ಆಂಟಿಗುವಾ: ಟಿ20 ವಿಶ್ವಕಪ್ ಸೂಪರ್-8ರ ಹಣಾಹಣಿ ಕುತೂಹಲಕಾರಿ ಹಂತಕ್ಕೆ ತಲುಪಿದ್ದು, ಗ್ರೂಪ್ 1ರ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ಸದೆಬಡಿದರೆ, ಆತಿಥೇಯರ ಕದನದಲ್ಲಿ ಅಮೆರಿಕ ತಂಡವನ್ನು ವೆಸ್ಟ್ ಇಂಡೀಸ್ ಅಧಿಕಾರಯುತವಾಗಿ ಮಣಿಸಿದೆ.
ಇಂದು ಬೆಳಿಗ್ಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಏಕಪಕ್ಷೀಯವಾಗಿತ್ತು. ರಾಸ್ಟನ್ ಚೇಸ್ 3/19 ಆಂಡ್ರೆ ರಸೆಲ್ 3/31, ಅಲ್ಜಾರಿ ಜೋಸೆಫ್ 2/31 ಮಾರಕ ಬೌಲಿಂಗ್ ಗೆ ನಲುಗಿದ ಅಮೆರಿಕ 19.5 ಓವರ್ ಗಳಲ್ಲಿ 128 ರನ್ ಗಳಿಗೆ ಸರ್ವಪತನವಾಯಿತು. ಆಂಡ್ರೀಸ್ ಗೌಸ್ 16 ಎಸೆತಗಳಲ್ಲಿ ಗಳಿಸಿದ 29 ರನ್ ಅಮೆರಿಕ ಪರ ಸರ್ವಾಧಿಕ ಸ್ಕೋರ್ ಆಯಿತು. ನಿತೀಶ್ ಕುಮಾರ್ (20) ಮತ್ತು ಮಿಲಿಂದ್ ಕುಮಾರ್ (19) ಸಣ್ಣ ಪ್ರತಿರೋಧ ತೋರಿದರೆ ಉಳಿದವರೆಲ್ಲ ಪೆವಿಲಿಯನ್ ಪೆರೇಡ್ ನಡೆಸಿದರು.
ಸುಲಭ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಕೇವಲ 10.5 ಓವರ್ ಗಳಲ್ಲಿ ಗೆಲುವಿನ ಕೇಕೆ ಹಾಕಿತು. ಶಾಯ್ ಹೋಪ್ ಕೇವಲ 39 ಎಸೆತಗಳಲ್ಲಿ ಔಟಾಗದೆ 82 ರನ್ ಗಳಿಸಿ ಅಮೆರಿಕ ಬೌಲರ್ ಗಳನ್ನು ಚೆಂಡಾಡಿದರು. ನಿಕೋಲಸ್ ಪೂರನ್ 12 ಎಸೆತಗಳಲ್ಲಿ ಔಟಾಗದೆ 27 ರನ್ ಗಳಿಸಿ ವೆಸ್ಟ್ ಇಂಡೀಸ್ ಹನ್ನೊಂದನೇ ಓವರ್ ನಲ್ಲೇ ಜಯಗಳಿಸುವಂತೆ ನೋಡಿಕೊಂಡರು. ಮಾರಕ ಬೌಲಿಂಗ್ ಪ್ರದರ್ಶಿಸಿದ ರಾಸ್ಟನ್ ಚೇಸ್ ಅರ್ಹವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ಗಳಿಸಿಕೊಂಡರು.
ನಿನ್ನೆ ರಾತ್ರಿ ಗ್ರೂಪ್-2ರ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸೋಲಿನ ಆಘಾತ ಅನುಭವಿಸಿತು. ಕೇವಲ್ 7 ರನ್ ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾಗೆ ಶರಣಾದ ಇಂಗ್ಲೆಂಡ್ ಸೆಮಿಫೈನಲ್ ತಲುಪುವ ಅವಕಾಶಕ್ಕಾಗಿ ನಾಳೆ ಅಮೆರಿಕ ವಿರುದ್ಧದ ಪಂದ್ಯವನ್ನು ಜಯಿಸಲೇಬೇಕಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ಪೈಪೋಟಿಯಲ್ಲಿ ದಕ್ಷಿಣ ಆಫ್ರಿಕಾದ ತಕ್ಕಡಿ ಕೊಂಚ ಹೆಚ್ಚು ತೂಗುವಂತೆ ಮಾಡಿದ್ದು ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್. ಮಂದಗತಿಯ ಪಿಚ್ ನಲ್ಲಿ ರನ್ ಗಳಿಸುವುದು ತ್ರಾಸದಾಯಕ ಎಂಬುದನ್ನು ಅರಿತುಕೊಂಡಿದ್ದ ಅವರು ಪವರ್ ಪ್ಲೇನಲ್ಲಿ ಅಬ್ಬರಿಸಿದರು. ತಲಾ ನಾಲ್ಕು ಬೌಂಡರಿ, ಸಿಕ್ಸರ್ ಬಾರಿಸಿದ ಅವರು ಕೇವಲ 38 ರನ್ ಗಳಲ್ಲಿ 65 ರನ್ ಗಳಿಸಿದ್ದಾಗ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಕೂಡ ಆಗಿರುವ ನಾಯಕ ಜೋಸ್ ಬಟ್ಲರ್ ಅವರಿಗೆ ಕ್ಯಾಚ್ ಕೊಟ್ಟು ಔಟಾದರು. ಆದರೆ ಅಷ್ಟು ಹೊತ್ತಿಗಾಗಲೇ ಅವರು ಮಾಡಬೇಕಾಗಿದ್ದನ್ನು ಮಾಡಿ ಮುಗಿಸಿದ್ದರು.
ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ತಂಡಕ್ಕೆ 164ರನ್ ಗಳ ದೊಡ್ಡ ಸವಾಲನ್ನು ಮುಂದೊಡ್ಡಿತು. ಪ್ರಬಲ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಇಂಗ್ಲೆಂಡ್ ಹೋರಾಟ ಪ್ರದರ್ಶಿಸಿ ಕೊನೆಯ ಓವರ್ ವರೆಗೆ ಪಂದ್ಯವನ್ನು ಎಳೆದುಕೊಂಡುಹೋಯಿತು.
ಆದರೆ ಕೊನೆಯ ಓವರ್ ನಲ್ಲಿ 14 ರನ್ ಬೇಕಾಗಿದ್ದಾಗ ಇಂಗ್ಲೆಂಡ್ ತಂಡ ಮುಗ್ಗರಿಸಿತು. ಕೊನೆಯ ಓವರ್ ಎಸೆದ ಅನ್ರಿಕ್ ನಾರ್ಟ್ಜೆ ಮೊದಲ ಎಸೆತದಲ್ಲೇ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡಿ ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು. 37 ಎಸೆತಗಳಲ್ಲಿ 53 ರನ್ ಗಳಿಸಿ ಆಡುತ್ತಿದ್ದ ಹ್ಯಾರಿ ಬ್ರೂಕ್ ಔಟಾಗುವುದರೊಂದಿಗೆ ಇಂಗ್ಲೆಂಡ್ ಗೆಲುವಿನ ಆಸೆ ಕಮರಿಹೋಯಿತು. ಕೊನೆಯ ಓವರ್ ನಲ್ಲಿ ಅನ್ರಿಕ್ ನಾರ್ಟ್ಜೆ ಬಿಟ್ಟುಕೊಟ್ಟಿದ್ದು ಕೇವಲ 7 ರನ್ ಮಾತ್ರ. ಹೀಗಾಗಿ ಇಂಗ್ಲೆಂಡ್ ತಂಡ ಏಳು ರನ್ ಗಳ ಸೋಲನ್ನು ಅನುಭವಿಸಿತು.
ಕ್ವಿಂಟನ್ ಡಿಕಾಕ್ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರವನ್ನು ಗಳಿಸಿದರು. ದಕ್ಷಿಣ ಆಫ್ರಿಕಾ ಲೀಗ್ ಹಂತದಿಂದ ಇಲ್ಲಿಯವರೆಗೆ ಅಜೇಯವಾಗಿಯೇ ಉಳಿದಿದೆ.