ಚೆನ್ನೈ: ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ತಮಿಳು ನಟ ವಿಶಾಲ್, ವೇದಿಕೆ ಮೇಲೆ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಅವರು ಕುಸಿದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಆತಂಕಗೊಂಡಿದ್ದಾರೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೂವಾಗಮ್ ನಲ್ಲಿರುವ ಕೂತಾಂಡವರ್ ದೇವಾಲಯದಲ್ಲಿ ಭಾನುವಾರ ರಾತ್ರಿ ತೃತೀಯ ಲಿಂಗಿಗಳ ಸೌಂದರ್ಯ ಸ್ಪರ್ಧೆ ನಡೆಯಿತು. ಚಿತ್ತಿರೈ (ತಮಿಳು ತಿಂಗಳು) ಆಚರಣೆಯ ಭಾಗವಾಗಿ ಟ್ರಾನ್ಸ್ ಜೆಂಡರ್ ಗಳಿಗಾಗಿಯೇ ಆಯೋಜನೆಯಾಗುವ ‘ಮಿಸ್ ಕೂವಾಗಮ್ 2025′ ಸೌಂದರ್ಯ ಸ್ಪರ್ಧೆಯಲ್ಲಿ ನಾಯಕ ನಟ ವಿಶಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯ ಮೇಲೆ ನಿಂತು ಎಲ್ಲರಿಗೂ ಶುಭಾಶಯ ಕೋರುತ್ತಿರುವ ಸಂದರ್ಭದಲ್ಲಿಯೇ ಅವರು ಮೂರ್ಛೆ ಹೋಗಿದ್ದಾರೆ.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ವಿಶಾಲ್‌ಗೆ ಎರಡನೇ ಬಾರಿ ಆಘಾತ ಸಂಭವಿಸಿದೆ. ಇತ್ತೀಚೆಗೆ ‘ಮದ ಗಜ ರಾಜ’ ಚಿತ್ರದ ಪ್ರಚಾರದ ಸಮಯದಲ್ಲಿ ವಿಶಾಲ್ ಅವರ ಕೈಗಳು ನಡುಗುತ್ತಿದ್ದವು. ಅವರು ಅಸ್ವಸ್ಥರಾಗಿರುವಂತೆ ಕಂಡು ಬರುತ್ತಿತ್ತು.