LGBTQ+ ಸೇರಿದಂತೆ ಟ್ರಾನ್ಸ್ ಜೆಂಡರ್ ಮತ್ತು ಇತರ ದಂಪತಿಗಳ ವಿರುದ್ಧ ಸಾಮಾಜಿಕ ನೈತಿಕತೆ ಹೇರುವ ತೀರ್ಪು ನೀಡದೆ ನ್ಯಾಯಾಲಯಗಳು ಅವರ ರಕ್ಷಣೆಗೆ ನಿಲ್ಲಬೇಕು ಎಂದು ತನ್ನ ಕೆಳಗಿನ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಇಂತಹ ದಂಪತಿಗಳ ರಕ್ಷಣೆಗೆ ಮಾರ್ಗಸೂಚಿಗಳನ್ನೂ ನೀಡಿದೆ.
ಲೈಂಗಿಕ ಅಲ್ಪಸಂಖ್ಯಾತ ಗುಂಪಿನ ದಂಪತಿಗಳು ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದರೆ ಅವರು ಎದುರಿಸುತ್ತಿರುವ ಬೆದರಿಕೆಗಳ ಕುರಿತು ಕೇಳುತ್ತಾ ಕಾಲಹರಣ ಮಾಡದೆ ತಕ್ಷಣ ಅವರಿಗೆ ರಕ್ಷಣೆ ನೀಡಬೇಕು. ಆ ದಂಪತಿಯ ಸಂಬಂಧಗಳ ಸ್ವರೂಪದ ಬಗ್ಗೆ ವಿಚಾರಣೆ ನಡೆಸಿ ಅವರನ್ನು ಅಲೆದಾಡಿಸಬಾರದು ಎಂದು ತನ್ನ ಕೆಳ ನ್ಯಾಯಾಲಯಗಳಿಗೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಲೈಂಗಿಕ ಅಲ್ಪಸಂಖ್ಯಾತ ಗುಂಪುಗಳ ನಡುವಿನ ದಾಂಪತ್ಯದ ಮೂಲಭೂತ ಹಕ್ಕುಗಳು ಮತ್ತು ಘನತೆಯನ್ನು ಭದ್ರಪಡಿಸಲು ಲಿಖಿತ ಮತ್ತು ಆಂತರ್ಯದಲ್ಲಿ ಕನಿಷ್ಟ ಕಡ್ಡಾಯ ಕ್ರಮಗಳನ್ನು ನ್ಯಾಯಾಲಯಗಳು ಅನುಸರಿಸಬೇಕು ಎಂದು ಹೇಳಿದೆ.
ಸಲಿಂಗಪ್ರೇಮ ಅಥವಾ ಟ್ರಾನ್ಸ್ ಜೆಂಡರ್ ವೈವಾಹಿಕ ಸಂಬಂಧದ ಕುರಿತು ಭೀತಿ ತುಂಬಿರುವ ಅಥವಾ ಹೋಮೋಫೋಬಿಕ್ ಆದ ಸಾಮಾಜಿಕ ನೈತಿಕತೆ ಅಥವಾ ನ್ಯಾಯಾಧೀಶರ ಯಾವುದೇ ವೈಯಕ್ತಿಕ ಒಲವು ಅಥವಾ ಅಂತಹ ವಿಶೇಷ ಸಹಜೀವಿಗಳ ಜನ್ಮದಾತ ಕುಟುಂಬದ ಬಗ್ಗೆ ಸಹಾನುಭೂತಿಯನ್ನು ನ್ಯಾಯಾಲಯಗಳು ತ್ಯಜಿಸಬೇಕು. ಬಂಧಿತ ವ್ಯಕ್ತಿ ಅಥವಾ ಕಾಣೆಯಾದ ವ್ಯಕ್ತಿಯ ಮುಕ್ತ ಇಚ್ಛೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ಪಾಲನೆಯಾಗಿದೆಯೇ ಎಂದು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಒಬ್ಬ ವ್ಯಕ್ತಿಯ ಗುರುತು ಮತ್ತು ಆತ ಹೊಂದಿರಬಹುದಾದ ಲೈಂಗಿಕ ದೂಷ್ಟಿಕೋನದಿಂದ ಹೊರಬಂದು ಸಮಾಲೋಚನೆಯ ಪ್ರಕ್ರಿಯೆಯನ್ನು ನಡೆಸಬೇಕು ಎಂದು ವಿಶೇಷವಾಗಿ ಉಚ್ಚ ನ್ಯಾಯಾಲಯಗಳಿಗೆ ಎಚ್ಚರಿಸಿರುವ ಸುಪ್ರೀಂ ಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸಲು ಕಕ್ಷಿದಾರರ ವಯಸ್ಸು ಒಂದು ಕಾರಣವಾಗಬಾರದು ಎಂದೂ ಕೋರ್ಟ್ ಹೇಳಿದೆ.
ದೇವು ಜಿ. ನಾಯರ್ ವರ್ಸಸ್ ಕೇರಳ ರಾಜ್ಯ ಸರ್ಕಾರದ ನಡುವಿನ ಪ್ರಕರಣವೊಂದರ ಕುರಿತು ವಿಚಾರಣೆ ನಡೆಸಿ ಕಳೆದ ವರ್ಷ ಜುಲೈ ತಿಂಗಳಲ್ಲಿ ತೀರ್ಪು ಕಾಯ್ದಿರಿಸಿತ್ತು. ಗುರುವಾರ ಈ ಕುರಿತು ಕೆಳಹಂತದ ನ್ಯಾಯಾಲಯಗಳಿಗೆ ಇಂತಹ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ, ತೀರ್ಪು ನೀಡಲು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ಲೆಸ್ಬಿಯನ್(ಸಲಿಂಗಿ ಸಂಗಾತಿ)ನ್ನು ಅವರ ಪೋಷಕರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಕೇರಳ ಹೈಕೋರ್ಟ್, ಸಲಿಂಗ ದಂಪತಿಯನ್ನು ಕೌನ್ಸಲಿಂಗ್ ಗೆ ನಿರ್ದೇಶಿಸುವ ಆದೇಶಗಳನ್ನು ಹಲವು ಬಾರಿ ನೀಡಿ ಅರ್ಜಿದಾರರನ್ನು ಅಲೆದಾಡುವಂತೆ ಮಾಡಿತ್ತು. ಈ ಎಲ್ಲ ವಿಷಯವನ್ನು ಗಮನಹರಿಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಮಾರ್ಗಸೂಚಿಗಳನ್ನು ತನ್ನ ಕೆಳಹಂತದ ನ್ಯಾಯಾಲಯಗಳಿಗೆ ಇಂದಿನ ತೀರ್ಪಿನಲ್ಲಿ ನೀಡಿದೆ.