ನವದೆಹಲಿ: ದೆಹಲಿ ಹಾಗೂ ಎನ್ ಸಿ ಆರ್ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿ. ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಬೇಕು. ಆ ಶ್ವಾನಗಳಿಗೆ ರೇಬಿಸ್ ಸೋಂಕು ತಗುಲಿಲ್ಲ ಮತ್ತು ಅವು ಕಚ್ಚುವ ಸ್ವಭಾವ ಹೊಂದಿಲ್ಲ ಎಂದು ಖಾತ್ರಿಯಾದರೆ ಮಾತ್ರ ಹೊರಗೆ ಬಿಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠ, ಈ ಹಿಂದಿನ ಆದೇಶವನ್ನು ಪರಿಶೀಲಿಸಿ, ಹೊಸ ಆದೇಶ ನೀಡಿದೆ.
ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಕಳುಹಿಸಬೇಕು ಎಂದು 11 ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಹೊಸ ಆದೇಶ ಪ್ರಕಟಿಸಿದೆ.
ಶ್ವಾನಗಳಿಗೆ ಆಹಾರವನ್ನು ಎಲ್ಲೆಂದರಲ್ಲಿ ಹಾಕಬಾರದು. ಅದಕ್ಕಾಗಿ ನಿರ್ದಿಷ್ಟ ಸ್ಥಳವನ್ನು ಸ್ಥಳೀಯ ಆಡಳಿತ ಗುರುತಿಸಬೇಕು. ಇದು ಆಯಾ ಬಡಾವಣೆಯ ಜನವಸತಿ ಪ್ರದೇಶ, ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿರಬೇಕು. ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದಕ್ಕೆ ಅನುಮತಿ ನೀಡುವುದಿಲ್ಲ ಎಂದೂ ತಿಳಿಸಿದೆ.
ಶ್ವಾನಗಳನ್ನು ಆಶ್ರಯ ತಾಣಗಳಿಗೆ ರವಾನೆ ಮಾಡಬೇಕು ಎಂದು ಈ ಹಿಂದೆ ನೀಡಿದ್ದ ತೀರ್ಪು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಆದೇಶವನ್ನು ವಿರೋಧಿಸಿ ದೆಹಲಿ ನಗರದಲ್ಲಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಹಾಗೂ ಶ್ವಾನ ಪ್ರಿಯರು ಪ್ರತಿಭಟನೆ ನಡೆಸಿದ್ದರು.
ಬೀದಿ ನಾಯಿಗಳು ನೆರೆಹೊರೆಯ ಭಾಗ. ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಬದಲು, ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಲಸಿಕೆ ನೀಡಿ. ಬೀದಿ ನಾಯಿಗಳನ್ನು ಬೀದಿಗಳಲ್ಲಿಯೇ ಬದುಕಲು ಬಿಡಬೇಕು ಎಂದು ಆಗ್ರಹಪಡಿಸಿದ್ದರು.