ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಾಡಿಸುವ ವಕೀಲರ ಪಟ್ಟಿಯಲ್ಲಿ ಬಿಜೆಪಿ ನಾಯಕಿ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿಯ ಹೆಸರು ಕಾಣಿಸಿಕೊಂಡಿದ್ದು, ಈ ಸಂಬಂಧ ನಮ್ಮಿಂದ ಉದ್ದೇಶಪೂರ್ವಕವಲ್ಲದ ತಪ್ಪು ಸಂಭವಿಸಿದೆ ಎಂದು ED ಪರ ವಕೀಲರು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಎಎಪಿ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರಿಗೆ ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಮಂಜೂರಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಬಿಜೆಪಿ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್ ಅವರ ಹೆಸರು ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು.
ED ಪರ ವಕೀಲರಾದ ಜೋಹೆಬ್ ಹುಸೇನ್ ಇಂದು ಸುಪ್ರೀಂ ಕೋರ್ಟ್ ಎದುರು ಹಾಜರಾಗಿ, ಬಾನ್ಸುರಿ ಸ್ವರಾಜ್ ಅವರ ಹೆಸರು ತಪ್ಪಾಗಿ ಕಾಣಿಸಿಕೊಂಡಿದೆ. ವಿದೇಶಾಂಗ ಇಲಾಖೆ ಸಚಿವೆಯಾಗಿದ್ದ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ED ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿರಲಿಲ್ಲವಾದರೂ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಈ ಸಂಬಂಧ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಎಎಪಿ ನಾಯಕ ಸೌರಭ್ ಭಾರದ್ವಾಜ್, ED ವಕೀಲರ ಪಟ್ಟಿಯಲ್ಲಿ ಬಾನ್ಸುರಿ ಅವರ ಹೆಸರು ಇರುವುದನ್ನು ಪ್ರಶ್ನಿಸಿದ್ದರು. ನಾನು ನಿನ್ನೆಯೇ ಹೇಳಿದ್ದೆ, ED ಮತ್ತು BJP ಎರಡೂ ಬೇರೆಬೇರೆಯಲ್ಲ ಎಂದು ಅವರು ಕುಟುಕಿದ್ದರು.
ಸಂಜಯ್ ಸಿಂಗ್ ಅವರ ಜಾಮೀನಿಗೆ ಸಂಬಂಧಿಸಿದ ಪತ್ರದಲ್ಲಿ ED ವಕೀಲರ ಪಟ್ಟಿಯಲ್ಲಿ ಸೂರ್ಯಪ್ರಕಾಶ್ ವಿ.ರಾಜು, ಮುಖೇಶ್ ಕುಮಾರ್ ಮರೋರಿಯಾ, ಜೋಯೇಬ್ ಹುಸೇನ್, ಅಣ್ಣಂ ವೆಂಕಟೇಶ, ಕನು ಅಗರ್ ವಾಲ್, ಆಕ್ರಾಜ್ ಕುಮಾರ್ ಮತ್ತು ಬಾನ್ಸುರಿ ಸ್ವರಾಜ್ ಅವರ ಹೆಸರುಗಳು ಇರುವ ಪತ್ರವನ್ನು ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದರು.
40 ವರ್ಷ ವಯಸ್ಸಿನ ಬಾನ್ಸುರಿ ಸ್ವರಾಜ್, ಕಳೆದ ಹದಿನೈದು ವರ್ಷಗಳಿಂದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, 2007ರಿಂದ ದಿಲ್ಲಿ ಬಾರ್ ಕೌನ್ಸಿಲ್ ಸದಸ್ಯೆಯಾಗಿದ್ದಾರೆ. ಬಾನ್ಸುರಿ ಇಂಗ್ಲಿಷ್ ಸಾಹಿತ್ಯದಲ್ಲಿ ವಾರ್ವಿಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಲಂಡನ್ ನ ಪ್ರತಿಷ್ಠಿತ ಬಿಪಿಪಿ ಕಾನೂನು ಶಾಲೆಯಲ್ಲಿ ಕಾನೂನು ಶಿಕ್ಷಣ ಪಡೆದು, ಬಾರಿಸ್ಟರ್ ಆಪ್ ಲಾ ಪದವಿಯನ್ನು ಪಡೆದಿದ್ದಾರೆ. ನಂತರ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಪುತ್ರಿಯಾದ ಬಾನ್ಸುರಿ ಅವರನ್ನು ಭಾರತೀಯ ಜನತಾ ಪಕ್ಷ ತನ್ನ ದಿಲ್ಲಿ ಕಾನೂನು ಘಟಕದ ಸಹಸಂಚಾಲಕರನ್ನಾಗಿ ನೇಮಿಸಿತ್ತು. ಕಳೆದ ವರ್ಷ ಅವರನ್ನು ಹರ್ಯಾಣ ಸರ್ಕಾರ ಹೆಚ್ಚುವರಿ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿತ್ತು.