂಗಳಾನ್ ಆಗಿ, ಕಾಡಯ್ಯನಾಗಿ, ಆರನ್ ಆಗಿ 3 ಪಾತ್ರಗಳಲ್ಲಿ ನಾಯಕನಟ ವಿಕ್ರಮ್ ಅಕ್ಷರಶಃ ಜೀವ ಒತ್ತೆಯಿಟ್ಟು ನಟಿಸಿದ್ದಾರೆ. ಪಿತಾಮಗನ್ ಚಿತ್ರದ ನಂತರ ಎಲ್ಲಿಯೋ ಕಳೆದೇ ಹೋಗಿದ್ದ ವಿಕ್ರಮ್ʼರ ನಟನಾ ಪ್ರತಿಭೆಯ ಕೊನೆಯ ಒಂದು ಹನಿಯೂ ಉಳಿಯದಂತೆ ಪಾ. ರಂಜಿತ್ ಈ ಚಿತ್ರಕ್ಕೋಸ್ಕರ ವಿಕ್ರಮ್ʼರನ್ನು ಹಿಂಡಿಹಾಕಿದ್ದಾರೆ. ಬಹುಶಃ ಈ ಚಿತ್ರದ ನಂತರ ವಿಕ್ರಮ್ ತಮ್ಮ ಆಕ್ಟಿಂಗ್ ಕೆರಿಯರ್ʼಗೆ ರಿಟೈರ್ಡ್ʼಮೆಂಟ್ ಘೋಷಿಸಿದರೂ ವಿಕ್ರಮ್ʼಗೇನೂ ನಷ್ಟವಿಲ್ಲ. ಅವರ ಚಿತ್ರಜೀವನದ ಪರಮೋಚ್ಛ ನಟನಾ ಸಾಮರ್ಥ್ಯವನ್ನು ವಿಕ್ರಮ್ ಈ ಚಿತ್ರದಲ್ಲಿ ತಲುಪಿಬಿಟ್ಟಿದ್ದಾರೆ. ಇವರ ಪತ್ನಿ ಗಂಗಮ್ಮಳಾಗಿ, ಉಢಾಳ ಗಂಡನ ಗಟ್ಟಿಗಿತ್ತಿ ಹೆಂಡತಿಯಾಗಿ ನಟಿಸಿರುವ ಪಾರ್ವತಿ ನಾಯಕ ವಿಕ್ರಮ್ʼರ ನಟನೆಗೆ ಸಮನಾದ ಪ್ರತಿಭಾ ಪ್ರದರ್ಶನ ನೀಡಿದ್ದಾರೆ. ಪಾರ್ವತಿ ಎಂಥ ನಟಿಯೆಂದು ಹೇಳಲು ಎದೆ ಮುಚ್ಚಿಕೊಳ್ಳಲು ಬ್ರಿಟಿಶರು ಕೊಟ್ಟ ರವಿಕೆ ಧರಿಸಿದ ನಂತರ ಸಂಭ್ರಮಿಸುವ ದೃಶ್ಯವೊಂದೇ ಸಾಕು. ರಾಮಾನುಜಾಚಾರ್ಯರ ಜನಿವಾರ ದೀಕ್ಷೆಗೆ ತಲೆಕೊಟ್ಟ ದಲಿತನಾಗಿ ಪಶುಪತಿ, ಬ್ರಿಟಿಶ್ ಅಧಿಕಾರಿ ಕ್ಲೆಮೆಂಟ್ ಆಗಿ ಡ್ಯಾನಿಯಲ್ ಕ್ಯಾಲ್ಟಗಿರೋನ್, ಶ್ಯಾನುಭೋಗನ ಪಾತ್ರ ವಹಿಸಿದ ನಟ ಹೀಗೆ ಎಲ್ಲರದ್ದೂ ಬೇರೆಯದ್ದೇ ತೂಕದ ನಟನೆ. ಚಿತ್ರದ ಶಾಕಿಂಗ್ ಎಲಿಮೆಂಟ್ʼಗಳಲ್ಲಿ ಒಂದಾದ ಆರತಿಯ ಪಾತ್ರ ವಹಿಸಿದ ಮಾಳವಿಕ ನಟನೆಗೆ ಬೆಚ್ಚಿ ಬೀಳದವರಿಗೆ, ರೋಮಾಂಚನ ಅನುಭವಿಸದವರಿಗೆ ಬಹುಮಾನ ಕೊಡಬೇಕು, ಅಷ್ಟು ತನ್ಮಯ ನಟನೆ ಮಾಳವಿಕಾರದ್ದು. ಒಂದೆರಡು ದೃಶ್ಯಗಳಲ್ಲಿ ನಟ ವಿಕ್ರಮ್ʼರನ್ನೇ ಮಾಳವಿಕಾ ತಮ್ಮ ಆರತಿ ಪಾತ್ರದ ಮೂಲಕ ಸೈಡಿಗೆ ತಳ್ಳಿಬಿಡುತ್ತಾರೆ. ಎಲ್ಲಿಯೂ ಈ ನಟ ನಟಿಯರ ಅಭಿನಯ ಅತಿರೇಕಕ್ಕೆ ಹೋಗದಂತೆ ಪಾ.ರಂಜಿತ್ ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. 

ಇನ್ನುಳಿದಂತೆ ಚಿತ್ರದ ತಾಂತ್ರಿಕತೆಯ ವಿಚಾರಕ್ಕೆ ಬಂದರೆ, ಇದು ಅತ್ಯುತ್ತಮ ಟೆಕ್ನಿಶಿಯನ್ಸ್ʼಗಳು ಒಟ್ಟು ಸೇರಿಸಿದ ಇಂಟರ್ʼನ್ಯಾಷನಲ್ ಲೆವೆಲ್ ಆಫ್ ಕ್ವಾಲಿಟಿಗೆ ಸವಾಲೆಸೆಯುವ ಸಿನಿಮ. ಕೆಮೆರಾಮೆನ್ ಕಿಶೋರ್ ಕುಮಾರ್ʼರ ಫ್ರೇಮಿಂಗ್, ಬ್ಲಾಕಿಂಗ್ ಮತ್ತು ಸ್ಟೇಜಿಂಗ್ಸ್ ರಂಜಿತ್ʼರ ಮ್ಯಾಜಿಕಲ್ ರಿಯಲಿಸಂ ಪ್ರೆಸೆಂಟೇಷನ್ ಅನ್ನು ಬೇರೆಯದ್ದೇ ಎತ್ತರಕ್ಕೆ ಕೊಂಡೊಯ್ಯುತ್ತದೆ. ತಂಗಳಾನ್ ಮತ್ತು ಆರತಿ, ತಂಗಳಾನ್ ಮತ್ತು ಕಾಡಯ್ಯನ ನಡುವಿನ ಹೊಡೆದಾಟದ ದೃಶ್ಯದಲ್ಲಿ ಸ್ಟಂಟ್ ಮಾಸ್ಟರ್ ಮತ್ತು ಕೆಮೆರಾಮ್ಯಾನ್ ಜಿದ್ದಿಗೆ ಬಿದ್ದಂತೆ ಪೈಪೋಟಿಗೆ ಬಿದ್ದಿದ್ದಾರೆ. ಚಿತ್ರವನ್ನು ವೇಗವಾದ ನಿರೂಪಣೆಯಲ್ಲಿ, ಮಿನಿಮಲ್ ಸೆಟ್ ಅರೇಂಜ್ʼಮೆಂಟ್ನಲ್ಲಿ ಚಿತ್ರೀಕರಿಸಿದ್ದರೂ ಅದೆಲ್ಲೂ ಇದು ಸಣ್ಣಮಟ್ಟದ ಸೆಟ್ ಎಂದು ಪ್ರೇಕ್ಷಕರಿಗೆ ಅನಿಸದಂತೆ ಸಿನೆಮಟೋಗ್ರಫರ್ ಕಿಶೋರ್ ಕುಮಾರ್ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಗೆ ಪೈಪೋಟಿಗೆ ಬಿದ್ದಿರುವ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ತಮ್ಮ ಜೀವಮಾನ ಶ್ರೇಷ್ಟ ಬ್ಯಾಕ್ʼಗ್ರೌಂಡ್ ಸ್ಕೋರ್ ಕಂಪೋಸ್ ಮಾಡಿ ತಂಗಳಾನ್ʼನ ಬದುಕನ್ನು ಪ್ರೇಕ್ಷಕರ ಎದೆಗೇ ಸೀದ ಇಳಿಯುವಂತೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಈ ಚಿತ್ರದ ಮತ್ತೊಬ್ಬ ಹೀರೋ ಎಂದರೆ ಯಾವ ಕಾರಣಕ್ಕೂ ತಪ್ಪಿಲ್ಲ.  

ಪಾ. ರಂಜಿತ್ʼರ ಈ ಹಿಂದಿನ ಎಲ್ಲ ಸಿನಿಮಗಳಲ್ಲು ಕಾಣುವ ಪ್ರಬುದ್ಧತೆ ಮತ್ತು ಪ್ರೆಸೆಂಟೇಷನ್ ಸ್ಟೈಲ್ ತಂಗಳಾನ್ ಚಿತ್ರದಲ್ಲಿ ಬೆಟ್ಟ ಹತ್ತಿ ಕುಳಿತಿದೆ. ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಥೆಯಿಂದ ಹಿಡಿದು ಟೆಕ್ನಿಕಲ್ ಡಿಪಾರ್ಟ್ʼಮೆಂಟ್ಸ್ ಎಲ್ಲವುಗಳಲ್ಲು ಮೈಂಟೈನ್ ಮಾಡಿರುವ ಪಾ. ರಂಜಿತ್ʼರ ಇಲ್ಲಿಯವರೆಗಿನ ಸಿನಿಮಗಳಲ್ಲಿ ದಿ ಬೆಸ್ಟ್ ಕ್ವಾಲಿಟಿಯ ಚಿತ್ರ ತಂಗಳಾನ್. ಚರಿತ್ರೆಯ ಪುಟಗಳಿಂದಲೇ ಅಳಿಸಿಹೋದ ದಲಿತಜಗತ್ತಿನ ವೀರನೊಬ್ಬನ ಕಥೆಯನ್ನು ಇಷ್ಟು ಬೆಸ್ಟ್ ಕ್ವಾಲಿಟಿಯ ಸಿನಿಮಾ ಮೂಲಕ ವಾಪಸ್ ಚರಿತ್ರೆಯ ಪುಟಗಳೊಳಗೆ ಅಂಟಿಸುವ ಸಾಹಸದಲ್ಲಿ ನಿರ್ದೇಶಕ ಪಾ.ರಂಜಿತ್ ತಂಗಳಾನ್ ಮೂಲಕ ದೊಡ್ಡಮಟ್ಟದಲ್ಲೇ ಗೆದ್ದಿದ್ದಾರೆ. ಎಲ್ಲಿಯೂ ಮುಜುಗರವಾಗುವ ಸನ್ನಿವೇಶಗಳಿಲ್ಲದೆ, ನಟಿಯರ ಮೈಪ್ರದರ್ಶನವಿಲ್ಲದೆ, ಫ್ಯಾಮಿಲಿ ಸಮೇತ ಮಕ್ಕಳ ಜೊತೆಗೂ ಕುಳಿತು ರೋಮಾಂಚನದ ಅನುಭವ ಕೊಡಬಲ್ಲ ಎಲ್ಲ ಅರ್ಹತೆಯಿರುವ ಚಿತ್ರ ತಂಗಳಾನ್. ಓಟಿಟಿವರೆಗೆ ಕಾಯಬೇಡಿ. ಏಕೆಂದರೆ ಇಡೀ ಚಿತ್ರದ ಕ್ರೂಡ್ ದೃಶ್ಯವೈಭವ ಚಿತ್ರಮಂದಿರದ ಪರದೆಯಲ್ಲೇ ನೋಡಿ ಅನುಭವಿಸಬೇಕಾದ ರುದ್ರಕಾವ್ಯವಿದು.

ದಯಾನಂದ್ ಟಿ.ಕೆ

ಕಥೆಗಾರರು

More articles

Latest article