ಹೊಸದಿಲ್ಲಿ: ತನ್ನ ಹಳೆಯ ಪೈಶಾಚಿಕ ನೀತಿಗಳನ್ನು ಮತ್ತೆ ಜಾರಿಗೆ ತರಲು ಹೊರಟಿರುವ ಅಘಫಾನಿಸ್ತಾನದ ತಾಲಿಬಾನ್ ಸರ್ಕಾರ, ವ್ಯಭಿಚಾರ ನಡೆಸುವ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕಲ್ಲು ಹೊಡೆಸಿ ಕೊಲ್ಲುವ ಶಿಕ್ಷೆಯನ್ನು ಮತ್ತೆ ಜಾರಿಗೆ ತರುವುದಾಗಿ ಹೇಳಿದೆ.
ತಾಲಿಬಾನ್ ಸರ್ವೋಚ್ಛ ನಾಯಕ ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ಸರ್ಕಾರಕ್ಕೆ ಸೇರಿದ ಟಿವಿಯಲ್ಲಿ ಈ ಘೋಷಣೆ ಮಾಡಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಸಮುದಾಯ ಹೆಣ್ಣುಮಕ್ಕಳ ಹಕ್ಕುಗಳ ಕುರಿತು ವಾದಿಸುತ್ತಿರುವ ಅಂಶಗಳಿಗೆ ಇಸ್ಲಾಮಿಕ್ ಶರಿಯಾ ವಿರುದ್ಧವಾಗಿದೆ ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ಕಲ್ಲು ಹೊಡೆಸಿ ಸಾಯಿಸುವ ಶಿಕ್ಷೆಯನ್ನು ನೀವು ಹೆಣ್ಣುಮಕ್ಕಳ ಹಕ್ಕುಗಳ ದಮನ ಎಂದು ನೀವು ಹೇಳುತ್ತೀರಿ. ಆದರೆ ನಾವು ಈ ಶಿಕ್ಷೆಯನ್ನು ವ್ಯಭಿಚಾರ ಮಾಡುವ ಹೆಣ್ಣುಮಕ್ಕಳಿಗೆ ಮತ್ತೆ ಜಾರಿಗೆ ತರುತ್ತೇವೆ. ಅಂಥ ಹೆಣ್ಣುಮಕ್ಕಳನ್ನು ನಾವು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕಾಬೂಲ್ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ತಾಲಿಬಾನ್ ಕಾರ್ಯಸೂಚಿ ಮುಗಿದಿಲ್ಲ. ಅದು ಈಗಷ್ಟೇ ಶುರುವಾಗಿದೆ ಎಂದು ಹಿಬತುಲ್ಲಾ ಹೇಳಿದ್ದಾರೆ.
2021ರಲ್ಲಿ ಅಫಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ಹೆಣ್ಣುಮಕ್ಕಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿನ ಹೆಣ್ಣುಮಕ್ಕಳ ಶಿಕ್ಷಣದ, ಉದ್ಯೋಗದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆಯಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದೂ ಕಷ್ಟಕರವಾಗಿದೆ.
ಅಧಿಕಾರಕ್ಕೆ ಬಂದ ಕೂಡಲೇ ತಾಲಿಬಾನ್ ಸರ್ಕಾರ ಹೆಣ್ಣುಮಕ್ಕಳು ಹೈಸ್ಕೂಲ್ ಶಿಕ್ಷಣ ಪಡೆಯುವುದನ್ನು ತಡೆದಿತ್ತು. ನಂತರ 2022ರ ಡಿಸೆಂಬರ್ ನಲ್ಲಿ ಹೆಣ್ಣುಮಕ್ಕಳು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದನ್ನು ನಿರ್ಬಂಧಿಸಿತ್ತು. ಮಹಿಳೆಯರು ಉದ್ಯೋಗ ಮಾಡುವುದಕ್ಕೂ ಹಲವು ಬಗೆಯ ಅಡೆತಡೆಗಳನ್ನು ಒಡ್ಡಲಾಗಿತ್ತು.
ಅಫಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಸ್ಥಿತಿ ದಯನೀಯವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದ್ದು, ಶರಿಯಾವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಪ್ರಯತ್ನದಿಂದಾಗಿ ಹೆಣ್ಣುಮಕ್ಕಳ ಹಕ್ಕುಗಳ ದಮನ ನಡೆದಿದೆ ಎಂದು ಹೇಳಿತ್ತು.
ಯಾವುದೇ ರೀತಿಯ ಸ್ವಾತಂತ್ರ್ಯ ಇಲ್ಲದೆ ಬದುಕುತ್ತಿರುವ ಹೆಣ್ಣುಮಕ್ಕಳು ಆತ್ಮಹತ್ಯೆಗೆ ಶರಣರಾಗುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಪರಿಸ್ಥಿತಿ ಭಯಾನಕವಾಗಿದೆ ಎಂದು ಹೆಣ್ಣುಮಗಳೊಬ್ಬಳು ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.