ರಾಜಕೀಯ ಪಕ್ಷಗಳ ಧ್ವಜದಲ್ಲಿ ಚಿಹ್ನೆಗಳ ಜೊತೆಗೆ ತ್ರಿವರ್ಣ ಬಳಕೆ ತಡೆ ಕೋರಿದ್ದ ಪಿಐಎಲ್‌ ವಜಾ

Most read

ನವದೆಹಲಿ: ರಾಜಕೀಯ ಪಕ್ಷಗಳ ಧ್ವಜಗಳಲ್ಲಿ ಚಿಹ್ನೆಗಳ ಜೊತೆಗೆ ತ್ರಿವರ್ಣ ಧ್ವಜ ಬಳಸುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಹಾಜರಿದ್ದ ಸಂಜಯ್ ಭೀಮಾಶಂಕರ್ ಥೋಬ್ಡೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿತು.

ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಪ್ರಚಾರಗಳಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹೋಲುವ ಧ್ವಜ ವಿನ್ಯಾಸಗಳನ್ನು ಬಳಸುತ್ತಿವೆ. ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರವಿರುವ ಜಾಗದಲ್ಲಿ ಪಕ್ಷದ ಚಿಹ್ನೆಗಳನ್ನು ಬಳಸಲಾಗುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ದೂರುದಾರರು ಕಾಂಗ್ರೆಸ್ ಪಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಹೆಸರಿಸಿದ್ದರು. ಇದು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ- 1971ರ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ತ್ರಿವರ್ಣ ಧ್ವಜ ಬಳಕೆ ಮಾಡುತ್ತಿವೆ ಎಂದು ಹೇಳಿದ ಪೀಠ ಅರ್ಜಿಯನ್ನು ವಜಾಗೊಳಿಸಿತು.

More articles

Latest article