ವಿಶೇಷ ನ್ಯಾಯಾಲಯ ಸ್ಥಾಪನೆಗೆ ವಿಫಲ: ಕೇಂದ್ರ, ಮಹಾರಾಷ್ಟ್ರ  ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ತರಾಟೆ

Most read

ನವದೆಹಲಿ: ವಿಶೇಷ ಕಾಯ್ದೆಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ತ್ವರಿತವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸದ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ದ್ವಿಸದಸ್ಯ ಪೀಠ, ‘ಎನ್‌ಐಎ ಕಾಯ್ದೆ ಮತ್ತು ಇತರ ವಿಶೇಷ ಕಾಯ್ದೆಗಳಡಿ ತ್ವರಿತವಾಗಿ ವಿಚಾರಣೆ ನಡೆಸಲು ಅಗತ್ಯ ಮೂಲಸೌಕರ್ಯಗಳೊಂದಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಲ್ಲಿ ಸಂಬಂಧಪಟ್ಟ ಪ್ರಾಧಿಕಾರವು ವಿಫಲವಾದಾಗ, ಶೀಘ್ರವಾಗಿ ವಿಚಾರಣೆ ಪೂರ್ಣಗೊಳಿಸಲು ಸಾಧ್ಯ ಆಗದಿರುವುದರಿಂದ, ವಿಚಾರಣಾ ನ್ಯಾಯಾಲಯಗಳು ಆರೋಪಿಗಳಿಗೆ ಜಾಮೀನು ನೀಡಬೇಕು ಎಂದು ಆದೇಶ ನೀಡಿದೆ.

ನಕ್ಸಲ್‌ ಪರ ಸಹಾನುಭೂತಿ ಹೊಂದಿದ್ದಾರೆ ಎಂಬ ಆರೋಪ ಹೊತ್ತಿರುವ ಮಹಾರಾಷ್ಟ್ರದ ಗಡ್‌ ಚಿರೋಲಿಯ ಕೈಲಾಶ್‌ ರಾಮಚಂದಾನಿ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಈ ಆದೇಶ ನೀಡಿದೆ.

ಈ ಹಿಂದೆಯೂ ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌, ಎನ್‌ಐಎ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾದರೆ, ಮುಂದಿನ ವಿಚಾರಣೆಯಲ್ಲೇ ಈ ಅರ್ಜಿಯನ್ನು ಪರಿಗಣಿಸಬೇಕು. ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಲಾಗಿದೆ ಎಂದ ನ್ಯಾಯಪೀಠವು, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ.

More articles

Latest article