Wednesday, December 10, 2025

ಎಸ್‌ಟಿಗೆ ತಳವಾರ ಮತ್ತು ಪರಿವಾರ ಸಮುದಾಯ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

Most read

ಬೆಳಗಾವಿ: ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಾದ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ತಿನ ವಿರೋಧ ಪಕ್ಚದ ಮುಖ್ಯ ಸಚೇತಕರಾದ ರವಿ ಕುಮಾರ್, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ, ಕಾಗವಾಡ ತಾಲ್ಲೂಕಿನ ಬಸವೇಶ್ವರ (ಕೆಂಪವಾಡ) ಹಾಗೂ ರಾಮದುರ್ಗ ತಾಲ್ಲೂಕಿನ ವೀರಭದ್ರೇಶ್ವರ ಮತ್ತು ಸಾಲಾಪುರ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತಂತೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಮುಖ್ಯಾಂಶಗಳು ಹೀಗಿವೆ:

• ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ (ಕಾಗವಾಡ) 22ಬರಪೀಡಿತ ಗ್ರಾಮಗಳ 27,462 ಹೆಕ್ಟೇರ್‌ ಪ್ರದೇಶಗಳಿಗೆ ನೀರು ಒದಗಿಸುವ ಬಸವೇಶ್ವರ ಏತ ನೀರಾವರಿ ಯೋಜನೆಗೆ 2017ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಚಾಲನೆ ನೀಡಲಾಗಿತ್ತು.

• ಈ ಯೋಜನೆಗೆ ಇದುವರೆಗೆ ರೂ. 1158 ಕೋಟಿ ವೆಚ್ಚ ಮಾಡಲಾಗಿದ್ದು, ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ.  ಜೂನ್‌ ಅಂತ್ಯದವರೆಗೆ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.

• ಯೋಜನೆ ಪೂರ್ಣಗೊಳಿಸಲು 652 ಎಕ್ರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಯೋಜನೆಯನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಲು  ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು.

• ರಾಮದುರ್ಗಾ ತಾಲೂಕು, ಮುಧೋಳ ತಾಲೂಕು ಹಾಗೂ ಬಾದಾಮಿ ತಾಲೂಕಿನ ಒಟ್ಟು 22 ಗ್ರಾಮಗಳ ಬರಪೀಡಿತ ಗ್ರಾಮಗಳಿಗೆ ನೀರು ಪೂರೈಸುವ ಸಾಲಾಪುರ ಏತ ನೀರಾವರಿ ಯೋಜನೆ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇದನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು.

• ಇದೇ ರೀತಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಒಟ್ಟು 34 ಬರಪೀಡಿತ ಗ್ರಾಮಗಳಿಗೆ ನೀರು ಒದಗಿಸುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

More articles

Latest article