ನವದೆಹಲಿ:ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಆಸ್ತಿಗಳ ವಿವರಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ.
ನಿರ್ಗಮಿತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ರೂ.55.75 ಲಕ್ಷದ ಭದ್ರತಾ ಠೇವಣಿ, ದೆಹಲಿಯಲ್ಲಿ ಅಪಾರ್ಟ್ ಮೆಂಟ್, ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನಲ್ಲಿ 2,446 ಚದರ ಅಡಿ ವಿಸ್ತೀರ್ಣದ 4 ಕೋಣೆಗಳ ಅಪಾರ್ಟ್‌ಮೆಂಟ್ ಹೊಂದಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ಗುರುಗ್ರಾಮದ ಸೆಕ್ಟರ್ 49 ರ ಸಿಸ್ಪಾಲ್ ವಿಹಾರ್‌ನಲ್ಲಿರುವ ನಾಲ್ಕು ಕೋಣೆಗಳ ಫ್ಲಾಟ್‌ನಲ್ಲಿ ಶೇ 56 ರಷ್ಟು ಪಾಲನ್ನು ಹೊಂದಿದ್ದು, ಹಿಮಾಚಲ ಪ್ರದೇಶದ ಡಾಲ್ಹೌಸಿಯಲ್ಲಿ 2016 ಚದರ ಅಡಿ ವಿಸ್ತೀರ್ಣದ ಸೂಪರ್ ಏರಿಯಾ ಮತ್ತು ಮನೆ, ಭೂಮಿಯಲ್ಲಿ ಪಾಲು ಹೊಂದಿದ್ದಾರೆ. ಅಲ್ಲದೆ ಅವರು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ರೂ. 1.06 ಕೋಟಿಗೂ ಹೆಚ್ಚಿನ ಹೂಡಿಕೆ, ರೂ. 1,77,89,000ಗಳ ಜಿಪಿಎಫ್, ರೂ. 29,625 ಎಲ್ ಐಸಿ ಮನಿ ಬ್ಯಾಂಕ್ ಪಾಲಿಸಿ ವಾರ್ಷಿಕ ಪ್ರೀಮಿಯಂ ಮತ್ತು ರೂ. 14,000 ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಚರಾಸ್ತಿಗಳ ಪೈಕಿ 250 ಗ್ರಾಂ ಬಂಗಾರ, 2 ಕೆ.ಜಿ ಬೆಳ್ಳಿ ಮತ್ತು 2015ರಲ್ಲಿ ಉಡುಗೊರೆಯಾಗಿ ಪಡೆದ ಮಾರುತಿ ಸ್ವಿಫ್ಟ್ ಕಾರನ್ನು ಹೊಂದಿದ್ದಾರೆ.
ನಿಯೋಜಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಮೇ.14ರಂದು ಅಧಿಕಾರವ ವಹಿಸಿಕೊಳ್ಳುತ್ತಿದ್ದಾರೆ. ಇವರು ಬ್ಯಾಂಕ್‌ನಲ್ಲಿ₹19.63 ಲಕ್ಷ ರೂ ಹಣ, ಮಹಾರಾಷ್ಟ್ರದ ಅಮರಾವತಿಯಲ್ಲಿ ಅನುವಂಶಿಕವಾಗಿ ತಂದೆಯಿಂದ ಬಂದ ಮನೆ, ಮುಂಬೈನ ಬಾಂದ್ರಾ, ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ತಲಾ ಒಂದೊಂದು ಅಪಾರ್ಟ್ ಮೆಂಟ್ ಗಳು, ಅಮರಾವತಿ ಮತ್ತು ನಾಗ್ಪುರದಲ್ಲಿ ಜಮೀನು ಹೊಂದಿದ್ದಾರೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಬಂಗಾರದ ಆಭರಣ ಸೇರಿ ರೂ. 5.25 ಲಕ್ಷದ ಚರಾಸ್ತಿ ಹೊಂದಿದ್ದಾರೆ, ಅವರ ಪತ್ನಿಯ ಹೆಸರಿನಲ್ಲಿ ರೂ. 29.70 ಲಕ್ಷದ ಬಂಗಾರದ ಆಭರಣ ಮತ್ತು ರೂ.61,320 ನಗದು ಠೇವಣಿಯಿದೆ.
ನ್ಯಾಯಮೂರ್ತಿಗಳು ನ್ಯಾಯಾಲಯಕ್ಕೆ ನೀಡಿದ ಆಸ್ತಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೋರ್ಟ್ ನ ವೆಬ್ ಸೈಟ್ ನಲ್ಲಿ ಪ್ರಕಟಿಸುವ ನಿರ್ಧಾರವನ್ನು 2025ರ ಏ.1 ರಂದು ಸುಪ್ರೀಂ ಕೋರ್ಟ್ ತೆಗೆದುಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು.
33 ನ್ಯಾಯಮೂರ್ತಿಗಳ ಪೈಕಿ 21 ನ್ಯಾಯಮೂರ್ತಿಗಳ ಆಸ್ತಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಉಳಿದ ನ್ಯಾಯಮೂರ್ತಿಗಳ ಆಸ್ತಿ ಮಾಹಿತಿಯನ್ನು ಅವರ ಪ್ರಸ್ತುತ ಆಸ್ತಿಯ ಮಾಹಿತಿ ಲಭ್ಯವಾದ ನಂತರ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.