ಮೈಸೂರು : ರಾಜ್ಯ ಸರ್ಕಾರವು ಬೌದ್ಧ ಬಿಕ್ಕುಗಳಿಗೆ ಮಾಸಿಕ ಆರು ಸಾವಿರ ರೂ. ಗೌರವಧನ ನೀಡಲು ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಕಡತೂರು ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೌದ್ಧ ಬಿಕ್ಕುಗಳ ಜೀವನ ನಿರ್ವಹಣೆಗೆ ಮಾಸಿಕ ಗೌರವಧನ ನೀಡುವಂತೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದ ಅವರು, ರಾಜ್ಯದಲ್ಲಿರುವ ಬುದ್ಧವಿಹಾರಗಳಲ್ಲಿ ಸೇವೆ ಸಲ್ಲಿಸುವ ಬೌದ್ಧ ಬಿಕ್ಕುಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇದಕ್ಕಾಗಿ ಸರ್ಕಾರದಿಂದ ಯಾವುದೇ ಸಹಾಯಧನ ದೊರಕುತ್ತಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿಮಾನಿಗಳು ಸೇರಿದಂತೆ ಬೌದ್ಧಧರ್ಮವನ್ನು ಒಪ್ಪಿಕೊಂಡಿರುವ ಬಹಳಷ್ಟು ಅನುಯಾಯಿಗಳು ಸೇರಿ ಬುದ್ಧವಿಹಾರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ಬೌದ್ಧ ಬಿಕ್ಕುಗಳಿಗೆ ಸರ್ಕಾರವು ಗೌರವಧನ ನೀಡವುದರಿಂದ ಬುದ್ಧವಿಹಾರ ನಡೆಸಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2026 - 27ನೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಅದರಂತೆ ಈಗಿನ ಸರ್ಕಾರವು ರಾಜ್ಯದಲ್ಲಿನ ಬುದ್ಧವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೌದ್ಧ ಧಮ್ಮಾಚಾರಿಗಳ ದೈನಂದಿನ ಜೀವನ ನಿರ್ವಹಣೆಗೆ ಮಾಸಿಕ 6000 ರೂ. ಗೌರವಧನ ನೀಡುವುದಕ್ಕೆ ಆದೇಶ ಹೊರಡಿಸಿದೆ.
ಈ ಹಿನ್ನೆಲೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.