ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ. ಪಿಎಸ್ಐ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿದ ಬೆನ್ನಲ್ಲೇ ಪರಶುರಾಮ್ ಪತ್ನಿ ಯಾದಗಿರಿ ಶಾಸಕ ಹಾಗೂ ಪುತ್ರನ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಪಿಎಸ್ ಐ ಪತ್ನಿ ಶ್ವೇತಾ ಅವರು ದೂರಿನಲ್ಲಿ, ತಮ್ಮ ಪತಿಯ ಸಾವಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಕಾರಣವೆಂದು ಯಾದಗಿರಿ ಎಸ್ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೂರಿನಲ್ಲಿ ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕೆ ಕಿರುಕುಳ ನೀಡ್ತಿದ್ದ ಆರೋಪ ಮಾಡಿದ್ದಾರೆ. ಶಾಸಕನ ಕಿರುಕುಳದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪತಿ ಸಾವನ್ನಪ್ಪಿದ್ದಾರೆ ಎಂದು ದೂರು ನೀಡಿದ್ದರು. ಸದ್ಯ ಯಾದಗಿರಿ ಯಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಪರಶುರಾಮ ಮೃತದೇಹ ರವಾನೆ ಮಾಡಲಾಗಿದೆ.
ಮೃತ ಪರಶುರಾಮ ಪತ್ನಿ ಶ್ವೇತಾ ಮಾತನಾಡಿ, ಶಾಸಕ ಚೆನ್ನಾರೆಡ್ಡಿ ಪಾಟೀಲ್ 30/ 40 ಲಕ್ಷ ಹಣ ಕೇಳಿದ್ದಾರೆ. ಸಾಕಷ್ಟು ಭಾರೀ ಹಣ ಕೇಳ್ತಿರುವ ಬಗ್ಗೆ ನನಗೆ ಹೇಳಿದ್ದಾರೆ. ಎಂಎಲ್ಎ ಹಾಗೂ ಎಂಎಲ್ಎ ಮಗ ಹಣ ಕೇಳಿದ್ದಾರೆ ಅಂತ ಹೇಳಿದ್ರು, ಅವರ ಇಬ್ಬರನ್ನೂ ಕರೆಸಿ ಅವರು ಅರೆಸ್ಟ್ ಆಗಬೇಕು. ನಾವು ಎಸ್ಸಿ ಆಗಬೇಕು ದೇವರಲ್ಲಿ ಕೇಳ್ಕೊಂಡು ಬಂದಿರ್ತಿವಾ? ಜಾತಿ, ಹಣಕ್ಕಾಗಿ ನನ್ನ ಗಂಡನ ಜೀವ ಹೋಯ್ತು, ನೀವೆಲ್ಲ ಒಬ್ಬ ದಕ್ಷ ಅಧಿಕಾರಿಯನ್ನ ಕಳೆದುಕೊಂಡಿದ್ದೀರಿ. ಎಸ್ಪಿ ಮೇಡಂ ನಮಗೆ ಎಫ್ಐಆರ್ ಕೊಡ್ತಿನಿ ಬನ್ನಿ ಅಂದ್ರು, ಅವರನ್ನ ನಂಬ್ಕೊಂಡು ಖಾಸಗಿ ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಶಾಸಕರ ವಿರುದ್ಧ ಕ್ರಮಕ್ಕೆ ಹೆದ್ದಾರಿಯಲ್ಲಿ ಪ್ರತಿಭಟನೆ, ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್
ರಾಷ್ಟ್ರೀಯ ಹೆದ್ದಾರಿ 150 ರ ಮೇಲೆ ಡಿಎಸ್ ಎಸ್ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕೇಸ್ ದಾಖಲಿಸಿ ತಪ್ಪಿತಸ್ಥ ಶಾಸಕ ಚನ್ನಾರೆಡ್ಡಿ ಪಾಟೀಲ ಬಂಧಿಸುವಂತೆ ಪ್ರತಿಭಟನೆ ನಿರತರ ಒತ್ತಾಯ ಮಾಡಿದ್ದು, ಪ್ರತಿಭಟನೆ ಹಿನ್ನೆಲೆಯಲ್ಲಿ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.