ಬಿಸಿಲಾಘಾತ: 550 ಹಜ್ ಯಾತ್ರಿಗಳ ದುರ್ಮರಣ

Most read

ಮೆಕ್ಕಾ (ಸೌದಿ ಅರೇಬಿಯಾ): ಪ್ರತಿವರ್ಷ ಹೆಚ್ಚುತ್ತಿರುವ ಬಿಸಿಲಿನ ಆಘಾತದಿಂದಾಗಿ ಹಜ್ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದು, ಈ ವರ್ಷ ಕನಿಷ್ಠ 550 ಯಾತ್ರಾರ್ಥಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಸಾವನ್ನಪ್ಪಿರುವ ಯಾತ್ರಾರ್ಥಿಗಳ ಪೈಕಿ ಈಜಿಪ್ಟ್ ದೇಶಕ್ಕೆ ಸೇರಿದವರ ಸಂಖ್ಯೆಯೇ ಹೆಚ್ಚಾಗಿದ್ದು, ಒಟ್ಟು 323 ಮಂದಿ ಮೃತಪಟ್ಟಿರುವ ಕುರಿತು ರಾಜತಾಂತ್ರಿಕರು ಎಎಫ್ ಪಿ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

ತೀವ್ರ ಸ್ವರೂಪದ ಬಿಸಿಲಿನ ಆಘಾತದಿಂದ ಈ ಸಾವುಗಳು ಸಂಭವಿಸಿವೆ ಎಂದು ಸೌದಿ ಅರೇಬಿಯಾದಲ್ಲಿನ ಈಜಿಪ್ಟ್ ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ದು, ಮೆಕ್ಕಾ ಸಮೀಪದ ಅಲ್- ಮೌಸೆಮ್ ಆಸ್ಪತ್ರೆಯಿಂದ ದೊರೆತ ಮಾಹಿತಿ ಆಧಾರದಿಂದ ಈ ಅಂಕಿಅಂಶಗಳು ದೊರಕಿವೆ ಎಂದು ಹೇಳಿದ್ದಾರೆ.

ಈ ವರ್ಷ ಬಿಸಿಲಿನ ಆಘಾತದಿಂದ 60 ಮಂದಿ ಜೋರ್ಡಾನಿಯನ್ನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಜೋರ್ಡಾನ್ ದೇಶದ 41 ಹಜ್ ಯಾತ್ರಾರ್ಥಿಗಳು ಮೃತಪಟ್ಟಿರುವ ಕುರಿತು ವರದಿಯಾಗಿತ್ತಾದರೂ ಆ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ.

ಇಸ್ಲಾಂ ಧರ್ಮದ ಐದು ಸ್ಥಂಭಗಳಲ್ಲಿ ಹಜ್ ಯಾತ್ರೆಯೂ ಒಂದಾಗಿದ್ದು, ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡುವಂತೆ ಅದು ಹೇಳುತ್ತದೆ.

ದುರದೃಷ್ಟವಶಾತ್ ಪ್ರತಿವರ್ಷವೂ ಹವಾಮಾನ ವೈಪರೀತ್ಯದಿಂದಾಗಿ ಹಜ್ ಯಾತ್ರಾರ್ಥಿಗಳು ಬಿಸಿಲಿನ ಆಘಾತಕ್ಕೆ ಸಿಲುಕುತ್ತಿದ್ದಾರೆ. ಈ ವರ್ಷ ಅತಿಹೆಚ್ಚು ಪ್ರಮಾಣದ ಯಾತ್ರಾರ್ಥಿಗಳು ಬಿಸಿಲಿನಿಂದ ಮೃತಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ. ಈ ವರ್ಷ 18 ಲಕ್ಷ ಮಂದಿ ಯಾತ್ರಾರ್ಥಿಗಳು ಹಜ್ ನಲ್ಲಿ ಪಾಲ್ಗೊಂಡಿದ್ದು ಈ ಪೈಕಿ 16 ಲಕ್ಷ ಮಂದಿ ಹೊರದೇಶಗಳಿಂದ ಬಂದವರಾಗಿದ್ದರು.

More articles

Latest article