ಹೊಸದಿಲ್ಲಿ: ಮಾವೋವಾದಿಗಳೊಂದಿಗೆ ಸಂಬಂಧದ ಆರೋಪ ಹೊರೆಸಲ್ಪಟ್ಟು UAPA ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ ಅವರಿಗೆ ಮತ್ತೊಂದು ಜಯವಾಗಿದ್ದು, ಅವರನ್ನು ದೋಷಮುಕ್ತಗೊಳಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಮೇಲ್ನೋಟಕ್ಕೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಅತ್ಯಂತ ಸಕಾರಣವಾಗಿದೆ ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ ಇತ್ತೀಚಿಗೆ ಜಿ.ಎನ್.ಸಾಯಿಬಾಬಾ ಹಾಗು ಇತರ ಐವರನ್ನು 2017ರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು. ಆರೋಪಿಗಳ ವಿರುದ್ಧ ಹೂಡಲಾದ ಆರೋಪಪಟ್ಟಿಯನ್ನು ಸಾಬೀತುಗೊಳಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನಾಗಪುರ ಪೀಠ ಹೇಳಿತ್ತು.
ಮಾವೋವಾದಿಗಳಿಗೆ ಅನುಕಂಪ ತೋರುವ ಸಾಹಿತ್ಯವನ್ನು ಇಟ್ಟುಕೊಂಡ ಮಾತ್ರಕ್ಕೆ ಅದು UAPA ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುವುದಿಲ್ಲ. ನಕ್ಸಲರಿಗೆ ಸಂಬಂಧಿಸಿದ ಮಾಹಿತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಒಂದು ಅಪರಾಧ ಕೃತ್ಯವಲ್ಲ. ಅದಕ್ಕೆ ಹೊರತಾಗಿ ಸರಿಯಾದ ಸಾಕ್ಷಿಗಳನ್ನು ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ. ಸೀಜ್ ಮಾಡಲಾಗಿರುವ ವಸ್ತುಗಳೂ ಸಹ ಆರೋಪಿಗಳು ಘೋರ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿರುವುದಕ್ಕೆ ಯಾವುದೇ ಸಾಕ್ಷ್ಯ ಒದಗಿಸುವುದಿಲ್ಲ ಎಂದು ಪೀಠ ಹೇಳಿತ್ತು.
ಜಿ.ಎನ್.ಸಾಯಿಬಾಬಾ ಅವರ ವಿರುದ್ಧ ಪ್ರಕರಣ ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್ ನಾಗಪುರ ಪೀಠದ ಆದೇಶದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮೇಲ್ನೋಟಕ್ಕೆ ನಾಗಪುರ ಪೀಠ ನೀಡಿರುವ ಆದೇಶ ಸಮರ್ಪಕವಾಗಿದೆ. ಹೀಗಾಗಿ ನಾವು ತಡೆಯಾಜ್ಞೆ ನೀಡುವುದಿಲ್ಲ ಎಂದು ಹೇಳಿತು.
ಹೈಕೋರ್ಟ್ ತೀರ್ಪಿನ ನಂತರ ನಿರಾಳರಾಗಿದ್ದ ಜಿ.ಎನ್.ಸಾಯಿಬಾಬಾ ಜೈಲುವಾಸದಿಂದ ಬಿಡುಗಡೆಯಾಗಿದ್ದರು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಕೂಡ ನೆಮ್ಮದಿಯ ನಿಟ್ಟುಸಿರು ನೀಡಿದಂತಾಗಿದೆ.