ಹೊಸದಿಲ್ಲಿ: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್, ವೈದ್ಯಕೀಯ ಕಾಲೇಜು ಆಕಾಂಕ್ಷಿಗಳಿಗೆ ರಾಷ್ಟ್ರವ್ಯಾಪಿ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
“0.001% ನಿರ್ಲಕ್ಷ್ಯ ತೋರಲಾಗಿದ್ದರೂ ಆ ಕುರಿತು ಕ್ರಮ ಕೈಗೊಳ್ಳಬೇಕುʼʼ ದೇಶದ ಅತ್ಯುನ್ನತ ನ್ಯಾಯಾಲಯ ಪರೀಕ್ಷಾ ಮಂಡಳಿಗೆ ಆದೇಶಿಸಿತು. ಮುಂದಿನ ವಿಚಾರಣೆ ಜುಲೈ 8 ರಂದು ನಡೆಯಲಿದೆ.
NEET-UG ಪರೀಕ್ಷೆಯಲ್ಲಿ 1,563 ಅಭ್ಯರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗುವುದು ಮತ್ತು ಅಭ್ಯರ್ಥಿಗಳು ಜೂನ್ 23 ರಂದು ಮತ್ತೊಮ್ಮೆ ಪರೀಕ್ಷೆಯನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ ಎಂದು ಕಳೆದ ವಾರ NTA ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಜೂನ್ 30ರ ಒಳಗೆ ಮರು ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.
ಈ ಅಭ್ಯರ್ಥಿಗಳಲ್ಲಿ ಯಾರಾದರೂ ಮರು-ಪರೀಕ್ಷೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರೆ, ಹೆಚ್ಚುವರಿ ಅಂಕಗಳಿಲ್ಲದೆ ಅವರ ಹಿಂದಿನ ಸ್ಕೋರ್ ಅನ್ನು ಮರುಸ್ಥಾಪಿಸಲಾಗುತ್ತದೆ ಎಂದು ಸಹ ಎನ್ ಟಿ ಎ ಹೇಳಿದೆ.
ಮೇ 5 ರಂದು 24 ಲಕ್ಷ ವಿದ್ಯಾರ್ಥಿಗಳು ತೆಗೆದುಕೊಂಡಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 4 ರಂದು ಪ್ರಕಟಿಸಲಾದ ಬೆನ್ನಲ್ಲೇ ಪರೀಕ್ಷೆಯ ಪತ್ರಿಕೆ ಸೋರಿಕೆಯ ಆರೋಪಗಳು ಹೊರಬಂದಿದ್ದವು. 6 ವಿದ್ಯಾರ್ಥಿಗಳು ಸಂಶಯಾಸ್ಪದವಾಗಿ 720ಕ್ಕೆ 720 ಅಂಕಗಳನ್ನು ಪಡೆದಿದ್ದರು.
ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (OMR) ಹಾಳೆಗಳನ್ನು ಹರಿದುಹಾಕಿರುವುದು, ಹಾಳೆಗಳ ವಿತರಣೆಯಲ್ಲಿ ವಿಳಂಬ ಸೇರಿದಂತೆ NEET ಅಕ್ರಮಗಳ ಕುರಿತು ಅನೇಕ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.